ಮಂತ್ರಿಯಾಗಲು ಮಧ್ವರಾಜ್ ಕೊಟ್ರಂತೆ ₹ 10 ಕೋಟಿ ಲಂಚ, ರಾಜ್ಯದಲ್ಲಿ ಶುರುವಾಯ್ತು ರಾಜಕೀಯ ಆರೋಪಗಳ ಪರ್ವ

ಡಿಜಿಟಲ್ ಕನ್ನಡ ಟೀಮ್:

‘ಮಂತ್ರಿ ಸ್ಥಾನವನ್ನು ಅಲಂಕರಿಸಲು ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ರಾಜ್ಯ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಅವರಿಗೆ ₹ 10 ಕೋಟಿ ಲಂಚ ನೀಡಿದ್ದಾರೆ…’ ಹೀಗೊಂದು ಗಂಭೀರ ಆರೋಪ ಮಾಡಿರುವುದು ನಂಜನಗೂಡು ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್.

ಚುನಾವಣಾ ಪ್ರಚಾರದ ವೇಳೆ ಮಾತನಡಿದ ಅವರು, ‘ಉಡುಪಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೆದ್ದಿರುವ ಪ್ರಮೋದ್ ಮಧ್ವರಾಜ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಅವರಿಗೆ ಲಂಚ ನೀಡುವ ಮೂಲಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜವಾಬ್ದಾರಿ ಪಡೆದು ಕ್ಯಾಬಿನೆಟ್ ಮಂತ್ರಿಯಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.

ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆ ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿವೆ. ಹೀಗಾಗಿ ಇಲ್ಲಿ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪ ಆರಂಭವಾಗಿದ್ದು, ನಿಧಾನವಾಗಿ ಕಾವು ಪಡೆಯುತ್ತಿವೆ.

ಮೊನ್ನೆಯಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಜನಾರ್ದನ ರೆಡ್ಡಿ ಮೇಲಿನ ಪ್ರಕರಣ ಖುಲಾಸೆಗೆ ₹ 500 ಕೋಟಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದವು. ಚುನಾವಣೆಯ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಯಾರು ಯಾರಿಂದ ಎಷ್ಟು ಪಡೆದರು ಎಂಬ ಲೆಕ್ಕಾಚಾರದ ಆರೋಪಗಳು ಒಂದೊಂದಾಗಿಯೇ ಹೊರಬರುತ್ತಿದ್ದು, ಮುಂದಿನ ದಿನಗಳಲ್ಲಿ ಈ ಆರೋಪ ಪ್ರತ್ಯಾರೋಪಗಳಲ್ಲಿ ಯಾರ ಯಾರ ಹೆಸರುಗಳು ಕೇಳಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply