ಸಿದ್ದರಾಮಯ್ಯ, ಯಡಿಯೂರಪ್ಪ ಪ್ರತಿಷ್ಠೆಗೆ ಪ್ರಸಾದ್ ಪಣ

ಕೆಲವೊಮ್ಮೆ ಮನುಷ್ಯನ ಮೇಲೆ ಸವಾರಿ ಮಾಡುವ ಒತ್ತಡ ಕೃತಿ ಮತ್ತು ಚಿಂತನೆ ನಡುವೆ ಸಂಬಂಧವನ್ನೇ ಕಡಿದು ಬಿಸಾಡಿರುತ್ತದೆ. ಶರೀರ ಏನನ್ನೋ ಮಾಡುತ್ತಿರುತ್ತದೆ. ಮನಸ್ಸು ಮತ್ತೊಂದನ್ನು ಧೇನಿಸುತ್ತಿರುತ್ತದೆ. ಆಗ ಹೊರಡುವ ಮಾತಿಗೆ ಅರ್ಥ, ಮಾಡುವ ಕೆಲಸಕ್ಕೆ ನಿತಾಂತ ಇರುವುದಿಲ್ಲ.

ಈಗ ನಡೆಯುತ್ತಿರುವ ವಿಧಾನ ಮಂಡಲ ಬಜೆಟ್ ಅಧಿವೇಶನ ಕಲಾಪನಿರತ ಆಡಳಿತರೂಢ ಕಾಂಗ್ರೆಸ್, ಪ್ರಮುಖ ಪ್ರತಿಪಕ್ಷ ಬಿಜೆಪಿ ಮುಖಂಡರ ಮನಸ್ಥಿತಿ ಕೂಡ ಒಂಥರಾ ಹೀಗೆ ಆಗಿದೆ. ಕಲಾಪದ ಸುತ್ತೆಲ್ಲ ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆಯದೇ ಆಲಾಪ. ವಿಧಾನ ಮಂಡಲ ಉಭಯ ಸದನಗಳ ಮೊಗಸಾಲೆ ತುಂಬೆಲ್ಲ ಅದರ ಆಗುಹೋಗಿನದೇ ಪ್ರಲಾಪ. ಕಾಂಗ್ರೆಸ್ ಮತ್ತು ಬಿಜೆಪಿ ಬಹಿರಂಗವಾಗಿ ಏನನ್ನಾದರೂ ಹೇಳಿಕೊಳ್ಳಲಿ, ಆದರೆ ಆಂತರ್ಯದಲ್ಲಿ ಮಾತ್ರ ವರ್ಷವಷ್ಟೇ ಬಾಕಿ ಉಳಿದಿರುವ ವಿಧಾನಸಭೆ ಚುನಾವಣೆಗೆ ಇದು ದಿಕ್ಸೂಚಿ ಎಂದೇ ಪರಿಗಣಿಸಿವೆ. ಹೀಗಾಗಿ ಕುಂತಲ್ಲಿ-ನಿಂತಲ್ಲಿ ಅದರ ಬಗ್ಗೆಯೇ ಆಲೋಚನೆ, ಚರ್ಚೆ. ಬಜೆಟನ್ನು ಸಾಂಪ್ರದಾಯಿಕ ಮಂಡನೆ ನಿಮಿತ್ತಕ್ಕೆ ಸೀಮಿತಗೊಳಿಸುವಷ್ಟರ ಮಟ್ಟಿಗೆ ಚುನಾವಣೆಯ ಗಾಢ ಪ್ರಭಾವ ಅದರ ಮೇಲೆ ಬೀರಿದೆ.

ಒಂದು ಕಾಲಕ್ಕೆ ಸಿದ್ದರಾಮಯ್ಯ ಗಳಸ್ಯರಾಗಿದ್ದ ಶ್ರೀನಿವಾಸ ಪ್ರಸಾದ್ ಮಂತ್ರಿ ಸ್ಥಾನ ಕಳೆದುಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಹಿನ್ನೆಲೆಯಲ್ಲಿ ನಂಜನಗೂಡಿಗೆ ಹಾಗೂ ಸಚಿವ ಮಹದೇವಪ್ರಸಾದ್ ಹಠಾತ್ ನಿಧನದಿಂದ ಗುಂಡ್ಲುಪೇಟೆಗೆ ಮರುಚುನಾವಣೆ ನಡೆಯುತ್ತಿದೆ. ಈ ಚುನಾವಣೆ ಪ್ರತಿಷ್ಠೆ ವಿಚಾರ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಆಂತರಿಕವಾಗಿ ಒಪ್ಪಿಕೊಂಡಿವೆ. ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿರುವುದರಿಂದ ಜಾತ್ಯತೀತ ಜನತಾ ದಳ ನಿಮಿತ್ತ ಮಾತ್ರಕ್ಕೂ ಇಲ್ಲ. 2018ರ ಚುನಾವಣೆ ಫಲಿತಾಂಶ ಏನಾಗುತ್ತದೋ ಬಿಡುತ್ತದೋ, ಈಗಿನ ಚುನಾವಣೆಯನ್ನು ಗೆದ್ದೇ ತೀರಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಖಡಾಖಡಿಗೆ ಇಳಿದಿರುವುದರ ಹಿಂದೆ ಮಾತ್ರ ಮತ್ತದೇ ಪ್ರತಿಷ್ಠೆ ಮನೆ ಮಾಡಿದೆ.

ಈ ಮರುಚುನಾವಣೆ ಸರಕಾರದ ಬಗ್ಗೆ ಜನಾದೇಶ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದರೂ ಆಂತರ್ಯದ ಮಾತೇ ಬೇರೆ. ಇತ್ತೀಚೆಗೆ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಚಿವ ಸಂಪುಟ ಸದಸ್ಯರು ಮತ್ತು ಪಕ್ಷ ಪದಾಧಿಕಾರಿಗಳ ಸಭೆಯಲ್ಲಿ ಅದನ್ನು ಅರುಹಿದ್ದಾರೆ. ಇದು ಮುಂದಿನ ವಿಧಾನಸಭೆ ಚುನಾವಣೆಯ ‘ಟ್ರೆಂಡ್ ಸೆಟ್ಟರ್’. ಮುಂದೆ ಚುನಾವಣೆ ಗೆಲ್ಲುತ್ತೇವೋ ಬಿಡುತ್ತೇವೋ ಅದು ಬೇರೆ ಪ್ರಶ್ನೆ. ಆದರೆ ಈಗ ಮಾತ್ರ ಸೋಲಬಾರದು. ಗೆದ್ದು ಪ್ರತಿಷ್ಠೆ ಮೆರೆಯಬೇಕು. ಇದಕ್ಕೆ ಎಲ್ಲರೂ ಪಣತೊಟ್ಟು ಶ್ರಮಿಸಬೇಕು ಎಂದು ತಾಕೀತು ಮಾಡಿದ್ದಾರೆ. ಸಿದ್ದರಾಮಯ್ಯ ತುಡಿತಕ್ಕೆ ಇದೊಂದು ನಿದರ್ಶನ.

ಸಿದ್ದರಾಮಯ್ಯನವರ ಈ ತುಡಿತ ಸಹಜವೇ. ಇಡೀ ದೇಶದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ಸನ್ನು ಕರ್ನಾಟಕದಲ್ಲಿ ಗೂಟ ಕೊಟ್ಟು ನಿಲ್ಲಿಸಿದ್ದೇವೆ ಎಂಬುದನ್ನು ಬಿಂಬಿಸಬೇಕಿದೆ. ಹಿಂದೆ ತುರ್ತು ಪರಿಸ್ಥಿತಿ ನಂತರ ಇಡೀ ದೇಶದಲ್ಲಿ ಗುಡಿಸಿ, ಗುಂಡಾಂತರವಾಗಿದ್ದ ಕಾಂಗ್ರೆಸ್ಸಿಗೆ ನೆಲೆ ಕೊಟ್ಟದ್ದು ಕರ್ನಾಟಕ. ಅಂದಿನ ಕಾಂಗ್ರೆಸ್ ಪರಮೋಚ್ಚ ನಾಯಕಿ ಇಂದಿರಾಗಾಂಧಿ ಅವರಿಗೆ ರಾಜಕೀಯ ಮರುಜನ್ಮ ಸಿಕ್ಕಿದ್ದೂ ಇಲ್ಲೇ. ಕಳೆದ ಲೋಕಸಭೆ ಚುನಾವಣೆಯಲ್ಲೂ ದೇಶದ ಉದ್ದಗಲಕ್ಕೂ ಚಾಪೆ ಹಾಸಿಕೊಂಡು ಮಲಗಿದಾಗ ತಲೆಗೆ ದಿಂಬು ಕೊಟ್ಟು ಕಾಂಗ್ರೆಸ್ ಮರ್ಯಾದೆಯನ್ನು ಸ್ವಲ್ಪ ಎತ್ತರಿಸಿದ್ದು ಕರ್ನಾಟಕವೇ. ಆಗ ದೇಶದಲ್ಲಿ ಕಾಂಗ್ರೆಸ್ ಗೆದ್ದದ್ದು 44 ಸೀಟುಗಳು. ಈ ಪೈಕಿ ಕರ್ನಾಟಕದ್ದು 9. ಅಂದರೆ ಶೇಕಡಾ 20 ರಷ್ಟು. ಯಾರೆಲ್ಲ, ಏನೆಲ್ಲ ಹೈಕಮಾಂಡ್ ಕಿವಿ ಚುಚ್ಚಿದರೂ ಸಿದ್ದರಾಮಯ್ಯ ಅವರನ್ನಾಗಲಿ, ಅವರ ಸಿಎಂ ಕುರ್ಚಿಯನ್ನಾಗಲಿ ಅಲ್ಲಾಡಿಸಲು ಯಾರಿಗೂ ಸಾಧ್ಯವಾಗದೇ ಹೋದದ್ದು ಇದೇ ಕಾರಣಕ್ಕೆ. ಹೈಕಮಾಂಡ್ ಜತೆಗೆ ನೇರ ಸಂಪರ್ಕ ಕಾಯ್ದುಕೊಂಡು ಬಂದಿರುವ ಸಿದ್ದರಾಮಯ್ಯ ಅವರಿಗೆ ಈಗಲೂ ಕರ್ನಾಟಕವೇ ಕಾಂಗ್ರೆಸ್ಸಿನ ಭದ್ರಕೋಟೆ ಎಂಬುದನ್ನು ಸಾಬೀತು ಮಾಡುವ ವಾಂಛೆ. ಹೀಗಾಗಿ ಶತಾಯಗತಾಯ ಈ ಮರುಚುನಾವಣೆಯನ್ನು ಗೆದ್ದು, ಹೈಕಮಾಂಡ್ ಎದಿರು ತಮ್ಮ ನಾಯಕತ್ವ ಸಮರ್ಥಿಸಿಕೊಳ್ಳಬೇಕು ಎಂದು ಹಾತೊರೆಯುತ್ತಿದ್ದಾರೆ.

ನಿಜ, ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯ ಛಾಪು ಮುಂದುವರಿದಿದೆ. ನೋಟ್ಯಂತರದ ನಡುವೆಯೂ ವೈಯಕ್ತಿಕ ಸಾಮರ್ಥ್ಯದ ನೆಲೆಗಟ್ಟಿನಲ್ಲಿ ಬಿಜೆಪಿಯನ್ನು ಪ್ರಸ್ತುತಪಡಿಸಿದ ಮೋದಿ ಅವರ ಸಾಧನೆ ಕಡಿಮೆಯದ್ದೇನಲ್ಲ. ಈ ಅಲೆಯ ನಡುವೆಯೂ ಮರುಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ದಡ ಸೇರಿಸಿಬಿಟ್ಟರೆ ಸಿದ್ದರಾಮಯ್ಯ ಅವರನ್ನು ಹಿಡಿಯುವವರು ಯಾರೂ ಇರುವುದಿಲ್ಲ. ಮೋದಿ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿಹಾಕಿದೆವೆಂದು ಬೀಗಬಹುದು. ಎಲ್ಲಕ್ಕಿಂತ ಮಿಗಿಲಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಅಭ್ಯರ್ಥಿ ಆಗಿರುವ ಹಳೇ ಗೆಳೆಯ ಶ್ರೀನಿವಾಸ ಪ್ರಸಾದ್ ಹಾದಿಬೀದಿಯಲ್ಲಿ ಬಾಯಿಗೆ ಬಂದಂತೆ ಸಿದ್ದರಾಮಯ್ಯನವರನ್ನು ನಿಂದಿಸಿಕೊಂಡು ತಿರುಗುತ್ತಿದ್ದಾರೆ. ಅದೂ ಏಕವಚನದಲ್ಲಿ. ಹಿಂದೆ ಆಪ್ತರಾಗಿದ್ದ ಕಾರಣಕ್ಕೆ ಎಟುಕಿದ್ದ ಒಂದಷ್ಟು ಆಂತರ್ಯದ ವಿಚಾರಗಳನ್ನೂ ತೇಜೋವಧೆಗೆ ಬಳಸುತ್ತಿದ್ದಾರೆ. ಇದರಿಂದ ನಖಶಿಖಾಂತ ಉರಿದುಹೋಗಿರುವ ಸಿದ್ದರಾಮಯ್ಯನವರು ಹೇಗಾದರೂ ಮಾಡಿ ಪ್ರಸಾದ್ ಅವರನ್ನು ಬಲಿ ಹಾಕಲೇಬೇಕೆಂದು ನಿರ್ಣಯಿಸಿದ್ದಾರೆ. ತತ್ಪರಿಣಾಮ ಎರಡು ಬಗೆಯಲ್ಲಿ ಅವರಿಗೆ  ಈ ಚುನಾವಣೆ ಪ್ರತಿಷ್ಠೆಯದ್ದಾಗಿದೆ. ಎರಡು ವಿಧಾನಸಭೆ ಕ್ಷೇತ್ರಗಳಿಗೆ 25 ಮಂತ್ರಿಗಳನ್ನು ನಿಯೋಜಿಸಿರುವುದನ್ನು ನೋಡಿದರೆ ಸಾಕು, ಸಿದ್ದರಾಮಯ್ಯನವರು ಈ ಚುನಾವಣೆಯನ್ನು ಅದೆಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ.

ಅದೇ ರೀತಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರರಿಗೂ ಈ ಚುನಾವಣೆ ಬಹುಮುಖ್ಯದ್ದು. ಶ್ರೀನಿವಾಸ ಪ್ರಸಾದ್ ನಿರ್ಗಮನದಿಂದ ದಲಿತ ಸಮುದಾಯದ ಮತಗಳ ಪಲ್ಲಟಗೊಂಡಿಲ್ಲ. ನಿಜ ಅರ್ಥದಲ್ಲಿ ತಾವೇ ಕಾಂಗ್ರೆಸ್ಸಿನ ದಲಿತ ಮುಖಂಡ ಎಂದು ಅವರಿಗೆ ಬಿಂಬಿಸಿಕೊಳ್ಳಬೇಕಿದೆ. ಏಕೆಂದರೆ ಈ ಹಿಂದೆ ಈ ರಾಜ್ಯಕ್ಕೊಬ್ಬ ದಲಿತ ಮುಖ್ಯಮಂತ್ರಿ ಬೇಕಿದೆ ಎಂಬ ಕೂಗು ಎದ್ದಿದ್ದರ ಹಿಂದೆ ಪರಮೇಶ್ವರರ ‘ರಾಜಕೀಯ ಪಾಶುಪತಾಸ್ತ್ರ’ ಕೆಲಸ ಮಾಡಿತ್ತು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಸಿಎಂ ಗಾದಿಗೇರಲು ತುದಿಗಾಲಲ್ಲಿ ನಿಂತಿದ್ದ ಅವರು ಅದೃಷ್ಟ ಹಳಗುಳಿಮಣೆ ಆಟ ಆಡಿದ್ದರಿಂದ ಕಣದಲ್ಲೇ ಬೋರಲು ಬಿದ್ದರು. ಮೇಲ್ಮನೆ ಸದಸ್ಯರಾಗಿ ಉಪಮುಖ್ಯಮಂತ್ರಿ ಆಗಲು ಕಟ್ಟಿದ ಆಟ ಒಂದೆರಡಲ್ಲ. ಆದರೆ ಗೆರಿಲ್ಲಾ ಸಮರ ನಿಪುಣ ಸಿದ್ದರಾಮಯ್ಯನವರ ಎದಿರು ಆ ಆಟಗಳೇನೂ ನಡೆಯಲಿಲ್ಲ. ಹೀಗಾಗಿ ಹಗಲುರಾತ್ರಿಯೆನ್ನದೆ ಪರಮೇಶ್ವರ್ ಸುರಿಸಿದ ಬೆವರಿಗೆ ಸಿಕ್ಕಿದ್ದು ಮಂತ್ರಿ ಪದವಿ ಮಾತ್ರ. ಅದೂ ಎರಡೂವರೆ ವರ್ಷದ ನಂತರ. ಈಗ ಪ್ರಸಾದ್ ಸೋಲಿಸಿಬಿಟ್ಟರೆ ದಲಿತ ಸಮುದಾಯ ಕಾಂಗ್ರೆಸ್ ಜತೆಗೆ ಇದೆ,  ತಮ್ಮೊಂದಿಗೇ ಜೋತಾಡುತ್ತಿದೆ ಎಂದು ಸಾರಿಕೊಳ್ಳಬಹುದು. ಭವಿಷ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗೆ ತಮ್ಮನ್ನು ಕನೆಕ್ಟ್ ಮಾಡಿಕೊಳ್ಳಬೇಕಾದರೆ ಈ ಚುನಾವಣೆ ಗೆದ್ದು, ಅದರ ಹೆಸರನ್ನು ತಮ್ಮ ಜೋಳಿಗೆಗೆ ಹಾಕಿಕೊಳ್ಳಬೇಕೆಂಬ ಹವಣಿಕೆ ಅವರದು.

ಮುಂದಿನ ವರ್ಷ ಬರೋ ಚುನಾವಣೆ ಹಣೆಬರಹ ಕೂಡ ಅಷ್ಟೇ ದೂರದಲ್ಲಿದೆ. ಆದರೆ ಸಿಎಂ ಪಟ್ಟಕ್ಕೆ ಈಗಾಗಲೇ ಸಜ್ಜಾಗಿರುವ ಕಾಂಗ್ರೆಸ್ ನಾಯಕರ ಸಂಖ್ಯೆ ಕಡಿಮೆಯೇನಿಲ್ಲ. ಆ ಪೈಕಿ ಅಗ್ರಪಂಕ್ತಿಯಲ್ಲಿ ನಿಂತಿರುವ ಮತ್ತೊಬ್ಬ ನಾಯಕ ಸಚಿವ ಡಿ.ಕೆ. ಶಿವಕುಮಾರ್. ಸಚಿವ ಎಂ.ಬಿ. ಪಾಟೀಲ್ ಜತೆಗೆ ಗುಂಡ್ಲುಪೇಟೆ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ಶಿವಕುಮಾರ್ ಲೆಕ್ಕಾಚಾರವೇ ಬೇರೆ. ಎಲ್ಲಕ್ಕಿಂತ ಮೊದಲು ಪರಮೇಶ್ವರ್‌ಗೆ ಕೊಕ್ ಕೊಟ್ಟು ಕೆಪಿಸಿಸಿ ಅಧ್ಯಕ್ಷರಾಗಬೇಕಿದೆ. ಸಿಎಂ ಪಟ್ಟಕ್ಕೆ ಕ್ಯುನಲ್ಲಿ ನಿಂತಿರೋರ ಪೈಕಿ ಕೆಪಿಸಿಸಿ ಅಧ್ಯಕ್ಷರಿಗೆ ಮೊದಲ ಮಣೆ ಹಾಕುವುದು ಕಾಂಗ್ರೆಸ್‌ನಲ್ಲಿ ನಡೆದುಬಂದಿರೋ ಸಂಪ್ರದಾಯ. ಇದಕ್ಕೆ ಅಪವಾದಗಳು ಇಲ್ಲವೆಂದೇನಿಲ್ಲ. ಆದರೂ ಆದ್ಯತೆ ಇವರಿಗೇ. ಹೀಗಾಗಿ ಮೊದಲು ಕೆಪಿಸಿಸಿ ಅಧ್ಯಕ್ಷರಾಗಿ, ಆ ಮೂಲಕ ಸಿಎಂ ಗಾದಿ ಮುಂಚೂಣಿ ಅಭ್ಯರ್ಥಿ ಆಗಬೇಕೆನ್ನುವುದು ಶಿವಕುಮಾರ್ ಇಂಗಿತ. ಇಂಥ ಲೆಕ್ಕಾಚಾರಗಳಿರುವ ಹತ್ತು, ಹಲವು ಕಾಂಗ್ರೆಸ್ ನಾಯಕರ ಒಳಗುದಿಯಿಂದ ಮರುಚುನಾವಣೆ ಖದರೇ ಬೇರೆ ಆಗಿದೆ. ಇಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲು-ಗೆಲುವು ನೆಪಮಾತ್ರ. ನಾಯಕರ ಭವಿಷ್ಯದ ಕನಸೇ ಮಿಗಿಲು. ತತ್ಪರಿಣಾಮ ಚುನಾವಣೆ ಕಾವು ಬೇಸಿಗೆಯನ್ನು ನಾಚಿಸಿದೆ.

ಇದು ಆಡಳಿತ ಪಕ್ಷದ ಕತೆಯಾದರೆ ಇನ್ನು ಪ್ರತಿಪಕ್ಷ ಬಿಜೆಪಿ ಜೋಶೇ ಬೇರೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಘೋಷಿತರಾಗಿರುವ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ನಡೆಯುತ್ತಿರುವ ಮೊದಲ ಮರುಚುನಾವಣೆ ಇದು. ಅವರ ಮೇಲೂ ಪಂಚರಾಜ್ಯ ಚುನಾವಣೆ ಫಲಿತಾಂಶದ ಒತ್ತಡವಿದೆ. ದೇಶಾದ್ಯಂತ ಬೀಸುತ್ತಿರುವ ಮೋದಿ ಅಲೆಯನ್ನು ಮರುಚುನಾವಣೆ ಗೆಲುವಿನ ಮಳೆಯಾಗಿ ಪರಿವರ್ತಿಸುವ ಜವಾಬ್ದಾರಿ ಅವರ ಮೇಲಿದೆ. ಮುಂದಿನ ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲುವುದಾಗಿ ಹೋದಲ್ಲಿ ಬಂದಲ್ಲಿ ಹೇಳಿಕೊಳ್ಳುತ್ತಿರುವ ಯಡಿಯೂರಪ್ಪ ಈ ಮರುಚುನಾವಣೆಯನ್ನು ಅದರ ಸ್ಯಾಂಪಲ್ ಎಂದು ನಿರೂಪಿಸಬೇಕಿದೆ. ಜತೆಗೆ ಈ ಚುನಾವಣೆ ಅದರ ದಿಕ್ಸೂಚಿ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಗೆಲ್ಲಲೇಬೇಕಾದ ಅನಿವಾರ್ಯಕ್ಕೆ ತಮ್ಮನ್ನು ತಾವೇ ಒಡ್ಡಿಕೊಂಡಿದ್ದಾರೆ.

ಇನ್ನು ಜೆಡಿಎಸ್ ಸ್ಟೋರಿ. ಎರಡೂ ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಗೊಡವೆಗೆ ಹೋಗಿಲ್ಲ. ಇದಕ್ಕೆ ಪಕ್ಷ ಮತ್ತು ಕಾರ್ಯಕರ್ತರ ಅಭಿಪ್ರಾಯದ ನೆಪ ಕೊಟ್ಟಿದೆ. ಪಂಚರಾಜ್ಯ ಚುನಾವಣೆ ಫಲಿತಾಂಶದ ಬೆನ್ನಲ್ಲೇ, ಮೋದಿ ಅಶ್ವಮೇಧ ಕುದುರೆ ಕಟ್ಟಿ ಹಾಕುವ ತಾಕತ್ತು ಇರುವುದು ಜೆಡಿಎಸ್ಸಿಗೆ ಮಾತ್ರ ಎಂದು ಕುಮಾರಸ್ವಾಮಿ ಹೇಳಿದ್ದರು. ಮೋದಿ ಕುದುರೆ ಉತ್ತರ ಭಾರತದಲ್ಲಷ್ಟೇ ಒಡಾಡಬಹುದು, ದಕ್ಷಿಣದತ್ತ ಬರಲು ಸಾಧ್ಯವಿಲ್ಲ ಎಂದು ದೇವೇಗೌಡರೂ ಧ್ವನಿಗೂಡಿಸಿದ್ದರು. ಮೋದಿ ಕುದುರೆ ಕಟ್ಟಾಕುವುದು ಪಕ್ಕಕ್ಕಿರಲಿ, ಈ ಮರುಚುನಾವಣೆಯಲ್ಲಿ ಕಣಕ್ಕಿಳಿಸಲು ಜೆಡಿಎಸ್ ಮುಖಂಡರಿಗೆ ಒಂದೆರಡು ಕತ್ತೆ ಕೂಡ ಸಿಕ್ಕಿಲ್ಲ. ಇಲ್ಲಿ ಇನ್ನೊಂದು ವಾದ ಮಂಡನೆ ಆಗಿದೆ. ಹಿಂದೆ ತಮಿಳ್ನಾಡಿನಲ್ಲಿ ಕರುಣಾನಿಧಿ ಸರಕಾರವಿದ್ದಾಗ ಪ್ರತಿಪಕ್ಷ ಸ್ಥಾನದಲ್ಲಿದ್ದ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು 15 ಕ್ಷೇತ್ರಗಳ ಮರುಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯನ್ನೂ ಕಣಕ್ಕಿಳಿಸಿರಲಿಲ್ಲ ಎಂಬ ಉದಾಹರಣೆ ಕೊಟ್ಟಿದ್ದಾರೆ. ಆದರೆ ವರ್ಷದ ಹಿಂದಷ್ಟೇ ನಡೆದ ಹೆಬ್ಬಾಳ, ದೇವದುರ್ಗ ಮತ್ತು ಬೀದರ್ ಮರುಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಾಗ ಜೆಡಿಎಸ್ ನಾಯಕರಿಗೆ ಇದ್ಯಾಕೆ ಹೊಳೆಯಲಿಲ್ಲವೋ ಗೊತ್ತಿಲ್ಲ!

ಇನ್ನು ಅಭ್ಯರ್ಥಿಗಳ ಪೈಕಿ ನಂಜನಗೂಡಿನ ಶ್ರೀನಿವಾಸ ಪ್ರಸಾದ್‌ಗೆ ಚುನಾವಣೆ ಗರಿಷ್ಠ ಪ್ರತಿಷ್ಠೆಯದ್ದು. ಅಷ್ಟು ವರ್ಷ ತಮ್ಮ ಜತೆಗಿದ್ದು, ತಮ್ಮಿಂದಲೇ ರಾಜಕೀಯ ಪುನರುತ್ಥಾನ ಕಂಡ ಸಿದ್ದರಾಮಯ್ಯ ತಮ್ಮ ಬೆನ್ನಿಗೆ ಇರಿದರು ಎಂಬುದು ಅವರ ನೇರ ಆರೋಪ. ಅಂತೆಯೇ ‘ಇದು ನನ್ನ ಮತ್ತು ಸಿದ್ದರಾಮಯ್ಯ ನಡುವಣ ನೇರ ಯುದ್ಧ. ನಾನು ಸ್ವಾಭಿಮಾನದ ಸಂಕೇತ. ಸಿದ್ದರಾಮಯ್ಯ ಅಹಂಕಾರದ ಪ್ರತೀಕ. ಅಹಂಕಾರದ ಎದಿರು ಸ್ವಾಭಿಮಾನ ಗೆಲ್ಲಿಸಿ. ಅಹಿಂದ ಹೆಸರೇಳಿಕೊಂಡು ಬಂದ ಸಿದ್ದರಾಮಯ್ಯ ಅವರಿಗೆ ಆ ವರ್ಗದ ಬಗ್ಗೆ ಕಿಂಚಿತ್ತೂ ಗೌರವವಿಲ್ಲ, ಕೃತಜ್ಞತೆ ಇಲ್ಲ’ ಎಂದೆಲ್ಲ ಪ್ರಚಾರ ಮಾಡುತ್ತಿರುವ ಪ್ರಸಾದ್ ಈ ಚುನಾವಣೆಯಲ್ಲಿ ತಮ್ಮ ಆತ್ಮಗೌರವವನ್ನು ಪಣಕ್ಕಿಟ್ಟಿದ್ದಾರೆ. ಅವರು ಎಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮಾತಾಡುತ್ತಿಲ್ಲ. ಬದಲಿಗೆ ಸಿದ್ದರಾಮಯ್ಯ ಅವರನ್ನು ಗುರಿಯಾಗಿಟ್ಟುಕೊಂಡು ಕತ್ತಿ ಝಳಪಿಸುತ್ತಿದ್ದಾರೆ. ಒಂದರ್ಥದಲ್ಲಿ ಅವರು ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವಣ ಪ್ರತಿಷ್ಠೆ ಹೋರಾಟಕ್ಕೆ ಪಣವೂ ಹೌದು.

ಈ ಮಧ್ಯೆ, ನಂಜನಗೂಡನಲ್ಲಿ ತಮ್ಮ ಪುತ್ರ ಬೋಸ್ ಅವರನ್ನು ಕಣಕ್ಕಿಳಿಸಲು ಸಿದ್ದರಾಮಯ್ಯ ಆಪ್ತ ಸಚಿವ ಎಚ್.ಸಿ. ಮಹದೇವಪ್ಪ ನಿರ್ಧರಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಕೂಡ ಆರಂಭದಲ್ಲಿ ಯೆಸ್ ಎಂದಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಅವರಿಗೆ ಟಿಕೆಟ್ ನೀಡದೆ ಕಳಲೆ ಕೇಶವಮೂರ್ತಿ ಅವರನ್ನು ಅಭ್ಯರ್ಥಿ ಮಾಡಿರುವುದು ಮಹದೇವಪ್ಪ ಅವರನ್ನು ಕೆರಳಿಸಿದೆ. ಏಕೆಂದರೆ ತಮ್ಮ ಪುತ್ರನನ್ನು ರಾಜಕೀಯಕ್ಕೆ ತರಬೇಕೆಂಬ ಕಾರಣಕ್ಕೆ ಮಹದೇವಪ್ಪ ಕ್ಷೇತ್ರದಲ್ಲಿ ಸಾಕಷ್ಟು ‘ಬಂಡವಾಳ’ ಹೂಡಿದ್ದರು. ಅನೇಕ ಜನೋಪಯೋಗಿ ಕೆಲಸಗಳನ್ನೂ ಮಾಡಿಸಿದ್ದರು. ಆದರೆ ಇನ್ಯಾರೋ ಅಭ್ಯರ್ಥಿ ಆಗಿರುವುದು, ಒಂದೊಮ್ಮೆ ಅವರು ಗೆದ್ದು ಬಂದರೆ ಶಾಶ್ವತವಾಗಿ ಕ್ಷೇತ್ರ ತಮ್ಮ ಪುತ್ರನ ಕೈತಪ್ಪಿ ಹೋಗುತ್ತದೆ ಎಂಬ ಕಾರಣಕ್ಕೆ ಅವರು ಒಳರಾಜಕೀಯ ಶುರುಮಾಡಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿ ಬಂದಿವೆ.

ಒಟ್ಟಾರೆ ಈ ಮರುಚುನಾವಣೆ ಹಠ ಸಾಧನೆ ಕಣ. ಈ ಹಠದ ಹಿಂದೆ ವ್ಯಕ್ತಿ ಪ್ರತಿಷ್ಠೆ ಇದೆ. ದ್ವೇಷಾಸೂಯೆ ರಾಜಕಾರಣವಿದೆ. ಜನರ ನಾಡಿಮಿಡಿತ ಅರಿವ ಪಕ್ಷಗಳ ತುಡಿತವಿದೆ. ಎಲ್ಲಕ್ಕಿಂತ ಮಿಗಿಲಾಗಿ ರಾಜ್ಯ ನಾಯಕರ ತಾಕತ್ತು ಮೌಲ್ಯಮಾಪನಕ್ಕೊಂದು ವೇದಿಕೆಯೂ ಆಗಿದೆ.

ಲಗೋರಿ: ವೈಯಕ್ತಿಕ ಪ್ರತಿಷ್ಠೆಗೆ ಜನಪರ ಕಾಳಜಿ ಬಲಿಯಾಗುವುದೇ ಪ್ರಜಾತಂತ್ರದ ಬಲುದೊಡ್ಡ ಸೋಲು.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply