ಅಕ್ರಮ ಗಣಿಗಾರಿಕೆ ಧೂಳು ಸರ್ವಪಕ್ಷವ್ಯಾಪಿಯೇ? ಕುಮಾರಸ್ವಾಮಿ, ಧರಂ ಪಾತ್ರದ ಸಂಬಂಧ ಸುಪ್ರೀಂ ತನಿಖಾ ನಿರ್ದೇಶನದಲ್ಲಿ ತಿಳಿಯಬೇಕಿರುವುದೇನು?

  ಡಿಜಿಟಲ್ ಕನ್ನಡ ಟೀಮ್:

  ಕರ್ನಾಟಕ ರಾಜಕಾರಣದ ಮಟ್ಟಿಗೆ ಗಣಿ ಎಂಬುದು ಆಗಾಗ ಧೂಳೆಬ್ಬಿಸುತ್ತಲೇ ಇರುವ ಸಂಗತಿಯಾಗಿದೆ.

  ‘1999 ಮತ್ತು 2004ರ ಅವಧಿಯಲ್ಲಿ ವ್ಯಾಪಕ ಪ್ರಮಾಣದ ಕಬ್ಬಿಣದ ಅದಿರು ಗಣಿಗಾರಿಕೆಗೆ ಅನುವು ಮಾಡಿಕೊಡಲು ಅರಣ್ಯ ಭೂಮಿ ಪರಿವರ್ತನೆಗೆ ಸಹಕರಿಸಿದ ಆರೋಪದ ಸಂಬಂಧ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಹಾಗೂ ಧರಂ ಸಿಂಗ್ ಇವರಿಬ್ಬರ ವಿರುದ್ಧ ಕರ್ನಾಟಕ ಪೊಲೀಸರ ವಿಶೇಷ ತನಿಖಾ ದಳವು ತನಿಖೆ ನಡೆಸಿ ಮೂರು ತಿಂಗಳ ಒಳಗೆ ವರದಿ ನೀಡಬೇಕು’ ಎಂಬುದು ಬುಧವಾರ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನ.

  ಈ ವಿಷಯದಲ್ಲಿ ಇತರ ನ್ಯಾಯಾಲಯಗಳು ವಿಚಾರಣೆಯಿಂದ ದೂರ ಉಳಿಯುವಂತೆಯೂ ಸುಪ್ರೀಂಕೋರ್ಟ್ ಹೇಳಿದೆ.

  ತೀರ ಇತ್ತೀಚೆಗಷ್ಟೇ ಕುಮಾರಸ್ವಾಮಿ ಪರೋಕ್ಷವಾಗಿ ಜನಾರ್ದನ ರೆಡ್ಡಿ ವಿರುದ್ಧ ಆರೋಪದ ವಾಗ್ದಾಳಿ ನಡೆಸಿದ್ದರು. ‘ರಾಜ್ಯದ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿದ ಗಣಿಗಾರಿಕೆ ವ್ಯಕ್ತಿಯೊಬ್ಬ ಮುಂದಿನ ವಿಧಾನಸಭೆ ಚುನಾವಣೆಗೆ 500 ಕೋಟಿ ರುಪಾಯಿ ವ್ಯಯಿಸುವುದಕ್ಕೆ ಒಪ್ಪಿಕೊಂಡು ಅದಕ್ಕೆ ಪ್ರತಿಯಾಗಿ ತನ್ನ ಮೇಲಿನ ಆರೋಪಗಳನ್ನೆಲ್ಲ ಕೈಬಿಡುವ ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದರು.

  ಈಗ ನೋಡಿದರೆ ರಾಜ್ಯದ ನೈಸರ್ಗಿಕ ಸಂಪತ್ತು ಲೂಟಿ ಮಾಡಿದ ಆರೋಪ ಇವರ ಕೊರಳನ್ನೇ ಸುತ್ತಿಕೊಳ್ಳುತ್ತಿದೆ. ಹಾಗಂತ ಇದೇನೂ ಧುತ್ತೆಂದು ಆವರಿಸಿದ್ದಲ್ಲ. ಎಸ್ ಎಂ ಕೃಷ್ಣ ಹಾಗೂ ಕುಮಾರಸ್ವಾಮಿ ವಿರುದ್ಧ ತನಿಖೆ ನಡೆಸುವಂತೆ 2011ರಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಹೇಳಿತ್ತು. ನಂತರ ಭ್ರಷ್ಟಾಚಾರ ನಿಗ್ರಹ ದಳವು ಅಕ್ರಮ ಗಣಿಗಾರಿಕೆ ಬಗ್ಗೆ ಸಲ್ಲಿಸಿದ್ದ ವರದಿ ಆಧರಿಸಿ ತನಿಖೆ ವ್ಯಾಪ್ತಿಯನ್ನು ಧರಂ ಸಿಂಗ್ ಅವರಿಗೂ ವಿಸ್ತರಿಸಿತ್ತು.

  ಇವೆಲ್ಲದರ ಹಿನ್ನೆಲೆಯಲ್ಲಿಯೇ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಟಿ. ಜೆ. ಅಬ್ರಾಹಂ ಅವರ ಅರ್ಜಿಯನ್ನಾಧರಿಸಿ ಈಗ ಸುಪ್ರೀಂಕೋರ್ಟಿನಿಂದ ಹೊರಬಿದ್ದಿರುವ ನಿರ್ದೇಶನವಿದು. ಅಕ್ರಮ ಗಣಿಗಾರಿಕೆಗೆ ಅನುವು ಮಾಡಿಕೊಟ್ಟಿರುವ ಆರೋಪದಲ್ಲಿ ಈ ಹಿಂದಿನ ಮೂರು ಮುಖ್ಯಮಂತ್ರಿಗಳ ವಿರುದ್ಧ ತನಿಖೆ ಆಗಬೇಕೆಂದು ಅವರು ಕೋರಿದ್ದರು.

  ಆದರೆ, ಮೊನ್ನೆಯಷ್ಟೇ ಬಿಜೆಪಿ ಸೇರಿರುವ ಎಸ್ ಎಂ ಕೃಷ್ಣ ಅವರ ಹೆಸರು ಈ ನಿರ್ದೇಶನದಲ್ಲಿ ಒಳಗೊಂಡಿಲ್ಲ. ಕಳೆದ ನವೆಂಬರಿನಲ್ಲಿ ಈ ಸಂಬಂಧ ಕೃಷ್ಣ ಪರ ತಡೆಯಾಜ್ಞೆ ಸಿಕ್ಕಿದೆ. ಅಗತ್ಯ ಬಿದ್ದರೆ ಈ ತಡೆಯಾಜ್ಞೆ ತೆರವುಗೊಳಿಸುವುದಾಗಿಯೂ ಸುಪ್ರೀಂಕೋರ್ಟ್ ಹೇಳಿದೆ.

  ಎಚ್ ಡಿ ಕುಮಾರಸ್ವಾಮಿ ಸುಪ್ರೀಂಕೋರ್ಟಿನ ಈ ನಿರ್ದೇಶನವನ್ನು ಸ್ವಾಗತಿಸಿದ್ದಾರೆ. ‘ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ್ದ ವರದಿ ಮೇಲೆ ತನಿಖೆಯು ನಿರ್ದಿಷ್ಟ ಅವಧಿಯೊಳಗೆ ಮುಗಿಯುವಂತೆ ನಿರ್ದೇಶಿಸುವುದು ಉತ್ತಮವೇ ಆಗಿದೆ’ ಎಂಬ ಅಭಿಪ್ರಾಯ ಅವರದ್ದು.

  ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯು ಬೊಕ್ಕಸಕ್ಕೆ ಸುಮಾರು 12,200 ಕೋಟಿ ರುಪಾಯಿಗಳ ನಷ್ಟ ಉಂಟುಮಾಡಿದೆ ಎಂದಿದ್ದ ಲೋಕಾಯುಕ್ತ ವರದಿ ಇದಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಶಿಕ್ಷಿಸುವಂತೆ ಶಿಫಾರಸು ಮಾಡಿತ್ತು.

  Leave a Reply