ಬಿಪಿಎಲ್ ಕಾರ್ಡು ಪಡೆಯಲು ಸ್ವಯಂಘೋಷಿತ ಆದಾಯ ಪ್ರಮಾಣಪತ್ರ

ಡಿಜಿಟಲ್ ಕನ್ನಡ ಟೀಮ್:

ವಾರ್ಷಿಕ ಒಂದು ಲಕ್ಷ ಇಪತ್ತು ಸಾವಿರದಷ್ಟು ಆದಾಯ ಹೊಂದಿರುವವರು ಪಂಚಾಯಿತಿಗಳಿಗೆ ಸ್ವಯಂಪ್ರೇರಿತ ಪ್ರಮಾಣ ಪತ್ರ ಸಲ್ಲಿಸಿ, ಪಡಿತರ ಚೀಟಿ ಪಡೆಯಬಹುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಬಿಪಿಎಲ್ ಕಾರ್ಡುದಾರರು ತಮ್ಮ ಆಹಾರ ಧಾನ್ಯದ ಕೋಟಾವನ್ನು ತಿಂಗಳ ಮೊದಲ ದಿನದಿಂದ 15 ತಾರೀಖಿನೊಳಗಾಗಿ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಆ ತಿಂಗಳ ಆಹಾರ ಧಾನ್ಯದಿಂದ ಖೋತಾ ಆಗುತ್ತದೆ. ಬಿಪಿಎಲ್ ಹೊಂದಿರುವ ಸದಸ್ಯರಿಗೆ ನೀಡಲಾಗುತ್ತಿದ್ದ 5 ಕೆಜಿ ಅಕ್ಕಿಯ ಪ್ರಮಾಣ ಇನ್ನು ಮುಂದೆ 7 ಕೆಜಿಗೆ ಏರಿಕೆಯಾಗಿದ್ದು, ಏಪ್ರಿಲ್ ಒಂದರಿಂದ ಪರಿಷ್ಕೃತ ಯೋಜನೆ ಜಾರಿಗೊಳ್ಳಲಿದೆ. ಬಿಪಿಎಲ್ ಪಡಿತರ ಚೀಟಿ ಪಡೆಯಲು ಈ ಮುಂಚೆ ನಾಲ್ಕು ಬಗೆಯ ನಿಯಮಾವಳಿಗಳನ್ನು ಅನುಸರಿಸಬೇಕಿತ್ತು. ಸರ್ಕಾರಿ ನೌಕರರು, ಸ್ವಂತ ಮನೆ ಇರುವವರು, ನೂರೈವತ್ತು ಯೂನಿಟ್ ವಿದ್ಯುತ್ ಬಳಸುವವರು, ಏಳು ಎಕರೆ ಕೃಷಿ  ಭೂಮಿ ಇಲ್ಲವೆ ಕಾರು ಹೊಂದಿರುವವರು ಕಾರ್ಡು ಪಡೆಯುವಂತಿರಲಿಲ್ಲ.

ಕಾರ್ಡುಗಳನ್ನು ವಿತರಿಸಲು ಅಗತ್ಯವಾದ ಸಹಕಾರ ನೀಡಲು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಒಪ್ಪುತ್ತಿಲ್ಲ.ಅದೇ ರೀತಿ ಗ್ರಾಮ ಲೆಕ್ಕಿಗರು ಕೂಡಾ ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿಯಮಾವಳಿಗಳನ್ನು ಸಡಿಲಿಕೆ ಮಾಡಿ, ವಾರ್ಷಿಕ 1.20 ಲಕ್ಷ ರೂ ಆದಾಯ ಇರುವವರು ಸ್ವಯಂಘೋಷಿತ ಆದಾಯ ಪ್ರಮಾಣ ಪತ್ರ ಸಲ್ಲಿಸಿ ಬಿಪಿಎಲ್ ಕಾರ್ಡು ಪಡೆಯಬಹುದೆಂದು ನಿಯಮ ರೂಪಿಸಲಾಗಿದೆ.

Leave a Reply