ಉಗ್ರರಿಗೆ ಸಹಕರಿಸುತ್ತ ಸೇನೆಗೆ ಕಲ್ಲು ತೂರಿದ ಯುವಕರನ್ನು ಮುಲಾಜಿಲ್ಲದೇ ಹೊಸಕಿದೆ ಸೇನೆ, ಇದ್ಯಾವ ಸೂಚನೆ?

21536

ಡಿಜಿಟಲ್ ಕನ್ನಡ ಟೀಮ್:

ಯುಗಾದಿಯನ್ನು ಬೇರೆ ಬೇರೆ ಹೆಸರುಗಳಲ್ಲಿ ದೇಶದ ಹಲವು ಪ್ರದೇಶಗಳು ಆಚರಿಸುತ್ತಿದ್ದರೆ ಜಮ್ಮು-ಕಾಶ್ಮೀರದ ಎಂದಿನ ಗಲಾಟೆ ಪ್ರಾಂತ್ಯಗಳು ಮತ್ತೆ ಬಂದ್ ಆಚರಿಸುತ್ತಿವೆ.

ಕಾರಣವಿಷ್ಟೆ. ಮಂಗಳವಾರ ಬುಡ್ಗಾಂವ್ ನಲ್ಲಿ ಸೇನೆ ಮತ್ತು ಸಿಆರ್ಪಿಎಫ್ ಜಂಟಿ ಕಾರ್ಯಾಚರಣೆ ನಡೆಸಿತು. ಮನೆಯೊಂದರಲ್ಲಿ ಅಡಗಿದ್ದ ಉಗ್ರರನ್ನು ನಿಗ್ರಹಿಸುವುದು ಕಾರ್ಯಾಚರಣೆಯ ಉದ್ದೇಶವಾಗಿತ್ತು. ಆದರೆ ಕಾರ್ಯಾಚರಣೆ ನಡೆಯುವಾಗಲೇ ಸ್ಥಳೀಯರು ಗುಂಪುಗೂಡಿದರು. ಕಾರ್ಯಾಚರಣೆಗೆ ಅಡ್ಡಿಪಡಿಸುತ್ತ ಭದ್ರತಾ ಪಡೆಗಳ ಮೇಲೆ ಕಲ್ಲು ತೂರುವುದಕ್ಕೆ ಶುರು ಮಾಡಿದರು. ಮನೆಯಲ್ಲಿ ಸುತ್ತುವರಿಯಲ್ಪಟ್ಟಿದ್ದ ಉಗ್ರರು ತಪ್ಪಿಸಿಕೊಳ್ಳುವುದಕ್ಕೆ ದಾರಿ ಮಾಡಿಕೊಡುವುದು ಇವರೆಲ್ಲರ ಉದ್ದೇಶವಾಗಿತ್ತು.

ನಿಮಗೆ ಗೊತ್ತಿರಬಹುದು. ತಿಂಗಳ ಹಿಂದಷ್ಟೇ ನಮ್ಮ ಸೇನಾ ಮುಖ್ಯಸ್ಥರು ಗುಡುಗಿದ್ದರು. ‘ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ಸಹಕರಿಸುವವರನ್ನೂ ನಾವು ಉಗ್ರರೆಂದೇ ಪರಿಗಣಿಸುತ್ತೇವೆ. ಅವರ ವಿರುದ್ಧ ಗುಂಡು ಚಲಾಯಿಸುವುದಕ್ಕೆ ಹಿಂಜರಿಕೆ ಇಟ್ಟುಕೊಳ್ಳುವುದಿಲ್ಲ’ ಅಂತ. ಯಥಾಪ್ರಕಾರ ಉದಾರವಾದಿ ರಾಜಕಾರಣವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತೆಂಬ ವರದಿಯನ್ನು ನೀವು ಇಲ್ಲಿಯೇ ಓದಿದ್ದಿರಿ. ಅಷ್ಟಾಗಿಯೂ ಅದು ಕೇವಲ ಬೆದರಿಕೆ ಅಂದುಕೊಂಡರೇನೋ ಜಿಹಾದಿ ಪುಂಡರು. ಉಗ್ರರಿಗೆ ನೆರವಾಗುವ ತಮ್ಮ ಕೃತ್ಯವನ್ನು ರಾಜಾರೋಷದಲ್ಲಿ ಮುಂದುವರಿಸಿದರು.

ಈ ಬಾರಿ ಸೇನೆ ತನ್ನ ಎಚ್ಚರಿಕೆಗೆ ತಕ್ಕಂತೆಯೇ ಉತ್ತರ ಕೊಟ್ಟಿತು. ಒಬ್ಬ ಉಗ್ರನೇನೋ ಹೆಣವಾದ. ಜತೆಗೆ 20ರ ಪ್ರಾಯದ ಮೂವರು ಯುವಕರ ಹೆಣಗಳು ಬಿದ್ದಿವೆ. ಯಥಾಪ್ರಕಾರ ನ್ಯಾಷನಲ್ ಕಾನ್ಫರೆನ್ಸಿನ ಒಮರ್ ಅಬ್ದುಲ್ಲಾ ಹಾಗೂ ಹುರಿಯತ್ ಮುಂದಾಳುಗಳೆಲ್ಲ, ‘ಅಯ್ಯಯ್ಯೋ.. ಸರ್ಕಾರ ತನ್ನ ನಾಗರಿಕರನ್ನೇ ಕೊಲ್ಲುತ್ತಿದೆ ನೋಡಿ’ ಎಂದು ಹುಯಿಲೆಬ್ಬಿಸುತ್ತಾ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ. ನಾಗರಿಕನಾದವನು ನಾಗರಿಕನಂತಿರಬೇಕಲ್ಲದೇ ಬಂದೂಕು ಹಿಡಿದ ಉಗ್ರನಿಗೆ ಸಹಾಯ ಮಾಡುವುದನ್ನು ಅದ್ಯಾವ ಆಯಾಮದಲ್ಲಿ ಒಪ್ಪಲಾದೀತು?

ಆದರೆ ಮಾಧ್ಯಮದ ಒಂದು ವರ್ಗಕ್ಕೆ, ತಥಾಕಥಿತ ಉದಾರವಾದಿಗಳಿಗೆ ಈ ಸಾಮಾನ್ಯಜ್ಞಾನ ಬೇಕಾಗಿಲ್ಲ. ಎಂದಿನಂತೆ ಭಾರತ ವಿರೋಧಿ ಬೊಬ್ಬೆ ಹೊಡೆದು ಕಾಶ್ಮೀರವನ್ನು ಇನ್ನೊಂದು ಸುತ್ತಿನ ಹಿಂಸಾಚಾರಕ್ಕೆ ತೆರೆದಿರಿಸುತ್ತಾರೆ.

ಆದರೆ…

ಈ ಬಾರಿ ಸೇನೆ ಮತ್ತು ಭದ್ರತಾ ಪಡೆಗಳು ಸೆಟೆದು ನಿಂತಿವೆ ಎಂಬುದು ಗೊತ್ತಿರಬೇಕು. ಕೆಲದಿನಗಳ ಹಿಂದೆ ಪೊಲೀಸ್ ಪಡೆಯ ಹಿರಿಯ ಅಧಿಕಾರಿಯೊಬ್ಬರು ರಾಷ್ಟ್ರೀಯ ಸುದ್ದಿವಾಹಿನಿ ಎದುರು ಯಾವ ಮುಲಾಜಿಲ್ಲದೇ ಹೀಗೆ ಹೇಳಿದ್ದರು- ‘ಪ್ರತ್ಯೋಕತಾವಾದಿಗಳು ಹಿಂಸಾಚಾರ ಎಸಗುವಾಗ ಭದ್ರತಾ ಪಡೆಯ ಕುಟುಂಬಗಳನ್ನೂ ಗುರಿ ಮಾಡುತ್ತಿದ್ದಾರೆ. ಅವರಿವತ್ತು ಬಂದೂಕು ಹಿಡಿದು ಅಡಗುತಾಣಗಳಲ್ಲಿ ಇದ್ದಿರಬಹುದು. ಆದರೆ ಅವರ ಕುಟುಂಬ ಇಲ್ಲೇ ಇದೆ ಎಂಬುದು ಗೊತ್ತಿರಲಿ.’

ಇದು ನೀವು ಪರೋಕ್ಷವಾಗಿ ಪ್ರತ್ಯೇಕತಾವಾದಿಗಳಿಗೆ ನೀಡುತ್ತಿರುವ ಬೆದರಿಕೆ ಎಚ್ಚರಿಕೆಯೇ ಅಂತ ಸುದ್ದಿಗಾರ ಕೇಳಿದಾಗ, ಮೈಕ್ ಎದುರಿನ ಮುಖವನ್ನು ತುಸುವೂ ತಗ್ಗಿಸದೇ ಆ ಅಧಿಕಾರಿ ಹೇಳಿದ್ದು- ನೀವು ಹೇಗೆ ಬೇಕಾದರೂ ಇದನ್ನು ಅರ್ಥಮಾಡಿಕೊಳ್ಳಬಹುದು.

ಅರ್ಥಾತ್ ಭದ್ರತಾ ಪಡೆಗಳಿಗೆ ರಾಜಕೀಯ ಅನುಮತಿ ಸಿಕ್ಕಿದೆ. ಕಾಶ್ಮೀರದ ಯುವ ಜಿಹಾದಿಗಳು ಹಾರಾಡಿದಷ್ಟೂ ಸ್ವರ್ಗದಲ್ಲಿನ 72 ಕನ್ಯೆಯರ ಬಳಿ ಸೇರಿಸುವ ಕೆಲಸವನ್ನು ಬಹುಶಃ ಭದ್ರತಾ ಪಡೆಗಳು ಇನ್ನು ಮುಂದೆ ಆಸ್ಥೆಯಿಂದ ಮಾಡಲಿವೆ. ಕಾಶ್ಮೀರದ ಆಜಾದಿ ಎನ್ನುತ್ತ ಜೆಎನ್ಯುದ ಕೆಲಸವಿಲ್ಲದ ಪಡ್ಡೆಗಳು ಮಾಧ್ಯಮಗಳಲ್ಲಿ ಎಷ್ಟು ಮಿಂಚಿದರೂ, ಕಾಶ್ಮೀರಿ ಜಿಹಾದಿಗಳು ಮಹಾಮುಗ್ಧ ಬಲಿಪಶುಗಳೆಂದು ಬಿಂಬಿಸಿ ವಿಶಾಲ್ ಭಾರದ್ವಾಜ್ ಹೈದರ್-2 ತೆಗೆದರೂ ವಾಸ್ತವ ಬೇರೆಯೇ ಇದೆ. ಅದೇನೆಂದರೆ ಜಮ್ಮು-ಕಾಶ್ಮೀರದ ವಿಷಯದಲ್ಲಿ ದೇಶ ಹಿಂದೆಂದಿಗಿಂತ ಹೆಚ್ಚು ಎಚ್ಚೆತ್ತಿದೆ. ಪ್ರತ್ಯೇಕತಾವಾದದ ವಿರೋಧಿ ನೆಲೆಯಲ್ಲಿ ರಾಷ್ಟ್ರೀಯ ಅಭಿಮತವೊಂದು ಆಗಲೇ ರೂಪುಗೊಂಡಿದೆ. ಹೀಗಾಗಿ ರಾಜಕೀಯ ಮತ್ತು ಮಿಲಿಟರಿ ನಾಯಕತ್ವಗಳು ಈ ಬಾರಿ ಮೆತ್ತಗಾಗುವ ಸಂಭವಗಳು ಕಡಿಮೆ. ಹಾಗೊಂದು ಯುಗಾದಿ ಜಮ್ಮು-ಕಾಶ್ಮೀರದಲ್ಲಿ ಪ್ರಾರಂಭವಾದಂತಿದೆ.

2 COMMENTS

Leave a Reply