ಅಮೆರಿಕದಿಂದ 271 ಭಾರತೀಯರ ಗಡಿಪಾರು? ಸುಷ್ಮಾ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

‘ಅಕ್ರಮ ವಲಸಿಗರೆಂದು ಗುರುತಿಸಿ 271 ಮಂದಿ ಭಾರತೀಯ ಸಂಜಾತರ ಪಟ್ಟಿಯನ್ನು ಅಮೆರಿಕ ನೀಡಿರುವುದು ಹೌದಾದರೂ ನಾವದನ್ನು ಒಪ್ಪಿಕೊಂಡಿಲ್ಲ. ಖಚಿತ ದೃಢೀಕರಣಗಳ ನಂತರವಷ್ಟೇ ಅವರನ್ನು ಅಮೆರಿಕವು ವಾಪಾಸು ಕಳಿಸಬಹುದಾಗಿದೆ’

ಇದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯಸಭೆಗೆ ನೀಡಿರುವ ಮಾಹಿತಿ. ಟ್ರಂಪ್ ಆಡಳಿತ ಶುರುವಾಗುತ್ತಿದ್ದಂತೆಯೇ ಅಮೆರಿಕದ ವಿದೇಶ ನೀತಿಗಳಲ್ಲಿ ಹಲವು ರೀತಿಯ ಬದಲಾವಣೆಗಳಾಗುತ್ತಿವೆ. ಈ ನಿಟ್ಟಿನಲ್ಲಿ ಭಾರತೀಯರಿಗೆ ಆಗುವ ಪರಿಣಾಮಗಳನ್ನು ಈ ದೇಶ ಗಮನಿಸುತ್ತಿದೆ. ಆದರೆ ಅಮೆರಿಕ ವಿದೇಶ ನೀತಿಯಲ್ಲಿ ಅಮೂಲಾಗ್ರ ಬದಲಾವಣೆ ಆಗಿದೆ ಎಂಬುದನ್ನೇನೂ ಸುಷ್ಮಾ ಒಪ್ಪಿಲ್ಲ. ಹೊಸ ವೀಸಾ ನೀತಿಯ ಪ್ರಸ್ತಾವದಿಂದ ಭಾರತೀಯ ಐಟಿ ಉದ್ಯೋಗಿಗಳಿಗೆ ತೊಂದರೆಯಾಗದಂತೆ ಸಾಧ್ಯವಾದ ಎಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆಯುತ್ತಿದೆ. ವಾಶಿಂಗ್ಟನ್ನಿನ ಪೆವ್ ಸಂಶೋಧನಾ ಕೇಂದ್ರ ಕಳೆದ ಸೆಪ್ಟೆಂಬರ್ ನಲ್ಲಿ ನೀಡಿರುವ ವರದಿ ಪ್ರಕಾರ 2009 ರಿಂದ 2014ರವರೆಗೆ ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಹೋದ ಭಾರತೀಯ ಮೂಲದ ವ್ಯಕ್ತಿಗಳ ಸಂಖ್ಯೆ 1.30 ಲಕ್ಷ ಹೆಚ್ಚಾಗಿತ್ತು. ಒಟ್ಟಾರೆ 5 ಲಕ್ಷ ಮಂದಿ ಇದ್ದಾರೆ ಎಂದು ಹೇಳಲಾಗಿತ್ತು.

ಈ ಬಗ್ಗೆ ಸುಷ್ಮಾ ಹೇಳಿರುವುದು, ‘ಇಂಥ ಮಾತುಗಳು ಕಾಲಕಾಲಕ್ಕೆ ಕೇಳಿಬರುತ್ತಲೇ ಇವೆ. 2012ರ ಅಧ್ಯಯನವೊಂದು ಅಮೆರಿಕದಲ್ಲಿ 11.43 ಲಕ್ಷ ಅಕ್ರಮ ವಲಸಿಗರಿದ್ದಾರೆಂದೂ ಅದರಲ್ಲಿ 2.60 ಲಕ್ಷ ಭಾರತೀಯರೆಂದೂ ಹೇಳಲಾಗಿತ್ತು. ಆದರೆ ಇವ್ಯಾವನ್ನೂ ದೃಢೀಕರಿಸಿಲ್ಲ’

ಅಮೆರಿಕ ರಕ್ಷಣಾ ಕಾರ್ಯದರ್ಶಿ ಭೇಟಿಯಾದ ಧೋವಲ್

ಮತ್ತೊಂದೆಡೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಎನ್ ಮ್ಯಾಟಿಸ್ ಅವರನ್ನು ಶನಿವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ವಾಶಿಂಗ್ಟನ್ನಿನಲ್ಲಿರುವ ಪೆಂಟಗ್ ಕಚೇರಿಯಲ್ಲಿ ಎರಡು ದೇಶದ ಅಧಿಕಾರಿಗಳು ಸಭೆ ನಡೆಸಿದ್ದು, ಭಯೋತ್ಪಾದನೆ, ರಾಷ್ಟ್ರೀಯ ಭದ್ರತೆ ಸೇರಿದಂತೆ ಡೊನಾಲ್ಡ್ ಟ್ರಂಪ್ ಆಡಳಿತ ಅವಧಿಯಲ್ಲಿ ಭಾರತ ಜತೆಗಿನ ಸ್ನೇಹ ಭಾಂದವ್ಯ ವೃದ್ಧಿ ಕುರಿತಾಗಿ ಚರ್ಚಿಸಲಾಗಿದೆ.

Leave a Reply