ಮಾಧ್ಯಮಗಳಿಗೆ ನಿಯಂತ್ರಣ ಹಾಕೋರು ಯಾರು? ವಿಧಾನಸಭೆ ಕಲಾಪದಲ್ಲಿ ಅನುರಣಿಸಿದ ಮಾತುಗಳ ಸಾರಾಂಶವಿದು

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ‘ಆಯವ್ಯಯ 2017-18’ ಮಾಧ್ಯಮ ನೋಟ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದ ಸಂದರ್ಭದಲ್ಲಿ ಬಯೋಸ್ಕೋಪ್ ಒಳಗೆ ಕಣ್ಣಾಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ…

ಡಿಜಿಟಲ್ ಕನ್ನಡ ಟೀಮ್:

ಇಷ್ಟು ದಿನಗಳ ಕಾಲ ವಿಧಾನಸಭೆಯಲ್ಲಿ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದ ರಾಜಕೀಯ ನಾಯಕರು ಇಂದು ಪಕ್ಷಬೇಧ ಮರೆತು ಒಟ್ಟಾಗಿ ನಿಂತರು. ಇವರು ಒಟ್ಟಾಗಿದ್ದು ಅಂಗನವಾಡಿ ಕಾರ್ಯಕರ್ತೆಯರ ನೆರವಿಗೂ ಅಲ್ಲ, ಭೀಕರ ಬರದಿಂದ ತತ್ತರಿಸುತ್ತಿರುವ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಅಲ್ಲ. ಬದಲಿಗೆ ಮಾಧ್ಯಮಗಳ ಮೇಲೆ ಸಾಲು ಸಾಲು ದೂರು ಹೇಳಲು…

ಹೌದು, ಬುಧವಾರ ವಿಧಾನಸಭೆ ಕಲಾಪದಲ್ಲಿ ನಿಯಮ 69ರ ಅಡಿಯಲ್ಲಿ ಬಿ.ಆರ್.ಪಾಟೀಲ್, ಜಮೀರ್ ಅಹ್ಮದ್, ಕೆ.ಎಸ್ ಪುಟ್ಟಣ್ಣಯ್ಯ ಅವರು ಕೆಲವು ದೃಶ್ಯ ಮಾಧ್ಯಮಗಳ ಮೇಲೆ ದೂರುತ್ತಾ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಬೇಕೆಂಬ ವಿಷಯ ಪ್ರಸ್ತಾಪಿಸಿದರು. ಹೀಗೆ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಮಾಧ್ಯಮಗಳ ಟೀಕೆಗೆ ಗುರಿಯಾಗಿದ್ದ ನಾಯಕರೆಲ್ಲ ಏರು ಧ್ವನಿಯಲ್ಲಿ ಮಾಧ್ಯಮದವರ ಮೇಲೆ ದೂರುತ್ತಾ ತಮ್ಮ ಕೋಪವನ್ನು ತೀರಿಸಿಕೊಂಡರು. ಅಲ್ಲದೆ ಮಾಧ್ಯಮಗಳು ಯಾವ ಯಾವ ಸಂದರ್ಭಗಳಲ್ಲಿ ತಮ್ಮ ವಿರುದ್ಧ ಹೇಗೆ ಟೀಕೆ ಮಾಡಿದ್ದವು ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದರು.

ಯಾವ ಯಾವ ನಾಯಕರು ಏನು ಹೇಳಿದರು ನೋಡೋಣ ಬನ್ನಿ…

ಬಿ.ಆರ್.ಪಾಟೀಲ್: ‘ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ನಾವು ಗೆಳೆಯರು ಶಾಸಕರ ಭವನದಲ್ಲಿ ಮಾತನಾಡುತ್ತಾ ಕುಳಿತಿದ್ದರೆ ಟಿವಿ ಮಾಧ್ಯಮಗಳು, ಮತಕ್ಕಾಗಿ ಮಾರಿಕೊಂಡ ಶಾಸಕ ಎಂದು ಪ್ರಸಾರ ಮಾಡತೊಡಗಿದವು. ಆ ಮೂಲಕ ವರ್ಷಾನುಗಟ್ಟಲೆ ನಾನು ಗಳಿಸಿದ್ದ ಹೆಸರನ್ನು ಒಂದೇ ದಿನದಲ್ಲಿ ತೇಜೋವಧೆ ಮಾಡಿದವು. ಟಿವಿ ಮಾಧ್ಯಮಗಳು ಟಿಆರ್ಪಿಗಾಗಿ ದುಡ್ಡು ಮಾಡುವ ಸಲುವಾಗಿ ಸಿಕ್ಕ ಸಿಕ್ಕಿದನ್ನೆಲ್ಲಾ ತೊರಿಸುತ್ತವೆ. ಇದಕ್ಕೆ ನಿಯಂತ್ರಣ ಬೇಡವೇ? ಸಮಾಜದಲ್ಲಿ ನಮಗೆ ಮರ್ಯಾದೆ ನೀಡದೆ ಇಷ್ಟ ಬಂದಂತೆ ಏಕವಚನದಲ್ಲಿ ಬೈಯುತ್ತಾರೆ ಇವರನ್ನು ಹೇಳುವವರು ಕೇಳುವವರು ಯಾರು ಇಲ್ಲವೇ?’ ಎಂದು ಪ್ರಶ್ನಿಸಿದರು.

ಕೆ.ಎಸ್ ಪುಟ್ಟಣ್ಣಯ್ಯ: ‘ಮುಖ್ಯಮಂತ್ರಿಯವರ ಅನ್ನಭಾಗ್ಯ ಯೋಜನೆಯಿಂದ ಖುಷಿಯಾದ ಕಾಗೆ ಅವರ ಕಾರಿನ ಮೇಲೆ ಬಂದು ಕುಳಿತಿತ್ತು. ಆದರೆ ಅದನ್ನು ಟಿವಿ ವಾಹಿನಿಗಳು ದೊಡ್ಡದನ್ನಾಗಿ ತೋರಿಸಿ, ಇನ್ನು ಸಿದ್ದರಾಮಯ್ಯ ಅವರ ಕತೆ ಮುಗಿಯಿತು ಎಂದು ತೋರಿದವು. ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕಾಗೆ ಬಂದು ಕೂತಿದೆ. ಕಾಗೆ ಶನೇಶ್ವರನ ವೇಯ್ಕಲ್ಲು. ಹೀಗಾಗಿ ಇನ್ನು ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗುತ್ತದೆ ಎಂದು ದಿನಗಟ್ಟಲೆ ಪ್ರಸಾರ ಮಾಡಿದವು. ವಾಸ್ತವದಲ್ಲಿ ಕಾಗೆ ಎಂದರೆ ಎನು ಎಂಬುದೇ ಇವರಿಗೆ ಗೊತ್ತಿಲ್ಲ. ನಮ್ಮ ಕಡೆ ತೀರಿಕೊಂಡವರ ತಿಥಿ ಮಾಡುವಾಗ ಎಲ್ಲಿಯವರೆಗೆ ಕಾಗೆ ಬಂದು ಎಡೆ ಮುಟ್ಟುವುದಿಲ್ಲವೋ ಅಲ್ಲಿಯವರೆಗೂ ಜನ ಊಟ ಮಾಡದೆ ಸುಮ್ಮನಿರುತ್ತಾರೆ ಸಿದ್ದರಾಮಯ್ಯನವರು ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದಕ್ಕಾಗಿ ಕಾಗೆ ಬಂದು ಅವರ ಕಾರಿನ ಮೇಲೆ ಕೂತಿತು. ಇದನ್ನು ಅರಿಯದ ಮಾಧ್ಯಮಗಳು ಇಷ್ಟಬಂದಂತೆ ತೋರಿದವು. ಪುಟ್ಟಣ್ಣಯ್ಯ ತಮ್ಮ ಹೆಣ್ಣು ಮಕ್ಕಳ ಹೆಸರಲ್ಲಿ ಅಪಾರ ಆಸ್ತಿ ಪಾಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಒಂದು ಸಲ ತೋರಿದರು. ಆ ಆಸ್ತಿ ಎಲ್ಲಿದೆ ಎಂದು ನಾನು ಹುಡುಕಾಡಿದೆ. ಇನ್ನೂ ಸಿಕ್ಕಿಲ್ಲ. ತನ್ನ ಮಗನನ್ನು ಅಮೆರಿಕಕ್ಕೆ ಕಳಿಸಿದ್ದಾರೆ ಎಂದು ಪ್ರಸಾರ ಮಾಡಿದರು. 13 ವರ್ಷಗಳ ಹಿಂದೆ ನನ್ನ ಮಗನಿಗೆ ಅಮೇರಿಕದಲ್ಲಿ ಓದಲು ಸೀಟು ಸಿಕ್ಕಿತು ಕಳಿಸಿದ್ದೆ. ಅದರಲ್ಲಿ ತಪ್ಪೇನು? ನಾನೇನು ಒಬಾಮನ ಜತೆ ಮಾತನಾಡಿ ನನ್ನ ಮಗ ಬರುತ್ತಾನೆ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಂಡು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿದ್ದೆನಾ?’ ಎಂದು ಪ್ರಶ್ನಿಸಿದರು.

ಸುರೇಶ್ ಗೌಡ: ‘ತುಮಕೂರು ಬೆಂಗಳೂರು ಹೆದ್ದಾರಿ ಮಧ್ಯೆ ನೆಲಮಂಗಲದ ಬಳಿ ಟೋಲ್ ಗೇಟ್ ಇದೆ. ಅಲ್ಲಿ ಆ್ಯಂಬುಲೆನ್ಸ್, ವಿಐಪಿ ಸೇರಿದಂತೆ ಹಲವರು ಹೇಗಲು ಒಂದು ಮಾರ್ಗವಿದೆ. ಆದರೆ ಅಲ್ಲಿ ಒಂದು ಗಂಟೆಗೂ ಮೀರಿ ಕಾಯುವ ಸ್ಥಿತಿ ಇರುತ್ತದೆ. ಹೀಗಾಗಿ ಮೊನ್ನೆ ಅಲ್ಲಿ ಮ್ಯಾನೇಜರ್ ಆಗಿದ್ದವರ ಬಳಿ ಹೋಗಿ ಸರಿಯಾಗಿ ನಿರ್ವಹಣೆ ಮಾಡ್ರೀ ಅಂತ ಹೇಳಿದೆ. ಇದಾದ ಕೆಲ ದಿನಗಳ ನಂತರ ಟಿವಿಯಲ್ಲಿ ಗೂಂಡಾ ಶಾಸಕ ಸುರೇಶ್ ಗೌಡ, ಟೋಲ್ ಗೇಟ್ ನಲ್ಲಿ ಗೂಂಡಾ ಶಾಸಕನ ದೌರ್ಜನ್ಯ ಅಂತೆಲ್ಲಾ ಪ್ರಸಾರ ಮಾಡಿದರು. ಆಗ ನಾನು ದಿಲ್ಲಿಯಲ್ಲಿದ್ದೆ. ಸಂಸದ ಮುದ್ದಹನುಮೇಗೌಡರು ಇದನ್ನು ನೋಡಿ, ಏನಿದೆಲ್ಲಾ ಎಂದು ಕೇಳಿದಾಗ ನನಗೆ ಮುಜುಗರವಾಯಿತು.ಮಾಧ್ಯಮಗಳಲ್ಲಿ ಬಳಸುವ ಶಬ್ಧ ಮಾನಮಾರ್ಯಾದೆ ಹಾಳು ಮಾಡುವಂತಿರುತ್ತದೆ. ನಮಗೆ ಪುತ್ರಿಯರಿದ್ದು ಅವರು ನನಗೆ ಧೈರ್ಯ ತುಂಬಿದರು. ಗೌರವಕ್ಕೆ ಧಕ್ಕೆ ತರುವ ಮಾಧ್ಯಮಗಳ ನಿಯಂತ್ರಣಕ್ಕೆ ಕಾನೂನು ತರಬೇಕು’ ಎಂದು ಮನವಿ ಮಾಡಿದರು.

Leave a Reply