ಉಪಚುನಾವಣೆ ಪ್ರತಿಷ್ಠೆ: ವಿಧಾನಸಭೆಯಲ್ಲಿ ಸವಾಲಿಗೆ ಸವಾಲ್

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ಕುತೂಹಲ ಮೂಡಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂದು ವಿಧಾನಸಭೆ ಕಲಾಪದಲ್ಲಿ ದೊಡ್ಡ ವಾಕ್ಸಮರವೇ ನಡೆಯಿತು. ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರು ಪರಸ್ಪರ ಸವಾಲು ಎಸೆದುಕೊಂಡರು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮತ ಪಡೆಯುತ್ತೇವೆ’ ಎಂದರು.

ಮುಖ್ಯಮಂತ್ರಿಗಳು ಈ ಮಾತು ಮುಗಿಸುತ್ತಿದ್ದಂತೆ ಬಿಜೆಪಿ ನಾಯಕರಾದ ಸಿ.ಟಿ ರವಿ ಮಾತನಾಡಿ, ‘ಅಭಿವೃದ್ಧಿಯೇ ನಿಮ್ಮ ನಿಜವಾದ ಮಾನದಂಡವಾಗಿದ್ದರೆ, ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಪ್ರದೇಶಕ್ಕೆ ನಿಮ್ಮ ಸಚಿವರುಗಳು ಸೂಟ್ ಕೇಸ್ ಗಳನ್ನು ಯಾತಕ್ಕೆ ತೆಗೆದುಕೊಂಡು ಹೋಗಿದ್ದಾರೆ?’ ಎಂದು ಪ್ರಶ್ನಿಸಿದರು. ನಂತರ ನಡೆದ ವಾಗ್ವಾದ ಹೀಗಿತ್ತು…

ಮುಖ್ಯಮಂತ್ರಿ: ‘ಮೋದಿ ಅಭಿವೃದ್ಧಿ ಜಪ ಒಂದಿದ್ದರೆ, ಎಲ್ಲವೂ ಆಗಿಬಿಡುತ್ತದೆ ಎಂಬ ಭ್ರಮೆ ನಿಮ್ಮದು. ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರು ಈ ಬಾರಿಯ ಸಂಸತ್ ಕಲಾಪಕ್ಕೆ ಹೋಗಿದ್ದಾರಾ? ಬದಲಾಗಿ ಈ ಎರಡು ಕ್ಷೇತ್ರದಲ್ಲಿ ಬಿಡಾರ ಹೂಡಿದ್ದಾರೆ. ನಾನು ಒಂದು ದಿನವೂ ಆ ಕಡೆ ಸುಳಿದಿಲ್ಲ. ಸದನ ನಡೆಯುತ್ತಿರುವುದರಿಂದ ಕಲಾಪದಲ್ಲಿ ಭಾಗಿಯಾಗುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಗಾಳಿ, ಅಲೆ ಇದೆ ಅಂತೀರಲ್ಲಾ… ಯಾಕೆ ಆ ಗಾಳಿ ಇಲ್ಲಿಲ್ಲವೇ? ಅಥವಾ ಈ ಕಡೆ ತಲುಪಲು ಆಗಿಲ್ಲವೇ?’

ಸಿ.ಟಿ ರವಿ: ‘ನೀವೂ ಉಪಚುನಾವಣೆ ಕಡೆ ಹೋಗಬೇಡಿ, ನಾವು ಹೋಗುವುದಿಲ್ಲ, ಜನರೇ ತೀರ್ಪು ನೀಡುತ್ತಾರೆ.’

ಮುಖ್ಯಮಂತ್ರಿ: ‘ಕಳೆದ ಹದಿನೈದು ದಿನಗಳಿಂದ ನಿಮ್ಮವರು ಅಲ್ಲಿ ಸುಳ್ಳು ಹೇಳುತ್ತಿದ್ದಾರಲ್ಲ. ಅದನ್ನು ಹೋಗಿ ನಾನು ಸರಿ ಮಾಡಬೇಕಲ್ಲ’

ಸಿ.ಟಿ ರವಿ: ‘ನಿಮ್ಮವರು ಹೋಗಿ ದುಡ್ಡು ಹಂಚುತ್ತಿದ್ದಾರೆ.’

ಮುಖ್ಯಮಂತ್ರಿ: ‘ರೀ… ಎಲ್ಲರ ಮನೆ ದೋಸೇನೂ ತೂತೇ. ನಿಮ್ಮ ಮನೆಯ ದೋಸೆಗೆ ತೂತಿಲ್ಲ ಎಂಬಂತೆ ಮಾತನಾಡುತ್ತೀರಲ್ಲ. ನೀವೇನೇ ಮಾಡಿದರೂ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಅಲ್ಲಿಗೆ ಬನ್ನಿ, ಅಲ್ಲಿಗೆ ಬಂದು ಸವಾಲು ಹಾಕಿ. ನಿಮ್ಮದು ಆರೆಸ್ಸೆಸ್ ಮುಖವಾಣಿಯಂತಿರುವ ಪಕ್ಷ. ಆದರೆ ನಮ್ಮದು ಜನಪರ ಪಕ್ಷ. ನಿಮ್ಮಲ್ಲಿ ಎಲ್ಲವೂ ಸರಿ ಇದ್ದಿದ್ದರೆ ಈಶ್ವರಪ್ಪ ಏಕೆ ಕೂಡಲಸಂಗಮದಲ್ಲಿ ಪ್ರತ್ಯೇಕ ಸಭೆ ಮಾಡುತ್ತಿದ್ದರು. ನೀವು ಯಾರಿಗೆ ನೋಟೀಸ್ ಕೊಟ್ಟಿರೊ ಅವರೆಲ್ಲಾ ಸಮಾವೇಶ ನಡೆಸಿದರು. ಇದನ್ನು ನೋಡಿದರೆ ನಿಮ್ಮಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ತಿಳಿಯುವುದಿಲ್ಲವೇ?’

ಬಿಜೆಪಿ ಸದಸ್ಯರು: ‘ನೀವು ಜೆಡಿಎಸ್ ನಲ್ಲಿದ್ದಾಗ ಅಹಿಂದ ಚಳುವಳಿ ಮಾಡಿರಲಿಲ್ಲವೇ? ನಿಮ್ಮನ್ನು ಕಾಂಗ್ರೆಸ್ ಗೆ ಕರೆತಂದ ವಿಶ್ವನಾಥ್ ಅವರಿಗೆ ನೊಟೀಸ್ ಕೊಡಿಸಿದ್ದೀರಲ್ಲ ಪಾಪ. ನಿಮ್ಮನ್ನು ಕರೆತಂದ ತಪ್ಪಿಗೆ ಅವರು ಪರಿತಪಿಸುತ್ತಿದ್ದಾರೆ. ಹೀಗಾಗಿ ಕಾನೂನು ಸಚಿವ ಟಿ.ಬಿ ಜಯಚಂದ್ರ ಉಪಚುನಾವಣೆಯಲ್ಲಿ ಎಲ್ಲರ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕಾಗಿದೆ.’

Leave a Reply