ಬನ್ಸಾಲಿಯ ಪದ್ಮಾವತಿಯನ್ನು ವಿರೋಧಿಸುತ್ತಿರುವವರನ್ನೆಲ್ಲ ಪುಂಡರು ಎಂದು ಕರೆದುಬಿಡುವುದು ಎಷ್ಟು ಸರಿ?

author-ssreedhra-murthyಕಳೆದ ವಾರ (ಮಾರ್ಚ್ 15 ರಂದು) ಮಹಾರಾಷ್ಟ್ರದ ಕೊಲ್ಹಾಪುರದ ಬಳಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಸಿನಿಮಾ ಸೆಟ್ ಮೇಲೆ ಮತ್ತೆ ದಾಳಿ ನಡೆದಿದೆ. ಸಿನಿಮಾಕ್ಕೆ ಸಂಬಂಧಿಸಿದ ವೇಷಭೂಷಣ ಹಾಗೂ ಕುದುರೆಗಳ ಆಹಾರ ಸಾಮಗ್ರಿಯನ್ನು ಈ ದಾಳಿಯಲ್ಲಿ ಹಾಳುಗೆಡವಲಾಗಿದೆ. ಕಳೆದ ಜನವರಿ ತಿಂಗಳಿನಲ್ಲೂ ರಾಜಾಸ್ಥಾನದ ಜೈಗಡ ಕೋಟೆಯಲ್ಲಿ ಚಿತ್ರೀಕರಣ ವೇಳೆ ಇಂತಹುದೇ ದಾಳಿ ನಡೆದಿತ್ತು. ವಿಶ್ವ ಪಾರಂಪರಿಕ ತಾಣ ಚಿತ್ತೂರಗಡ ಕೋಟೆಯ ಪದ್ಮಿನಿ ಮಹಲ್‍ನಲ್ಲಿ ಪದ್ಮಾವತಿಯ ಪ್ರತಿ ಬಿಂಬವನ್ನು ಅಲ್ಲಾವುದ್ದೀನ್ ಖಿಲ್ಜಿಗೆ ತೋರಿಸಲಾಗಿದ್ದ ಕನ್ನಡಿಗಳು ಎಂದು ನಂಬಲಾಗಿದ್ದ ಎರಡು ಕನ್ನಡಿಗಳನ್ನೂ ಇತ್ತೀಚೆಗೆ ರಜಪೂತ್ ಕರ್ಣಿ ಸೇನಾ ಕಾರ್ಯಕರ್ತರು ಹಾಳುಗೆಡವಿದ್ದರು. ಇಂತಹ ದಾಳಿಗಳನ್ನು ಯಾರೂ ಸಮರ್ಥಿಸಲಾಗುವುದಿಲ್ಲ. ಕಾನೂನನ್ನು ಎಲ್ಲರೂ ಗೌರವಿಸಬೇಕು. ಆದರೆ ರಜಪೂತರು ಈ ಚಿತ್ರದ ಕುರಿತು ಏಕೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬುದು ಗಮನಿಸಬೇಕಾದ ಅಂಶ.

ರಾಣಿ ಪದ್ಮಾವತಿ ರಜಪೂತರ ಸ್ವಾಭಿಮಾನದ ಪ್ರತೀಕವಾಗಿರುವ ಚಾರಿತ್ರಿಕ ವ್ಯಕ್ತಿ. ಆಕೆ ಚಿತ್ತೂರಿನ ರಾಜಾ ರತ್ನಸೇನನ ಮಡದಿ. ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಚಿತ್ತೂರಿನ ಮೇಲೆ ದಾಳಿ ಮಾಡಿ ಹಲವು ತಿಂಗಳುಗಳ ಪ್ರತಿರೋಧದ ನಂತರ ಅದನ್ನು ವಶಕ್ಕೆ ಪಡೆದುಕೊಂಡಾಗ ಪದ್ಮಿನಿ ಅಗ್ನಿ ಪ್ರವೇಶವನ್ನು ಮಾಡಿದಳು. ಈ ಕುರಿತು ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಸತೀಶ್ ಚಂದ್ರ ಈ ಘಟನೆ ನಡೆದೇ ಇಲ್ಲ ಎನ್ನುತ್ತಾರೆ. ಅದಕ್ಕೆ ಅಲ್ಲಾವುದ್ದೀನನ ಆಸ್ಥಾನದಲ್ಲಿದ್ದ ಅಮೀರ್ ಖುಸ್ರು ಅದನ್ನು ಉಲ್ಲೇಖಿಸಿಲ್ಲ ಎನ್ನುವ ಕಾರಣ ನೀಡುತ್ತಾರೆ. ಉಲ್ಲೇಖಿಸಿರದಿದ್ದರೆ ನಡೆದೇ ಇಲ್ಲ ಎನ್ನಲಾಗುವುದಿಲ್ಲ ಎನ್ನುವುದು ಸರಳ ಚರಿತ್ರೆಯ ಓದು. ಹೀಗಾಗಿ ಪರಕೀಯರ ದಾಳಿಯ ವಿರುದ್ಧ ನಿಂತು ರಜಪೂತರ ಸ್ವಾಭಿಮಾನವನ್ನು ಎತ್ತಿ ಹಿಡಿದ ಪದ್ಮಾವತಿ ಕಲ್ಪನೆಯಲ್ಲಾದರೂ ಅಲ್ಲಾವುದ್ದೀನ್ ಖಿಲ್ಜಿಯ ಜೊತೆ ಪ್ರಣಯ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುವುದನ್ನು ರಜಪೂತರು ಸಹಿಸರು ಎನ್ನುವುದು ಗಮನಿಸಲೇಬೇಕಾದ ಮಹತ್ವದ ಸಂಗತಿ.

ಸಿನಿಮಾಕ್ಕೆ ಮೂಲ ಪ್ರೇರಣೆಯಾಗಿರುವುದು ಪದ್ಮಾವತಿಯ ಕಾಲದ ಸುಮಾರು 250 ವರ್ಷಗಳ ನಂತರ ಬಂದ ಜಯಸಿಯ ‘ಪದ್ಮಾವತ್’ ಕಾವ್ಯ (ಕ್ರಿ.ಶ 1540ರಲ್ಲಿ ರಚಿತ). ಇದರಲ್ಲಿ ಪದ್ಮಿನಿ ಸಿಂಹಳದ ರಾಜಕುಮಾರಿ. ಅವಳ ಬಳಿ ಇದ್ದ ಮಾತನಾಡುವ ಹೀರಾಮಣಿ ಎನ್ನುವ ಗಿಳಿ ಚಿತ್ತೂರಿನ ರಾಜಕುಮಾರ ರತ್ನಸೇನನಿಗೆ ಅವಳ ರೂಪದ ವರ್ಣನೆ ಮಾಡುತ್ತದೆ. ಅದರಿಂದ ಆಕರ್ಷಿತನಾದ ರತ್ನಸೇನ ಹಲವು ಸಾಹಸಗಳಿಂದ ಗೆದ್ದು ಪದ್ಮಿನಿಯನ್ನು ಮದುವೆಯಾಗಿ ಚಿತ್ತೂರಿಗೆ ಹಿಂದಿರುಗುತ್ತಾನೆ. ರಾಘವನೆಂಬ ಮಾಂತ್ರಿಕ ರತ್ನಸೇನನಿಗೆ ಇಷ್ಟು ದಿನ ಬೆಂಬಲವಾಗಿದ್ದವನು ಪದ್ಮಿನಿಯ ಸೌಂದರ್ಯಕ್ಕೆ ಬೆರಗಾಗಿ ಬಯಸಿದಾಗ ಕುಪಿತನಾದ ರತ್ನಸೇನನು ಅವನನ್ನು ಓಡಿಸುತ್ತಾನೆ. ಕೋಪಗೊಂಡ ಮಾಂತ್ರಿಕನು ಅಲ್ಲಾವುದ್ದೀನ್ ಖಿಲ್ಜಿಯ ಬಳಿ ಪದ್ಮಿನಿಯ ಸೌಂದರ್ಯ ವರ್ಣಿಸಿ ಚಿತ್ತೂರಿನ ಮೇಲೆ ದಾಳಿ ಮಾಡುವಂತೆ ಮಾಡುತ್ತಾನೆ. ಅವನ ವಶವಾಗದಿರಲು ಪದ್ಮಿನಿ ಸತ್ತು ಹೋಗುತ್ತಾಳೆ. ಇದು ಬಹುಮಟ್ಟಿಗೆ ನಮ್ಮ ಜನಪದ ಕಥೆಗಳಂತೆಯೇ ಇದೆ. ಚಾರಿತ್ರಿಕ ಹೆಸರುಗಳನ್ನು ಇಲ್ಲಿಗೆ ಜೋಡಿಸಲಾಗಿದೆ. ಈ ಕಾವ್ಯವನ್ನು ರಜಪೂತರು ಎಂದಿಗೂ ಒಪ್ಪಿಕೊಂಡಿಲ್ಲ. ಪದ್ಮಿನಿ ಅಥವಾ ಪದ್ಮಾವತಿ ರಜಪೂತಳಲ್ಲ ಎನ್ನುವ ಅಂಶವೇ ಅವರಿಗೆ ಒಪ್ಪಿತವಲ್ಲ. ಬಹಳ ಮುಖ್ಯವಾಗಿ ಜಯುಸಿ ಪರ್ಷಿಯನ್ ಕಾವ್ಯದಿಂದ ಪ್ರಭಾವಿತನಾದ ಸೂಫಿ ಕವಿ. ಅವನಿಗೆ ಭಾರತೀಯರ ಭಾವನೆಗಳು ಮುಖ್ಯವಲ್ಲವೇ ಅಲ್ಲ. ರಸ, ಯೋಗ ಸಿದ್ದಾಂತ, ದೈವಿಕ ಪ್ರೇಮದ ಎಳೆಗಳನ್ನು ಅಧ್ಯಾತ್ಮಿಕವಾಗಿ ಹೇಳುವುದು ಮುಖ್ಯ. ಅಲ್ಲಾವುದ್ದೀನ್ ಖಿಲ್ಜಿಗೆ ಪದ್ಮಾವತಿಯ ಮೇಲೆ ದೈವಿಕ ಪ್ರೇಮವಿತ್ತು ಎಂದು ಹೇಳುವುದು ಅವನಿಗೆ ಅಧ್ಯಾತ್ಮಿಕ ಅಗತ್ಯ ಆದರೆ ಅದು ರಜಪೂತರಿಗೆ ಭಾವನಾತ್ಮಕ ಆಘಾತ. ಸಂಜಯ್ ಲೀಲಾ ಬನ್ಸಾಲಿಯವರಿಗೆ ಈ ವ್ಯತ್ಯಾಸ ಗೊತ್ತಿಲ್ಲದಿರುವುದೇ ವಿವಾದಕ್ಕೆ ಮುಖ್ಯ ಕಾರಣ.

padmavati-set

ಮಹಾರಾಷ್ಟ್ರದ ಕೊಲ್ಹಾಪುರದ ಬಳಿ ಸಿನಿಮಾ ಸೆಟ್ ಮೇಲೆ ನಡೆದಿರುವ ದಾಳಿ…

ಸಂಜಯ್ ಲೀಲಾ ಬನ್ಸಾಲಿಯವರ ಚಿತ್ರ ಬರುವ ಮೊದಲೇ ವಿವಾದವನ್ನು ಎಬ್ಬಿಸುವುದು ಎಷ್ಟು ಸರಿ? ಎನ್ನುವ ಪ್ರಶ್ನೆಗಳೂ ಕೇಳಿ ಬರುತ್ತಿವೆ. ರಾಜಾಸ್ಥಾನದ ಸಾಮಾಜಿಕ ನ್ಯಾಯ ಖಾತೆ ಸಚಿವ ಅರುಣ್ ಚೌಧರಿ ಆಕ್ಷೇಪಣೆಗಳ ಪರವಾಗಿ ಮಾತನಾಡಿರುವುದನ್ನು, ಇನ್ನೊಬ್ಬ ಸಚಿವ ಪುಷ್ಪೇಂದ್ರ ಸಿಂಗ್ ರಜಪೂತ ಸಮುದಾಯದವರು ಒಪ್ಪಿದ ನಂತರವೇ ಚಿತ್ರ ಬಿಡುಗಡೆ ಮಾಡಬೇಕು ಎಂದಿರುವುದನ್ನು ಚುನಾಯಿತ ಪ್ರತಿನಿಧಿಗಳು ಲೂಟಿಕೊರರ ಪರವಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಲಾಗಿದೆ. ಚಿತ್ರ ನೋಡದೆ ಆಕ್ಷೇಪಿಸುವುದು ಸರಿಯಲ್ಲ ಎನ್ನುವುದು ಸರಿಯೇ. ಆದರೆ ಸಂಜಯ್ ಲೀಲಾ ಬನ್ಸಾಲಿಯವರೇ 2008ರಲ್ಲಿ ಫ್ರೆಂಚ ಒಪೆರಾ ತಂಡಕ್ಕೆ ‘ಪದ್ಮಾವತಿ’ ನೃತ್ಯ ರೂಪಕವನ್ನು ನಿರ್ದೇಶಿಸಿದ್ದರು. ಅಲ್ಲಿ ಈಗ ವಿವಾದವಾಗಿರುವ ಎಲ್ಲಾ ಅಂಶಗಳೂ ಇದ್ದವು. ಹೀಗಿರುವಾಗ ತನ್ನ ಚಿತ್ರ ಭಿನ್ನ ಎನ್ನುವ ಭರವಸೆ ನೀಡಬೇಕಾಗಿದ್ದು ಬನ್ಸಾಲಿಯವರ ಹೊಣೆಯಾಗಿತ್ತು. ಆದರೆ ಅದರ ಬದಲು ಚಿತ್ರದಲ್ಲಿ ಏನಿರಬೇಕು ಎನ್ನುವ ಷರತ್ತು ವಿಧಿಸುವ ಅಧಿಕಾರ ಯಾರಿಗೂ ಇಲ್ಲ ಎಂಬ ನಿಲುವನ್ನು ತಳೆದರು. ಇದು ವಿವಾದಕ್ಕೆ ಮೂಲ ಕಾರಣ.

ಇದರ ಜೊತೆಗೆ ನಾಯಕ-ನಾಯಕಿಯಾಗಿಯೇ ಇದುವರೆಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ಸಂಜಯ್ ಲೀಲಾ ಬನ್ಸಾಲಿಯವರ ಹಿಂದಿನ ಚಿತ್ರ ‘ಬಾಜಿರಾವ್ ಮಸ್ತಾನಿ’ಯ ಜೋಡಿ ದೀಪಿಕಾ ಪಡಕೋಣೆ ಮತ್ತು ರಣವೀರ್ ಸಿಂಗ್ ಪದ್ಮಾವತಿ ಮತ್ತು ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರ ಹಿಂದಿನ ಅರ್ಥವೇನು? ಕಥೆಯಲ್ಲಿ ಇಬ್ಬರ ನಡುವೆ ಏನೋ ಸಂಬಂಧವಿದೆ ಎನ್ನುವ ಅನುಮಾನವನ್ನು ಈ ಆಯ್ಕೆಯೇ ಮೂಡಿಸುವುದಿಲ್ಲವೆ? ಜಯಸಿಯ ‘ಪದ್ಮಾವತ್’ ಕಾವ್ಯದ ಉದ್ದೇಶ ಅಲ್ಲಾವುದ್ದೀನ್ ಖಿಲ್ಜಿಯ ದಿಗ್ವಿಜಯವನ್ನು ಹೇಳುವುದು ಅಲ್ಲವಾದರೂ ಈ ಅಂಶಕ್ಕೆ ಅಲ್ಲಿ ಮಹತ್ವವಿದೆ. ರಜಪೂತರ ಮೇಲೆ ಸ್ವಾಭಿಮಾನದ ಮೇಲೆ ಎರಗಿದ ದಾಳಿಕೋರನ ಸಾಹಸಗಳನ್ನು ತಮ್ಮ ಹೆಮ್ಮೆಯ ರಾಣಿಯ ಭಾಗವಾದ ಕಥೆಯಲ್ಲಿ ಒಪ್ಪಿ ಕೊಳ್ಳುವುದು ಸಾಧ್ಯವೆ ಎನ್ನುವುದು ಒಂದು ಪ್ರಶ್ನೆಯಾದರೆ, ಇಂತಹ ವಿವಾದಗಳನ್ನೇ ಪ್ರಚಾರ ತಂತ್ರ ಎಂದುಕೊಳ್ಳುತ್ತಿರುವ ಮನೋಭಾವ ಕೂಡ ಇನ್ನೊಂದು ಕಡೆ ಇದೆ. ಭಾವನೆಗಳ ಜೊತೆ ಆಟವಾಡುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕರೆಯಲಾಗದು ಎನ್ನುವುದು ಒಂದು ಸರಳ ಸತ್ಯ.

Leave a Reply