ಬ್ರಿಟನ್ ಸಂಸತ್ ಆವರಣದಲ್ಲಿ ಉಗ್ರ ದಾಳಿ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪರಿಪಾಠವಾಗುತ್ತಿದೆ ಈ ಮಾದರಿ

ಡಿಜಿಟಲ್ ಕನ್ನಡ ಟೀಮ್:

ಬ್ರಿಟನ್ನಿನ ಸಂಸತ್ ಭವನದ ಬಳಿ ಬುಧವಾರ ದಾಳಿ ನಡೆದಿದ್ದು ಮೂವರು ಹತರಾದರೆ, 20 ಮಂದಿ ಗಾಯಗೊಂಡಿದ್ದಾರೆ. ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ನಲ್ಲಿ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಸಂಸತ್ತಿನ ಕಡೆಗೆ ನುಗ್ಗುತ್ತಾ ಜನರ ಮೇಲೆ ದಾಳಿ ನಡೆಸಿದ, ತಕ್ಷಣವೇ ಪೊಲೀಸ್ ಅಧಿಕಾರಿಗಳು ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಈ ಪ್ರಕರಣವನ್ನು ಉಗ್ರರ ದಾಳಿ ಎಂದೇ ಪರಿಗಣಿಸಿ ವಿಚಾರಣೆ ನಡೆಸಲಾಗುವುದು ಎಂದು ಬ್ರಿಟನ್ ಪೊಲೀಸರು ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುರೋಪಿಯನ್ ರಾಷ್ಟ್ರಗಳಲ್ಲಿ ಈ ರೀತಿಯ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. 2016ರಲ್ಲಿ ನೈಸ್ ಹಾಗೂ ಬರ್ಲಿನ್ ನಲ್ಲಿ ನಡೆದ ದಾಳಿ ಮನಸ್ಸಿಂದ ಮರೆಯಾಗುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಬರ್ಲಿನ್ ಮತ್ತು ನೈಸ್ ಹಾಗೂ 2007 ರಲ್ಲಿ ಗ್ಲಾಸ್ಗೊದಲ್ಲಿ ನಡೆದ ದಾಳಿಗಳಿಗೂ ಈಗ ಬ್ರಿಟನ್ ನಲ್ಲಿ ನಡೆದಿರುವ ದಾಳಿಗೂ ಸಾಕಷ್ಟು ಸಾಮ್ಯತೆಗಳು ಗೋಚರಿಸುತ್ತಿವೆ. ಈ ಎಲ್ಲ ದಾಳಿಗಳಲ್ಲೂ ದುಷ್ಕರ್ಮಿಗಳು ವಾಹನಗಳನ್ನು ಬಳಸಿಕೊಂಡು ಏಕಾಏಕಿ ಜನನಿಬಿಡ ಪ್ರದೇಶಗಳಿಗೆ ನುಗ್ಗಿ ದಾಳಿ ನಡೆಸುತ್ತಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇಂತಹ ದಾಳಿಗಳು ಪರಿಪಾಠವಾಗುತ್ತಿರುವುದು ಸ್ಪಷ್ಟವಾಗಿದೆ. ಹಾಗಾದರೆ ಈ ಹಿಂದೆ ನಡೆದ ದಾಳಿಗಳನ್ನೊಮ್ಮೆ ನೋಡೋಣ ಬನ್ನಿ…

– ಡಿಸೆಂಬರ್ 19, 2016ರಂದು ತುನಿಶಿಯಾದ ಪ್ರಜೆ ಅನಿಸ್ ಅಮ್ರಿ ಎಂಬಾತ ಪೊಲೆಂಡ್ ಮೂಲದ ಚಾಲಕನ್ನು ಹತ್ಯೆ ಮಾಡಿ ಆತನ ಟ್ರಕ್ ಅನ್ನು ಹೈಜಾಕ್ ಮಾಡಿದ. ನಂತರ ಬರ್ಲಿನ್ ನ ಕ್ರಿಸ್ಮಸ್ ಮಾರುಕಟ್ಟೆಗೆ ನುಗ್ಗಿ ಅಲ್ಲಿನ ಜನರ ಮೇಲೆ ದಾಳಿ ನಡೆಸಿದ್ದ. ಈ ಘಟನೆಯಲ್ಲಿ ಏಳುಮಂದಿ ಜರ್ಮನಿಗರು ಹಾಗೂ ಐವರು ವಿದೇಶಿಗರು ಸೇರಿ ಒಟ್ಟು 12 ಮಂದಿ ಬಲಿಯಾದರೆ, 56 ಮಂದಿ ಗಾಯಗೊಂಡಿದ್ದರು. ನಾಲ್ಕು ದಿನಗಳ ನಂತರ ಇಟಲಿಯ ಪೊಲೀಸರು ಅಮ್ರಿನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.

– ಇನ್ನು 2016ರ ಜುಲೈನಲ್ಲಿ ನೈಸ್ ಪ್ರದೇಶದಲ್ಲಿ ತುನಿಶಿಯಾದ ಪ್ರಜೆ 31 ವರ್ಷದ ಮೊಹಮದ್ ಲಹೌಜ್ ಬೌಲೆಲ್, ಫ್ರ್ಯಾನ್ಸ್ ನ ಸಾಂಸ್ಕೃತಿಕ ಆಚರಣೆಯಾಗಿರುವ ಬಾಸ್ಟಿಲ್ಲೆ ಡೇ ಸಮಾರಂಭದ ವೇಳೆ ದಾಳಿ ನಡೆಸಿದ್ದ. ಈತ ಸಹ ಟ್ರಕ್ ಅನ್ನು ಬಳಸಿಕೊಂಡು ಹೆಚ್ಚು ಜನರು ಸೇರಿದ್ದ ಪ್ರದೇಶಕ್ಕೆ ನುಗ್ಗಿ ದಾಳಿ ಮಾಡಿದ್ದ. ಅಲ್ಲದೆ ಪೊಲೀಸ್ ಸಿಬ್ಬಂದಿ ಮೇಲೂ ದಾಳಿ ಮಾಡಿದ್ದ. ಆಗ ಪ್ರತಿದಾಳಿ ನಡೆಸಿದ ಪೊಲೀಸರು 20 ಸುತ್ತು ಗುಂಡು ಹಾರಿಸಿ ಆತನನ್ನು ಹತ್ಯೆ ಮಾಡಿದ್ದರು. ಈ ದಾಳಿಯಲ್ಲಿ 19 ರಾಷ್ಟ್ರಗಳಿಂದ ಒಟ್ಟು 86 ಮಂದಿ ಬಲಿಯಾಗಿದ್ದರು. ಜತೆಗೆ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆಯ ಹೊಣೆಯನ್ನು ಹೊತ್ತ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಮೊಹಮದ್ ನನ್ನು ತಮ್ಮ ಸಂಘಟನೆಯ ಹಿಂಬಾಲಕ ಎಂದು ಹೇಳಿಕೊಂಡಿತ್ತು.

– ಸುಮಾರು ಹತ್ತು ವರ್ಷಗಳ ಹಿಂದೆ ಅಂದರೆ 2007ರ ಜೂನ್ ತಿಂಗಳಲ್ಲಿ ಗ್ಲಾಸ್ಗೋದಲ್ಲಿ ನಡೆದ ದಾಳಿಯೂ ಇದೇ ಮಾದರಿಯಲ್ಲಿತ್ತು. ಜೂನ್ 30ರಂದು ಬೆಂಗಳೂರು ಮೂಲದ ಏರೋನಾಟಿಕ್ ಎಂಜಿನಿಯರ್ ಕಫೀಲ್ ಅಹ್ಮದ್, ಗ್ಯಾಸ್ ಕಂಟೇನರ್ ಗಳನ್ನು ತುಂಬಿಕೊಂಡಿದ್ದ ಜೀಪ್ ಅನ್ನು ಓಡಿಸಿಕೊಂಡು ಗ್ಲಾಸ್ಗೊ ವಿಮಾನ ನಿಲ್ದಾಣದ ಪ್ರಮುಖ ಟರ್ಮಿನಲ್ ಕಡೆಗೆ ನುಗ್ಗಿದ್ದ. ಈ ವೇಳೆ ನೂರಾರು ಪ್ರಯಾಣಿಕರು ಆ ಸ್ಥಳದಿಂದ ಓಡಿಹೋಗಲು ಆರಂಭಿಸಿದರು. ಈ ಹಂತದಲ್ಲಿ ಬ್ರಿಟನ್ ಮೂಲದ ವೈದ್ಯ ಬಿಲಾಲ್ ಅಬ್ದುಲ್ಲಾ ಎಂಬಾತ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಜೀಪಿಗೆ ಬೆಂಕಿ ಹೊತ್ತಿಕೊಂಡು ಕಫೀಲ್ ಸಾವನ್ನಪ್ಪಿದ. ಬಿಲಾಲ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.

Leave a Reply