ಯುಗಾದಿಯೆಂದರೆ ಹೊಸತನ, ನಮ್ಮದೂ ಈಗ ನವೀನ ವಿನ್ಯಾಸದ ಹೂರಣ!

ಡಿಜಿಟಲ್ ಕನ್ನಡ ಟೀಮ್:

ಯುಗಾದಿ ಎಂದರೆ ಹೊಸವರ್ಷ, ಹೊಸ ಸಂವತ್ಸರ. ಹೊಸತೆಂಬುದರ ಹೇರಿಕೆ ಇದಲ್ಲ… ನಿಜಾರ್ಥದಲ್ಲಿ ಹೊಸತನದ ಆಗಮನವಿದು. ಬೇಕಾದರೆ ನೋಡಿ… ನೀವು ಆಫೀಸಿಗೆ ಹೋಗುವ ಮಾರ್ಗದಲ್ಲಿ ಎಲೆ ಉದುರಿಸಿಕೊಂಡು ಬೋಳಾಗಿದ್ದ ಮರಗಳೆಲ್ಲ ಅದಾಗಲೇ ಹಸಿರು ಹೊದ್ದು ನಳನಳಿಸುತ್ತಿವೆ. ಅಯ್ಯೋ, ಬಿರುಬಿಸಿಲು ಎಂದುಕೊಳ್ಳುತ್ತಿರುವ ಈ ದಿನಗಳಲ್ಲೂ ಚೈತ್ರಮಾಸ ಮಾತ್ರ ಹಸಿರುಡುಗೆಯ ತನ್ನ ಮ್ಯಾಜಿಕ್ ತೋರಿಸುವುದನ್ನು ಬಿಟ್ಟಿಲ್ಲ.

ಯುಗಾದಿ ಎಂದರೆ ರಿಚಾರ್ಜ್.

ಗೊತ್ತು. ಮತ್ತೆ ಬಿಸಿಲಿನ ಬೇಗೆ ಕಾಡುತ್ತದೆ. ಮಳೆ ಹೊಯ್ಯುತ್ತದೆ. ಇನ್ನೊಂದು ಚಳಿಗಾಲ ಬಂದು ಮರಗಳೆಲ್ಲ ಎಲೆ ಉದುರಿಸುತ್ತವೆ. ಆದರೆ ಬದುಕಿನ ಸ್ವಾರಸ್ಯವೇನೆಂದರೆ ಮತ್ತೊಂದು ಚೈತ್ರಮಾಸ ಬಂದೇ ಬರುತ್ತದೆ… ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತದೆ! ನಮ್ಮನ್ನು ಹೊಸತರತ್ತ ತೊಡಗಿಸಿಕೊಳ್ಳುವುದಕ್ಕೆ ಹೊಸ ಅವಕಾಶಗಳು ಸಿಗುತ್ತಲೇ ಹೋಗುತ್ತವೆ.

ಇಗೋ ನೋಡಿ. ಈ ಶುಭ ಸಂದರ್ಭದಲ್ಲಿ ‘ಡಿಜಿಟಲ್ ಕನ್ನಡ’ವೂ ಹೊಸತು ತುಡಿಯುತ್ತ ವಿನ್ಯಾಸ ಬದಲಿಸಿಕೊಂಡಿದೆ. ಹೊಸನೋಟದೊಂದಿಗೆ ನಳನಳಿಸುತ್ತಿದೆ. ಮುಖ್ಯವಾಗಿ ಓದುಗ ಸ್ನೇಹಿ ಆಗಿದೆ. ಮೊಬೈಲ್, ಡೆಸ್ಕ್ಟಾಪ್, ಟ್ಯಾಬ್ಲೆಟ್ ಹೀಗೆ ಆಯಾ ತೆರೆಗಳಿಗೆ ಸೂಕ್ತವಾಗಿ ಒಗ್ಗಿಕೊಳ್ಳುತ್ತ ಸೊಬಗು ಹೆಚ್ಚಿಸಿಕೊಂಡಿದೆ. ಜಾಹಿರಾತುದಾರರಿಗೆ ಸಹ ಈ ಎಲ್ಲ ವೇದಿಕೆಗಳಲ್ಲಿ ಬ್ರಾಂಡ್ ಸೂಕ್ತವಾಗಿ ಜನಮಾನಸಕ್ಕೆ ದಾಖಲಾಗುವಂತೆ ಹೊಸ ವಿನ್ಯಾಸ ಸಹಕರಿಸಲಿದೆ. ನಿಮಗೆಲ್ಲ ಹೇಗನಿಸುತ್ತಿದೆ ಹೇಳಿ.

ಪ್ರಾರಂಭದ ಒಂದು ವರ್ಷ ಕೇವಲ ಅಕ್ಷರ ತಿರುಳನ್ನು ಸಮೃದ್ಧಗೊಳಿಸುವತ್ತಲೇ ಗಮನಹರಿಸಿದ್ದೆವು ನಾವು. ಇದೀಗ ವಿನ್ಯಾಸ, ತಾಂತ್ರಿಕತೆ ಹಾಗೂ ಇನ್ನೆಲ್ಲ ಆಯಾಮಗಳನ್ನು ವಿಸ್ತರಿಸಿಕೊಳ್ಳುವ ಆದಿ ಬಿಂದುವಿನಲ್ಲಿ ನಾವಿದ್ದೇವೆ. ಬೇವು-ಬೆಲ್ಲಗಳ ಸಮ್ಮಿಶ್ರ ಮಾರ್ಗವಿದು. ಹಾಗಿದ್ದಾಗಲೇ ಅಲ್ಲವೇ ಬದುಕಿನ ಸ್ವಾದ. ನಿಮ್ಮ ಜತೆ ಯಾವತ್ತೂ ಇರಲಿ. ಹೊಸತನ ನಿರಂತರವಾಗಿರಲಿ. ಯುಗಾದಿ ಇದರದ್ದೇ ಸಂಕೇತ.

ದ. ರಾ. ಬೇಂದ್ರೆ ತಮ್ಮ ಕವಿತೆಯಲ್ಲಿ ಕೆತ್ತಿಟ್ಟ ಆಶಯ ಅದೆಷ್ಟು ನವನವೀನ!:

ವರುಷಕೊಂದು ಹೊಸತು ಜನ್ಮ,

ಹರುಷಕೊಂದು ಹೊಸತು ನೆಲೆಯು

ಅಖಿಲ ಜೀವಜಾತಕೆ

ಒಂದೇ ಒಂದು ಜನ್ಮದಲಿ

ಒಂದೇ ಬಾಲ್ಯ, ಒಂದೇ ಹರೆಯ

ನಮಗದಷ್ಟೇ ಏತಕೋ

ನಿದ್ದೆಗೊಮ್ಮೆ ನಿತ್ಯ ಮರಣ

ಎದ್ದ ಸಲ ನವೀನ ಜನನ

ನಮಗೆ ಏಕೆ ಬಾರದು?…

ಹೊಸತನದ ನಿರಂತರ ತುಡಿತಕ್ಕೆ ಜತೆಯಾಗುತ್ತಿರುವ ಡಿಜಿಟಲ್ ಕನ್ನಡದ ಓದುಗರು, ಬರಹಗಾರರು, ಜಾಹಿರಾತುದಾರರಿಗೆಲ್ಲ ಯುಗಾದಿಯ ಹಾರ್ದಿಕ ಶುಭಾಶಯಗಳು!

Leave a Reply