ಮುಸ್ಲಿಂ ಮಹಿಳೆ ಎಂಬ ಬಿಜೆಪಿಯ ಹೊಸ ಮತಬ್ಯಾಂಕು, ಏನಿದರ ನಾಜೂಕು?

ಡಿಜಿಟಲ್ ಕನ್ನಡ ವಿಶೇಷ:

ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಬಿಜೆಪಿಗೆ ಅಷ್ಟುದೊಡ್ಡ ಬಹುಮತ ಬರಬೇಕಿದ್ದರೆ ಮುಸ್ಲಿಂ ಮತಗಳೂ ಬಂದಿರಬೇಕು ಎಂಬುದು ಫಲಿತಾಂಶ ಬಂದಾಗಿನಿಂದಲೇ ಕೇಳಿಬರುತ್ತಿರುವ ಸಾಮಾನ್ಯಜ್ಞಾನದ ವಾದ. ಹಾಗಾದರೆ ತಥಾಕಥಿತ ಸೆಕ್ಯುಲರ್ ಪಕ್ಷಗಳ ಬೆಂಬಲಿಗರಾಗಿದ್ದವರನ್ನು ತುಸುಮಟ್ಟಿಗೆ ಸೆಳೆದುಕೊಳ್ಳುವುದಕ್ಕೆ ಬಿಜೆಪಿಗೆ ನೆರವಾಗಿದ್ದು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಂತ್ರವೇ? ಅಲ್ಲ… ಬಿಜೆಪಿಯ ತಲಾಖ್ ವಿರೋಧಿ ನಿಲುವು ಎಂಬುದು ಇದೀಗ ಸ್ಪಷ್ಟವಾಗುತ್ತಿದೆ.

ಶಗುಪ್ಥಾ ಎಂಬ ಮುಸ್ಲಿಂ ಮಹಿಳೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವುದು ಇದೀಗ ಚರ್ಚೆಯಾಗುತ್ತಿರುವ ಸುದ್ದಿ. ತಾನು ಬಿಜೆಪಿ ಮತದಾರಳು ಎಂದೇ ಗುರುತಿಸಿಕೊಂಡಿರುವ ಆಕೆ ಮೂರು ತಿಂಗಳ ಗರ್ಭಿಣಿ. ಎರಡು ಹೆಣ್ಣುಮಕ್ಕಳ ತಾಯಿಯಾಗಿರುವ ತನಗೆ ಮೂರನೆಯದೂ ಹೆಣ್ಣಾದರೆ ಎಂಬ ಭಯದಲ್ಲಿ ಕುಟುಂಬದವರು ಗರ್ಭಪಾತಕ್ಕೆ ಒತ್ತಾಯಿಸುತ್ತಿದ್ದಾರೆ. ಪತಿ ಮತ್ತು ಆತನ ಸಂಬಂಧಿಗಳು ಹಲ್ಲೆ ಮಾಡಿ, ಗರ್ಭಪಾತ ಮಾಡಿಸಿಕೊಳ್ಳದಿದ್ದರೆ ತಲಾಖ್ ಕೊಡುವುದಾಗಿ ಹೆದರಿಸಿದ್ದಾರೆ ಎಂಬುದು ಶಹರಾನ್ಪುರದ ಈ ಹೆಣ್ಣುಮಗಳ ಅಳಲು.

ಈ ನಿಟ್ಟಿನಲ್ಲಿ ಸಹಾಯ ಕೋರಿರುವುದು ಪ್ರಧಾನಿ ಬಳಿ. ಅದರ ಒಂದು ಪ್ರತಿಯನ್ನು ಆಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೂ ಕಳುಹಿಸಿದ್ದಾರೆ. ಮಾರ್ಚ್ 24ಕ್ಕೆ ಈ ವಿದ್ಯಮಾನ ಬೆಳಕಿಗೆ ಬಂದಾಗಲೇ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಶುರುಮಾಡಿದ್ದಾರೆ.

ಶರಿಯಾ ಪ್ರಕಾರ ತಲಾಖ್ ಹೇಳಿ ಮದುವೆ ಕಡಿದುಕೊಂಡಾಗ ಮಹಿಳೆಗೆ ವಿಚ್ಛೇದನ ಪರಿಹಾರಗಳೂ ಸಿಗುವುದಿಲ್ಲ. ಇದರ ವಿರುದ್ಧ ಮುಸ್ಲಿಂ ಸಮುದಾಯದ ಮಹಿಳೆಯರೇ ಸಂಘಟಿತರಾಗಿ ಪ್ರತಿಭಟಿಸುತ್ತಿರುವುದು ತಿಳಿದ ವಿಷಯ. ಆದರೆ ಮುಸ್ಲಿಂ ಸಮುದಾಯದ ಒಳಗಿನ ಮೌಲ್ವಿಶಾಹಿ ಹಾಗೂ ಕಟ್ಟರ್ ವಾದಿಗಳು ಇದ್ನೊಂದು ಧಾರ್ಮಿಕ ಸ್ವಾತಂತ್ರ್ಯದ ವಿಷಯವಾಗಿಸಿ ಮಹಿಳೆಯ ಸಮಾನ ಹಕ್ಕನ್ನು ನಿರಾಕರಿಸುತ್ತಿದ್ದಾರೆ. ಕಾಂಗ್ರೆಸ್, ಎಸ್ಪಿ ಸೇರಿದಂತೆ ತಥಾಕಥಿತ ಸೆಕ್ಯುಲರ್ ಪಕ್ಷಗಳೆಲ್ಲ ಈ ಬಗ್ಗೆ ತಾವು ಗಟ್ಟಿ ನಿಲುವು ತಳೆದರೆ ಎಲ್ಲಿ ಸಂಪ್ರದಾಯನಿಷ್ಠ ಮುಸ್ಲಿಮರ ಮತ ಕಳೆದುಕೊಳ್ಳಬೇಕಾಗುತ್ತದೋ ಎಂದು ಮೆತ್ತಗಿದ್ದಾಗ, ಬಿಜೆಪಿ ತಲಾಖ್ ವಿರುದ್ಧ ಮಾತನಾಡಿದ್ದು ಅದಕ್ಕೀಗ ರಾಜಕೀಯ ಅನುಕೂಲದ ಬಾಗಿಲನ್ನೂ ತೆರೆದಿರಿಸಿದೆ.

‘ನನ್ನ ಮುಸ್ಲಿಂ ಸಹೋದರಿಯರೇಕೆ ತಲಾಖ್ ಹೇಳಿಸಿಕೊಂಡು ಬದುಕನ್ನು ಕೆಡಿಸಿಕೊಳ್ಳಬೇಕು’ ಎಂದು ಪ್ರಶ್ನಿಸುವ ಮೂಲಕ ಉತ್ತರ ಪ್ರದೇಶದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಾವನಾತ್ಮಕ ಬೆಸುಗೆಯೊಂದನ್ನು ಹಾಕಿದ್ದರು. ಇದೀಗ ಅದೇ ಉತ್ತರ ಪ್ರದೇಶದಿಂದ ತಲಾಖ್ ಭಯಗ್ರಸ್ತ ಮಹಿಳೆಯೊಬ್ಬಳು ಪ್ರಧಾನಿ ಮತ್ತು ಬಿಜೆಪಿ ಸರ್ಕಾರವನ್ನೇ ನಂಬಿ ಪತ್ರ ಬರೆದಿರುವುದು ಬಿಜೆಪಿಗೆ ಹೊಸದಾಗಿ ಒಲಿದಿರುವ ರಾಜಕೀಯ ಮೊತ್ತವೊಂದನ್ನು ಸೂಚಿಸುತ್ತಿದೆ. ಇದನ್ನು ಕೇವಲ ಒಂದು ಪತ್ರ ಅಂತ ನೋಡುವಂತಿಲ್ಲ. ನೂರಾರು ಆಕ್ರೋಶಿತ-ಆತಂಕಿತ ಧ್ವನಿಗಳ ಪ್ರಾತಿನಿಧ್ಯವಿದು.

ಇತ್ತೀಚಿನ ಟ್ರೆಂಡ್ ನೀಡುತ್ತಿರುವ ಬಹುದೊಡ್ಡ ಸೂಚನೆ ಯಾವುದು? ಮುಸ್ಲಿಂ ಸಮುದಾಯವು ಇಡಿ ಇಡಿಯಾಗಿ ಸ್ಥಳೀಯ ಧಾರ್ಮಿಕ ಮುಖಂಡನೋ, ಮನೆ ಯಜಮಾನನೋ ಹೇಳಿದಂತೆ ಒಂದು ಪಕ್ಷವನ್ನು ಅನುಸರಿಸುತ್ತಿತ್ತು ಎಂಬುದು ಈವರೆಗಿದ್ದ ಗ್ರಹಿಕೆ. ಆದರೆ ತಲಾಖ್ ವಿಷಯದಲ್ಲಿ ಸಮುದಾಯ ಮುಖಂಡರು ಹಾಗೂ ಪುರುಷ ಮಾನಸಿಕತೆಯೊಂದಿಗೆ ಬಹುವಾಗಿ ಬೇಸತ್ತಿರುವ ಮುಸ್ಲಿಂ ಮಹಿಳೆ, ಈ ಹಿಂದಿನ ರಾಜಕೀಯ ‘ಇಡಿ’ಯಿಂದ ಒಡೆದು ಬಂದಿರುವುದರ ಸೂಚನೆಗಳಿವೆ.

ಸಹಜವಾಗಿಯೇ ಈ ಹಂತದಲ್ಲಿ ಬಿಜೆಪಿ ತೀರ ಶ್ರಮವನ್ನೇನೂ ಪಡದೇ ಇದರ ಲಾಭ ಪಡೆದುಕೊಂಡಿದೆ. ಏಕೆಂದರೆ ತಲಾಖ್ ತೆಗೆದುಹಾಕುವ ನಿಲುವಿಗೆ ಅಂಟಿಕೊಳ್ಳುವುದು ಮತ್ತೊಂದು ಮಗ್ಗುಲಲ್ಲಿ ಸಮಾನ ನಾಗರಿಕ ಸಂಹಿತೆ ಕುರಿತ ಬಿಜೆಪಿ ನಿಲುವನ್ನು ಗಟ್ಟಿಗೊಳಿಸುವಂತೆ ಕಂಡುಬರುವುದರಿಂದ ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗರೂ ಖುಷಿಯಾಗಿದ್ದಾರೆ.

ಆದರೆ ಇದೀಗ ಇಡಿಯಿಂದ ಒಡೆದುಬಂದಂತಿರುವ ವರ್ಗವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಬಿಜೆಪಿ ಎದುರು ಕೆಲವು ನಾಜೂಕಿನ ಸವಾಲುಗಳಿವೆ. ಈ ವರ್ಗದ ಭರವಸೆಗೆ ಆಸರೆ ಒದಗಿಸುವುದು ಪ್ರಾಥಮಿಕ ಅವಶ್ಯಕತೆ. ಜತೆಯಲ್ಲೇ, ತಮ್ಮನ್ನು ಸೇರಿಸಿಕೊಂಡು ತಮ್ಮವರ ವಿರುದ್ಧದ ಬೇರೆ ಯುದ್ಧಗಳನ್ನು ಗೆಲ್ಲಲು ಹೊರಟಿದ್ದಾರೆ ಎಂದು ಈ ವರ್ಗಕ್ಕೆ ಅನ್ನಿಸಿದರೆ ಅದು ಮತ್ತೆ ಆ ‘ಇಡಿ’ಗೆ ಸೇರಿಸಿಕೊಳ್ಳುವುದೇ ಎಂಬುದು ಬಿಜೆಪಿಗೆ ಎಚ್ಚರಿಕೆ ಆಗಬಲ್ಲ ಅಂಶ. ಉದಾಹರಣೆಗೆ ಮೀರತ್ ಪಾಲಿಕೆಯಲ್ಲಿ ಅಲ್ಲಿನ ಬಿಜೆಪಿ ಮೇಯರ್ ಹಾಗೂ ಸದಸ್ಯರೆಲ್ಲ ಸೇರಿಕೊಂಡು ಸಭೆಯಲ್ಲಿ ವಂದೇಮಾತರಂ ಕಡ್ಡಾಯಗೊಳಿಸುತ್ತಿರುವ ವರದಿ ಇದೆ. ಇದಕ್ಕೆ ಹಲವು ಮುಸ್ಲಿಂ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿ ವಂದೇ ಮಾತರಂ ಕುರಿತಂತೆ ಮುಸ್ಲಿಂ ಸಮುದಾಯದ ಹಲವರ ಆಕ್ಷೇಪ ಸರಿಯೋ-ತಪ್ಪೋ ಎಂಬುದು ಪ್ರತ್ಯೇಕ ಚರ್ಚೆಯ ವಿಷಯ. ಆದರೆ ರಾಷ್ಟ್ರಗೀತೆ ಹೊರತುಪಡಿಸಿದರೆ ಇನ್ಯಾವುದೇ ಗಾನ ಕಡ್ಡಾಯಗೊಳಿಸುವುದಕ್ಕೆ ಕಾನೂನಿನ ಬೆಂಬಲವಂತೂ ಇರುವುದಿಲ್ಲ. ಇದನ್ನು ಹೇರಿಯೇ ಸಿದ್ಧ ಎಂದು ಹೊರಟಿರುವ ಬಿಜೆಪಿ ಪಾಲಿಕೆ ಸದಸ್ಯರ ನಡೆ ಪ್ರತಿಪಕ್ಷಕ್ಕೊಂದು ಆಯುಧವನ್ನು ಕೊಡಮಾಡುತ್ತದೆ. ‘ನೋಡಿ, ಉತ್ತರ ಪ್ರದೇಶದಲ್ಲಿ ಬಹುಮತವಿದೆ ಎಂಬ ಕಾರಣಕ್ಕೆ ಹೇಗೆಲ್ಲ ಅವರ ಕಾರ್ಯಸೂಚಿ ಹೇರಲು ಹೊರಟಿದ್ದಾರೆ… ಇದು ಪ್ರಾರಂಭವಷ್ಟೆ’ ಎಂಬ ಭಯಾವಹ ಸಂದೇಶವನ್ನು ಕೇವಲ ಆ ರಾಜ್ಯವಷ್ಟೇ ಅಲ್ಲದೇ ಎಲ್ಲೆಡೆ ಪಸರಿಸುವ ಅವಕಾಶ ಪ್ರತಿಪಕ್ಷಕ್ಕಿದೆ. ಇಂಥ ನಡೆಗಳು ಬಿಜೆಪಿಗೆ ಒಲಿದಿರುವ ಹೊಸವರ್ಗವನ್ನು ಮತ್ತೆ ಇಡಿಯೆಡೆಗೆ ದೂಡಿಯಾವೇ ಎಂಬುದು ಕೌತುಕದ ಪ್ರಶ್ನೆ.

1 COMMENT

Leave a Reply