ಆದಷ್ಟು ಬೇಗ ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಜತೆಗೆ ಆಧಾರ್ ಸಂಖ್ಯೆ ಜೋಡಿಸಿಕೊಳ್ಳಿ! ಇಲ್ಲ ಅಂದ್ರೆ…

  ಡಿಜಿಟಲ್ ಕನ್ನಡ ಟೀಮ್:

  ಇಷ್ಟು ದಿನಗಳ ಕಾಲ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಗೆ, ಗ್ಯಾಸ್ ಸಂಪರ್ಕಕ್ಕೆ, ಸರ್ಕಾರದ ಯೋಜನೆ ಹಾಗೂ ಸಬ್ಸಿಡಿಯಂತಹ ವಿವಿಧ ಸೌಲಭ್ಯ ಪಡೆಯಲು ಬಳಸಿದ್ದಾಯ್ತು. ಈಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಪ್ಯಾನ್ ಕಾರ್ಡ್ ಜತೆ ಜೋಡಿಸಿಕೊಳ್ಳಿ… ಇಲ್ಲವಾದರೆ ನಿಮ್ಮ ಪ್ಯಾನ್ ಕಾರ್ಡ್ ಅಸಿಂಧುವಾಗಲಿದೆ.

  ಈ ವರ್ಷ ಡಿಸೆಂಬರ್ 31ರ ಒಳಗಾಗಿ ನಿಮ್ಮ ಪ್ಯಾನ್ ಕಾರ್ಡಿಗೆ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಸದ್ಯ ಪ್ಯಾನ್ ಕಾರ್ಡ್ ಅನ್ನು ತೆರಿಗೆ ಪಾವತಿ ಹಾಗೂ ಮರುಪಾವತಿಗಾಗಿ ತೆರಿಗೆದಾರರು ಕಡ್ಡಾಯವಾಗಿ ಹೊಂದಿರುತ್ತಾರೆ. ಆದರೆ ತೆರಿಗೆ ಹೊರತಾಗಿ ವಿದ್ಯಾರ್ಥಿಗಳು ಹಾಗೂ ಇತರೆ ವರ್ಗದವರು ಈ ಪ್ಯಾನ್ ಕಾರ್ಡ್ ಅನ್ನು ಗುರುತಿನ ದಾಖಲೆಯನ್ನಾಗಿ ಬಳಸಲಾಗುತ್ತಿದೆ. ಹೀಗೆ ತೆರಿಗೆ ಹೊರತಾಗಿ ಬಳಸಲಾಗುತ್ತಿರುವ ಹಲವು ಪ್ಯಾನ್ ಕಾರ್ಡ್ ಗಳು ನಕಲಿಯಾಗಿರುವುದು ಕಂಡುಬಂದಿದೆ.

  ಸದ್ಯ ದೇಶದಲ್ಲಿ 1.08 ಬಿಲಿಯನ್ ಜನರು ಆಧಾರ್ ಸಂಖ್ಯೆಯನ್ನು ಹೊಂದಿದ್ದು, ಸರ್ಕಾರದ ಹಲವು ಯೋಜನೆಗಳಲ್ಲಿ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಇನ್ನು ದೇಶದಲ್ಲಿ 250 ಮಿಲಿಯನ್ ಪ್ಯಾನ್ ಕಾರ್ಡ್ ಬಳಕೆದಾರರಿದ್ದಾರೆ. ₹ 50 ಸಾವಿರಕ್ಕಿಂತ ಹೆಚ್ಚಿನ ಪ್ರಯಾಣ ಅಥವಾ ಹೊಟೇಲ್ ಬಿಲ್ ಗಳಿಗೆ, ₹ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಆಭರಣ ಖರೀದಿಗೆ, ₹ 2 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರದ ವೇಳೆ ಹಾಗೂ ದೊಡ್ಡ ಮೊತ್ತದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಬೇಕಾದರೆ ಪ್ಯಾನ್ ಕಾರ್ಡ್ ಸಂಖ್ಯೆ ಕಡ್ಡಾಯವಾಗಿ ಬಳಸಬೇಕಿದೆ. ಈಗ ಸಾಕಷ್ಟು ಪ್ಯಾನ್ ಕಾರ್ಡ್ ಗಳು ನಕಲಿಯಾಗಿರುವ ಹಿನ್ನೆಲೆಯಲ್ಲಿ ಇವುಗಳನ್ನು ಪತ್ತೆ ಹಚ್ಚಲು ಆಧಾರ್ ಸಂಖ್ಯೆಯನ್ನು ಜೋಡಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

  ಕಳೆದ ಬುಧವಾರವಷ್ಟೇ ಲೋಕಸಭೆಯಲ್ಲಿ ತೆರಿಗೆ ಪಾವತಿ ಮತ್ತು ಪ್ಯಾನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವಾಗ ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯ ಎಂಬ ಮಸೂದೆಗೆ ಅನುಮೋದನೆ ನೀಡಲಾಗಿದ್ದು, ಸರ್ಕಾರ ಈಗ ಮತ್ತೊಂದು ನಿರ್ಧಾರ ತೆಗೆದುಕೊಳ್ಳುತ್ತಿದೆ. ಹಾಗಾದರೆ ಪ್ಯಾನ್ ಕಾರ್ಡಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ. ಈ ಪ್ರಕ್ರಿಯೆ ಕುರಿತ ಮಾಹಿತಿ ಹೀಗಿದೆ ನೋಡಿ…

  1. ಮೊದಲು ಇ-ಫೈಲಿಂಗ್ ವೆಬ್ ಸೈಟ್ ನಲ್ಲಿ ಲಾಗ್ ಇನ್ ಆಗಿ https://incometaxindiaefiling.gov.in
  2. ನಂತರ ಎರಡು ಸಂಖ್ಯೆಗಳನ್ನು ಜೋಡಿಸಲು ಒಂದು ಪರದೆ ಗೋಚರಿಸಲಿದೆ.
  3. ಅಲ್ಲಿ ಆಧಾರ್ ಕಾರ್ಡ್ ಸಂಖ್ಯೆ ಜಾಗದಲ್ಲಿ ನಿಮ್ಮ ಸಂಖ್ಯೆಯನ್ನು ಹಾಕಿ.
  4. ನಂತರ ಆಧಾರ್ ಕಾರ್ಡಿನಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿ (ಹೆಸರು, ಜನ್ಮದಿನಾಂಕ, ಲಿಂಗ) ಹಾಗೂ ಪ್ಯಾನ್ ಕಾರ್ಡಿಗೆ ನೀಡಿರುವ ಮಾಹಿತಿ ಸರಿ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.
  5. ನಂತರ ನಿಮ್ಮ ಗುರುತಿನ ಖಚಿತತೆಯನ್ನು ಮಾಡಿಕೊಳ್ಳಿ.
  6. ಆನಂತರ ‘link now’ ಎಂಬ ಬಟನ್ ಒತ್ತಿ. ನಿಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಗಳಲ್ಲಿರುವ ಮಾಹಿತಿ ಹೊಂದಾಣಿಕೆಯಾದರೆ ಈ ಎರಡು ಜೋಡಣೆಯಾಗಲಿವೆ.

  1 COMMENT

  1. ಮಸೂದೆ ಮಂಡನೆಯಾದಾಗಿನಿಂದ ಪ್ರಯತ್ನಿಸುತ್ತಿರುವೆ, ಆದರೆ ಆ ಆಯ್ಕೆ ತೆರಿಗೆ ಇಲಾಖೆ ವೆಬ್ಸೈಟ್ನ್ ಲಿ ದೊರೆಯುತ್ತಿಲ್ಲ.

  Leave a Reply