ವಿಧಾನಸಭೆಯಲ್ಲಿ ಕೇಂದ್ರ ಮತ್ತು ಯಡಿಯೂರಪ್ಪನವ್ರ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ವಿಧಾನಸಭೆ ಕಲಾಪದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರನವರ ವಿರುದ್ಧ ವಾಗ್ದಾಳಿ ನಡೆಸಲು.

ಬಜೆಟ್ ಮೇಲಿನ ಚರ್ಚೆ ವೇಳೆ ಉತ್ತರ ನೀಡಲು ಮುಂದಾದ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಘೋಷಣೆ ಕೇವಲ ಮಾತಿಗೆ ಸೀಮಿತವಾಗಿದೆ. ಇನ್ನು ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ಕೃಷಿ ಸಾಲ ಮನ್ನಾ ಮಾಡುವಂತೆ ಕೂಗಾಡುತ್ತಿದ್ದಾರೆ. ಜನರ ಮನ ಸೆಳೆಯಲು ಕೃಷಿ ಸಾಲ ಮನ್ನಾ ಘೋಷಣೆ ಮಾಡಬಹುದು. ಆದರೆ ಇದಕ್ಕೆ ಎಲ್ಲಿಂದ ಹಣ ತರುವುದು ಎಂದು ಕೇಳಿದರು. ಈ ಬಗ್ಗೆ ಸಿದ್ದರಾಮಯ್ಯನವರ ಮಾತುಗಳು ಹೀಗಿದ್ದವು…

‘ಕೇಂದ್ರ ಸರ್ಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಕೇವಲ ಘೋಷಣೆ ಮಾಡುತ್ತಿದೆ. ಆದರೆ ಅದನ್ನು ನಾವು ಕಾರ್ಯಗತ ಮಾಡಿದ್ದೇವೆ. ಸರ್ವಜಾತಿಗಳ ಬಡವರು, ಶೋಷಿತರಿಗೆ ನಮ್ಮ ಮುಂಗಡ ಪತ್ರದ ಮೂಲಕ ಶಕ್ತಿ ತುಂಬಿ ಈ ಕಾರ್ಯ ಮಾಡಿದ್ದೇವೆ. ಆದರೆ ಪ್ರಧಾನಿ ಏನು ಮಾಡಿದ್ದಾರೆ? ಕೆಲವು ವರ್ಗಗಳನ್ನು ದೂರವಿಟ್ಟು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತೀರಲ್ಲಾ ನಿಮಗೆ ಮಾನ, ಮರ್ಯಾದೆ ಇಲ್ಲವೇ? ನಮ್ಮ ಸರ್ಕಾರ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಿದೆ. ಹೀಗಾಗಿ ನಮ್ಮ ವಿರುದ್ಧ ಮಾತನಾಡುವ ನೈತಿಹ ಹಕ್ಕು ನಿಮಗೆಲ್ಲಿದೆ?ಕರ್ನಾಟಕ ರಾಜ್ಯ ಅಭಿವೃದ್ಧಿಗೆ ಮಾದರಿ. ಆ ದಾರಿಯಲ್ಲಿ ಪ್ರಾಮಾಣಿಕ ಹೆಜ್ಜೆ ಇಟ್ಟಿದ್ದೇವೆ. ಚುನಾವಣೆಗೂ ಮುನ್ನ ಜನರಿಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿ ಮುಂಬರುವ ಚುನಾವಣೆಗೆ ಇದನ್ನೇ ಮಾನದಂಡವನ್ನಾಗಿಟ್ಟುಕೊಂಡು ಮತಯಾಚಿಸುತ್ತೇವೆ.

ಇನ್ನು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನಾನೂ ರೈತರ ಕೃಷಿ ಸಾಲ ಮನ್ನಾ ಮಾಡುವಂತೆ ಪ್ರತಿಪಕ್ಷದಲ್ಲಿದ್ದ ನಾನು ಹೇಳಿದ್ದೆ. ಆದರೆ ಹಣಕಾಸು ಮಂತ್ರಿಯಾಗಿ ಹೇಳುತ್ತೇನೆ. ಸಾಲ ಮನ್ನಾ ಮಾಡಲು ಎಲ್ಲಿಂದ ಹಣ ತರಬೇಕು? ವೋಟಿಗಾಗಿ ಎಲ್ಲರೂ ಹೇಳುವಂತೆ ನಾನೂ ಹೇಳಿ ಬಿಡಬಹುದು. ಆದರೆ ಹಣಕಾಸು ಮಂತ್ರಿಯಾಗಿ ಆ ರೀತಿ ಹೇಳಲು ಸಾಧ್ಯವಿಲ್ಲ.’

ಇದೇ ವೇಳೆ ರೈತರ ಸಾಲ ಮನ್ನ ಮಾಡಲು ಸಾಧ್ಯವಾಗದಿದ್ದರು, ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲ ಮರುಪಾವತಿಗೆ ಮತ್ತಷ್ಟು ಕಾಲಾವಕಾಶ ನೀಡುವ ಇಂಗಿತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದರು.

Leave a Reply