ಸ್ಮಿತ್ ಶತಕದ ಹೊರತಾಗಿ ಕಾಂಗರುಗಳ ಕುಸಿತ, ಮಿಂಚಿದ ಕುಲ್ದೀಪ್

ಡಿಜಿಟಲ್ ಕನ್ನಡ ಟೀಮ್:

ಪದಾರ್ಪಣೆಯ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಎಡಗೈ ಯುವ ಸ್ಪಿನ್ನರ್ ಕುಲ್ದೀಪ್ ಯಾದವ್ ಪ್ರವಾಸಿ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಮುರಿದರು. ಪರಿಣಾಮ ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ಆಸ್ಟ್ರೇಲಿಯಾ 300 ರನ್ ಕಲೆ ಹಾಕಿ ಆಲೌಟ್ ಆಗಿದೆ. ನಂತರ ಬ್ಯಾಟಿಂಗ್ ಆರಂಭಿಸಿರುವ ಭಾರತ ಇನ್ನಷ್ಟೇ ರನ್ ಖಾತೆ ತೆರೆಯಬೇಕಿದೆ.

ನಾಯಕ ವಿರಾಟ್ ಕೊಹ್ಲಿ ಭುಜದ ನೋವಿನಿಂದ ಪೂರ್ಣಪ್ರಮಾಣದಲ್ಲಿ ಗುಣಮುಖರಾಗದ ಹಿನ್ನೆಲೆಯಲ್ಲಿ ಈ ಪಂದ್ಯದಿಂದ ಹೊರಗುಳಿದರು. ಹೀಗಾಗಿ ತಂಡದ ನಾಯಕತ್ವ ಜವಾಬ್ದಾರಿ ಅಜಿಂಕ್ಯ ರಹಾನೆ ಹೆಗಲಿಗೆ ಬಿತ್ತು. ಇನ್ನು ಕೊಹ್ಲಿ ಜಾಗ ತುಂಬಿದ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್, ಮೊದಲ ಬಾರಿಗೆ ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು. ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಸ್ಟೀವನ್ ಸ್ಮಿತ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.

ಭಾರತದ ವೇಗಿ ಉಮೇಶ್ ಯಾದವ್ ಆಸ್ಟ್ರೇಲಿಯಾ ತಂಡದ ಆರಂಭಿಕ ರೆನ್ ಶಾರನ್ನು ಆರಂಭದಲ್ಲೇ ಬೋಲ್ಡ್ ಮಾಡುವ ಮೂಲಕ ಪ್ರವಾಸಿಗರಿಗೆ ಆರಂಭಿಕ ಆಘಾತ ನೀಡಿದರು. ಆಗ ಕ್ರೀಸ್ ಗೆ ಬಂದ ನಾಯಕ ಸ್ಮಿತ್, ವಾರ್ನರ್ ಜತೆಗೂಡಿ ಭಾರತೀಯ ಬೌಲರ್ ಗಳ ದಾಳಿಯನ್ನು ಲೀಲಾಜಾಲವಾಗಿ ಎದುರಿಸಿದರು. ಈ ಜೋಡಿ ವೇಗವಾಗಿ ರನ್ ಗಳಿಸಿದ ಪರಿಣಾಮ ಆಸ್ಟ್ರೇಲಿಯಾ ಮೊದಲ ಅವಧಿಯಲ್ಲಿ 131 ರನ್ ಕಲೆಹಾಕಿತು. ಊಟದ ವಿರಾಮದ ನಂತರದ ಅವಧಿಯಲ್ಲಿ ಪಂದ್ಯದ ಚಿತ್ರಣ ಬದಲಾಯಿತು. ಯುವ ಸ್ಪಿನ್ನರ್ ಕುಲ್ದೀಪ್ ಅವರ ಸ್ಪಿನ್ ಮೋಡಿ ಅರಿಯಲು ವಿಫಲರಾದ ಆಸ್ಟ್ರೇಲಿಯಾದ ದಾಂಡಿಗರು ಸತತವಾಗಿ ವಿಕೆಟ್ ಒಪ್ಪಿಸಿದರು. ಒಂದು ಹಂತದಲ್ಲಿ 144 ರನ್ ಗಳಿಗೆ ಕೇವಲ 1 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ 178 ರನ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು.

ಈ ವೇಳೆ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಸ್ಮಿತ್ ತಮ್ಮ 20ನೇ ಟೆಸ್ಟ್ ಶತಕ ಪೂರೈಸಿದರು. ಈ ಸರಣಿಯಲ್ಲಿ 3ನೇ ಶತಕ ದಾಖಲಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 300

ಸ್ಮಿತ್ 111, ವಾರ್ನರ್ 56, ವೇಡ್ 57,: ಕುಲ್ದೀಪ್ 68ಕ್ಕೆ4, ಉಮೇಶ್ 69ಕ್ಕೆ2, ಭುವನೇಶ್ವರ್ 41ಕ್ಕೆ1

Leave a Reply