ಲಾರಿ ಮುಷ್ಕರ: ಸರಕು ಸಾಗಣೆ ವ್ಯತ್ಯಯದ ಸಾಧ್ಯತೆ

ಡಿಜಿಟಲ್ ಕನ್ನಡ ಟೀಮ್:

ಮೂರನೆ ವ್ಯಕ್ತಿ ವಿಮೆ (ಥರ್ಡ್ ಪಾರ್ಟಿ ಇನ್ಸುರೆನ್ಸ್) ಪ್ರೀಮಿಯಂ ದರ ದುಪ್ಪಟ್ಟು , 15 ವರ್ಷಗಳ ಹಳೆಯ ವಾಹನಗಳನ್ನು ಸ್ಥಗಿತಗೊಳಿಸುವುದು ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ವಿಧಿಸುವುದು ಸೇರಿದಂತೆ ಸರ್ಕಾರಗಳ ವಿವಿಧ ಧೋರಣೆ ಖಂಡಿಸಿ ಇಂದಿನಿಂದ ಲಾರಿ ಮಾಲೀಕರು ರಾಜ್ಯದೆಲ್ಲೆಡೆ ಮುಷ್ಕರ ಪ್ರಾರಂಭಿಸಿದ್ದಾರೆ.

ಲಾರಿ ಚಾಲಕರು, ಮಾಲೀಕರ ಸಂಘ, ಸರಕು-ಸಾಗಣೆ ವಾಹನ ಮಾಲೀಕರ ಸಂಘ ಸೇರಿದಂತೆ ಹಲವಾರು ಸಂಘಗಳು ಮುಷ್ಕರಕ್ಕೆ ಕರೆ ನೀಡಿದ್ದು, ಬಹಳಷ್ಟು ಲಾರಿಗಳು, ಗೂಡ್ಸ್ ವಾಹನಗಳು ಬೀದಿಗೆ ಇಳಿದಿಲ್ಲ. ಪರಿಸ್ಥಿತಿ ಮುಂದುವರಿದಲ್ಲಿ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿ ತರಕಾರಿ, ಹಣ್ಣು, ಹೂವು ಮತ್ತಿತರ ವಸ್ತುಗಳ ಬೆಲೆ ಏರಿಕೆಯಾದೀತು. ನಿರ್ಮಾಣ ಕ್ಷೇತ್ರದಲ್ಲೂ ಕೂಡ ಇದರ ಬಿಸಿ ತಟ್ಟುವ ಸಾಧ್ಯತೆಯಿದ್ದು, ಈಗಾಗಲೇ ಸಾರಿಗೆ ಅಧಿಕಾರಿಗಳು ಲಾರಿ ಮಾಲೀಕರ ಸಂಘಟನೆಗಳೊಂದಿಗೆ ಚರ್ಚೆಗೆ ಮುಂದಾಗಿದ್ದಾರೆ.

ಕೇಂದ್ರ ಸರ್ಕಾರ ಥರ್ಡ್ ಪಾರ್ಟಿ ಇನ್ಸುರೆನ್ಸ್ ಪ್ರೀಮಿಯಂ ಮೊತ್ತವನ್ನು 22 ಸಾವಿರದಿಂದ 50 ಸಾವಿರ ರೂ.ಗೆ ಏಕಾಏಕಿ ಏರಿಸಿರುವುದರಿಂದ ಲಾರಿ ಮಾಲೀಕರಿಗೆ ತೀವ್ರ ಹೊಡೆತ ಬೀಳಲಿದೆ ಎಂಬುದು ಲಾರಿ ಚಾಲಕರು, ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಶಣ್ಮುಗಂರ ವಾದವಾಗಿದೆ.

ದೇಶದಲ್ಲಿ ಲಾರಿ, ಟ್ಯಾಕ್ಸಿ, ಟೆಂಪೊ, ಗೂಡ್ಸ್ ಗಾಡಿಗಳು ಸೇರಿದಂತೆ 1.95 ಕೋಟಿ ವಾಣಿಜ್ಯ ವಾಹನಗಳಿವೆ. ಹೀಗೆ ಏಕಾಏಕಿ ವಿಮಾ ಪ್ರೀಮಿಯಂ ದರವನ್ನು ದುಪ್ಪಟ್ಟು ಏರಿಸಿದರೆ ನಮಗೆ ತೀವ್ರ ಹೊರೆಯಾಗಲಿದೆ. ಮಾಲೀಕರು ಬೀದಿಗೆ ಬೀಳಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಇದು ಜಾರಿಯಾದರೆ ಆರು ಸಾವಿರ ಕೋಟಿ ಪ್ರೀಮಿಯಂ ಹಣ ಹೆಚ್ಚು ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮೈಸೂರು, ಹುಬ್ಬಳ್ಳಿ ಮತ್ತಿತರ ಜಿಲ್ಲೆಗಳಲ್ಲಿ ಇಂದಿನಿಂದ ಲಾರಿ ಮುಷ್ಕರ ಪ್ರಾರಂಭವಾಗಿದ್ದು, ಏ.1ರಿಂದ ರಾಜ್ಯಾದ್ಯಂತ ಲಾರಿ ಮುಷ್ಕರ ಇನ್ನೂ ತೀವ್ರಗೊಳ್ಳಲಿದೆ.

Leave a Reply