ಬೀದಿ ಕಾಮಣ್ಣರನ್ನು ಬೆಂಡೆತ್ತುವುದರೊಂದಿಗೆ ಶುರುವಾಗಿರುವ ಯೋಗಿ ಆಡಳಿತದ ಬಿರುಸೇನು ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಯೋಗಿ ಅದಿತ್ಯನಾಥ ಅವರು ಮಂಗಳವಾರವಷ್ಟೇ ಲೋಕಸಭೆಯಲ್ಲಿ ವಿದಾಯದ ಭಾಷಣ ಮಾಡಿ, ‘ಖರ್ಗೆ ಅವರೇ, ಉತ್ತರ ಪ್ರದೇಶದಲ್ಲಿ ಬಹಳಷ್ಟು ಬದಲಾವಣೆಗಳು ಕಾಣಲಿವೆ. ನಾನು ರಾಹುಲ್ ಗಾಂಧಿ ಅವರಿಗಿಂತ ಒಂದು ವರ್ಷ ಚಿಕ್ಕವನು, ಅಖಿಲೇಶ್ ಯಾದವ್ ಅವರಿಗಿಂತ ಒಂದು ವರ್ಷ ದೊಡ್ಡವನು. ಇವರಿಬ್ಬರ ಮಧ್ಯೆ ನಾನು ಹೊರಹೊಮ್ಮಿದ್ದೇನೆ’ ಎಂದು ಮಾರ್ಮಿಕವಾಗಿ ಹೇಳಿದ್ದರು.

ಲಕ್ನೋಗೆ ಮರಳುತ್ತಲೇ ಅವರ ಆಡಳಿತದಲ್ಲೀಗ ಭಾರಿ ಸುದ್ದಿ ಮಾಡುತ್ತಿರುವುದು ಬುಧವಾರ ರಾಜ್ಯದ ನಗರಗಳಲ್ಲಿ ನಡೆದಿರುವ ಬೀದಿ ಕಾಮಣ್ಣರ ಬೆಂಡೆತ್ತುವ ಕಾರ್ಯಕ್ರಮ. ಪೊಲೀಸ್ ಇಲಾಖೆಯ ರೊಮಿಯೋ ನಿಗ್ರಹ ಪಡೆ ರಸ್ತೆಗಿಳಿದು, ಹೆಣ್ಣುಮಕ್ಕಳ ಚುಡಾಯಿಸುವಿಕೆಯಲ್ಲಿ ನಿರತವಾಗಿದ್ದ ಹಲವು ಪಡ್ಡೆ ಹುಡುಗರನ್ನು ಬಂಧಿಸಿದೆ. ಇಂಥದೊಂದು ನಡೆ ತಮ್ಮ ಜೀವನದಲ್ಲಿ ಸುರಕ್ಷತೆಯ ಭಾವನೆ ತರಲಿದೆ ಎಂಬುದಾಗಿ ಹಲವು ಕಾಲೇಜು ಯುವತಿಯರು ಪ್ರಶಂಸಿಸಿದ್ದಾರೆ.

ವಿಕಾಸ, ಹಿಂದುತ್ವ ಇವೆಲ್ಲ ಕಾರ್ಯಸೂಚಿಗಳಿಗೆ ಸಮಯ ಬೇಕೆ ಬೇಕು. ಸಧ್ಯಕ್ಕೆ ಮುಖ್ಯಮಂತ್ರಿಯ ಯೋಗಿಯ ‘ದಬಾಂಗ್’ ನಡೆಗಳು ಕಂಡುಬರುತ್ತಿರುವುದು ಕಾನೂನು ಸುವ್ಯವಸ್ಥೆ ಸುಧಾರಣೆಯಲ್ಲಿ. ಉತ್ತರ ಪ್ರದೇಶವು ಅತ್ಯಾಚಾರ ಮತ್ತು ಗೂಂಡಾಗಳ ನಾಡಾಗಿದೆ ಎಂಬ ಕಳಂಕ ತೊರೆಯುವ ತ್ವರಿತ ನಡೆಯಲ್ಲಿದ್ದಾರೆ ಯೋಗಿ. ಹಾಗೆಂದೇ ಬಹುಮುಖ್ಯ ಗೃಹಖಾತೆಯನ್ನೂ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ.

ಇದಕ್ಕೊಂದು ಉದಾಹರಣೆ ಎಂದರೆ ಹೋಳಿ ಹಬ್ಬದ ಸಮಯದಲ್ಲಿ ತನ್ನ ಹೆಂಡತಿ ಚುಡಾಯಿಸುವಿಕೆ ಹಾಗೂ ದೌರ್ಜನ್ಯಕ್ಕೆ ಒಳಗಾಗಿದ್ದಾಳೆಂದು ವ್ಯಕ್ತಿಯೊಬ್ಬ ದಾಖಲಿಸಿದ್ದ ದೂರನ್ನು ಪೊಲೀಸರು ನಿರ್ಲಕ್ಷಿಸಿದ್ದರು. ಈ ವ್ಯಕ್ತಿ ಮುಖ್ಯಮಂತ್ರಿಗೆ ಈ ಬಗ್ಗೆ ಟ್ವೀಟ್ ಮಾಡುತ್ತಲೇ ಪೊಲೀಸರಿಗೆ ಬಿಸಿಮುಟ್ಟಿ, ವಿಶೇಷ ಗುಂಪೊಂದನ್ನು ರಚಿಸಿ ಕಾಮುಕರನ್ನು ಹಿಡಿಯಹೊರಟಿದ್ದಾರೆ.

ಗೋರಕ್ಪುರದಿಂದ ಘಾಜಿಯಾಬಾದ್ ವರೆಗೂ, ಲಖನೌನಿಂದ ಲಲಿತ್ಪುರದವರೆಗೂ ಇರುವ ಎಲ್ಲ ಮಾರುಕಟ್ಟೆ, ಮಾಲ್ ಗಳು, ತರಬೇತಿ ಕೇಂದ್ರಗಳು, ಶಾಲಾ ಕಾಲೇಜುಗಳು ಸೇರಿದಂತೆ ಇತರೆ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆ ನೀಡುವುದನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಣ್ಣು ಮಕ್ಕಳನ್ನು ಚುಡಾಯಿಸಿದವರನ್ನೂ ಕಾನೂನಿನ ರೀತಿಯಲ್ಲಿ ಶಿಕ್ಷಿಸಲಾಗುವುದು. ಇದರ ಭಾಗವಾಗಿ ಇತ್ತೀಚೆಗೆ ಇಬ್ಬರು ಯುವಕರು ಬಾಲಕಿಯರ ಹಾಸ್ಟೆಲ್ ಮುಂದೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಸೂಕ್ತ ವಿವರಣೆ ನೀಡದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ವಿಕಾಸದ ಜತೆಜತೆಗೆ ಉತ್ತರ ಪ್ರದೇಶದಲ್ಲಿ ಮಹತ್ವ ಪಡೆದುಕೊಂಡಿರುವ ಕಾನೂನು ಸುವ್ಯವಸ್ಥೆ ಸುಧಾರಿಸುವ ವಿಷಯವಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆ ಪೈಕಿ ನೊಯಿಡಾ ಹಾಗೂ ಘಾಜಿಯಾಬಾದ್ ಗಳಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ನೊಯಿಡಾದಲ್ಲಿ 44 ಹಾಗೂ ಘಾಜಿಯಾಬಾದಿನಲ್ಲಿ 15 ಪೊಲೀಸ್ ಅಧಿಕಾರಿಗಳು ವಿವಿಧ ಪ್ರಕರಣಗಳ ತನಿಖೆಯಲ್ಲಿ ನಿರ್ಲಕ್ಷ್ಯ ಹಾಗೂ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಇನ್ನುಳಿದಂತೆ ಅವರ ಆಡಳಿತ ಸುತ್ತಲಿನ ವಿದ್ಯಮಾನಗಳು ಹೀಗಿವೆ…

  • ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆಯದ್ದೇ ಲೋಪ. ಇದನ್ನು ಗಮನಿಸಿದ ಮುಖ್ಯಮಂತ್ರಿ ಯೋಗಿ, ತಕ್ಷಣಕ್ಕೆ ಜಾರಿಗೆ ಬರುವಂತೆ ಕಚೇರಿಗಳಲ್ಲಿ ಅಡಕೆ- ಪಾನ್ ಮಸಾಲಾ ಜಗಿಯುವುದನ್ನು ನಿಷೇಧಿಸಿದ್ದಾರೆ.
  • ಸಬ್ ಕ ಸಾಥ್ ಸಬ್ ಕ ವಿಕಾಸ್ ಎಂಬುದೇ ನನ್ನ ಮಂತ್ರ ಎಂದು ಪದೇ ಪದೇ ಹೇಳುತ್ತಿರುವ ಆದಿತ್ಯನಾಥ್ ಅವರು ಅಭಿವೃದ್ಧಿ ಹಾಗೂ ವಿಕಾಸದ ಕಾರ್ಯಸೂಚಿ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಆದಿತ್ಯನಾಥ್ ಅವರ ತಂದೆಯವರು ಆಡಿರುವ ಮಾತುಗಳು ಈ ಸಂದರ್ಭದಲ್ಲಿ ಬಹಳ ಮಹತ್ವ ಪಡೆದುಕೊಂಡಿದೆ. ‘ಉತ್ತರ ಪ್ರದೇಶದ ಹಲವಾರು ಮುಸ್ಲಿಂ ಹೆಣ್ಣು ಮಕ್ಕಳು ಇವರ ಪರವಾಗಿ ಮತ ಹಾಕಿದ್ದಾರೆ. ಹೀಗಾಗಿ ಅವರ ಹಿತ ಕಾಯಬೇಕಾಗಿರುವುದು ಆದಿತ್ಯನಾಥ ಅವರ ಕರ್ತವ್ಯ’ ಎಂದಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಸಮಸ್ಯೆಯಾಗಿರುವ ತ್ರಿವಳಿ ತಲಾಕ್ ವಿಷಯವಾಗಿ ಬಿಜೆಪಿ ತೆಗೆದುಕೊಂಡಿರುವ ನಿಲುವು ಆ ಹೆಣ್ಣು ಮಕ್ಕಳಿಗೆ ಆಶಾದಾಯಕವಾಗಿದೆ. ಇದನ್ನು ಮುಂದುವರಿಸಿಕೊಂಡು ಹೇಗಬೇಕು ಎನ್ನು ಅರ್ಥದಲ್ಲಿ ಆದಿತ್ಯನಾಥ್ ಅವರ ತಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  • ಉತ್ತರ ಪ್ರದೇಶ ರಾಜ್ಯ ಸೇವಾ ಆಯೋಗದಲ್ಲಿನ ಅವ್ಯವಹಾರಗಳ ಬಗ್ಗೆ ವ್ಯಾಪಕ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅಲ್ಲಿನ ಬಿಜೆಪಿ ಸರ್ಕಾರ ಈ ಆಯೋಗ ಮಾಡಿರುವ ಎಲ್ಲಾ ನೇಮಕಾತಿಗಳನ್ನು ರದ್ದುಗೊಳಿಸಿದೆ. ತನ್ನ ಮುಂದಿನ ಆದೇಶ ಬರುವವರೆಗೂ ಎಲ್ಲ ರೀತಿಯ ನೇಮಕಾತಿಗೂ ತಡೆ ನೀಡಲು ನಿರ್ದೇಶನ ನೀಡಿದೆ. ಆ ಮೂಲಕ ಈ ಸಮಿತಿಯ ಮೂಲಕ ಪಾರದರ್ಶಕವಾಗಿ ಅರ್ಹತೆ ಆಧಾರದ ಮೇಲೆ ಆಡಳಿತಾತ್ಮಕವಾಗಿ ನೇಮಕಾತಿ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಇದು ಆದಿತ್ಯನಾಥ ಅವರ ವಿಕಾಸದ ಮತ್ತೊಂದು ಹೆಜ್ಜೆಯಾಗಿದೆ.
  • ವಿಕಾಸ, ಕಾನೂನು ಸುವ್ಯವಸ್ಥೆ ಜತೆಗೆ ಯೋಗಿ ಆದಿತ್ಯನಾಥ ಅವರು ತಮ್ಮ ಹಿಂದುತ್ವ ವರ್ಚಸ್ಸಿಗೆ ತಕ್ಕಂತೆ ಹಲವು ಕ್ರಮಗಳಿಗೆ ಮುಂದಾಗಿದ್ದಾರೆ. ಆ ಪೈಕಿ ಪ್ರಮುಖವಾಗಿ ಗಮನ ಸೆಳೆದಿರುವುದು ಗೋವುಗಳ ಕಳ್ಳಸಾಗಾಣಿಕೆಗೆ ಸಂಪೂರ್ಣ ನಿಷೇಧ ಹೇರಲು ನೀಡಿರುವ ಆದೇಶ. ಬುಧವಾರ ಈ ಬಗ್ಗೆ ಆದೇಶ ನೀಡಿದ್ದು, ಸಂಜೆ ನಡೆಯಲಿರುವ ಸಂಪುಟ ಸಭೆಯಲ್ಲೂ ಈ ವಿಷಯವಾಗಿ ಚರ್ಚೆ ನಡೆಸುವ ನಿರೀಕ್ಷೆಗಳಿವೆ. ಇನ್ನು ರಾಜ್ಯದಲ್ಲಿರುವ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಮುಚ್ಚಿಸುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಲಾಗಿದೆ. ಈ ಆದೇಶದ ನಂತರ ಲಖನೌ ನಗರ ಪಾಲಿಕೆ ಕಾರ್ಯ ಆರಂಭಿಸಿ ಪರವಾನಿಗೆ ಇಲ್ಲದ 9 ಅಕ್ರಮ ಮಾಂಸದ ಅಂಗಡಿಗಳಿಗೆ ಬೀಗ ಹಾಕಿಸಿದೆ.
  • ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಹಲವರ ನಿರೀಕ್ಷೆಯಾಗಿದ್ದು, ಇದಕ್ಕೆ ಕಾನೂನಿನ ತೊಡಕುಗಳು ಇವೆ. ಹೀಗಾಗಿ ವಿವಾದಿತ ಪ್ರದೇಶದಿಂದ 20 ಕಿ.ಮೀ ದೂರದಲ್ಲಿ ರಾಮಾಯಣ ವಸ್ತುಸಂಗ್ರಹಾಲಯ ನಿರ್ಮಾಣ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕಾಗಿ ಮುಂದಿನ 10 ದಿನಗಳ ಒಳಗಾಗಿ 25 ಎಕರೆ ಜಾಗ ಮಂಜೂರು ಮಾಡುವ ಭರವಸೆ ನೀಡಿರುವುದಾಗಿ ವರದಿಗಳು ಬಂದಿವೆ. ಈ ಬಗ್ಗೆ ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Leave a Reply