ಕೃಷ್ಣ ಹಾದಿಯಲ್ಲಿ ಸುಮಲತೆಯೂ ಕಮಲವನಪ್ಪಿದರೆ ಮಂಡ್ಯ ಕಾಂಗ್ರೆಸ್ ಮುಕ್ತ… ಮುಕ್ತ…

ಡಿಜಿಟಲ್ ಕನ್ನಡ ವಿಶೇಷ:

ಶ್ರೀನಿವಾಸ್ ಪ್ರಸಾದ್, ಜಯಪ್ರಕಾಶ್ ಹೆಗ್ಡೆ, ಎಸ್ಸೆಂ ಕೃಷ್ಣ… ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವವರ ಪಟ್ಟಿ ಇನ್ನು ಹೇಗೆ ಬೆಳೆಯಬಹುದು ಎಂಬ ಕೌತುಕಕ್ಕೆ ಮತ್ತೆ ನೋಡಬೇಕಿರುವುದು ಮಂಡ್ಯ-ಮೈಸೂರು ಭಾಗವನ್ನೇ.

ಹಾಗಂತ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ತಣ್ಣಗಾಗಿರುವ ‘ರಮ್ಯ ಕಥಾನಕ’ವನ್ನೇ ನಾವೂ ಹೇಳುತ್ತಿದ್ದೀವಿ ಅಂದುಕೊಳ್ಳಬೇಡಿ. ಎಸ್.ಎಂ ಕೃಷ್ಣ ಕಮಲ ಹಿಡಿದಿರುವ ಹೊತ್ತಿನಲ್ಲೇ ಮಂಡ್ಯದ ಮತ್ತೊಂದು ಬಲಿಷ್ಟ “ಕೈ” ಕಮಲ ಧರಿಸಲು ಸಮಯಾಸಮಯದ ಲೆಕ್ಕಾಚಾರದಲ್ಲಿದೆ. ಕಳೆದ ವಾರ ಒಳಸುಳಿಯಲ್ಲಿ ಅಂಬರೀಷ್ ಪತ್ನಿ ಸುಮಲತಾ ಬಿಜೆಪಿ ಪಾಳಯ ಸೇರುವ ಸಾಧ್ಯತೆ ಇದೆ ಎನ್ನುವುದನ್ನು ನೀವು ಓದಿದ್ದೀರಿ. ಮತ್ತಷ್ಟು ಇಂಬು ಕೊಡುವಂಥ ಬೆಳವಣಿಗೆಗಳು ನಡೆದಿವೆ.  ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ‘ಬನ್ನಿ ಅಂಬರೀಶ್ ಎಂಲ್ಸಿ ಮಾಡ್ತೀವಿ’ ಎಂಬ ಆಶ್ವಾಸನೆ ಕೊಟ್ಟಿದ್ದಾರೆ. ಜೊತೆಗೆ ಸುಮಲತಾಗೆ ಬೆಂಗಳೂರಿನ ಒಕ್ಕಲಿಗ ಪ್ರಾಬಲ್ಯವಿರುವ ರಾಜರಾಜೇಶ್ವರಿ ನಗರ ಅಥವಾ ಯಶವಂತಪುರ ಕ್ಷೇತ್ರದಿಂದ ಟಿಕೆಟ್ ಕೊಡಿ ನೋಡೋಣ ಅಂತ ಅಂಬರೀಶ್ ಹೇಳಿದ್ದಾರೆ ಅನ್ನುವಂಥ ಮಾತುಗಳು ಅವರ ಆಪ್ತವಲಯದಲ್ಲಿ ಭಾರೀ ಚರ್ಚೆಯಲ್ಲಿವೆ.

ಇತ್ತ ಕಾಂಗ್ರೆಸ್ ವಲಯದ ಮಾತಿನ ಮಲ್ಲರು ‘ಅಯ್ಯೋ ಹೋದ್ರೆ ಹೋಗಲಿ ಬಿಡಿ ಅಸಮರ್ಥ ಅಂತ ನಾವೇ ಮಂತ್ರಿಗಿರಿಯಿಂದ ಮನೆಗೆ ಕಳಿಸಲಿಲ್ವೇ? ಅಲ್ಲಿ ಹೋಗಿ ಮಾಡೋದು ಅಷ್ಟರಲ್ಲೇ ಅಂತ  ಆಡಿಕೊಳ್ಳುತ್ತಿದ್ದಾರೆ. ಅಂಬರೀಶ್ ಜನಪ್ರಿಯತೆ ಮಂಕಾಗಿದೆ ಎಂಬ ವಾದಗಳ ನಡುವೆಯೂ ಅವರ ವರ್ಚಸ್ಸಿನ ಪರ ಹಲವು ಅಂಶಗಳಿವೆ. ಈಗಲೂ ಅವರ ಹಿಂದೆ ಅಭಿಮಾನಿ ಬಳಗವಿದೆ. ಒಕ್ಕಲಿಗ ಸಮುದಾಯದ ಬೆಂಬಲವಿದ್ದೇ ಇದೆ. ಭ್ರಷ್ಟನಲ್ಲದ, ಮಾನವೀಯತೆ ಇರೋ ‘ಕರ್ಣ’ ಅನ್ನುವ  ಹೆಸರಿಗೆ ಕಳಂಕ ಅಂಟಿಲ್ಲ.

ಇವೆಲ್ಲ ಪ್ರಬಲ ಅಂಶಗಳು ಅಂತ ಅನ್ನಿಸುವುದು ಯಾವಾಗೆಂದರೆ ಇವನ್ನೆಲ್ಲ ಸಿದ್ದರಾಮಯ್ಯ ಇಮೇಜಿನೊಂದಿಗೆ ಹೊಂದಿಕೊಂಡಿರುವ ಅಂಶಗಳ ಜತೆ ತುಲನೆ ಮಾಡಿದಾಗ. ಕೆಳವರ್ಗಕ್ಕೆ ಸವರಿದ ಬೆಣ್ಣೆ ಮೇಲ್ವರ್ಗಕ್ಕೆ ಬಳಿವ ಸುಣ್ಣ ಇವೇ ಸಿದ್ದರಾಮಯ್ಯನವರ ಸಮಾಜವಾದವೇ? ಒಕ್ಕಲಿಗ ಸಮುದಾಯಕ್ಕೆ ಆಯಕಟ್ಟಿನ ಸ್ಥಾನಮಾನಗಳಿಗೆ ಕತ್ತರಿ ಹಾಕುತ್ತಲೇ ಬಂದಿದ್ದಾರೆ ಎಂಬ ಗ್ರಹಿಕೆ ಇದ್ದೇ ಇದೆ.

ಅಂಬರೀಶ್ ಅಥವಾ ಇನ್ಯಾರನ್ನೇ ಸಂಪುಟದಲ್ಲಿ ಇರಿಸಿಕೊಳ್ಳುವುದು ಬಿಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದೇ ಹೌದಾದರೂ, ಹೊರಗೆ ಕಳುಹಿಸುವವರನ್ನು ಯಾವ ರೀತಿ ಉಡಾಫೆಯಲ್ಲಿ ಕಳುಹಿಸಲಾಯಿತು ಎಂಬುದೂ ಜನಸಾಮಾನ್ಯರ ಗ್ರಹಿಕೆ ರೂಪುಗೊಳಿಸುವಲ್ಲಿ ನಿರ್ಣಾಯಕವಾಗುತ್ತದೆ.

ಒಂದೇಒಂದ್ ದಪ ಆದ್ರೂ ಮುಖ್ಯಮಂತ್ರಿ ಆಗ್ಲೇಬೇಕು ಅಂತ ಹಪಹಪಿಸುತ್ತಿದ್ದ ಸಿದ್ದರಾಮಯ್ಯ, ಅಂಬರೀಶ್ ಜೊತೆ ತಿಂದುಂಡು ಪ್ರಚಾರಕ್ಕೂ ಬಳಸಿಕೊಂಡು ಗಳಸ್ಯಕಂಠಸ್ಯ ಅನ್ನೋ ಥರವೇ ಇದ್ರು. ಆದ್ರೆ ಯಾವಾಗ ಮುಖ್ಯಮಂತ್ರಿ ಪದವಿ ದಕ್ಕಿಬಿಡತೊ ಒಳಗಿದ್ದ ಒಕ್ಕಲಿಗರ ಮೇಲಿನ ಮಚ್ಚರ ಎಚ್ಛೆತ್ತುಕೊಳ್ತು. ಅಂಬರೀಶ್ಗೆ ಖಾತೆ ಕೊಡೋವಾಗಲೂ ತೋಟಗಾರಿಗೆ ಇಲಾಖೆ ಕೊಟ್ಟು ಕೈ ತೊಳೆದು ಕೊಳ್ಳೋಕೆ ನೋಡಿದ್ರು. ಕೊನೆಗೆ ಅಂಬಿ ತಮ್ಮ ಯಾವತ್ತಿನ ಶೈಲಿಯಲ್ಲಿ ‘ಕೊಟ್ರೆ ಕೊಡು ಬುಟ್ರೆ ಬುಡು ಇಲ್ಲ್ಯಾರೂ ಗತಿ ಇಲ್ಲದೆ ಬಂದಿಲ್ಲ ಅಂದಮೇಲೆ ಮನಸ್ಸಿಲ್ಲದ ಮನಸ್ಸಿನಿಂದಲೇ ವಸತಿ ಖಾತೆ ಕೊಟ್ರು. ಅದಾದ ಮೇಲೆ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಸಮಯದಲ್ಲೂ ಅಂಬರೀಶ್ ಬಗ್ಗೆ ಕ್ಯಾರೇ ಅನ್ನಲಿಲ್ಲ. ‘ನಿಮಗೆ  ಬೇಕಾದವರನ್ನೇ ಮಾಡಿ ಆದ್ರೆ ಎಲ್ಲರನ್ನು ವಿಶ್ವಾಸಕ್ಕೆ  ತೆಗೆದುಕೊಳ್ಳಬೇಕಲ್ವಾ? ಇವ್ರೇನು ಹಿಟ್ಲರಾ?’ ಅಂತ ಅಂಬಿ ಮಾಧ್ಯಮದ ಮುಂದೆ ಖಡಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ್ರು. ಆಗ್ಲೂ ‘ಎಲ್ಲರನ್ನೂ ಹೇಳಿ ಕೇಳಿ ಮಾಡಕ್ಕಾಗಲ್ಲ’ ಅಂದುಬಿಟ್ರು ಸನ್ಮಾನ್ಯ ಮುಮಂ.

ಸಿದ್ದರಾಮಯ್ಯ ಅಂಬರೀಶ್ಗೆ ಹಂತಹಂತವಾಗಿ ಬಡಿಯೋ ಕೆಲಸವನ್ನೇ ಮಾಡ್ತಾ ಹೋಗಿದ್ದು ಸುಳ್ಳಲ್ಲ. ಮಂಡ್ಯದ ಡಿಸಿಸಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಆಯ್ಕೆಯಲ್ಲೂ ಅಂಬಿ ಹೇಳಿದವರ ಕಡೆ ತಿರುಗಿಯೂ ನೋಡಲಿಲ್ಲ. ಸಮುದಾಯದ, ಬೆಂಬಲಿಗರ ದೃಷ್ಟಿಯಲ್ಲಿ ಅವರನ್ನ ಕೆಳಗಿಳಿಸುವ ಕೆಲಸವನ್ನ ಸಕ್ಕತಾಗೇ ಮಾಡಿ ಬಿಟ್ರು. ಅದಿರಲಿ ಮಂಡ್ಯದ ಕೃಷಿ ಅಭಿವೃದ್ಧಿ,  ರಸ್ತೆ ನಿರ್ಮಾಣ, ನಾಲೆರಿಪೇರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಲ್ಲ ಸೇರಿ “ಸಮಗ್ರ ಅಭಿವೃದ್ಧಿ” ಯ 598 ಕೋಟಿ ಯೋಜನೆಯ ಫೈಲ್ ಮುಖ್ಯಮಂತ್ರಿಗಳ ಮುಂದಿಟ್ಟರೆ ಮುಂಗೈಯಲ್ಲೂ ಸೋಕಿಸಿಕೊಳ್ಳದೆ ಧೂಳು ಹಿಡಿಸಿದ್ರು. ಇವೆಲ್ಲ ಕೇವಲ ಅಂಬರೀಶ್- ಸಿದ್ದರಾಮಯ್ಯ ನಡುವಿನ ವಿಷಯವಾಗದೇ ಸಮುದಾಯದ ಭಾವನೆಯನ್ನೂ ತೆಗೆದುಕೊಳ್ಳುತ್ತದೆ.

ಬ್ರಾಹ್ಮಣ,ಲಿಂಗಾಯಿತ ,ಒಕ್ಕಲಿಗ ಇನ್ನಿತರ ಸಮುದಾಯಗಳಲ್ಲಿ ಬಡವರೇ ಇಲ್ಲವೇ ? ಅಲ್ಪಸಂಖ್ಯಾತರು, ಹಿಂದುಳಿದವರು ಬಿಟ್ಟರೆ ಕರ್ನಾಟಕದಲ್ಲಿ ಇವರಿಗೆ, ಪಕ್ಷಕ್ಕೆ ಮತ ಹಾಕಿದವರು ಇಲ್ಲವೇ?

ಈ ಪ್ರಶ್ನೆಗಳೆಲ್ಲ ಬಲವಾದಷ್ಟೂ ಮಂಡ್ಯ-ಮೈಸೂರು ಭಾಗದಲ್ಲಿ ಮತ ಧ್ರುವೀಕರಣವೊಂದು ಸಾಧ್ಯವಾಗುತ್ತದೆ. ಎಸ್ಸೆಂ ಕೃಷ್ಣ ಬಿಜೆಪಿ ಸೇರ್ಪಡೆ ಇಂಥದೊಂದು ಸನ್ನಿವೇಶ ನಿರ್ಮಿಸಿದರೆ, ಅದಕ್ಕೆ ಉಳಿದವರ ಕೈಗೂಡಿಸುವಿಕೆಯೆಲ್ಲ ಪೂರಕ ಅಂಶಗಳಾಗುತ್ತವೆ. ಹಾಗೆಂದೇ ಅಂಬರೀಷ್ -ಸುಮಲತಾ ‘ನಮೋ ಎಂದರೆ ಬಿಜೆಪಿಯ ಕಾಂಗ್ರೆಸ್ ಮುಕ್ತ ಕರ್ನಾಟಕಯಾನ ಮಂಡ್ಯದಿಂದಲೇ ಶುಭಾರಂಭ.

Leave a Reply