ಆಸೀಸ್ ವಿರುದ್ಧ 2-1 ರಿಂದ ಸರಣಿ ಗೆದ್ದ ಟೀಂ ಇಂಡಿಯಾ, ಗಟ್ಟಿಯಾಯ್ತು ಭಾರತದ ನಂಬರ್ ಒನ್ ಪಟ್ಟ

ಪ್ರಸಕ್ತ ಸಾಲಿನ ಟೆಸ್ಟ್ ಚಾಂಪಿಯನ್ ಶಿಪ್ ಟ್ರೋಫಿಯನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹಸ್ತಾಂತರಿಸಿದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್… (ಟ್ವಿಟರ್ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅಭೂತಪೂರ್ವ ಜಯ ದಾಖಲಿಸುವ ಮೂಲಕ ಟೀಂ ಇಂಡಿಯಾ ಪ್ರಸಕ್ತ ಟೆಸ್ಟ್ ಋತುವಿಗೆ ವರ್ಣರಂಜಿತ ತೆರೆ ಎಳೆದಿದೆ. ಈ ಋತುವಿನಲ್ಲಿ 13 ಟೆಸ್ಟ್ ಪಂದ್ಯಗಳ ಸುದೀರ್ಘ ಪಯಣದಲ್ಲಿ ಭಾರತ ಗಮನಾರ್ಹ ಪ್ರದರ್ಶನ ತೋರಿದೆ. ಅದರೊಂದಿಗೆ ಭಾರತ ತಂಡ ಸತತವಾಗಿ 7 ಟೆಸ್ಟ್ ಸರಣಿಗಳನ್ನು ಗೆದ್ದ ಸಾಧನೆ ಮಾಡಿದೆ.

ಧರ್ಮಶಾಲಾದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ಭಾರತ ತಂಡ ಕೇವಲ 2 ವಿಕೆಟ್ ನಷ್ಟಕ್ಕೆ ಆಸ್ಟ್ರೇಲಿಯಾ ನೀಡಿದ್ದ 105 ರನ್ ಗಳ ಗುರಿ ತಲುಪಿತು. ಭಾರತದ ಪರ ಎರಡನೇ ಇನಿಂಗ್ಸ್ ನಲ್ಲಿ ಕೆ.ಎಲ್.ರಾಹುಲ್ (ಅಜೇಯ 51), ನಾಯಕ ರಹಾನೆ (ಅಜೇಯ 38) ಆಕರ್ಷಕ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅದರೊಂದಿಗೆ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು. ಕಳೆದ ಎರಡು ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ನಲ್ಲಿ ಗೆಲುವಿನ ನಾಗಾಲೋಟದಲ್ಲಿರುವ ಟೀಂ ಇಂಡಿಯಾ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿತು. ಅಲ್ಲದೆ ಈ ಸಾಲಿನಲ್ಲಿ ಅಗ್ರಸ್ಥಾನದೊಂದಿಗೆ ಮುಕ್ತಾಯಗೊಳಿಸಿರುವ ಭಾರತ ಟೆಸ್ಟ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಪ್ರಸಕ್ತ ಋತುವಿನಲ್ಲಿ ಭಾರತ ತಂಡ 5 ಟೆಸ್ಟ್ ಸರಣಿಗಳನ್ನಾಡಿದ್ದು, ಎಲ್ಲಾ ಸರಣಿಗಳನ್ನು ಗೆದ್ದುಕೊಂಡಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 2-0 ಅಂತರದ ಗೆಲುವಿನಿಂದ ಆರಂಭವಾದ ಭಾರತದ ಅಭಿಯಾನ ನಂತರ ನ್ಯೂಜಿಲೆಂಡ್ ವಿರುದ್ಧ 3-0, ಇಂಗ್ಲೆಂಡ್ ವಿರುದ್ಧ 4-0, ಬಾಂಗ್ಲಾದೇಶ ವಿರುದ್ಧ 5-0 ಹಾಗೂ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಸರಣಿ ಜಯದವರೆಗೂ ಬಂದಿದೆ. ಇನ್ನು 2015ರಲ್ಲಿ ಭಾರತ ತಂಡ ಬಾಂಗ್ಲಾದೇಶ ಸರಣಿಯಲ್ಲಿ ಡ್ರಾ ಫಲಿತಾಂಶ ಪಡೆದ ನಂತರ ನಡೆದಿರುವ 7 ಸರಣಿಗಳನ್ನು ಸತತವಾಗಿ ಜಯಿಸಿದೆ.

ಟೆಸ್ಟ್ ಆಡುವ ಎಲ್ಲಾ ರಾಷ್ಟ್ರಗಳ ವಿರುದ್ಧ ಇತ್ತೀಚಿಗೆ ನಡೆದ ಸರಣಿಗಳನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಈ ಹಿಂದೆ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮಾತ್ರ ಈ ಸಾಧನೆ ಮಾಡಿದ್ದವು. ಇನ್ನು ವಿರಾಟ್ ಕೊಹ್ಲಿ ತಂಡದ ನಾಯಕರಾಗಿ ಸತತ 9ನೇ ಸರಣಿಯನ್ನು ಗೆದ್ದು ಭಾರತದ ಪರ ಶ್ರೇಷ್ಠ ಸಾಧನೆ ಮಾಡಿದ್ದಾರೆ ಈ ಹಿಂದೆ ಮಹೇಂದ್ರ ಸಿಂಗ್ ಧೋನಿ (7) ಹಾಗೂ ರಾಹುಲ್ ದ್ರಾವಿಡ್ (6) ಸರಣಿಗಳಲ್ಲಿ ಸತತ ಜಯ ಸಂಪಾದಿಸಿದ್ದರು.

ಇವಿಷ್ಟು ಭಾರತ ತಂಡದ ಕಳೆದ ಎರಡು ವರ್ಷಗಳಲ್ಲಿನ ಸಾಧನೆಯಾಗಿದೆ. ಇನ್ನು ಈ ಸರಣಿಯಲ್ಲಿ ಭಾರತದ ಪ್ರದರ್ಶನವನ್ನು ನೋಡುವುದಾದರೆ, ಭಾರತ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದೆ. ಸರಣಿಯಲ್ಲಿ ಆಟಗಾರರ ನಡುವಣ ವಾಕ್ಸಮರ, ಮೈಂಡ್ ಗೇಮ್ ಜತೆಗೆ ಎರಡೂ ತಂಡಗಳ ಜಿದ್ದಾಜಿದ್ದಿನ ಹೋರಾಟ ಅಭಿಮಾನಿಗಳನ್ನು ಸಂಪೂರ್ಣವಾಗಿ ರಂಜಿಸಿದೆ. ಸರಣಿ ಆರಂಭಕ್ಕೂ ಮುನ್ನ ಭಾರತ ಈ ಸರಣಿಯನ್ನು ವೈಟ್ ವಾಷ್ ಮೂಲಕ ಜಯ ಸಾಧಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪುಣೆಯಲ್ಲಿನ ಆರಂಭಿಕ ಪಂದ್ಯದಲ್ಲಿ 333 ರನ್ ಗಳ ಹೀನಾಯ ಸೋಲು ಈ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿ ಮಾಡಿತ್ತು. ಈ ವೇಳೆ ಈ ಸರಣಿಯನ್ನು ಸ್ಮಿತ್ ಪಡೆ ಗೆದ್ದು ಭಾರತದ ಸರಣಿ ಜಯದ ಓಟಕ್ಕೆ ಬ್ರೇಕ್ ಹಾಕುವುದೇ ಎಂಬ ಪ್ರಶ್ನೆ ಮೂಡಿತ್ತು. ಆದರೆ  ನಂತರ ಬೆಂಗಳೂರಿನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ಭರ್ಜರಿ ಗೆಲವು ಸಾಧಿಸುವುದರೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸಿತು. ಇನ್ನು ರಾಂಚಿಯಲ್ಲಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದರಿಂದ ಈ ಪಂದ್ಯ ನಿರ್ಣಾಯಕ ಹಂತ ತಲುಪಿತ್ತು. ಈ ಪಂದ್ಯದಲ್ಲೂ ಭಾರತ ಗೆದ್ದು ಸರಣಿ ಜಯಿಸಿದೆ.

ಭಾರತ ತಂಡದ ಆಟಗಾರರ ಪ್ರದರ್ಶನ ನೋಡುವುದಾದರೆ, ನಾಯಕ ವಿರಾಟ್ ಕೊಹ್ಲಿ ಹೊರತಾಗಿ ಇತರೆ ಆಟಗಾರರು ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿರುವುದು ಸಕಾರಾತ್ಮಕ ಬೆಳವಣಿಗೆ. ಆರಂಭಿಕನಾಗಿ ಕೆ.ಎಲ್. ರಾಹುಲ್ ಆರು ಅರ್ಧಶತಕ, ಪೂಜಾರ ಅವರ ದ್ವಿಶತಕ, ಅಜಿಂಕ್ಯ ರಹಾನೆ ನೀಡಿದ ಅಮೂಲ್ಯ ಜತೆಯಾಟಗಳು ಬ್ಯಾಟಿಂಗ್ ವಿಭಾಗದ ಹೈಲೈಟ್ಸ್ ಗಳಾದ್ರೆ, ಆರ್.ಅಶ್ವಿನ್ ಜತೆಗೆ ರವೀಂದ್ರ ಜಡೇಜಾ ಆಲ್ರೌಂಡ್ ಪ್ರದರ್ಶನದಿಂದ ನಂಬರ್ ಒನ್ ಟೆಸ್ಟ್ ಬೌಲರ್ ಆಗಿ ಬೆಳೆದಿದ್ದು, ಉಮೇಶ್ ಯಾದವ್ ಮಾರಕ ದಾಳಿ ಭಾರತದ ಬೌಲಿಂಗ್ ವಿಭಾಗದ ಪ್ರಮುಖ ಅಂಶಗಳು. ಒಟ್ಟಾರೆಯಾಗಿ ಭಾರತ ತಂಡ ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನಂಬರ್ ಒನ್ ಪಟ್ಟಕ್ಕೆ ತಾನು ಅರ್ಹ ಎಂಬುದನ್ನು ಸಾಬೀತುಪಡಿಸಿದೆ.

Leave a Reply