ಸುಪ್ರೀಂ ತಲಾಖ್ ಅರ್ಜಿ ವಿಚಾರಣೆ ಮೇ 11ರಿಂದ, ಬೇಸಿಗೆ ರಜೆಯಿಲ್ಲದೆ ಕೆಲಸ ಮಾಡಲೂ ಸಿದ್ಧ ಅಂದ್ರು ನ್ಯಾ. ಖೆಹರ್

ಡಿಜಿಟಲ್ ಕನ್ನಡ ಟೀಮ್:

ತ್ರಿವಳಿ ತಲಾಖ್ ಕುರಿತಾದ ಮೊಕದ್ದಮೆಯನ್ನು ಸುಪ್ರೀಂಕೋರ್ಟ್ ಮೇ 11ರಿಂದ ಕೈಗೆತ್ತಿಕೊಳ್ಳಲಿದೆ.

ತಲಾಖ್ ವಿಚಾರದಲ್ಲಿ ತ್ವರಿತ ತೀರ್ಮಾನವಾಗಬೇಕೆಂಬ ಇಂಗಿತವನ್ನು ನ್ಯಾಯಾಲಯ ಅರ್ಥಮಾಡಿಕೊಂಡಿದೆ. ಇದೊಂದು ಬಹುಮುಖ್ಯ ವಿಷಯವಾಗಿದ್ದು, ಇದರ ವಿಚಾರಣೆಗೆ ಬೇಸಿಗೆ ರಜೆ ತೆಗೆದುಕೊಳ್ಳದೆಯೇ ಕಾರ್ಯನಿರ್ವಹಿಸುವುದಕ್ಕೂ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ಸಿದ್ಧವಾಗಿದೆ ಎಂದಿದ್ದಾರೆ ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೆಹರ್.

‘ಬೇಸಿಗೆ ರಜೆ ಬಿಟ್ಟು ಕೆಲಸ ಮಾಡುವುದಕ್ಕೆ ನಾನಂತೂ ಸಿದ್ಧವಿದ್ದೇನೆ. ಕೇಂದ್ರ ಸರ್ಕಾರ ಸಹಕರಿಸಿದರೆ ಆಯಿತು. ತಲಾಖ್ ನ್ಯಾಯ ಪರಾಮರ್ಶೆ ಶುರುವಾಗಲಿ.’ ಎಂದಿದ್ದಾರೆ ನ್ಯಾ. ಖೆಹರ್.

ಈ ಹಂತದಲ್ಲಿ ಸರ್ಕಾರದ ಪರ ಅಟಾರ್ನಿ ಜನರಲ್ ಮುಕುಲ್ ರೊಹ್ತಾಗಿ ಅವರು, ‘ಬೇಸಿಗೆ ರಜೆ ಅವಧಿಯಲ್ಲೇ ಇನ್ನೆರಡು ಪ್ರಕರಣಗಳು ವಿಚಾರಣೆಯಲ್ಲಿರುವುದರಿಂದ ಅದೇ ಅವಧಿಯಲ್ಲಿ ನಿರಂತರ ವಿಚಾರಣೆ ಕಷ್ಟ’ ಎಂದಿದ್ದಾರೆ. ಆಗ ನ್ಯಾ. ಖೆಹರ್ ಅವರು, ‘ಈಗ ಇದನ್ನು ಕೈಗೆತ್ತಿಕೊಳ್ಳದಿದ್ದರೆ ವರ್ಷಗಟ್ಟಲೇ ಅವಧಿಗೆ ಬಾಕಿ ಉಳಿದುಬಿಡುತ್ತದೆ. ಆಗ ಕೇಂದ್ರ ಸರ್ಕಾರ ನಮ್ಮತ್ತ ಬೊಟ್ಟು ಮಾಡಬಾರದು’ ಅಂತಲೂ ಎಚ್ಚರಿಸಿದರು.

ಎರಡು ವಾರಗಳ ಅವಧಿಯಲ್ಲಿ ತಲಾಖ್ ಸಂಬಂಧಿತ ದಾವೆದಾರರೆಲ್ಲ ತಮ್ಮ ವರದಿ ಸಲ್ಲಿಸಬೇಕಿದೆ. ಮುಸ್ಲಿಂ ನಿಯಮಗಳ ಪ್ರಕಾರ ಮೂರು ಬಾರಿ ತಲಾಖ್ ಹೇಳಿ ಹೆಂಡತಿಯನ್ನು ತ್ಯಜಿಸುವುದು ಹಾಗೂ ಪುರುಷರಿಗೆ ನಾಲ್ಕು ಬಾರಿ ಮದುವೆಯಾಗುವ ಅವಕಾಶವಿರುವುದು ಇವನ್ನೆಲ್ಲ ಪ್ರಶ್ನಿಸಿ ಸೈರಾ ಭಾನು ಎಂಬಾಕೆ ಸಲ್ಲಿಸಿದ್ದ ಅರ್ಜಿಯೇ ಸುಪ್ರೀಂಕೋರ್ಟ್ ವಿಚಾರಣೆಗೆ ಮೂಲ. ಈ ವಿಷಯದಲ್ಲಿ ಮುಸ್ಲಿಂ ಮಹಿಳಾ ದಾವೆದಾರರ ಪರವಾದ ಅಭಿಪ್ರಾಯ ಸಲ್ಲಿಸಿರುವ ಕೇಂದ್ರ ಸರ್ಕಾರವು ತಲಾಖ್ ಎಂಬುದು ಲಿಂಗ ಸಮಾನತೆಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿ ಅದನ್ನು ತೆರವುಗೊಳಿಸುವ ಅಭಿಮತ ಹೊಂದಿದೆ. ಇದಕ್ಕೆ ಪ್ರತಿರೋಧ ಎದುರಾಗಿರುವುದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ. ‘ಮುಸ್ಲಿಂ ವಿಚ್ಛೇದನವು ಕಾನೂನಿನ ವ್ಯಾಪ್ತಿಗೇ ಬರುವುದಿಲ್ಲ. ಅದೊಂದು ಧಾರ್ಮಿಕ ಆಚರಣೆ. ಇದನ್ನು ಬದಲಾಯಿಸಲು ಹೋಗುವುದೆಂದರೆ ಕುರಾನ್ ಧರ್ಮಗ್ರಂಥವನ್ನೇ ತಿದ್ದಿ ಮುಸ್ಲಿಮರಿಂದ ಪಾಪಕಾರ್ಯ ಮಾಡಿಸಿದಂತೆ’ ಎಂಬ ನಿಲುವು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯದ್ದಾಗಿದೆ.

Leave a Reply