ಗುಜರಾತಿನಲ್ಲಿ ಗೋವಧೆ ಮಾಡಿದವರಿಗಿನ್ನು ಜೀವಾವಧಿ ಜೈಲು!

ಡಿಜಿಟಲ್ ಕನ್ನಡ ಟೀಮ್:

2011ರ ಗುಜರಾತ್ ಪ್ರಾಣಿರಕ್ಷಣೆ ಕಾಯ್ದೆಗೆ ಶುಕ್ರವಾರ ಮತ್ತೆ ತಿದ್ದುಪಡಿ ಅನುಮೋದಿಸಿರುವ ಗುಜರಾತ್ ವಿಧಾನಸಭೆಯು ಗೋಹತ್ಯೆಕಾರರಿಗೆ ಜೈಲುಶಿಕ್ಷೆ ಅವಧಿಯನ್ನು ಜೀವಾವಧಿಗೆ ವಿಸ್ತರಿಸುವುದಕ್ಕೆ ಅನುಮೋದಿಸಿದೆ.

ಇದರೊಂದಿಗೆ ಗುಜರಾತಿನ ಗೋರಕ್ಷಣೆ ಕಾನೂನು ಅತಿ ಕಠಿಣ ಕಾಯ್ದೆಗಳ ಪೈಕಿ ಒಂದಾಗಿದೆ. ಈ ಹಿಂದೆ ಗೋವಧೆಗೆ ಏಳು ವರ್ಷಗಳ ಜೈಲುಶಿಕ್ಷೆ ಹಾಗೂ ₹50,000 ದಂಡ ವಿಧಿಸುವ ಅವಕಾಶವಿತ್ತು. ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ 1954ರ ಗುಜರಾತ್ ಪ್ರಾಣಿ ಸಂರಕ್ಷಣೆ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದಲ್ಲಿ ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸಿದ್ದರು. ಇದೀಗ ಮುಖ್ಯಮಂತ್ರಿ ವಿಜಯ್ ರುಪಾನಿ ಸರ್ಕಾರ ಅದನ್ನು ಮತ್ತೆ ಬಲಪಡಿಸಿದೆ. ಅಪರಾಧದಲ್ಲಿ ಭಾಗಿಯಾದ ವಾಹನವನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ಹೊಸ ಕಾಯ್ದೆಯಲ್ಲಿ ಅವಕಾಶವಿದೆ. ಗೋಮಾಂಸ ಸಾಗಣೆ/ ಮಾರಾಟದಲ್ಲಿ ಭಾಗಿಯಾಗುವ ವಾಹನಕ್ಕೂ ಇದು ಅನ್ವಯ.

‘ಇದೊಂದು ರಾಜಕೀಯ ಲಾಭ ಗಳಿಸಿಕೊಳ್ಳುವ ಕ್ರಮವೇ ಹೊರತು ಬಿಜೆಪಿಗೆ ಗೋವಿನ ಮೇಲೆ ಯಾವುದೇ ಕಾಳಜಿಯಿಲ್ಲ. ಈ ಕಾಯ್ದೆಯೊಂದಿಗೆ ಬಿಜೆಪಿ ದಲಿತ ವಿರೋಧಿ ಎಂಬುದೂ ಸಾಬೀತಾಗಿದೆ’ ಅನ್ನೋದು ಪ್ರತಿಪಕ್ಷ ಕಾಂಗ್ರೆಸ್ಸಿನ ಪ್ರತಿಕ್ರಿಯೆ.

ಆದರೆ ಮುಖ್ಯಮಂತ್ರಿ ವಿಜಯ್ ರುಪಾನಿ ಮಾತ್ರ ತಮ್ಮೆಲ್ಲ ಭಾಷಣಗಳಲ್ಲಿ ಗೋರಕ್ಷಣೆ ವಿಷಯ ಪ್ರಸ್ತಾಪಿಸದೇ ಬಿಡರು. ‘ಗೋವು, ಗಂಗೆ ಮತ್ತು ಗೀತೆ ಇವುಗಳಿಗೆ ಬಿಜೆಪಿ ಯಾವತ್ತೂ ನಿಷ್ಠ. ಗುಜರಾತಿನಲ್ಲಿ ಗೋಹತ್ಯೆ ವಿರೋಧಿ ಕಾನೂನು ತರುವುದಕ್ಕೆ ಸುಪ್ರೀಂಕೋರ್ಟಿನಲ್ಲಿ ಹೋರಾಡಿರುವವರು ನಾವು. ಸಧ್ಯದಲ್ಲೇ ಈ ಕಾಯ್ದೆಯನ್ನು ಮತ್ತಷ್ಟು ಬಲಪಡಿಸುತ್ತೇವೆ’ ಎಂದೆಲ್ಲ ರುಪಾನಿ ಹೇಳಿದ್ದರು. ಇದೀಗ ಸಾಧು-ಸಂತರ ಲಾಗಾಯ್ತಿನ ಒತ್ತಾಯಕ್ಕೆ ಹೊಸ ಕಾನೂನಿನ ಮೂಲಕ ಬಲಕೊಟ್ಟಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಇದೇ ವರ್ಷದ ನವೆಂಬರ್- ಡಿಸೆಂಬರ್ ವೇಳೆಗೆ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಉನಾ ಘಟನೆ ಹಿನ್ನೆಲೆಯಲ್ಲಿ ಗೋವು ಒಂದು ಚರ್ಚೆಯ ವಿಷಯ ಹೇಗೆಂದರೂ ಆಗುವುದಕ್ಕಿತ್ತು. ಸರ್ಕಾರದ ವಿರುದ್ಧ ಇದೇ ನೆಲೆಯಲ್ಲಿ ಭಾವನೆಗಳನ್ನು ಎಬ್ಬಿಸುವುದಕ್ಕೆ ಜಿಗ್ನೇಶ್ ಮೆವಾನಿಯಂಥ ಯುವ ಹೋರಾಟಗಾರರು ಪ್ರಯತ್ನಿಸಿದ ನಂತರವೂ ಸ್ಥಳೀಯ ಸಂಸ್ಥೆಗಳ ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿತ್ತು. ಬಹುಶಃ ಇದೇ ಆಧಾರದಲ್ಲಿ ತನ್ನ ಗೋವು ಪರ ನಿಲುವನ್ನು ಮತ್ತಷ್ಟು ಬಿಗಿಗೊಳಿಸುವ ನಿರ್ಧಾರಕ್ಕೆ ಬಿಜೆಪಿ ಅಂಟಿಕೊಂಡಂತಿದೆ.

ಅಂದಹಾಗೆ, ಈ ಹಿಂದಿನ ಕಾಯ್ದೆ ಅನ್ವಯ ವರ್ಷಕ್ಕೆ ಸರಾಸರಿ ಸಾವಿರ ಪ್ರಕರಣಗಳು ಗುಜರಾತಿನಲ್ಲಿ ದಾಖಲಾಗುತ್ತಿದ್ದರೂ ವಿಚಾರಣೆ ಮುಗಿದು ಶಿಕ್ಷೆಯಾಗಿರುವ ಯಾವ ಉದಾಹರಣೆಯೂ ಇಲ್ಲ.

Leave a Reply