ಗಲ್ಫ್ ಮಡದಿಯರು ಅಂದರೇನು ಗೊತ್ತಾ? ಕೇರಳದ ನಂತರ ತಮಿಳುನಾಡಿನಲ್ಲೂ ವ್ಯಾಪಕವಾಗಿದೆ ಈ ಸಾಂಗತ್ಯರಹಿತ ಸಂಸಾರಗಳ ಕತೆ

ಡಿಜಿಟಲ್ ಕನ್ನಡ ಟೀಮ್:

ಇವತ್ತಿನ ವೇಗಯುಗದಲ್ಲಿ ಯಾವುದೇ ಬಾಂಧವ್ಯ ಸಿನಿಮಾಗಳಲ್ಲಿ ತೋರಿಸುವಂತೆ ಮೈಗಂಟಿಕೊಂಡಿರುವ ಮಾದರಿಯಲ್ಲಿರುವುದಿಲ್ಲ. ಅದು ಅಪೇಕ್ಷಣೀಯವೂ ಅಲ್ಲ. ಆದರೆ ಒಟ್ಟಾಗಿ ಬದುಕು ಸೃಷ್ಟಿಸಲೆಂದೇ ಒಂದಾಗುವ ಜೀವಗಳೆರಡು ನಂತರ ದುಡಿಮೆ ಚಕ್ರದ ತಿರುಗಣಿಯಲ್ಲಿ ವರ್ಷಕ್ಕೊಮ್ಮೆ ಮಾತ್ರ ಸಾಂಗತ್ಯಕ್ಕೆ ಬರುವ ಮಾದರಿ ಮಾತ್ರ ಇನ್ನೊಂದು ಬಗೆಯ ಅತಿರೇಕದ್ದು.

ಗಲ್ಫ್ ವಲಸೆಗೆ ಬಹಳ ಮೊದಲೇ ತೆರೆದುಕೊಂಡಿದ್ದ ಕೇರಳದಲ್ಲಿ ‘ಗಲ್ಫ್ ಮಡದಿ’ಯರ ಇಂಥದೊಂದು ಮಾದರಿ ಸಾಮಾನ್ಯವಾಗಿತ್ತು. ಅಂದರೆ ಮಹಿಳೆ ತನ್ನ ಮಕ್ಕಳನ್ನು ಸಾಕುತ್ತ ಈ ನೆಲದಲ್ಲಿದ್ದರೆ, ದುಡಿಯಲು ಗಲ್ಫ್ ಗೆ ತೆರಳಿರುವ ಪತಿಯ ನೇರ ಸಾಂಗತ್ಯವು ಮಡದಿಗೆ ಹಾಗೂ ಮಕ್ಕಳಿಗೆ ಒದಗಿಬರುವುದು ಅಪರೂಪಕ್ಕೆ. ಇತ್ತೀಚಿನ ಅಧ್ಯಯನಗಳು ತಮಿಳುನಾಡಿನಲ್ಲೂ ಈ ಮಾದರಿ ವ್ಯಾಪಕವಾಗಿರುವುದನ್ನು ಸಾರಿವೆ.

ತಮಿಳುನಾಡಿನ ಜನಕ್ಕೇನು ಬಿಡಪ್ಪಾ ಅಮ್ಮಾ ಕೊಟ್ಟ ಕ್ಯಾಂಟೀನ್ ,ಟೀವಿ , ಸ್ಕೂಲ್ ಬ್ಯಾಗ್, ಷೂ, ಲ್ಯಾಪ್ ಟಾಪ್ ಎಲ್ಲ ಇದೆ. ಹೊಟ್ಟೆ ತುಂಬಿಸಿಕೊಂಡು ಮನೆಮಂದಿಯ ಜೊತೆ ಆರಾಮವಾಗಿದ್ದಾರೆ ಅಂದ್ಕೊಂಡಿದ್ದೀರಾ?  ಹಂಗೇನಿಲ್ಲ. ತಮಿಳುನಾಡಿನ ಜನ ಕೇರಳವನ್ನು ಮೀರಿಸುವಷ್ಟು ವೇಗದಲ್ಲಿ ದುಡಿಮೆಗಾಗಿ ಹೆತ್ತ ಮಕ್ಕಳನ್ನೂ ಬಿಟ್ಟು  ದೂರದ ಗಲ್ಫ್ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಅದರಿಂದ ತಮಿಳುನಾಡಿಗೆ ಬರುತ್ತಿರುವ ಆದಾಯ ನೋಡಿದ್ರೆ ಹುಬ್ಬೇರುವುದು ಗ್ಯಾರಂಟಿ. ಇದೇ ಮೊದಲ ಬಾರಿಗೆ ಆರ್ಥಿಕ ಲಾಭದ ಜೊತೆಗೆ ಕುಟುಂಬಗಳ ಪರಿಸ್ಥಿತಿಯ ಲೆಕ್ಕಾಚಾರವೂ ಬಯಲಾಗಿದೆ.

ಮದುವೆ ಆಗಿ ಗಂಡನ ಜೊತೆ ಇರಬೇಕಾದ ಹೆಣ್ಣುಮಕ್ಕಳು ಗಂಡನನ್ನು ದೂರದೇಶಕ್ಕೆ ದುಡಿಮೆಗೆ ಕಳುಹಿಸಿ ಮಕ್ಕಳೊಂದಿಗೆ ಸಂಸಾರದ ಎಲ್ಲ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಮಕ್ಕಳು ತಂದೆಯ ಸಾಮೀಪ್ಯವಿಲ್ಲದೆ ದಿನದೂಡುತ್ತಿದ್ದಾರೆ. ಅಷ್ಟೇ ಸಂಖ್ಯೆಯ ತಂದೆ-ತಾಯಿಯರು ವಯಸ್ಸಾದ ಕಾಲದಲ್ಲಿ ಆಸರೆಯಾಗಬೇಕಾದ ಮಕ್ಕಳು ಪಕ್ಕದಲ್ಲಿರದೆ ಒಂಟಿಯಾಗಿ ಬದುಕು ಸವೆಸುತ್ತಿದ್ದಾರೆ. ವಲಸೆಯ ಮತ್ತೊಂದು ಪರಿಣಾಮ ಗಮನಿಸುವುದಾದರೆ ರಾಜ್ಯಕ್ಕೆ ಹರಿದು ಬರುವ ಆರ್ಥಿಕ ಆದಾಯ ಹೆಚ್ಚಿದೆ . ಇದರಿಂದ ತಮಿಳುನಾಡಿಗೆ ವಾರ್ಷಿಕವಾಗಿ ಪಾವತಿಯಾಗುತ್ತಿರುವ ಮೊತ್ತ ಬರೋಬ್ಬರಿ 61,843ಕೋಟಿ!

ಇದೇನು ಕಡಿಮೆ ಮೊತ್ತವಲ್ಲ. 2014-15ರಲ್ಲಿ ಕೇಂದ್ರ ಸರ್ಕಾರದಿಂದ ತಮಿಳುನಾಡಿಗೆ ಬಂದ ಅನುದಾನದಕ್ಕಿಂತ 6.8 ಪಟ್ಟು ಹೆಚ್ಚು. ಅಷ್ಟೇ ಅಲ್ಲ ವರ್ಷಕ್ಕೆ ಇಡೀ ತಮಿಳುನಾಡಿಗೆ ಖರ್ಚಾಗುವ ಹಣದಲ್ಲಿ 1.8 ಪಟ್ಟು ಆರ್ಥಿಕ ಲಾಭ ವಲಸಿಗರ ಹಣ ವರ್ಗಾವಣೆಯ ಮೂಲಕ ರಾಜ್ಯದ ಬೊಕ್ಕಸ ಸೇರುತ್ತಿದೆ.

2005ರ ತಮಿಳುನಾಡು ವಲಸೆ ಸರ್ವೇ ಪ್ರಕಾರ ಅಂದಾಜು ಪ್ರತಿ ಹತ್ತು ಮನೆಗೊಬ್ಬರಂತೆ ವಿದೇಶದಲ್ಲಿ ಕೆಲಸ ಮಾಡುತ್ತಿರುವವರು ಇದ್ದಾರೆ. ಕೇರಳದಲ್ಲಿ ಇದರ ಸಂಖ್ಯೆ ಇನ್ನು ಹೆಚ್ಚೇ ಇದೆ. ಅಲ್ಲಿ ಪ್ರತಿ 5 ಮನೆಗೊಬ್ಬರು ಪರದೇಶದಲ್ಲಿ ದುಡಿಮೆ ಮಾಡುತ್ತಿದ್ದಾರೆ. ತಮಿಳುನಾಡಿನಿಂದ ವಲಸೆ ಹೋದವರಲ್ಲಿ ಶೇಕಡ 75 ಹಿಂದೂಗಳು, 15 ಭಾಗ ಮುಸಲ್ಮಾನರು, ಹತ್ತರಷ್ಟು ಕ್ರಿಶ್ಚಿಯನ್ನರು. ಸುಮಾರು  ಶೇಕಡ 15 ಮಹಿಳೆಯರು.

ಇದೇ ಮೊದಲ ಬಾರಿಗೆ ವಲಸೆಯ ಶೈಲಿ ಜೊತೆಗೆ ಆದರಿಂದಾಗುವ ಸಾಮಾಜಿಕ ಪರಿಣಾಮಗಳ ಬಗ್ಗೆ ಕ್ಷೇತ್ರ ಅಧ್ಯಯನ ನಡೆಸಿದ ಪ್ರೊಫೆಸರ್ ಎಸ್ ಐರುದಯ ರಾಜನ್ ತಂಡದ ಪ್ರಕಾರ ತಮಿಳುನಾಡಿನಿಂದ ವಲಸೆ ಬಂದಿರುವ 4.1ಲಕ್ಷ ಮಂದಿ ಸಿಂಗಾಪೂರದಲ್ಲಿದ್ದಾರೆ. ಗಲ್ಫ್ ,ಯುಎಇ,ಕುವೈತ್, ಓಮನ್,ಕತಾರ್ ಗಳಲ್ಲಿ 1.1 ಕೋಟಿ ಜನ ಕೆಲಸಕ್ಕಿದ್ದಾರೆ.

ಬಹುತೇಕ ವಲಸೆ ಕುರಿತ ಸಮೀಕ್ಷೆಳಾಗುವುದು ಆರ್ಥಿಕ ಆದಾಯದ ಲೆಕ್ಕದ ಮೇಲೆಯೇ. ಆದರೆ ಹೊಸ ಅಧ್ಯಯನ ಕುಟುಂಬಗಳ ಮೇಲಾಗುತ್ತಿರುವ ಭಾರೀ ಪರಿಣಾಮಗಳನ್ನು ಬಿಚ್ಚಿಟ್ಟಿದೆ. ವಲಸೆ ಹೋಗಿರುವ ಕುಟುಂಬಗಳ ನಿರ್ವಹಣೆ ಮಾಡುವ ಹೊರೆ ಮನೆಯ ಮಹಿಳೆಯ ಮೇಲೇ ಬಿದ್ದಿದೆ. ಅವರನ್ನ ‘ಗಲ್ಫ್ ಹೆಂಡತಿಯರು’ ಎಂದೇ ಕರೆಯಲಾಗುತ್ತಿದೆ. ಮನೆಗೆ ಬೇಕಾದ ತರಕಾರಿ ,ದಿನಸಿ,ತಿಂಡಿ-ತಿನಿಸುಗಳಿಂದ ಹಿಡಿದು ಕರೆಂಟ್ ಬಿಲ್ , ನೀರಿನ ಬಿಲ್ ,ರಿಪೇರಿ ಕೆಲಸಗಳು , ಮಕ್ಕಳನ್ನು ಶಾಲೆಗೆ ಕಳುಹಿಸುವ, ಓದಿಸುವ, ಅವರ ಸಮಸ್ಯೆಗಳನ್ನು ಬಗೆ ಹರಿಸುವ ಎಲ್ಲ ಜವಾಬ್ದಾರಿಯನ್ನು ಹೆಂಡತಿಯರೇ ಹೊರುವಂತಾಗಿದೆ.

ವಲಸಿಗರಿಂದ ತಮಿಳುನಾಡಿಗೆ ಕಣ್ಣು ಕೋರೈಸುವಷ್ಟು  ಆರ್ಥಿಕ ಲಾಭ ಕಾಣುತ್ತಿದೆ ನಿಜ. ಆದರ ಫಲವಾಗಿ ಎರಡು ಕೋಟಿಗೂ ಮೀರಿದ ಮಕ್ಕಳು ತಂದೆಯನ್ನ ಅಥವಾ ತಂದೆ-ತಾಯಿ ಇಬ್ಬರನ್ನೂ ವರ್ಷಗಟ್ಟಲೆ ನೋಡೇ ಇರುವುದಿಲ್ಲ. ದಿನ ಬೆಳಗಾದರೆ ಅಪ್ಪಾ ..  ಕೊಂಚ ನೋವಾದರೂ ಅಮ್ಮಾ ..ಎಂದಾಕ್ಷಣ ಬರಲಿಕ್ಕೆ ಮಕ್ಕಳ ಜೊತೆಯಲ್ಲಿ ಅವರಿರುವುದೇ ಇಲ್ಲ. ಇದರಿಂದ ಮಾನಸಿಕವಾಗಿ ಮಕ್ಕಳ ಮೇಲೆ ಉಂಟಾಗುವ ಪರಿಣಾಮ ಊಹಿಸಲೂ ಸಾಧ್ಯವಿಲ್ಲ.  10 ಲಕ್ಷಕ್ಕೂ ಮೀರಿದ ಮಡದಿಯರು ವರ್ಷಾನುಗಟ್ಟಲೆ ಗಂಡನ ಸಾಮೀಪ್ಯವಿಲ್ಲದೆ ಬಾಳು ದೂಡುತ್ತಿದ್ದಾರೆ. ಅದು ದುಸ್ತರವಲ್ಲದೆ ಮತ್ತೇನು ?

ಹೋಗಲಿ.. ವಲಸೆ ಹೋದ ಬಹುದೊಡ್ಡ ಸಂಖ್ಯೆಯ ಜನರೇನು ಹವಾನಿಯಂತ್ರಿತ ಕೊಠಡಿಗಳಲ್ಲಿ ಕೆಲಸ ಮಾಡಿ ಹಣಗಳಿಸುತ್ತಿದ್ದಾರಾ? ಖಂಡಿತ ಇಲ್ಲ. ಪ್ರತ್ಯಕ್ಷ ದರ್ಶಿ, ತಜ್ಞ ರಾಜನ್ ಪ್ರಕಾರ ಮೈ ಸುಡುವ ಬಿರುಬಿಸಿಲಲ್ಲಿ, 50 ಡಿಗ್ರಿ ಉಷ್ಣಾಂಶದಲ್ಲಿ ಜನ ಕೆಲಸ ಮಾಡುತ್ತಿದ್ದಾರೆ. 50 ಡಿಗ್ರಿ ಮುಟ್ಟುತ್ತಿದ್ದಂತೆ ಎಂಥದ್ದೇ ಕೆಲಸವಿರಲಿ ನಿಲ್ಲಿಸಬೇಕೆಂಬ ನಿಯಮವಿದೆ. ಆದರೆ ಗಲ್ಫ್ ದೇಶಗಳಲ್ಲಿ 51 ಡಿಗ್ರಿ ತಾಕಿದರು ಮಾಪಕ 49.1 ಡಿಗ್ರಿ ತೋರಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ ಸರ್ಕಾರದ ಜನ. ತಮಿಳುನಾಡಿಗೆ ವಲಸಿಗರು ಕಟ್ಟುತ್ತಿರುವ ಶೇಕಡ 71ರಷ್ಟು ಶುಲ್ಕ  ಬಹುತೇಕ ಬಡ -ಮಧ್ಯಮ ವರ್ಗದ ಜನ ರಕ್ತ ಬಸಿದು ದುಡಿದ ಹಣ.

ವರದಿ  ಪ್ರಕಾರ ವಲಸೆ ಹೋಗುವವರಲ್ಲಿ  ಶೇಕಡ 52 ರಷ್ಟು ಮಂದಿ 20ರಿಂದ 34 ವಯಸ್ಸಿನವರೇ ಇದ್ದಾರೆ. ವಿಚಿತ್ರವೆಂದರೆ ಕೇರಳದಲ್ಲಿ ವಲಸೆ ಪ್ರಕ್ರಿಯೆಗೆ ₹76,243 ಬೇಕಾದರೆ ತಮಿಳುನಾಡಿನಲ್ಲಿ ₹ 1.08 ಲಕ್ಷ ಬೇಕು. ಅಚ್ಚರಿಯೆಂದರೆ ಅತೀ ಹೆಚ್ಚು ಕೈಗಾರಿಕೆಗಳು , ಜವಳಿ ಉದ್ಯಮವಿರುವ  ತಿರುಪ್ಪುರ್ ,ನ್ಯಾಮಕಲ್ ನಿಂದ ಶೇಕಡ 40ಕ್ಕೂ ಹೆಚ್ಚು ಹೆಣ್ಣುಮಕ್ಕಳು ಕಂಡುಕಾಣದ ದೇಶಕ್ಕೆ ಬದುಕು ಅರಸಿ ಹೋಗಿದ್ದಾರೆ. ತಮಿಳುನಾಡಿನ ಜನ ಗಲ್ಫ್ ದೇಶಕ್ಕೆ ವಲಸೆ ಹೋಗಿರುವುದು ಬಿಟ್ಟರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ 3.22ಲಕ್ಷಕ್ಕೂ ಮೀರಿ   (2015 ರ ಸರ್ವೇ) ಊರುಬಿಟ್ಟು ಕೈತುಂಬಾ ಕಾಸು ಕಾಣಲು ಬಂದಿರುವುದು ಕರ್ನಾಟಕಕ್ಕೆ.

Leave a Reply