‘ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ’ ಅಂದ್ರು ಕುಮಾರಸ್ವಾಮಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಖಚಿತ: ಎಸ್.ಎಂ ಕೃಷ್ಣ ಭವಿಷ್ಯ, ಶೀಘ್ರದಲ್ಲೇ ಹಾಲಿನ ದರ ಏರಿಕೆ, ಸಿಎಂ ಸಂಧಾನ ಸಭೆ ಯಶಸ್ವಿ- ಧರಣಿ ಹಿಂಪಡೆದ ಅಂಗನವಾಡಿ ಕಾರ್ಯಕರ್ತೆಯರು

ಅರಮನೆ ಮೈದಾನದಲ್ಲಿ ಗುರುವಾರ ನಡೆದ ಜೆಡಿಎಸ್ ಸ್ವಾಭಿಮಾನಿ ಸಮಾನತೆ ಸಮಾವೇಶದಲ್ಲಿ ಭಾಗವಹಿಸಿದ್ದ ಪಕ್ಷದ ನಾಯಕರು…

ಡಿಜಿಟಲ್ ಕನ್ನಡ ಟೀಮ್:

ರೈತರ ಸಾಲ ಮನ್ನಾ- ಎಚ್ಡಿಕೆ ಭರವಸೆ

‘ನಾನು ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ ರೈತರ ಟ್ರಾಕ್ಟರ್- ಕೃಷಿ ಹಾಗೂ ಇತರೆ ಎಲ್ಲಾ ರೀತಿಯ ಸಾಲವನ್ನು ಮನ್ನಾ ಮಾಡುತ್ತೇನೆ…’ ಇದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಕೊಟ್ಟಿರುವ ಭರವಸೆ. ಗುರುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸ್ವಾಭಿಮಾನಿ ಸಮಾನತೆ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಜನಾರ್ದನ ರೆಡ್ಡಿ ಅವರು ತಮ್ಮ ವಿರುದ್ಧದ ಎಲ್ಲ ಕೇಸುಗಳನ್ನು ಖುಲಾಸೆಗೊಳಿಸಿದರೆ ಬಿಜೆಪಿಗೆ ₹ 500 ಕೋಟಿ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಹೊಸ ಬಾಂಬ್ ಹಾಕಿದ್ದಾರೆ. ಈ ಸಮಾವೇಶದಲ್ಲಿ ಎಚ್ಡಿಕೆ ಅವರ ಮಾತುಗಳು ಹೀಗಿತ್ತು…

‘ಕಾಂಗ್ರೆಸ್ ಸರ್ಕಾರ ರಾಜ್ಯದ ಸಂಪತ್ತನ್ನು ಕೊಳ್ಳೆಹೊಡೆದು ಹೈಕಮಾಂಡಿಗೆ ಕಳುಹಿಸಿದ ದುಡ್ಡಲ್ಲೇ ರೈತರ ಸಾಲ ಮನ್ನಾ ಮಾಡಬಹುದಿತ್ತು. ರಾಜ್ಯದಲ್ಲಿ ಸುಮಾರು ₹60 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಸಾಲ ಮನ್ನಾ ಮಾಡಿದರೆ ರೈತರು ಆ ನಷ್ಟದಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಲಿದ್ದಾರೆ. ನಾನು ಅಧಿಕಾರಕ್ಕೆ ಬಂದರೆ 24 ಗಂಟೆ ಒಳಗಾಗಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಎಲ್ಲ ರೀತಿಯ ಸಾಲವನ್ನು ಮನ್ನಾ ಮಾಡುತ್ತೇನೆ.’

‘ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿದ ನಂತರ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯದತ್ತ ಆಗಮಿಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಸುಲಭವಾಗಿ ಅಧಿಕಾರ ಸಿಗುತ್ತದೆ ಎಂದು ರಾಜ್ಯ ಬಿಜೆಪಿ ನಾಯಕರು ಕನಸು ಕಾಣುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಮೋದಿ ಹಾಗೂ ಅಮಿತ್ ಶಾ ಅವರ ಅಶ್ವಮೇಧ ಕುದುರೆಯನ್ನು ನಾವು ಕಟ್ಟಿ ಹಾಕುತ್ತೇವೆ. ರಾಜ್ಯದ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಕೇವಲ ₹ 450 ಕೋಟಿ ಬಿಡುಗಡೆ ಮಾಡಿದೆ. ಹಾಗಾದರೆ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜ್ಯದ ಜನ ಭಿಕ್ಷೆ ಬೇಡಬೇಕಾ? ಪ್ರಧಾನಿ ನರೇಂದ್ರ ಮೋದಿ ಅವರು ಕಿಂದರ ಜೋಗಿಯಂತೆ ಆಗಿದ್ದಾರೆ. ಅವರು ತೋರಿಸುವ ಬಣ್ಣ ಬಣ್ಣದ ಕನಸನ್ನು ನಂಬಿ ಅವರ ಹಿಂದೆ ಹೋದರೆ ಕಿಂದರಿ ಜೋಗಿ ಹಿಂದೆ ಹೋಗಿ ಮುಳುಗಿದಂತ ಪರಿಸ್ಥಿತಿ ಎದುರಾಗಲಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ.’

‘ಜನಾರ್ದನ ರೆಡ್ಡಿ ತಮ್ಮ ವಿರುದ್ಧ ಇರುವ ಎಲ್ಲ ಪ್ರಕರಣಗಳನ್ನು ಖುಲಾಸೆಗೊಳಿಸಲು ಬಿಜೆಪಿಗೆ ₹ 500 ಕೋಟಿ ನೀಡುವ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ರೆಡ್ಡಿ ಅವರ ಕೋಟ್ಯಾಂತರ ಆಸ್ತಿ ವಾಪಸ್ ಆಗಿದೆ.’

ಕರ್ನಾಟಕದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ: ಕೃಷ್ಣ ಭವಿಷ್ಯ

ಮುಂದಿನ ವರ್ಷ ನಡೆಯಲಿರುವ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ 150ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ… ಹೀಗೊಂದು ಭವಿಷ್ಯ ನುಡಿದಿರುವವರು ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ.

ನಿನ್ನೆಯಷ್ಟೇ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಯಾದ ಕೃಷ್ಣ ಅವರು ಇಂದು ನ್ಯೂಸ್ ಎಕ್ಸ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮುಂದಿನ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. ಈ ವೇಳೆ ಎಸ್.ಎಂ ಕೃಷ್ಣ ಹೇಳಿದಿಷ್ಟು… ‘ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಮುಂದಿನ ಭರವಸೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವದ ಮೇಲೆ ನಂಬಿಕೆ ಕಳೆದುಕೊಂಡಿದ್ದರಿಂದ ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸೀಟುಗಳನ್ನುಗೆದ್ದು ಅಧಿಕಾರಕ್ಕೆ ಬರಲಿದೆ.’

ಶೀಘ್ರದಲ್ಲೇ ಹಾಲಿನ ದರ ಏರಿಕೆ

ವಿಧಾನ ಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ಪ್ರತಿ ಲೀಟರ್ ಹಾಲಿಗೆ ₹ 2 ಏರಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸತತ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ಬರುವ ಉದ್ದೇಶದಿಂದ ದರ ಹೆಚ್ಚಳಕ್ಕೆ ಮುಂದಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ದರ ಹೆಚ್ಚಳದಲ್ಲಿ ₹ 1.50 ಯಿಂದ ₹ 1.20 ವರೆಗೂ ರೈತರಿಗೆ ಸಿಗಲಿದ್ದು, ಉಳಿದ ಮೊತ್ತ ಸಂಬಂಧಪಟ್ಟ ಹಾಲು ಒಕ್ಕೂಟಗಳ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಲಾಗುವುದು. ದರ ಹೆಚ್ಚಳದಿಂದ ಸದ್ಯ ಪ್ರತಿ ಲೀಟರ್ ಗೆ ₹ 33 ಇರುವ ಹಾಲಿನ ದರ ₹ 35 ಆಗಲಿದೆ. ಈ ದರ ಏರಿಕೆಯಿಂದ ಗ್ರಾಹಕರು ಇತರೆ ಕಂಪನಿಯ ಹಾಲಿಗೆ ಮೊರೆ ಹೋಗುವ ಸಾಧ್ಯತೆ ಕಡಿಮೆ ಇದೆ. ಕಾರಣ ಸದ್ಯ ಒಕ್ಕೂಟದ ಹೊರತಾಗಿ ಖಾಸಗಿಯವರು ಮಾರುತ್ತಿರುವ ಹಾಲಿನ ದರ ಪ್ರತಿ ಲೀಟರ್ ಗೆ ₹ 40 ಇದೆ. ಅಷ್ಟೇ ಅಲ್ಲದೆ ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮುದಿನ ಶೈಕ್ಷಣಿಕ ವರ್ಷದಿಂದ ಕ್ಷೀರ ಭಾಗ್ಯ ಯೋಜನೆಯನ್ನು ವಾರದ ಐದು ದಿನಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.

ಅಧಿವೇಶನದ ಪ್ರಮುಖ ಅಂಶಗಳು…

  • ರಾಜ್ಯದಲ್ಲಿ ಖಾಲಿ ಇರುವ 1443 ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ಪೈಕಿ 464 ಹುದ್ದೆಗಳನ್ನು ಜುಲೈ ವೇಳೆಗೆ ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ. ಪ್ರಶ್ನೇತ್ತರ ವೇಳೆಯಲ್ಲಿ ಖೋಟಾ ಶ್ರೀನಿವಾಸ ಪೂಜಾರಿ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು ‘ರಾಜ್ಯದಲ್ಲಿ 636 ಗ್ರೂಪ್ ಎ, 807 ಗ್ರೂಪ್ ಬಿ ಹುದ್ದೆಗಳು ಖಾಲಿ ಇವೆ. 2014ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿಸ್ 464 ಹುದ್ದೆಗಳ ಆಯ್ಕೆ ಪ್ರಕ್ರಿಯೆಗೊಂಡ ನಂತರ ಲೋಕಸೇವಾ ಆಯೋಗ ಸರ್ಕಾರಕ್ಕೆ ಪಟ್ಟಿ ಸಲ್ಲಿಸಲಿದ್ದು, ಅದಾದನಂತರ ಜುಲೈವೇಳೆಗೆ ಈ ನೇಮಕಾತಿ ಪೂರ್ಣಗೊಳ್ಳಲಿದೆ’ ಎಂದರು.
  • ವೀಸಾ ಅವಧಿ ಪೂರ್ಣಗೊಂಡು ಅಕ್ರಮವಾಗಿ ನೆಲಸಿರುವ ವಿದೇಶಿಗರು ಮಾದಕ ವಸ್ತು ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ ಎಂದಿರುವ ಗೃಹಸಚಿವ ಪರಮೇಶ್ವರ್ ಅವರು ಈಗಾಗಲೆ ಇಂತಹ 1023 ಅಕ್ರಮ ವಲಸಿಗರ ಪೈಕಿ 59 ಮಂದಿಯನ್ನು ಗಡಿಪಾರು ಮಾಡಲಾಗಿದೆ. ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟವನ್ನು ನಿಯಂತ್ರಿಸಲು ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಎಂ.ಎ ನಾರಾಯಣಸ್ವಾಮಿ ಅವರ ಪ್ರಸ್ತಾವಕ್ಕೆ ಉತ್ತರಿಸಿದರು.
  • ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಕಿಡ್ನಿ ರೋಗಿಗಳಿಗೆ ಅನುಕೂಲ ಒದಗಿಸಿಕೊಡಲು ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಡಿಯಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಕೋನರೆಡ್ಡಿ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ‘ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಯ ಒಂದೊಂದು ತಾಲೂಕು ಆಸ್ಪತ್ರೆಗೆ ತಲಾ ಎರಡರಂತೆ ಡಯಾಲಿಸಿಸ್ ಯಂತ್ರಗಳನ್ನು ಒದಗಿಸಲಾಗುತ್ತದೆ. ಈ ಬಜೆಟ್ ನಲ್ಲಿ ಇನ್ನೂ 114 ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ’ ಎಂದರು.
  • ರಾಜ್ಯದ ಎಲ್ಲ ಎರಡನೇ ಹಂತದ ನಗರಗಳಲ್ಲಿ ಐಟಿ ಪಾರ್ಕ್ ಗಳನ್ನು ಆದಷ್ಟು ಶೀಘ್ರವಾಗಿ ಸ್ಥಾಪಿಸಲಾಗುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಮೊಯಿನುದ್ದೀನ್ ಬಾವಾ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ‘ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಉಳಿದ ನಗರ ಪ್ರದೇಶಗಳಲ್ಲೂ ಐಟಿ ಪಾರ್ಕ್ ಗಳನ್ನು ವಿಸ್ತರಿಸಬೇಕು. ಎಂಬ ಉದ್ದೇಶ ಸರ್ಕಾರಕ್ಕಿದೆ. ಹೀಗಾಗಿ ಮೈಸೂರು, ಮಂಗಳೂರು, ಧಾರವಾಡ ಸೇರಿದಂತೆ ಹಲವು ನಗರಗಳನ್ನು ಐಟಿ ಪಾರ್ಕ್ ನಿರ್ಮಾಣಕ್ಕೆ ಪರಿಗಣಿಸಲಾಗಿದೆ’ ಎಂದರು.
  • ರಾಜ್ಯಾದ್ಯಂತ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಆರಂಭಿಸಲು ಸದ್ಯದಲ್ಲೇ ಅನುಮತಿ ನೀಡಲಾಗುವುದು ಎಂದು ಆಹಾರ ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎಸ್.ಟಿ ಸೋಮಶೇಖರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ನಗರ ಪ್ರದೇಶಗಳಲ್ಲಿ ಪ್ರತಿ ಎಂಟು ನೂರು ಕಾರ್ಡುಗಳಿಗೆ ಒಂದು, ಗ್ರಾಮೀಣ ಪ್ರದೇಶಗಳಲ್ಲಿ ಐದು ನೂರು ಕಾರ್ಡುಗಳಿಗೆ ಒಂದರಂತೆ ನ್ಯಾಯ ಬೆಲೆ ಅಂಗಡಿಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ’ ಎಂದರು.

ಅಂಗನವಾಡಿ ಕಾರ್ಯಕರ್ತೆಯರ ಧರಣಿ ವಾಪಸ್

ಕಳೆದ ನಾಲ್ಕು ದಿನಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಗಲಿರುಳು ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಜಯ ಸಿಕ್ಕಿದೆ. ಕಾರಣ ಅವರ ಹೋರಾಟಕ್ಕೆ ಮಣಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಇಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜತೆ ಸುಮಾರು 2 ಗಂಟೆಗಳ ಕಾಲ ಮುಖ್ಯಮಂತ್ರಿಗಳು ಸಂಧಾನ ಸಭೆ ನಡೆಸಿದ್ದು, ಈ ಸಭೆ ಯಶಸ್ವಿಯಾಗಿದೆ. ಪರಿಣಾಮ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಅವರು ಹೇಳಿರುವುದು ಹೀಗೆ… ‘ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಏಪ್ರಿಲ್ 10ರಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಹೀಗಾಗಿ ತಾತ್ಕಾಲಿಕವಾಗಿ ನಮ್ಮ ಪ್ರತಿಭಟನೆಯನ್ನು ಹಿಂಪಡೆಯುತ್ತಿದ್ದೇವೆ.’

Leave a Reply