ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನವ ಭಾರತದ ಕನಸು ತೋರಿಸುತ್ತಲೇ ಜನರ ಜವಾಬ್ದಾರಿ ಬಗ್ಗೆ ಅರಿವು ಮೂಡಿಸಿದ್ರು ಮೋದಿ

  ಡಿಜಿಟಲ್ ಕನ್ನಡ ಟೀಮ್:

  ನವಭಾರತದ ಕನಸು, ದೇಶದ ಪ್ರಗತಿಯ ಹೆಜ್ಜೆಯಲ್ಲಿ ಜನಸಾಮಾನ್ಯನ ಪಾತ್ರ, ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಲಹೆ, ಡಿಜಿಟಲ್ ವ್ಯವಹಾರದ ಯಶಸ್ಸು, ಬಾಂಗ್ಲಾದೇಶ ಸ್ವಾತಂತ್ರ್ಯ ದಿನ ಶುಭಾಶಯ, ಸ್ವಾತಂತ್ರ ಹೋರಾಟಗಾರರ ನೆನಕೆ… ಇವು ಪ್ರಧಾನಿ ನರೇಂದ್ರ ಮೋದಿ ಅವರ 30ನೇ ಮನ್ ಕಿ ಬಾತ್ ಕಾರ್ಯಕ್ರಮದ ಪ್ರಮುಖ ಅಂಶಗಳು.

  ಉತ್ತರ ಪ್ರದೇಶ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿದ ನಂತರ ಮೋದಿ ಅವರ ಮೊದಲ ಮನ್ ಕಿ ಬಾತ್ ಕಾರ್ಯಕ್ರಮ ಇದು. ಹೀಗಾಗಿ ಈ ಕಾರ್ಯಕ್ರಮದ ಬಗ್ಗೆ ಸಹಜವಾಗಿಯೇ ಕುತೂಹಲ ಹೆಚ್ಚಾಗಿದ್ದವು. ಈ ಕಾರ್ಯಕ್ರಮದಲ್ಲಿ ಮೋದಿ ಅವರ ಮಾತಿನ ಪ್ರಮುಖ ಸಾರಾಂಶಗಳು ಹೀಗಿವೆ…

  • ಸದ್ಯ ದೇಶದೆಲ್ಲೆಡೆ ಪರೀಕ್ಷೆಯ ಸಮಯ. ಪರೀಕ್ಷೆ ಮುಕ್ತಾಯದಿಂದ ಕೆಲವರ ಮನೆಗಳಲ್ಲಿ ನೆಮ್ಮದಿಯ ವಾತಾವರಣವಿದ್ದರೆ ಮತ್ತೆ ಹಲವೆಡೆಗಳಲ್ಲಿ ಪರೀಕ್ಷೆಯ ವಾತಾವರಣ ಇನ್ನು ಮುಂದುವರಿದಿದೆ. ಈ ಸಂದರ್ಭದಲ್ಲಿ ಕಳೆದ ವರ್ಷ ನಾನು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನೀಡಿದ್ದ ಸಲಹೆಗಳನ್ನು ಪಾಲಿಸುವಂತೆ ಹೇಳಲು ಇಚ್ಛಿಸುತ್ತೇನೆ. ನಿಮ್ಮೆಲ್ಲರಿಗೂ ಶುಭ ಕೋರುತ್ತೇನೆ.
  • ಇಂದು ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆದ ದಿನ. ನಮ್ಮ ಬಾಂಗ್ಲಾದೇಶದ ಅಣ್ಣ ತಮ್ಮಂದಿರಿಗೆ ಶುಭಾಶಯ ಕೋರಲು ಇಚ್ಛಿಸುತ್ತೇನೆ. ಭಾರತಕ್ಕೆ ಬಾಂಗ್ಲಾದೇಶ ಉತ್ತಮ ಸ್ನೇಹಿತ ರಾಷ್ಟ್ರ. ಬಾಂಗ್ಲಾದೇಶದ ಸ್ವಾತಂತ್ರ್ಯದಲ್ಲಿ ಶೇಖ್ ಮುಜ್ಬೀರ್ ರೆಹಮಾನ್ ಅವರ ಪಾತ್ರ ಮಹತ್ವದ್ದಾಗಿದೆ. ನಾವು ಭವಿಷ್ಯದಲ್ಲಿ ಬಾಂಗ್ಲಾದೇಶದ ಜನರ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಎಂದು ಭರವಸೆ ನೀಡುತ್ತೇನೆ.
  • ನಾವೀಗ 21 ನೇ ಶತಮಾನದಲ್ಲಿದ್ದೇವೆ. ನಾವೆಲ್ಲರು ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಾ ನವ ಭಾರತದ ನಿರ್ಮಾಣಕ್ಕೆ ಪಣ ತೊಟ್ಟಿದ್ದೇವೆ. ನವ ಭಾರತ ನಿರ್ಮಾಣ ದೇಶದ 125 ಕೋಟಿ ಜನರ ಕನಸು. ಈ ಕನಸು ಸಾಕಾರಗೊಳ್ಳಲು ಪ್ರತಿಯೊಬ್ಬರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಲು ಬಯಸುತ್ತಾರೆ. ಮತ್ತೊಬ್ಬರಿಗೆ ಸಹಾಯ ಮಾಡುವುದು ಭಾರತೀಯರ ಗುಣ. ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೂ ಬಡವರು, ರೋಗಿಗಳು ಹಾಗೂ ಅಗತ್ಯವಿರುವವರ ನೆರವಿಗೆ ಧಾವಿಸುತ್ತೇವೆ. ಒಬ್ಬರಿಗೊಬ್ಬರು ನೆರವು ನೀಡುವುದೇ ನಮ್ಮ ದೇಶದ ಶಕ್ತಿ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಸಮಾಜದಲ್ಲಿರುವ ಬಡವರಿಗೆ, ಶೋಷಿತರಿಗೆ ಸಾಧ್ಯವಾದಷ್ಟು ನೆರವಾಗೋಣ. ಜನಸೇವೆಯೇ ದೇವರ ಸೇವೆ ಎಂದು ನಂಬಿರುವವರು ನಾವು. ಇದನ್ನು ಸಂಘಟಿತ ರೂಪದಲ್ಲಿ ಮಾಡಿದರೆ ಸಮಾಜ ಬದಲಾವಣೆಯಾಗುವುದು ಖಚಿತ. ಅದರ ಜತೆಗೆ ಪ್ರತಿಯೊಬ್ಬರು ಸಂಚಾರಿ ನಿಯಮ ಅನುಸರಿಸುವುದು, ತಿಂಗಳಲ್ಲಿ ಒಂದೆರಡು ದಿನ ಪೆಟ್ರೋಲ್ ಬಳಸುವುದಿಲ್ಲ ಎಂಬಂತಹ ಸಣ್ಣ ಪುಟ್ಟ ನಿರ್ಧಾರಗಳನ್ನು ತೆಗೆದುಕೊಂಡರೆ ಅದು ದೊಡ್ಡ ಮಟ್ಟದ ಬದಲಾವಣೆಗೆ ದಾರಿಯಾಗುತ್ತದೆ. ನಮ್ಮ ನಾಗರೀಕ ಜವಾಬ್ದಾರಿಯನ್ನು ಪಾಲಿಸಿದರೆ ನವ ಭಾರತದೆಡೆಗಿನ ಹಾದಿ ಸುಗಮವಾಗಲಿದೆ.
  • ನಮ್ಮ ದೇಶದ ಸ್ವಾತಂತ್ರ ಸಂಗ್ರಾಮದಲ್ಲಿ ಮೊದಲ ಸತ್ಯಾಗ್ರಹವಾಗಿರುವ ಚಂಪರಣ್ ಸತ್ಯಾಗ್ರಹ ನಡೆದು 100 ವರ್ಷ ಪೂರೈಸುತ್ತಿದೆ. ಇಂತಹ ಸುಸಂದರ್ಭದಲ್ಲಿ ನಾವು ನಮ್ಮ ದೇಶಕ್ಕಾಗಿ ಪ್ರಾಣ ಬಿಟ್ಟ ಮಹಾನ್ ವ್ಯಕ್ತಿಗಳನ್ನು ಸ್ಮರಿಸೋಣ. ಚಂಪರಣ್ ಸತ್ಯಾಗ್ರಹ ನಮ್ಮೆಲ್ಲರಿಗೂ ಮಹಾತ್ಮ ಗಾಂಧಿ ಅವರ ವಿಶೇಷತೆಯನ್ನು ಪರಿಚಯಿಸಿದ ಹೋರಾಟ. ಮೊನ್ನೆ ಮಾರ್ಚ್ 23ಕ್ಕೆ ನಮ್ಮೆಲ್ಲರ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಬ್ರಿಟೀಷರು ನೇಣಿಗೆ ಹಾಕಿ 86 ವರ್ಷಗಳು ಪೂರ್ಣಗೊಂಡಿದೆ. ಭಗತ್ ಸಿಂಗ್ ಅವರ ಜತೆಗೆ ಸುಖ್ ದೇವ್, ರಾಜಗುರು ಸಹ ದೇಶದಕ್ಕಾಗಿ ಹೋರಾಡಿದ ವೀರರು. ಈ ಮೂವರು ಎಷ್ಟು ದೊಡ್ಡ ಪ್ರಭಾವ ಬೀರಿದ್ದರು ಎಂದರೆ ಬ್ರಿಟೀ|ಷರು ಈ ಮೂವರನ್ನು ಕಂಡರೆ ಹೆದರುತ್ತಿದ್ದರು. ತಾಯ್ನಾಡಿಗೆ ತಮ್ಮ ಜೀವವನ್ನು ಅರ್ಪಿಸಿದ ಮಹಾನ್ ವೀರರು ಇವರು. ಹೀಗಾಗಿ ಇಂದಿಗೂ ನಮಗೆ ಹಾಗೂ ಯುವ ಪೀಳಿಗೆಗೆ ಸ್ಫೂರ್ತಿಯಾಗಿ ನಿಲ್ಲುತ್ತಾರೆ.
  • ಇದೇ ಸಂದರ್ಭದಲ್ಲಿ ನಾನು ದೇಶದ ಎಲ್ಲ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಕಾರಣ, ನಿವೇಲ್ಲರು ಡಿಜಿಟಲ್ ವ್ಯವಹಾರ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದೀರಿ. ಈಗಾಗಲೇ ದೇಶದ 125 ಕೋಟಿ ಜನರು 2500 ಕೋಟಿ ಡಿಜಿಟಲ್ ವ್ಯವಹಾರವನ್ನು ನಡೆಸಿದ್ದೀರಿ. ಇದೊಂದು ಉತ್ತಮ ಆರಂಭ. ಏಪ್ರಿಲ್ 14ರಂದು ಡಾ.ಅಂಬೇಡ್ಕರ್ ಅವರ ಜನ್ಮದಿನ ಆಚರಣೆ ವೇಳೆ ಡಿಜಿಧನ್ ಮೇಳ ಯೋಜನೆ ಅಂತ್ಯವಾಗಲಿದ್ದು, ಲಕ್ಕಿ ವಿಜೇತರನ್ನು ಆಯ್ಕೆ ಮಾಡಲಾಗುವುದು.
  • ಭಾರತೀಯರಿಗೆ ಕೊಳಕು ಕಂಡರೆ ಕೋಪ ಬರುತ್ತದೆ. ಹೀಗಾಗಿ ನನಗೇ ಪ್ರತಿ ಬಾರಿಯೂ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ವಚ್ಛತೆ ಬಗ್ಗೆ ಹಲವು ಸಲಹೆ ಬರುತ್ತವೆ. ಈ ಬಾರಿಯೂ ಗಾಯತ್ರಿ ಎಂಬ ಯುವತಿ ಸ್ವಚ್ಛತೆ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸ್ವಚ್ಛ ಭಾರತ ಯೋಜನೆ ಜಾರಿಗೆ ಬಂದ ನಂತರ ದೇಶದ ಜನರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಕಷ್ಟು ಉತ್ಸುಕರಾಗಿದ್ದಾರೆ. ಇದು ಆಂದೋಲನವನ್ನಾಗಿ ಪರಿಣಮಿಸಿದೆ. ಈ ಆಂದೋಲನ ಸಾಮೂಹಿಕವಾಗಿ ನಡೆಯಬೇಕಾಗಿದೆ. ಸ್ವಚ್ಛತೆ ಕೇವಲ ಆಂದೋಲನವಾಗಿರದೆ, ಒಂದು ಹವ್ಯಾಸವಾಗಿ ಮಾರ್ಪಾಡಾಗಬೇಕು. ಈ ಬಾರಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ವಚ್ಛತೆ ಜತೆಗೆ ಆಹಾರ ವ್ಯರ್ಥಮಾಡುತ್ತಿರುವ ಬಗ್ಗೆ ಹಲವರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಮನೆಗಳಲ್ಲಾಗಲಿ, ಸಾರ್ವಜನಿಕ ಭೋಜನ ಕೂಟಗಳಲ್ಲಾಗಲಿ ಹಲವು ಮಂದಿ ತಮ್ಮ ತಟ್ಟೆಗೆ ಹೆಚ್ಚಿನ ಆಹಾರ ಹಾಕಿಕೊಂಡು ನಂತರ ಪೂರ್ಣವಾಗಿ ತಿನ್ನದೇ ವ್ಯರ್ಥ ಮಾಡುತ್ತಿದ್ದಾರೆ. ಹೀಗೆ ವ್ಯರ್ಥ ಮಾಡುವ ಆಹಾರದಿಂದ ಎಷ್ಟು ನಷ್ಟವಾಗುತ್ತದೆ? ಎಷ್ಟು ಜನ ಬಡವರ ಹೊಟ್ಟೆ ತುಂಬಿಸಬಹುದು ಎಂಬುದರ ಬಗ್ಗೆ ನೀವು ಎಂದಾದರು ಯೋಚಿಸಿದ್ದೀರಾ? ನಮ್ಮ ಮನೆಗಳಲ್ಲಿ ಈ ಬಗ್ಗೆ ಎಷ್ಟೇ ಬುದ್ಧಮಾತು ಹೇಳಿದರೂ ಅನೇಕರಿಗೆ ಈ ಬಗ್ಗೆ ನಿರ್ಲಕ್ಷ್ಯ.. ಇದು ಸಮಾಜಕ್ಕೆ ಹಾಗೂ ಬಡವರಿಗೆ ಮಾಡುವ ದ್ರೋಹ ಹಾಗೂ ಅನ್ಯಾಯ. ಇದೇ ವೇಳೆ ದೇಶದ ಕೆಲವು ಯುವಕರು ನಮಗೆ ಸ್ಫೂರ್ತಿಯಾಗಿ ನಿಲ್ಲುತ್ತಾರೆ. ಅವರು ಈ ಕುರಿತಾಗಿ ಆಂದೋಲನವನ್ನೇ ನಡೆಸುತ್ತಿದ್ದಾರೆ. ಮೊಬೈಲ್ ಆ್ಯಪ್ ಸಿದ್ಧಪಡಿಸಿ ಎಲ್ಲಿ ಹೆಚ್ಚುವರಿ ಆಹಾರ ಉಳಿದಿರುತ್ತದೆಯೋ ಅಲ್ಲಿ ಹೋಗಿ ಅದನ್ನು ಸಂಗ್ರಹಿಸಿ, ನಂತರ ಅಗತ್ಯ ಇರುವವರಿಗೆ ನೀಡುತ್ತಿದ್ದಾರೆ. ಇಂತಹ ಕಾರ್ಯಗಳು ನಮಗೂ ಪ್ರೇರಣೆಯಾಗಿದೆ. ಇದು ಬದಲಾವಣೆಯ ನಿಜವಾದ ದಾರಿ.
  • ಏಪ್ರಿಲ್ 7ರಂದು ವಿಶ್ವ ಆರೋಗ್ಯದಿನವಾಗಿದೆ. ಈ ಬಾರಿ ವಿಶ್ವಸಂಸ್ಥೆ ಖಿನ್ನತೆಯನ್ನು ಪ್ರಮುಖ ವಿಷಯವನ್ನಾಗಿ ಪರಿಗಣಿಸಿದೆ. ನಮ್ಮ ದೇಶದಲ್ಲೂ ಖಿನ್ನತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ತಮ್ಮ ಸಮಸ್ಯೆಯನ್ನು ಇತರರೊಂದಿಗೆ ಮುಕ್ತವಾಗಿ ಹಂಚಿಕೊಳ್ಳದಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣ. ಇದು ಗುಣಪಡಿಸಲಾಗದ ಸಮಸ್ಯೆಯಲ್ಲ. ಖಿನ್ನತೆಯನ್ನು ನಿಭಾಯಿಸಲು ನಾವು ನಮ್ಮ ತಂದೆ ತಾಯಿ, ಅಣ್ಣ ತಮ್ಮಂದಿರು, ಶಿಕ್ಷಕರು, ಸ್ನೇಹಿತ ಅಥವಾ ಇತರೆ ಪ್ರೀತಿಪಾತ್ರರೊಂದಿಗೆ ಮುಕ್ತವಾಗಿ ಮಾತನಾಡಬೇಕು. ತಮ್ಮ ಮನಸ್ಸಿನಲ್ಲಿರುವ ಎಲ್ಲ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಆಗ ಈ ಸಮಸ್ಯೆ ಕಡಿಮೆಯಾಗುತ್ತದೆ. ಇನ್ನು ಈ ವರ್ಷ ನಾವು ಮೂರನೇ ಬಾರಿಗೆ ಯೋಗ ದಿನವನ್ನು ಆಚರಿಸಲಿದ್ದೇವೆ. ಈ ಬಾರಿ ಹೆಚ್ಚು ಜನರು ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಬಗ್ಗೆ ಆಲೋಚಿಸೋಣ. ಇದೇ ವೇಳೆ ಸರ್ಕಾರ ಕೆಲದಿನಗಳ ಹಿಂದೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕೆಲಸ ಮಾಡುವ ಮಹಿಳೆ ಗರ್ಭಧರಿಸಿದರೆ ಆಕೆಗೆ ವೇತನ ಸಹಿತ ರಜೆಯನ್ನು 12 ವಾರಗಳಿಂದ 26 ವಾರಕ್ಕೆ ಹೆಚ್ಚಿಸಲಾಗಿದೆ. ಇದರಿಂದ ದೇಶದ ಅನೇಕ ಮಹಿಳೆಯರಿಗೆ ಅನುಕೂಲವಾಗಲಿದೆ.

  Leave a Reply