ಮಾನವತೆ ಸೇವೆಗೆ ಸಮಾನಾರ್ಥಕವಾಗಿರುವ ಸ್ವಾಮೀಜಿ ಜನ್ಮದಿನ, ಭಕ್ತಿಯ ಪ್ರಣಾಮ

ಡಿಜಿಟಲ್ ಕನ್ನಡ ಟೀಮ್:

ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಇಂದು 110ನೆ ಜನ್ಮದಿನ.

ನಮ್ಮ ದಿನನಿತ್ಯದ ಮಾತುಗಳ ನಡುವೆ ಪ್ರಸ್ತಾಪವಾಗುವ ಎಲ್ಲ ಆದರ್ಶಗಳ ಮೂರ್ತರೂಪ ಸ್ವಾಮೀಜಿಯವರ ಸಿದ್ಧಗಂಗಾ ಮಠ.

ಸಮಾಜ ಸೇವೆ, ಮಾನವತೆಯ ಸೇವೆಯಲ್ಲೂ ಕೆಲವು ವೈಶಿಷ್ಟ್ಯಗಳಿರುತ್ತವೆ. ನೊಂದವರಿಗೆ ಮಿಡಿಯುವುದು, ಸಹಾಯ ಮಾಡುವುದು ಎಂಬ ಸರಳ ಅರ್ಥದಲ್ಲಿ ನಾವು ಈ ಕಾರ್ಯಗಳನ್ನು ನೋಡುತ್ತೇವೆ. ನಿಜ. ಆ ಮಿಡಿತ ಮಾನವತೆಯ ಸೇವೆಯ ಮೊದಲ ಹೆಜ್ಜೆ. ಆದರೆ ಆ ಕ್ಷಣದ ಸಹಾಯವನ್ನು ಮೀರಿ ವ್ಯಕ್ತಿತ್ವ ರೂಪಿಸುವ ಕೆಲಸಗಳಿವೆಯಲ್ಲ… ಅವು ಸೇವಾಕ್ಷೇತ್ರದಲ್ಲಿ ತಪಸ್ಸನ್ನು ಬೇಡುವಂಥದ್ದು. ಹಾಗೆಂದೇ ಈ ಮಾದರಿ ಎಲ್ಲರಿಗೂ ಒಲಿಯದು.

ಶ್ರೀ ಶಿವಕುಮಾರ ಸ್ವಾಮೀಜಿ ತಪಸ್ವಿ ಎನಿಸಿಕೊಳ್ಳೋದು ಈ ನಿಟ್ಟಿನಲ್ಲಿಯೇ. ಸಿದ್ಧಗಂಗೆ ಮತ್ತದರ ಸುತ್ತಲಿನ ಚಟುವಟಿಕೆಗಳೆಲ್ಲ ದೀರ್ಘಾವಧಿ ಘನ ಉದ್ದೇಶವನ್ನು ಪೊರೆದುಕೊಂಡು ಬಂದಿವೆ. ಹಾಗೆಂದೇ ಸಾವಿರಾರು ಮಕ್ಕಳಿಗೆ ಅಕ್ಷರ ಮತ್ತು ಅನ್ನ ದಾಸೋಹ ಅವೆಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿರುವ ಮಾದರಿ ಇಲ್ಲಿಯದು.

ಸ್ವಾಮೀಜಿಗಳ ಹಲವು ಸೇವಾಕಾರ್ಯಗಳ ಪೈಕಿ ಬಹುಮುಖ್ಯವೆನಿಸುವುದೇ ಶಿಕ್ಷಣ. ಏಕೆಂದರೆ ಹಸಿದವನಿಗೆ ಅನ್ನ ನೀಡುತ್ತಲೇ, ಅನ್ನ ದುಡಿಯುವ ಮಾರ್ಗವನ್ನೂ ಹೇಳಿಕೊಡುವ ಮಹೋನ್ನತ ಮಾದರಿ ಇಲ್ಲಿದೆ. ಅಲ್ಲದೇ ಸರ್ಕಾರಿ ಯೋಜನೆಗಳಲ್ಲಿರುವಂತೆ ಜಾತಿ ಆಧಾರದಲ್ಲಿ ಯೋಜನೆ ಇಟ್ಟುಕೊಳ್ಳುವ ಮಾರ್ಗ ಇಲ್ಲಿಲ್ಲ. ಯಾವುದೇ ಜಾತಿ-ಮತಕ್ಕೆ ಸೇರಿದವರಿದ್ದರೂ ಮಠದಲ್ಲಿ ಶಿಕ್ಷಣ ಪಡೆಯಬಹುದು. ಸಿದ್ಧಗಂಗೆಯಿಂದ ವ್ಯಕ್ತಿತ್ವ ರೂಪಿಸಿಕೊಂಡವರು ಇಷ್ಟು ವರ್ಷಗಳಲ್ಲಿ ಅವೆಷ್ಟು ಸಹಸ್ರ ಮಂದಿಯೋ!

ಸಮಾಜ ಸೇವೆಯನ್ನು ಕವಲುಗಳಲ್ಲಿ ನೋಡದೇ ಅದರ ಮೂಲದಲ್ಲಿ, ಬೇರಿನಲ್ಲಿ ಅರ್ಥಾತ್ ಅನ್ನ-ಅಕ್ಷರ ದಾಸೋಹ ಮತ್ತು ಕೃಷಿ ಚಟುವಟಿಕೆ ಪ್ರೋತ್ಸಾಹಗಳಲ್ಲಿ ಬಲಪಡಿಸುತ್ತಿರುವ ಸಿದ್ಧಗಂಗೆ ವಿಶ್ವದಲ್ಲೊಂದು ಅನನ್ಯ ಮಾದರಿ.

ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನ ಗೌರವ ಸಮರ್ಪಣೆಯಾದಲ್ಲಿ ಅದು ಈ ದೇಶ ತನ್ನನ್ನು ತಾನು ಗೌರವಿಸಿಕೊಂಡಂತೆ.

Leave a Reply