ಯೋಧ ಪಿಳ್ಳೈ ಅವರನ್ನು ದತ್ತು ಮಗನನ್ನಾಗಿಸಿಕೊಂಡಿದೆ ಮಣಿಪುರದ ಹಳ್ಳಿ, ಸೇನೆಯೆಂದರೆ ಸಿಟ್ಟಾಗುತ್ತಿದ್ದೆಡೆ ಹಬ್ಬಿದ್ದು ಹೇಗೆ ಮಮತೆಯ ಬಳ್ಳಿ?

ಚೈತನ್ಯ ಹೆಗಡೆ

ಕರ್ನಲ್ ದಿವಾಕರನ್ ಪದ್ಮಕುಮಾರ್ ಪಿಳ್ಳೈ ಇಂದು (ಮಾರ್ಚ್ 31) ಸೇನೆಯಿಂದ ನಿವೃತ್ತರಾಗುತ್ತಿದ್ದಾರೆ. ಮೂಲತಃ ಕೇರಳದ ಪಿಳ್ಳೈರನ್ನು ‘ಮಗನೇ…ನಮ್ಮ ಪಾಲಿನ ದೇವರು ನೀನು. ಇಲ್ಲೇ ಬಂದಿರು’ ಅಂತ ಮಣಿಪುರದ ಪುಟ್ಟ ಹಳ್ಳಿ ‘ಲೊಂಗ್ಡಿ ಪಬ್ರಂ’ ಅದೆಷ್ಟನೆ ಬಾರಿಯೋ ಎಂಬಂತೆ ಮುದ್ದಿಸಿದೆ!

ಇದ್ಯಾವ ಪಿಳ್ಳೈ? ಅದ್ಯಾವ ಮಣಿಪುರ? ಅಂತೆಲ್ಲಾ ಪ್ರಶ್ನೆಗಳು ಕಾಡಿದರೆ ನೀವೀ ಭಾವುಕತೆಯೊಂದನ್ನು ಒಪ್ಪಿಸಿಕೊಳ್ಳಲೇಬೇಕು. ಭಾರತದ ಈಶಾನ್ಯ ರಾಜ್ಯ ಮಣಿಪುರ ಎಂದೊಡನೆ ‘ಸೇನಾ ವಿಶೇಷಾಧಿಕಾರ ಕಾಯ್ದೆ’ ಅಡಿ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಿಕೊಂಡಿರುವವರ ಚಿತ್ರಣವೇ ನಮ್ಮ ಕಣ್ಣೆದುರು ನಿಂತರೆ ಆಶ್ಚರ್ಯವೇನಿಲ್ಲ. ಆದರೆ ಅದೇ ರಾಜ್ಯದ ಹಳ್ಳಿಯೊಂದು ಭಾರತೀಯ ಯೋಧನೊಬ್ಬನನ್ನು ದೇವರಂತೆ ಕಾಣುತ್ತಿದೆ ಎಂದಾಗ ಕುತೂಹಲ ಕಾಡದಿರದೇ?

ಈ ಯೋಧನೂ ಅಷ್ಟೆ. ಅತಿ ದುರ್ಗಮ ರಸ್ತೆ ಸವೆಸಿ ತಲುಪಿಕೊಳ್ಳಬೇಕಾದ ಮಣಿಪುರದ ಆ ಹಳ್ಳಿಯೆಂದರೆ ಪ್ರಾಣವನ್ನೇ ಇಟ್ಟಿದ್ದಾರೆ. ಏಕೆಂದರೆ ಡಿಪಿಕೆ ಪಿಳ್ಳೈ ಅವರ 26ನೇ ವಯಸ್ಸಿನಲ್ಲೇ ಅವರ ಆಯಸ್ಸು ಕಸಿದುಕೊಂಡುಬಿಡಬಹುದಾಗಿದ್ದ ನೆಲವಲ್ಲವೇ ಅದು?

—-

ಜನವರಿ  25, 1994.

ನಾಗಾ ಬಂಡುಕೋರರ ವಿರುದ್ಧ ಸೆಣೆಸುತ್ತಿದ್ದ 8ನೇ ಗಾರ್ಡ್ ಪಡೆಯ ಕಿರಿಯ ಕಮಾಂಡಿಂಗ್ ಅಧಿಕಾರಿಯಾಗಿದ್ದ ಡಿಪಿಕೆ ಪಿಳ್ಳೈ, ಮಣಿಪುರದ ಲೊಂಗ್ಡಿ ಪಬ್ರಂ ಹಳ್ಳಿಯಲ್ಲಿ ಕಾರ್ಯಾಚರಣೆಯಲ್ಲಿದ್ದರು. ಅಡವಿ ಪ್ರದೇಶದಲ್ಲಿ ಅದಾಗಲೇ ನಾಲ್ಕು ದಿನಗಳ ಶೋಧ ಕಾರ್ಯ ನಡೆದಿತ್ತು. ಈ ಹಳ್ಳಿಯಲ್ಲಿ ನಡೆಯಿತು ಸೇನೆ ಮತ್ತು ಬಂಡುಕೋರರ ನಿರ್ಣಾಯಕ ಸೆಣೆಸಾಟ. ಅಲ್ಲಿಂದ ಬೇರೆಡೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಸ್ಫೋಟಿಸಿಬಿಡಬೇಕೆಂಬುದು ಬಂಡುಕೋರರ ಉದ್ದೇಶವಾಗಿತ್ತು. ಇದು ಸಾಧ್ಯವಾಗದಿದ್ದಾಗ ಊರಿಗೇ ಬೆಂಕಿ ಇಡುವುದಕ್ಕೆ ಮುಂದಾದರು. ಬಂಡುಕೋರರು ಮತ್ತು ಸೇನೆಯ ಸೆಣೆಸಾಟದಲ್ಲಿ ಹಳ್ಳಿಗರೂ ಸಿಲುಕಿಕೊಂಡಿದ್ದರು.

ಮುಂದಿನ ಮೂರ್ನಾಲ್ಕು ತಾಸು ಈ ಹಳ್ಳಿಯನ್ನು ರಕ್ಷಿಸುತ್ತ ಸೇನೆ ಹೋರಾಡಿತು. ಹಲವು ಬಂಡುಕೋರರು ಸೆರೆಯಾದರು. ಇನ್ನು ಕೆಲವರು ಹತರಾದರು. ಆದರೆ ಪಿಳ್ಳೈ ಅವರ ದೇಹದಲ್ಲಿ ಹಲವು ಗುಂಡುಗಳು ಹೊಕ್ಕಿದ್ದವು. ಹತ್ತಿರದಲ್ಲೇ ಗ್ರೈನೇಡ್ ಸ್ಫೋಟವಾಗಿತ್ತು. ತಕ್ಷಣಕ್ಕೆ ಚಿಕಿತ್ಸೆ ದೊರೆಯದಿದ್ದರೆ ಉಳಿಯುವ ಸಾಧ್ಯತೆಗಳಿರಲಿಲ್ಲ. ಅಷ್ಟರಲ್ಲಿ ಬಂಡುಕೋರರು ಹಿಮ್ಮೆಟ್ಟಿದ್ದರಿಂದ ತೆರವು ಕಾರ್ಯಾಚರಣೆಗೆ ಅವಕಾಶವೂ ಒದಗಿತು… ಆಗಸದಲ್ಲಿ ಸೇನಾ ಹೆಲಿಕಾಪ್ಟರಿನ ರೆಕ್ಕೆಯೂ ಪಟಪಟಿಸಿತು.

ಬೇಗ… ಬೇಗ… ತ್ವರಿತವಾದಷ್ಟೂ ಪಿಳ್ಳೈ ಪ್ರಾಣ ಉಳಿದುಕೊಳ್ಳುತ್ತದೆ…. ರಕ್ತದ ಮಡುವಲ್ಲಿ ಬಿದ್ದಿದ್ದ ಪಿಳ್ಳೈ ಕೊರಳು ಸರಿಸಿ ನೋಡಿದಾಗ ಕಂಡಿದ್ದು ತಮ್ಮ ಸನಿಹದಲ್ಲೇ ಇಬ್ಬರು ಮಕ್ಕಳು ರಕ್ತದ ಮಡುವಲ್ಲಿ ಬಿದ್ದಿದ್ದ ದೃಶ್ಯ. ತಮ್ಮ ಪ್ರಾಣವೇ ಹನಿ ಹನಿಯಾಗಿ ಕ್ಷೀಣವಾಗುತ್ತಿರುವ ಆ ಗಳಿಗೆಯಲ್ಲೂ ಯೋಧ ಪಿಳ್ಳೈ ತೀರ್ಮಾನವೊಂದನ್ನು ತೆಗೆದುಕೊಳ್ಳುತ್ತಾರೆ. ‘ಯೋಧನಾಗಿ ಈ ದೇಶದ ನಾಗರಿಕರನ್ನು ರಕ್ಷಿಸುವುದೇ ನನ್ನ ಪರಮ ಧ್ಯೇಯ. ಹೆಲಿಕಾಪ್ಟರಿನಲ್ಲಿ ಈ ಇಬ್ಬರು ಮಕ್ಕಳನ್ನು ಚಿಕಿತ್ಸೆಗೆ ಒಯ್ಯಿರಿ. ನಂತರ ನನ್ನ ಬಳಿ ಬನ್ನಿ!’

ಬಹುಶಃ ಭಾರತೀಯ ಯೋಧನ ಧೀಮಂತಿಕೆಗೆ ಮಾತ್ರ ಇಂಥ ನಿರ್ಧಾರಗಳು ಸಾಧ್ಯವೆನಿಸುತ್ತದೆ!

ಸೇನಾ ಹೆಲಿಕಾಪ್ಟರ್ ಅತ್ತ ಮಕ್ಕಳನ್ನು ಹೊತ್ತೊಯ್ಯುತ್ತಲೇ ಇತ್ತ ಪಿಳ್ಳೈ ತಮ್ಮ ತಾಯಿಯನ್ನು ನೆನಪಿಸಿಕೊಳ್ಳುತ್ತಾರೆ. ಇವು ತನ್ನ ಅಂತಿಮ ಕ್ಷಣಗಳು. ತಾಯಿಯನ್ನಲ್ಲದೇ ಇನ್ಯಾರನ್ನು ನೆನೆಯೋದು? ಸೇನೆಯಲ್ಲಿದ್ದು ನಿವೃತ್ತರಾದ ತಂದೆಯಂತೂ ಖಂಡಿತ ತಮ್ಮ ಬಲಿದಾನಕ್ಕೆ ಹೆಮ್ಮೆ ಪಡುತ್ತಾರೆ ಅಂತ ತಮಗೆ ತಾವೇ ಹೇಳಿಕೊಳ್ಳುತ್ತಾರೆ….

ಎಲ್ಲವೂ ಮುಗಿಯಿತೆಂದುಕೊಂಡಾಗಲೇ ಬದುಕಲ್ಲಿ ಪವಾಡಗಳು ಜರುಗುತ್ತವಲ್ಲವೇ? ಈ ಶೂರನ ವ್ಯಕ್ತಿತ್ವ ಕಂಡು ಸಾವೂ ಬೆಚ್ಚಿ ಹಿಂದೆ ಸರಿಯಿತೇನೋ? ಮರಣದ ಮೌನಕ್ಕೆಂದು ಕಣ್ಣು ಮುಚ್ಚಿದವರು ಕಣ್ಬಿಟ್ಟಾಗ ಆಸ್ಪತ್ರೆಯಲ್ಲಿದ್ದರು. ಶೌರ್ಯಗಾಥೆಯನ್ನು ಅವರ ಬಾಯಿಂದಲೇ ಕೇಳೋಣವೆಂಬಂತೆ ವಿಧಿ ಅವರನ್ನು ಬದುಕಿಸಿತ್ತು. ನಂತರ ಮಣಿಪುರಕ್ಕೆ ಹಿಂತಿರುಗುವ ಪ್ರಮೇಯ ಬರಲಿಲ್ಲ. 1995ರಲ್ಲಿ ಶೌರ್ಯ ಚಕ್ರ ನೀಡಿ ಪಿಳ್ಳೈ ಅವರನ್ನು ಸನ್ಮಾನಿಸಲಾಯಿತು. ಮತ್ತೆ ಕರ್ತವ್ಯದ ನಾನಾ ದಿಕ್ಕುಗಳಲ್ಲಿ ಹದ ಪಡೆದುಕೊಂಡಿತು ಬದುಕಿನ ಓಘ.

ಅತ್ತ ಮಣಿಪುರದ ಆ ಹಳ್ಳಿಗೆ ತಮ್ಮನ್ನು ರಕ್ಷಿಸಿದ ಹೀರೋನನ್ನು ರಕ್ತಸಿಕ್ತ ಸ್ಥಿತಿಯಲ್ಲಿ ಸೇನಾ ಹೆಲಿಕಾಪ್ಟರ್ ಹೊತ್ತೊಯ್ದಿದ್ದಷ್ಟೇ ಗೊತ್ತು. ಆತ ತೀರಿಯೇ ಹೋಗಿದ್ದಾನೆಂದುಕೊಂಡಿದ್ದರು. ಇತ್ತ ಪಿಳ್ಳೈ ಅವರಿಗೆ ಮಣಿಪುರದ ಆ ಹಳ್ಳಿಗೆ ಭೇಟಿ ನೀಡಬೇಕೆಂಬ ಸೆಳಕು ತೀವ್ರವಾಗತೊಡಗಿತು. ಎಷ್ಟೆಂದರೂ ತನ್ನೊಳಗಿದ್ದ ನಿಜಯೋಧನನ್ನು ಪರಿಚಯಿಸಿದ ಭೂಮಿಯಲ್ಲವೇ ಅದು ಎಂಬುದು ಪಿಳ್ಳೈ ಅವರಿಗಿದ್ದ ಅಭಿಮಾನ.

ಬರೋಬ್ಬರಿ 14 ವರ್ಷಗಳ ನಂತರ, ಆ ಹಳ್ಳಿಯನ್ನೊಳಗೊಳ್ಳುವ ತಮೆಂಗ್ಲಾಂಗ್ ಪ್ರಾಂತ್ಯದಲ್ಲಿ ಕಮಾಂಡಿಂಗ್ ಹೊಣೆ ಹೊತ್ತಿದ್ದ ಅಧಿಕಾರಿ ಜತೆ ಮಾತುಕತೆ ಪ್ರಸಂಗ ಬಂದೊದಗಿತು. ಈ ವೇಳೆಗೆಲ್ಲ ಪಿಳ್ಳೈ ಕರ್ನಲ್ ಹುದ್ದೆಗೆ ಏರಿದ್ದರು. ಹಳ್ಳಿಯನ್ನು ಸಂದರ್ಶಿಸುವ ತಮ್ಮ ಅಭಿಲಾಷೆ ಹೇಳಿಕೊಂಡರು.

ಆಗ ತೆರೆದುಕೊಂಡಿತು ಭಾವ ಪ್ರಪಂಚ!

ತಮ್ಮ ಹಳ್ಳಿಯನ್ನುಳಿಸಿದ, ತನ್ನ ಪ್ರಾಣ ಲೆಕ್ಕಿಸದೇ ಹಳ್ಳಿಯ ಇಬ್ಬರು ಮಕ್ಕಳ ಜೀವಕ್ಕಾಗಿ ಮಿಡಿದ ಹೀರೋನನ್ನು ಸಂಭ್ರಮೋದ್ಗಾರಗಳೊಂದಿಗೆ ಬರಮಾಡಿಕೊಂಡಿತು ಲೊಂಗ್ಡಿ ಪಬ್ರಂ. ಯಾವ ಮನೆಯೆದುರಿನ ಆವಾರದಲ್ಲಿ ಇವರು ಗುಂಡು ತಿಂದು ಬಿದ್ದಿದ್ದರೋ ಆ ಮನೆಯೊಡತಿ ಅಜ್ಜಿ ಭಾವುಕಳಾಗಿ ಇವರನ್ನು ಅಪ್ಪಿಕೊಂಡು ಏನೇನೋ ಮಾತನಾಡುತ್ತಿದ್ದರೆ ಇವರಿಗೆ ಆ ಭಾಷೆ ಅರ್ಥವಾಗಲಿಲ್ಲ; ಆದರೆ ಭಾವಗಳಿಗೆಲ್ಲಿಯ ಬಂಧನ? ಅವತ್ತು ಜೀವ ಉಳಿಸಿಕೊಂಡಿದ್ದ ಮಕ್ಕಳಿಬ್ಬರು ಇವತ್ತು ಎದೆಯೆತ್ತರ ಬೆಳೆದು ನಿಂತಿರುವುದನ್ನು ನೋಡುವದಕ್ಕೆ ಮೀರಿದ ಮಹದಾನಂದ ಇನ್ಯಾವುದಿಹುದು?

ಆ ಹುಡುಗರು ಕೇಳುತ್ತಾರೆ- ‘ನಿಮ್ಮನ್ನು ನಮ್ಮ ಸೇನೆ ಅಂತ ನಾವು ಒಪ್ಪಿಕೊಂಡೇ ಇರಲಿಲ್ಲ. ಆದರೂ ನಮ್ಮ ಪ್ರಾಣ ರಕ್ಷಿಸಬೇಕೆಂದು ನಿಮಗೇಕೆ ಆ ದಿನ ಅನಿಸಿತು?’

ಪಿಳ್ಳೈ ಹೇಳುತ್ತಾರೆ- ‘ದೇಶ ರಕ್ಷಣೆಗೆ, ಸಂವಿಧಾನದ ಮೌಲ್ಯಗಳ ಉಳಿವಿಗೆ ಬಲಿದಾನ ಕೊಡಬೇಕಿರುವುದು ಯೋಧನ ಕರ್ತವ್ಯ. ಆ ಹಂತದಲ್ಲಿ ನಮ್ಮ ಯಾವ ಆಂತರಿಕ ಭಿನ್ನಾಭಿಪ್ರಾಯಗಳೂ ಲೆಕ್ಕಕ್ಕಿರದು…’

ಮತ್ತೆ ನೋಡಿದರೆ ಅವತ್ತು ಇವರತ್ತ ಗ್ರೆನೇಡ್ ಎಸೆದಿದ್ದ ಬಂಡುಕೋರ ನಗುಮುಖದಿಂದ ಬಂದು ಅಪ್ಪಿಕೊಂಡ. ಆತ ಶರಣಾಗತನಾಗಿ ಜೀವನ ಬದಲಿಸಿಕೊಂಡು ಬಹಳ ದಿನಗಳಾಗಿದ್ದವು.

ಪಿಳ್ಳೈ ಅವರ ಒಂದು ಭೇಟಿಗೇ ಈ ಭಾವಲೋಕ ಮುಗಿದುಹೋಗಲಿಲ್ಲ. ಭಾರತೀಯನಾಗಿದ್ದ ಮಾತ್ರಕ್ಕೆ ಮಣಿಪುರದಲ್ಲಿ ಮನೆಯನ್ನೋ, ಆಸ್ತಿಯನ್ನೋ ಹೊಂದುವಂತಿಲ್ಲ ಎಂಬುದು ತಿಳಿದಿದೆಯಷ್ಟೆ. ಅಲ್ಲಿನ ಬುಡಕಟ್ಟು ವಿನ್ಯಾಸ ಕಾಯ್ದಿರಿಸುವುದಕ್ಕೆ ವಿಶೇಷ ಕಾನೂನುಗಳಿವೆ. ಆದರೆ ಮನಸುಗಳು ಬೆಸೆದೆಡೆ ಕಟ್ಟಳೆಗಳ ಮಾತೆಲ್ಲಿಯದು? ಪಿಳ್ಳೈ ಮತ್ತವರ ಕುಟುಂಬವನ್ನು ತಮ್ಮವರೆಂದು ದತ್ತು ತೆಗೆದುಕೊಂಡುಬಿಟ್ಟಿದೆ ಆ ಹಳ್ಳಿ. ಜಾಗ, ಮತದ ಹಕ್ಕು ಎಲ್ಲವನ್ನೂ ಪಿಳ್ಳೈ ಅವರಿಗೆ ನೀಡಿ ಅವರನ್ನು ಪಿಳ್ಳೈ ಪಮೇಯಿ ಆಗಿಸಿದೆ. ಪಮೇಯಿ ಎಂಬುದು ಆ ಹಳ್ಳಿಯ ಸಮುದಾಯವು ಹೊಂದಿರುವ ಅಡ್ಡ ಹೆಸರು.

ಪಿಳ್ಳೈ ಸಹ ಅಷ್ಟೆ. ಆ ಮಣ್ಣಿನ ಮಗನೇ ಆಗಿಬಿಟ್ಟಿದ್ದಾರೆ. ತಮ್ಮ ನಿಲುಕಿನಲ್ಲಿ ಆ ಹಳ್ಳಿಗೆ ಏನೆಲ್ಲ ರೀತಿಯಲ್ಲಿ ಸಹಕರಿಸಬಹುದೋ ಅವನ್ನೆಲ್ಲ ಮಾಡುತ್ತ ಬಂದಿದ್ದಾರೆ. ಆರು ವರ್ಷಗಳಿಂದ ರಸ್ತೆ ಬೇಡಿಕೆಯನ್ನು ಹಳ್ಳಿಯ ಪರವಾಗಿ ಪ್ರತಿಪಾದಿಸುತ್ತ ಬಂದವರು ಪಿಳ್ಳೈ. ಇದೀಗ ಮಣಿಪುರದಿಂದ ನಾಗಾಲ್ಯಾಂಡಿಗೆ ಸಂಪರ್ಕ ಕಲ್ಪಿಸಲಿರುವ ಹೆದ್ದಾರಿ ಇದೇ ಊರನ್ನು ಹಾದುಹೋಗುವುದಂತೆ.

ನಿವೃತ್ತಿಗೆ ವಾರದ ಮುಂಚೆ ಲೊಂಗ್ಡಿ ಪಬ್ರಂಗೆ ಹೋದಾಗಲೂ ಬರಿಗೈಲಿ ಹೋಗಿಲ್ಲ. ಹಳ್ಳಿಯ ಪ್ರತಿ ಮನೆಗೂ ಒದಗುವಂತೆ 500 ಸೋಲಾರ್ ದೀಪಗಳು ಹಾಗೂ 100 ಸೌರ ಲಾಟೀನುಗಳನ್ನು ಒಯ್ದಿದ್ದಾರೆ. ಅಸ್ಸಾಂ ರೈಫಲ್ಸ್ ಪಡೆ ಇವೆಲ್ಲವನ್ನೂ ಪ್ರಾಯೋಜಿಸಿದೆ.

ಯೋಧನೊಬ್ಬನ ಸೇವಾ ಜೀವನ ಬಹುಪಾಲು ಸಂಘರ್ಷದ ಭೂಮಿಕೆಯಲ್ಲೇ ವ್ಯಯವಾಗುತ್ತದೆ. ಉಗ್ರವಾದ, ಪ್ರತ್ಯೇಕತಾವಾದ, ಸರ್ಕಾರದ ವಿರುದ್ಧ ಗುಂಪುಗಳ ಸೆಣೆಸಾಟ ಇಂಥ ಜಾಗಗಳಲ್ಲೇ ಯೋಧನಿಗೆ ಕೆಲಸ. ಇಂಥದೇ ಸಂಘರ್ಷ/ ಬಂದ್ ಇತ್ಯಾದಿ ಚಹರೆ ಹೊಂದಿರುವ ಮಣಿಪುರದ ಒಡಲಿನಲ್ಲೇ ಯೋಧನೊಬ್ಬ ನಿವೃತ್ತಿ ಬದುಕನ್ನೂ ಅರಸುವ ಸಾಧ್ಯತೆ ಸೃಷ್ಟಿಸಿಕೊಂಡಿದ್ದಾನೆಂಬುದಕ್ಕೆ ಮೀರಿದ ಬೆರಗು ಯಾವುದಿದೆ? ಯಾವ ಮಣಿಪುರವು ‘ಇಂಡಿಯನ್ ಆರ್ಮಿ ರೇಪ್ಡ್ ಅಸ್’ ಎಂದು ಆಕ್ರೋಶದಿಂದ ಬೆತ್ತಲಾಗಿ ಪ್ರತಿಭಟಿಸಿದ ಮಹಿಳೆಯರಿಗೆ ಸಾಕ್ಷಿಯಾಗಿತ್ತೋ, ಯಾವ ಮಣಿಪುರದಲ್ಲಿ ‘ಭಾರತೀಯ ಸೇನೆ ವಾಪಸು ಹೋಗಲಿ’ ಎಂದು ಇರೋಮ್ ಶರ್ಮಿಳಾ ಉಪವಾಸಕ್ಕೆ ಕುಳಿತರೋ, ಅದೇ ರಾಜ್ಯದ ಹಳ್ಳಿಯೊಂದು ಭಾರತೀಯ ಸೇನಾಯೋಧನನ್ನು ಮಗನೇ ಅಂತ ಅಪ್ಪಿಕೊಳ್ಳುವುದಿದೆಯಲ್ಲ…

ಇಲ್ಲಿಯೇ ನಾವೆಲ್ಲರೂ ಗೆಲ್ಲಬೇಕಾದ ಯುದ್ಧದ ಮಮತೆಯ ಮಾರ್ಗದ ಸುಳಿವುಗಳಿವೆ ಎಂದೆನಿಸದೇ?

Leave a Reply