ಯಾವ ಬಟನ್ ಒತ್ತಿದರೂ ಕಮಲಕ್ಕೆ ಮತ? ಮತಯಂತ್ರಕ್ಕೆ ಬದಲಾಗಿ ಮತಪತ್ರವೇ ಇರಲಿ ಎಂಬ ಪ್ರತಿಪಕ್ಷಗಳ ಕೂಗು ಜೋರು

ಡಿಜಿಟಲ್ ಕನ್ನಡ ಟೀಮ್:

ವಿದ್ಯುನ್ಮಾನ ಮತಯಂತ್ರಗಳ ಕುರಿತು ರಾಜಕೀಯ ನೇತಾರರ ಶಂಕೆ ಇಂದಿನಿದಲ್ಲ. ಚುನಾವಣೆಯಲ್ಲಿ ಸೋತವರೆಲ್ಲ ಮತಯಂತ್ರದಲ್ಲಿ ಮೋಸ ಆಗಿರುವುದಾಗಿ ದೂಷಿಸಿದ್ದರು. ಉತ್ತರ ಪ್ರದೇಶ ಚುನಾವಣೆಯಲ್ಲಿ ತೀರ ಇತ್ತೀಚೆಗೆ ಮಾಯಾವತಿಯವರು ತಮ್ಮ ಸೋಲಿಗೆ ಹಾಗೂ ಬಿಜೆಪಿ ಗೆಲುವಿಗೆ ಮತಯಂತ್ರಗಳೇ ಕಾರಣವೆಂದಿದ್ದರು. ಅದಕ್ಕೂ ಮೊದಲು 2008ರ ಲೋಕಸಭೆ ಚುನಾವಣೆ ಪರಾಜಯದ ನಂತರ ಬಿಜೆಪಿಯ ಎಲ್ ಕೆ ಆಡ್ವಾಣಿ ಸಹ ಇದೇ ಅನುಮಾನ ವ್ಯಕ್ತಪಡಿಸಿದ್ದರು.

ಶನಿವಾರ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ, ಸಧ್ಯದಲ್ಲೇ ಆಗಲಿರುವ ಉಪ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಿಂದೆಲ್ಲ ಬಳಸುತ್ತಿದ್ದಂತೆ ಮತಪತ್ರಗಳನ್ನೇ ಬಳಸಬೇಕೆಂದು ಆಗ್ರಹಿಸಿವೆ.

ಇದಕ್ಕೆ ಕಾರಣ ಮಧ್ಯಪ್ರದೇಶದಲ್ಲಿ ಪತ್ರಕರ್ತರ ಎದುರು ಚುನಾವಣಾ ಆಯೋಗವು ವಿದ್ಯುನ್ಮಾನ ಯಂತ್ರಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಪ್ರದರ್ಶನ ನೀಡುತ್ತಿದ್ದಾಗ ವರದಿಯಾಗಿರುವ ಪ್ರಮಾದ. ಮುಂಬರುವ ಚುನಾವಣೆಗಳಲ್ಲಿ ವಿವಿಪಿಎಟಿ (ವೋಟರ್ ವೆರಿಫೈಯೆಬಲ್ ಪೇಪರ್ ಅಡಿಟ್ ಟ್ರಯಲ್) ವ್ಯವಸ್ಥೆ ಅನುಸರಿಸುತ್ತಿದ್ದು, ಇದನ್ನೇ ಪತ್ರಕರ್ತರಿಗೆ ತೋರಿಸಲಾಗುತ್ತಿತ್ತು. ಈ ವ್ಯವಸ್ಥೆಯಲ್ಲಿ ಮತದ ಬಟನ್ ಒತ್ತಿದ ನಂತರ ಮತದಾರನಿಗೊಂದು ಪಾವತಿ ರೂಪದ ಮುದ್ರಿತ ಕಾಗದ ಸಿಗುತ್ತದೆ. ಅದರಲ್ಲಿ ಮತದಾರ ಯಾರಿಗೆ ಮತ ಚಲಾಯಿಸಿರುವನೆಂಬ ವಿವರವಿರುತ್ತದೆ. ಪ್ರದರ್ಶನ ಸಂದರ್ಭದಲ್ಲಿ ಉಳಿದ ಚಿಹ್ನೆಗಳಿಗೆ ಒತ್ತಿದ ಸಂದರ್ಭದಲ್ಲೂ ದೃಢೀಕರಣ ಚೀಟಿಯಲ್ಲಿ ಕಮಲಕ್ಕೆ ಒತ್ತಿರುವುದಾಗಿ ಮುದ್ರಿತವಾಗಿತ್ತು. ಇದುವೇ ಈಗ ವಿದ್ಯುನ್ಮಾನ ಯಂತ್ರಗಳ ಬಗ್ಗೆ ಹೊಸ ಸಂಶಯಗಳೇಳಲು ಕಾರಣ.

ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗವೂ ವರದಿ ಕೇಳಿದೆ. ಆದರೆ ಪ್ರದರ್ಶನ ನಡೆಸಿದ್ದ ಸ್ಥಳೀಯ ಮುಖ್ಯ ಚುನಾವಣಾಧಿಕಾರಿ ಸಲೇನಾ ಸಿಂಗ್ ಹೇಳುತ್ತಿರುವುದೇ ಬೇರೆ. ‘ಮತಯಂತ್ರವನ್ನು ಸರಿಯಾಗಿ ಆಯೋಜಿಸಿರಲಿಲ್ಲ. ಇದರರ್ಥ ಮತಯಂತ್ರದಲ್ಲಿ ಅಕ್ರಮ ವ್ಯವಸ್ಥೆ ಇರಿಸಲಾಗಿದೆ ಎಂಬುದು ಅಲ್ಲವೇ ಅಲ್ಲ. ‘

ಆದರೆ ಈ ವರದಿ ಹೊರಬರುತ್ತಲೇ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಪ್ರತಿಭಟನೆ ದಾಖಲಿಸಿ, ಮತದಾನವನ್ನು ಮತ್ತೆ ಹಳೆಯ ಮತಪತ್ರ ವ್ಯವಸ್ಥೆಯಂತೆಯೇ ನಡೆಸಬೇಕೆಂದು ಆಗ್ರಹಿಸಿವೆ. ದೆಹಲಿಯ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತಪತ್ರ ಪದ್ಧತಿಯಲ್ಲೇ ನಡೆಯಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗ್ರಹಿಸಿದ್ದಾರೆ. ‘ಯಾವ ಗುಂಡಿ ಒತ್ತಿದರೂ ಕಮಲಕ್ಕೆ ಮತ ಹೋಗಲಿರುವುದು ಸ್ಪಷ್ಟವಾಗಿದೆ. ದೇಶದಲ್ಲಿ ಜನರು ಮತದಾನ ಮಾಡುತ್ತಿದ್ದಾರೋ, ಮತಯಂತ್ರಗಳೋ?’ ಎಂದವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್ ಹೇಳಿರುವುದು- ‘ಮತಯಂತ್ರಗಳ ಬಗ್ಗೆ ನಾನು ಮೊದಲಿನಿಂದಲೂ ಅನುಮಾನ ವ್ಯಕ್ತಪಡಿಸುತ್ತ ಬಂದಿದ್ದೇನೆ. ಈ ವಿಷಯದಲ್ಲಿ ನಾನು ಆಡ್ವಾಣಿ, ಅರವಿಂದ ಕೇಜ್ರಿವಾಲ್ ಇವರೆಲ್ಲರೊಂದಿಗೆ ಸಹಮತ ಹೊಂದಿದ್ದೇನೆ. ಬ್ಯಾಂಕ್ ಗಳ ಖಾತೆಯನ್ನೇ ಪಾಸ್ವರ್ಡ್ ಕಳ್ಳತನ ಮಾಡಿ ಅಪಹರಿಸುವ ಯುಗದಲ್ಲಿ ವಿದೇಶದಿಂದ ತಯಾರಾಗಿ ಬರುವ ಮತಯಂತ್ರದ ಚಿಪ್ಪನ್ನು ಹೇಗೆ ನಂಬೋಣ? ಮುಂದುವರಿದ ರಾಷ್ಟ್ರಗಳೆಲ್ಲ ಮತಪತ್ರವನ್ನೇ ಬಳಸುತ್ತಿರುವಾಗ ನಾವು ಮಾತ್ರ ಏಕೆ ಮತಯಂತ್ರ ನಂಬಿದ್ದೇವೆ?’

ಈ ಬಗ್ಗೆ ಬಿಜೆಪಿ ವಕ್ತಾರರ ಪ್ರತಿಕ್ರಿಯೆ ಹೀಗಿದೆ- ‘ಮತಯಂತ್ರವನ್ನು ಬೇಕಾದಂತೆ ಪರಿವರ್ತಿಸಿಕೊಳ್ಳುವುದಾದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಸೋಲಲೇಬಾರದಾಗಿತ್ತು. ಹಾಗೇನೂ ಆಗಿಲ್ಲ. ಇದು ಸೋತ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ಖುಷಿಯಾಗಿರಿಸುವುದಕ್ಕೆ ಮಾಡುತ್ತಿರುವ ಆರೋಪ ಅಷ್ಟೆ.’

ಅಂದಹಾಗೆ, ನಂಜನಗೂಡು- ಗುಂಡ್ಲುಪೇಟೆಗಳ ಉಪಚುನಾವಣೆಯಲ್ಲಿಯೂ ಮತ ದೃಢೀಕರಣ ಚೀಟಿಯ ವ್ಯವಸ್ಥೆ ಇರಲಿದೆ.

Leave a Reply