ಗುರಿ ನಿರ್ದಿಷ್ಟ ದಾಳಿ ನಂತರ ಗಡಿಯಲ್ಲಿ ಕಡಿಮೆಯಾಗಿದೆಯೇ ಪಾಕಿಸ್ತಾನದ ಕಿತಾಪತಿ? ಹೌದು… ಎನ್ನುತ್ತಿದೆ ಕೇಂದ್ರ ಗೃಹ ಸಚಿವಾಲಯ

ಡಿಜಿಟಲ್ ಕನ್ನಡ ಟೀಮ್:

‘ಕಳೆದ ವರ್ಷ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುರಿ ನಿರ್ದಿಷ್ಟ ದಾಳಿ ನಡೆಸಿದ ನಂತರ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ, ಭಾರತದ ಮೇಲಿನ ಉಗ್ರರ ದಾಳಿ ಪ್ರಮಾಣ ಕುಸಿದಿದೆ…’ ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸಭೆಯಲ್ಲಿ ವಿವರಿಸಿದೆ.

ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ‘ಸರ್ಜಿಕಲ್ ಸ್ಟ್ರೈಕ್ ನಂತರ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ಕಡಿಮೆ ಆಗಿದೆಯೇ’ ಎಂಬ ಪ್ರಶ್ನೆ ಎತ್ತಿದವು. ಇದಕ್ಕೆ ಉತ್ತರಿಸಿದ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಹಂಸರಾಜ್ ಗಂಗರಾಮ್ ಅಹಿರ್ ಹೇಳಿದಿಷ್ಟು…

‘ಗುರಿ ನಿರ್ದಿಷ್ಟ ದಾಳಿ ನಂತರ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಪ್ರಮಾಣ ಕುಸಿದಿದೆ. 2016ರಲ್ಲಿ ಗಡಿ ನಿಯಂತ್ರಣ ರೇಖಾ ಪ್ರದೇಶದಲ್ಲಿ 228 ಹಾಗೂ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ 221 ಬಾರಿ ಕದನ ವಿರಾಮ ಉಲ್ಲಂಘನೆಯಾಗಿತ್ತು. ಗುರಿ ನಿರ್ದಿಷ್ಟ ದಾಳಿ ನಡೆದ ನಂತರ ಈ ವರ್ಷದಲ್ಲಿ ಫೆಬ್ರವರಿವರೆಗೂ ಗಡಿ ನಿಯಂತ್ರಣ ರೇಖೆಯಲ್ಲಿ 22 ಹಾಗೂ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಕೇವಲ 6 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. ಇನ್ನು ಸಾರ್ವಜನಿಕರ ಸಾವಿನ ಪ್ರಮಾಣವು ಕಡಿಮೆಯಾಗಿದ್ದು, ಕಳೆದ ವರ್ಷ ಗಡಿ ನಿಯಂತ್ರಣ ರೇಖೆಯಲ್ಲಿ 13 ಮಂದಿ ಮೃತಪಟ್ಟರೆ, 83 ಮಂದಿ ಗಾಯಗೊಂಡಿದ್ದರು. ಇನ್ನು ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ 8 ಮಂದಿ ಸತ್ತರೆ, 74 ಮಂದಿ ಗಾಯಗೊಂಡಿದ್ದರು. ಆದರೆ ಈ ವರ್ಷ ಯಾವುದೇ ನಾಗರೀಕರು ಮೃತಪಟ್ಟಿರುವ ಅಥವಾ ಗಾಯವಾಗಿರುವ ಮಾಹಿತಿ ದಾಖಲಾಗಿಲ್ಲ. ಆದರೆ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಐವರು ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದು, 25 ಸೈನಿಕರು ಗಾಯಗೊಂಡಿದ್ದಾರೆ.’

ಹಂಸರಾಜ್ ಅವರ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿರೋಧ ಪಕ್ಷ ನಾಯಕ ಗುಲಾಮ್ ನಬಿ ಅಜಾದ್, ಸರ್ಕಾರ ಈ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು. ಆಗ ಮಧ್ಯ ಪ್ರವೇಶಿಸಿದ ಗೃಹ ಸಚಿವ ರಾಜನಾಥ್ ಸಿಂಗ್ ಕೆಲವು ಅಂಕಿ ಅಂಶಗಳನ್ನು ಸದನದ ಮುಂದೆ ಇಟ್ಟರು. ಅವು ಹೀಗಿವೆ…

‘ಗುರಿ ನಿರ್ದಿಷ್ಟ ದಾಳಿಗೂ ಮೂರು ತಿಂಗಳು ಮುನ್ನ ಗಡಿಯಲ್ಲಿ 110 ಭಯೋತ್ಪಾದಕ ಕೃತ್ಯಗಳು ನಡೆದಿದ್ದವು. ಗುರಿ ನಿರ್ದಿಷ್ಟ ದಾಳಿ ನಂತರದ ಮೂರು ತಿಂಗಳಲ್ಲಿ 87 ಭಯೋತ್ಪಾದಕ ಘಟನೆಗಳು ನಡೆದಿವೆ. ಈ ದಾಳಿಗೂ ಮುನ್ನ 34 ಭದ್ರತಾ ಸಿಬ್ಬಂದಿಗಳು ಮೃತಪಟ್ಟರೆ, ದಾಳಿಯ ನಂತರ 19 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ನಾಗರೀಕರ ಸಾವಿನ ಪ್ರಮಾಣವನ್ನು ನೋಡುವುದಾದರೆ ಭಾರತೀಯ ಸೇನೆಯ ದಾಳಿ ಮುನ್ನ 7 ಮಂದಿ ಸತ್ತರೆ ದಾಳಿಯ ನಂತರ 3 ಮಂದಿ ಮೃತಪಟ್ಟಿದ್ದಾರೆ. ಭಾರತೀಯ ಸೇನೆ ಗುರಿ ನಿರ್ದಿಷ್ಟ ದಾಳಿಯ ಮೂಲಕ ಏಟು ಕೊಟ್ಟಮೇಲೆ ಪಾಕಿಸ್ತಾನ ಕನಿಷ್ಟ ಪಕ್ಷ ನಾವು ಉಗ್ರರ ಚಟುವಟಿಕೆ ಹತ್ತಿಕ್ಕುತ್ತೇವೆ ಹಾಗೂ ಭಾರತದ ಜತೆ ಮಾತುಕತೆಗೆ ಸಿದ್ಧ ಎಂದು ಹೇಳಲು ಆರಂಭಿಸಿದೆ.’

Leave a Reply