ಗಂಗೆಯ ನಂತರ ಈಗ ‘ನಮಾಮಿ ಬ್ರಹ್ಮಪುತ್ರ’: ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಬಲವರ್ಧನೆ, ಚೀನಾಕ್ಕೆ ಟಾಂಗ್…. ಒಂದು ಬ್ರಾಂಡಿಂಗ್, ಹಲವು ಗುರಿಗಳು!

 

ಅಸ್ಸಾಂ ಸರ್ಕಾರವು ರೂಪಿಸಿರುವ ‘ನಮಾಮಿ ಬ್ರಹ್ಮಪುತ್ರ’ ಉತ್ಸವವು ಇಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಉದ್ಘಾಟನೆಗೊಂಡು ಏಪ್ರಿಲ್ 4ರವರೆಗೆ ನಡೆಯಲಿದೆ.

ಕೇಂದ್ರದ ಮೋದಿ ಸರ್ಕಾರ ಹಾಗೂ ಈಗ ಬಹುತೇಕ ರಾಜ್ಯಗಳಲ್ಲಿ ಮೋದಿ ಮಾದರಿಯನ್ನೇ ನೆಚ್ಚಿಕೊಂಡು ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರಗಳ ನಡಾವಳಿಗಳಲ್ಲಿ ಕಣ್ಣಿಗೆ ರಾಚುವ ಒಂದು ಲಕ್ಷಣವೆಂದರೆ ಬ್ರಾಂಡ್ ಬಿಲ್ಡಿಂಗ್.

ಬಿಜೆಪಿ ಸರ್ಕಾರಗಳು ಒಳ್ಳೆ ಕೆಲಸ ಮಾಡುತ್ತಿವೆಯೋ ಇಲ್ಲವೋ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿದ್ದಿರಬಹುದು. ಆದರೆ ಬ್ರಾಂಡಿಂಗ್ ವಿಷಯಕ್ಕೆ ಬಂದರೆ ಮೋದಿ- ಅಮಿತ್ ಶಾ ಎಲ್ಲರಿಗಿಂತ ಪ್ರಚಂಡರಿದ್ದಾರೆ ಎಂಬ ಸಂಗತಿಯನ್ನು ಪ್ರತಿಪಕ್ಷಗಳೂ ಒಪ್ಪಿಯಾವು. ಈ ಬ್ರಾಂಡಿಂಗ್ ಅಂತಂದ್ರೆ ಎಲ್ಲ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ಬಿಟ್ಟೂಬಿಡದೇ ಪ್ರಚಾರ ನಡೆಸುವುದು ಅಂತ ಬಹುತೇಕರು ಅರ್ಥ ಮಾಡಿಕೊಂಡಿದ್ದಾರೆ. ಪ್ರಚಾರವು ಬ್ರಾಂಡ್ ನಿರ್ಮಿತಿಯ ಮುಖ್ಯ ಭಾಗವೇ ಆದರೂ ಅದಷ್ಟೇ ಅಲ್ಲ. ಯಾವುದೇ ಉತ್ಪನ್ನ ಅಥವಾ ಸೇವೆಯನ್ನು ಜನ ತಮ್ಮದೇ ಅಂದುಕೊಳ್ಳುವಂತೆ ಭಾವನಾತ್ಮಕ ಕಥಾನಕವನ್ನು ಹೆಣೆಯುವುದು ಬ್ರಾಂಡ್ ನಿರ್ಮಿತಿಯ ಮುಖ್ಯ ಸವಾಲು.

ನೀರು, ರಕ್ಷಣೆ, ಸ್ವಚ್ಛತೆ ಇವೆಲ್ಲ ಮುಖ್ಯ ವಿಷಯಗಳೇ ಆದರೂ ಇವೆಲ್ಲವನ್ನು ಕೇವಲ ಅಂಕಿಅಂಶಗಳಲ್ಲಿ ಮಾತ್ರವೇ ಇಟ್ಟರೆ ಅದು ಜನಪ್ರಿಯವಾಗುವುದಿಲ್ಲ. ನಾಯಕನಾದವನನ್ನು ಬಲಪಡಿಸುವುದಿಲ್ಲ. ಉದಾಹರಣೆಗೆ, ದೇಶದ ರಕ್ಷಣಾ ಬಜೆಟ್ ನಲ್ಲಿ ಸರ್ಕಾರ ಎಷ್ಟು ಹಣ ಎತ್ತಿಟ್ಟಿದೆ ಎಂಬುದನ್ನು ಅರ್ಥ ಮಾಡಿಕೊಂಡು ಆ ಆಧಾರದ ಮೇಲೆ ಮತ ಹಾಕುವವರ ಪ್ರಮಾಣ ಎಷ್ಟಿದ್ದೀತು? ಇದನ್ನು ಭಾವನಾತ್ಮಕವಾಗಿ ಹೇಳಿದರಷ್ಟೇ ರಾಜಕೀಯ ಹಾಗೂ ನಾಯಕತ್ವಗಳಿಗೆ ಅತ್ಯವಶ್ಯವಾದ ಜನಮನ್ನಣೆ ಸಿಗಲು ಸಾಧ್ಯ. ಹಾಗೆಂದೇ ಗಂಗೆಯ ಸ್ವಚ್ಛತೆ, ಸ್ವಚ್ಛ ಭಾರತ ಮತ್ತು ಇದೀಗ ನಮಾಮಿ ಬ್ರಹ್ಮಪುತ್ರ… ಇಲ್ಲೆಲ್ಲ ಬ್ರಾಂಡ್ ಕತೆಗಳನ್ನು ನಿರ್ಮಿಸಲಾಗುತ್ತಿದೆ.

ಇದರ ತಾಕತ್ತೇನು? ಉದಾಹರಣೆಗೆ, ‘ಸ್ವಚ್ಛ ಭಾರತ’ ಮುಂದೊಮ್ಮೆ ನಿರೀಕ್ಷಿತ ಫಲ ಕೊಡದಿದ್ದರೂ ಅದರ ಹೊಣೆಗಾರಿಕೆ ಸರ್ಕಾರದ ಮೇಲೆ ಬೀಳುವುದಿಲ್ಲ. ‘ಸರ್ಕಾರವಲ್ಲ, ಜನರೇ ಎಚ್ಚೆತ್ತುಕೊಂಡು ಇದನ್ನು ಸಾಕಾರಗೊಳಿಸಬೇಕು’ ಎಂಬ ವ್ಯಾಖ್ಯಾನ ಅದಾಗಲೇ ನಿರ್ಮಾಣಗೊಂಡುಬಿಟ್ಟಿದೆ. ಹೀಗಾಗಿ ಸ್ವಚ್ಛ ಭಾರತ ಬ್ರಾಂಡ್ ನಾಳೆ ಏನಾದರೂ ಕುಸಿದುಬಿದ್ದರೆ ಸರ್ಕಾರದ ಮೇಲೆ ಸಿಟ್ಟುಗೊಳ್ಳುವುದಕ್ಕಿಂತ ಜನರು ತಮ್ಮ ಬಗ್ಗೆಯೇ ಪಶ್ಚಾತಾಪ ಭಾವ ತಾಳಿ, ‘ಪುಣ್ಯಾತ್ಮ ಮೋದಿ ಪ್ರಯತ್ನಿಸಿದರು, ಆದರೆ ಜನ ಸರಿ ಇಲ್ದಿದ್ರೆ ಯಾರೇನು ಸುಧಾರಿಸೋಕಾಗುತ್ತೆ’ ಅಂತ ನಿಟ್ಟುಸಿರುಬಿಡುತ್ತಾರೆ.

ಇದೀಗ ನಮಾಮಿ ಬ್ರಹ್ಮಪುತ್ರದಲ್ಲಿ ಆಗುತ್ತಿರುವುದು ಜನರನ್ನು ನೀರಿನೊಂದಿಗೆ ಭಾವನಾತ್ಮಕವಾಗಿ ಬೆಸೆಯುವ ಕೆಲಸ. ಬ್ರಹ್ಮಪುತ್ರ ತೀರದ ಸುಮಾರು 21 ಜಿಲ್ಲೆಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ಇಲ್ಲಿ ಸಾಂಪ್ರದಾಯಿಕ ಕಲಾ ಪ್ರಕಾರಗಳ ಪ್ರದರ್ಶನ, ಚಿತ್ರೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಇಂಥ ಎಲ್ಲ ಜನಪ್ರಿಯ ಆಕರ್ಷಣೆಗಳ ಜತೆಯಲ್ಲೇ, ಇದೇ ಅವಕಾಶ ಬಳಸಿಕೊಂಡು ಪ್ರವಾಸೋದ್ಯಮ ಮತ್ತು ವ್ಯಾಪಾರ-ವಹಿವಾಟು ಬಲವರ್ಧನೆಯನ್ನೂ ಮಾಡಲಾಗುತ್ತದೆ. ಜಪಾನ್, ಲಾವೊ, ವಿಯೆತ್ನಾಂ, ಸಿಂಗಾಪುರ ಸೇರಿದಂತೆ ಹಲವು ರಾಷ್ಟ್ರಗಳಿಂದ ವಿಶೇಷ ಆಹ್ವಾನಿತರು ಭಾಗವಹಿಸುತ್ತಾರೆ. ಬಾಬಾ ರಾಮದೇವ್ ಸೇರಿದಂತೆ ಹಲವು ಗಣ್ಯರು, ರಾಜಕಾರಣಿಗಳ ಉಪಸ್ಥಿತಿಯಂತೂ ಈ ಐದು ದಿನಗಳಲ್ಲಿ ಇದ್ದೇ ಇರುತ್ತದೆ.

ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ರಾಜಕೀಯವಾಗಿ ತಳ ಊರುತ್ತಿರುವ ಬಿಜೆಪಿಗೆ ದೀರ್ಘಾವಧಿಯಲ್ಲಿ ಅಲ್ಲಿನ ಜನಮಾನಸದಲ್ಲಿ ನೆಲೆಯೂರುವುದಕ್ಕೆ ತುಂಬ ಸಹಾಯ ಮಾಡುವ ಕಾರ್ಯಕ್ರಮಗಳು ಇವೆಲ್ಲ.

ಅಂತಾರಾಷ್ಟ್ರೀಯ ಲೆಕ್ಕಾಚಾರಕ್ಕೆ ಬರುವುದಾದರೆ ಬ್ರಹ್ಮಪುತ್ರದ ಬೇರುಗಳಿರುವುದು ಚೀನಾ ವಶದ ಟಿಬೆಟ್ ನಲ್ಲಿ. ಅಲ್ಲಿ ಬೇರೆ ಹೆಸರಿನಿಂದ ಕರೆಯಲಾಗುವ ಈ ನದಿಯನ್ನು ತನ್ನ ರಾಜತಾಂತ್ರಿಕ ಹಾಗೂ ಕಾರ್ಯತಂತ್ರದ ಭಾಗವಾಗಿಸಿಕೊಂಡು ಒಂದು ಅಸ್ತ್ರದಂತೆ ಇಟ್ಟುಕೊಂಡಿರುವ ಚೀನಾದ ನಡೆಗಳು ಪ್ರಖರವಾಗಿವೆ. ಇದೀಗ ಭಾರತದಲ್ಲಿ ಹೆಚ್ಚು ಹೆಚ್ಚು ಮಂದಿ ಬ್ರಹ್ಮಪುತ್ರದೊಂದಿಗೆ ಭಾವನಾತ್ಮಕವಾಗಿ ಗುರುತಿಸಿಕೊಳ್ಳುತ್ತ ಹೋದಂತೆ ಜಾಗತಿಕ ವೇದಿಕೆಯಲ್ಲಿ ಮುಂದೊಮ್ಮೆ ಬ್ರಹ್ಮಪುತ್ರದ ಮೇಲಿನ ಹಕ್ಕುದಾರಿಕೆ ಪ್ರಸ್ತುತಪಡಿಸುವಲ್ಲಿ ಭಾರತ ಸರ್ಕಾರಕ್ಕೂ ಇಂಥ ಕಾರ್ಯಕ್ರಮಗಳು ನೆರವಿಗೆ ಬರುತ್ತವೆ.

ನಮಾಮಿ ಬ್ರಹ್ಮಪುತ್ರ ಉತ್ಸವಕ್ಕೆ ವಾರಗಳ ಹಿಂದೆಯೇ ಅಸ್ಸಾಮಿ ಮತ್ತು ಹಿಂದಿ ಭಾಷೆಗಳಲ್ಲಿ ಆಶಯ ಗೀತೆಯೊಂದು ನಿರ್ಮಾಣಗೊಂಡಿತ್ತು. ಇದರ ಹಿಂದಿ ಅವತರಣಿಕೆಯಲ್ಲಿ ಅಮಿತಾಭ್ ಬಚ್ಚನ್ ಮುಖ್ಯ ಸೆಲಿಬ್ರಿಟಿ ರಾಯಭಾರಿಯಾಗಿ, ಅನೇಕ ಗಾಯಕರು ಜತೆಯಾಗಿ ಬ್ರಹ್ಮಪುತ್ರದ ವೈಶಾಲ್ಯವನ್ನು ಕಟ್ಟಿಕೊಟ್ಟಿದ್ದಾರೆ.

ಹೀಗೆ ಹಲವು ಗುರಿಗಳನ್ನು ಹೊತ್ತಂತಿರುವ ಬಿಜೆಪಿ ಸರ್ಕಾರದ ಮತ್ತೊಂದು ಬ್ರಾಂಡ್ ಕಥಾನಕ ತೆರೆದುಕೊಳ್ಳುತ್ತಿದೆ.

Leave a Reply