ಕಣ್ಣೆದುರಿಗೇ ಕರಗುತ್ತಿರುವ `ದಿ ಗ್ರೇಟ್ ಬ್ಯಾರಿಯರ್ ರೀಫ್’ – ಭೂತಾಪವೇ ಶಾಪ

ಒಂದಷ್ಟು ಹೆಸರುಗಳು ಜನಸಮಾನ್ಯರ ತಲೆಯಲ್ಲೂ ಶಾಶ್ವತವಾಗಿ ನಿಂತುಬಿಟ್ಟಿರುತ್ತವೆ. ಎವರೆಸ್ಟ್ ಶಿಖರದ ಎತ್ತರ, ಪಿರಮಿಡ್ಡುಗಳ ದೈತ್ಯಾಕಾರ ಮುಂತಾದವು. ಮೊದಲನೆಯದು ಪ್ರಕೃತಿ ನಿರ್ಮಿತ, ಎರಡನೆಯದು ಮನುಷ್ಯ ಸಾಧನೆಯ ಪ್ರತೀಕ. ಮೂರನೆಯದು? ಅದು ಸಾಗರಜೀವಿಗಳ ಲಕ್ಷಲಕ್ಷ ವರ್ಷಗಳ ದುಡಿತದ ಪ್ರತೀಕವಾಗಿ ನಿಂತಿರುವ ಆಸ್ಟ್ರೇಲಿಯದ `ದಿ ಗ್ರೇಟ್ ಬ್ಯಾರಿಯರ್ ರೀಫ್’. ಹೆಚ್ಚು ಕಡಿಮೆ ನಮ್ಮ ಹಿಮಾಲಯ ಪರ್ವತದಷ್ಟೇ ಉದ್ದ, ಸುಮಾರು 300 ಕಿಲೋ ಮೀಟರ್ ಅಗಲ. ಇದರ ನೆಲೆ ಸಾಗರದ ಅಂಚಿನಲ್ಲಿ. ಈ ಹವಳ ಜೀವಿಗಳ ಮಹಾ ಸಾಹಸದ ರಚನೆ ಹಾಗೆಯೇ ಉಳಿದಿರಲಿ, ಅದನ್ನು ಆಧರಿಸಿರುವ ಜೀವಿಗಳಿಗೆ ಶಾಶ್ವತ ಆವಾಸ ಸಂರಕ್ಷಣೆಯಾಗಲಿ ಎಂದು ಭಾವಿಸಿ, ಯುನೆಸ್ಕೋ ಅದಕ್ಕೆ ವಿಶ್ವಪರಂಪರಾ ತಾಣದ ಪಟ್ಟ ಕೊಟ್ಟು ಪಟ್ಟಿಯಲ್ಲಿ ಸೇರಿಸಿದೆ. ಚಂದ್ರನ ಮೇಲೆ ನಿಂತು ನೋಡಿದರೆ ಭೂಮಿಯ ಯಾವ ಯಾವ ಲಕ್ಷಣಗಳು ಕಾಣುತ್ತವೋ ಇಲ್ಲವೋ, ಒಂದಂತೂ ನಿಜ, ಚೀನದ ಮಹಾಗೋಡೆ ಕಾಣುತ್ತದೆ ಎನ್ನುವುದು ತೀರ ಉತ್ಪ್ರೇಕ್ಷೆ, ಅವಾಸ್ತವ. ವಾಸ್ತವವಾಗಿ ಚೀನದ ಗೋಡೆಯ ಜೊತೆಗೆ ಹವಳದ ಹುಳುಗಳು ನಿರ್ಮಿಸಿರುವ `ದಿ ಗ್ರೇಟ್ ಬ್ಯಾರಿಯರ್ ರೀಫ್’ನ್ನು ಸುಮಾರು 500 ಕಿಲೋ ಮೀಟರ್ ಎತ್ತರದ ಕಕ್ಷೆಯಲ್ಲಿ ಭೂಮಿಯನ್ನು ಪರಿಭ್ರಮಿಸುವ ಉಪಗ್ರಹಗಳ ಚಿತ್ರಗಳಂತೂ ನಿತ್ಯವೂ ತೋರಿಸಿಕೊಡುತ್ತವೆ.

ಆಸ್ಟ್ರೇಲಿಯದ ಕ್ವೀನ್ಸ್ ಲ್ಯಾಂಡಿಗೆ ಹೊಂದಿಕೊಂಡಿರುವ `ದಿ ಗ್ರೇಟ್ ಬ್ಯಾರಿಯರ್ ರೀಫ್’ ಸದಾ ಸುದ್ದಿಯಲ್ಲಿರುತ್ತದೆ. ಅದೀಗ ವಿಶ್ವವಿಖ್ಯಾತ ಪ್ರವಾಸಿತಾಣ. ಅದರ ವಿಸ್ಮಯಗಳೋ ಒಂದಲ್ಲ, ಹತ್ತಾರು. ಎಲ್ಲ ವಿಚಾರದಲ್ಲೂ ಅದು ನಿಜವಾಗಲೂ `ಗ್ರೇಟ್’. ಈ ಹವಳದ ದಿಬ್ಬ ನಿರಂತರವಾದ ರಚನೆಯಲ್ಲ. 2600 ಕಿಲೋ ಮೀಟರ್ ಉದ್ದಕ್ಕೆ ಸಾಗಿರುವ ದಿಬ್ಬಗಳು, ಒಟ್ಟು ಬಿಡಿಬಿಡಿ 2900 ದಿಬ್ಬಗಳಿಂದಾಗಿವೆ. ಇದನ್ನೆಲ್ಲ ನೆಲದ ಮೇಲೆ ಹರಡಿದರೆ ಇಂದಿನ ಯುನೈಟೆಡ್ ಕಿಂಗ್‍ಡಂ, ಹಾಲೆಂಡ್, ಸ್ವಿಡ್ಜರ್ಲೆಂಡ್ ಈ ಮೂರನ್ನೂ ಅದರ ಮೇಲೆ ಕೂಡಿಸಬಹುದು. ಇನ್ನು ಜೀವಿ ವೈವಿಧ್ಯಕ್ಕೆ ಬಂದರೆ ಅಲ್ಲಿ 300 ಪ್ರಭೇದದ ತಿಮಿಂಗಿಲಗಳಿಗೆ, ಡಾಲ್ಫಿನ್‍ಗಳಿಗೆ ಅದು ಆವಾಸ. ಆರು ಬಗೆಯ ಕಡಲಾಮೆಗಳನ್ನು ಅಲ್ಲಿ ಜೀವಿ ವಿಜ್ಞಾನಿಗಳು ಗುರುತಿಸಿದ್ದಾರೆ. ಗ್ರೇಟ್ ಬ್ಯಾರಿಯರ್ ರೀಫನ್ನು ಅವಲಂಬಿಸಿ 250 ಪ್ರಭೇದದ ಪಕ್ಷಿಗಳು ಬಾಳುವೆ ಮಾಡಿವೆ. 17 ಬಗೆಯ ಸಾಗರ ಹಾವುಗಳಿವೆ. ಇವೆಲ್ಲವನ್ನೂ ಮೀರಿಸುವಂತೆ 1500 ಪ್ರಭೇದದ ಮೀನುಗಳಿವೆ. ಜಗತ್ತಿನ ಶೇ. 10 ಭಾಗದ ಮೀನಿನ ಪ್ರಭೇದಗಳು ಇಲ್ಲೇ ಇವೆ ಇನ್ನುತ್ತಾರೆ.

ಹವಳ ದಿಬ್ಬಗಳನ್ನು ಕಟ್ಟುವ ಹವಳದ ಹುಳುಗಳು ಸುಮಾರು 200 ಲಕ್ಷ ವರ್ಷಗಳಿಂದ ನಿರಂತರವಾಗಿ ದುಡಿದಿವೆ. ಹಾಗೆಯೇ ಈ ಕಾಯಕವನ್ನು ಮುಂದುವರಿಸುವಂತೆ ಮುಂದಿನ ಸಂತಾನಗಳು ದುಡಿಯುತ್ತಿವೆ. ಒಂದರ್ಥದಲ್ಲಿ ಅವು `ಸಾಗರ ಸಾಮ್ರಾಟ’. ಆಸ್ಟ್ರೇಲಿಯದ ಕ್ವೀನ್ಸ್ ಲ್ಯಾಂಡಿನ ಪ್ರದೇಶದಲ್ಲಿ ತೀರದಿಂದ 200ಕಿಲೋ ಮೀಟರ್ ಸಾಗರದೊಳಗಡೆ ಈ ರಚನೆಗಳಿವೆ. ಅಲ್ಲಿ 69,000 ಮಂದಿಗೆ ಇವೇ ಉದ್ಯೋಗ ಕೊಟ್ಟಿವೆ. ಅಷ್ಟೇ ಅಲ್ಲ, ಆಸ್ಟ್ರೇಲಿಯದ ಆರ್ಥಿಕ ಭಂಡಾರಕ್ಕೆ ಪ್ರತಿವರ್ಷ 600 ಕೋಟಿ ಡಾಲರ್ ಆದಾಯ ತರುತ್ತಿವೆ. ಆಸ್ಟ್ರೇಲಿಯಕ್ಕೆ ಪ್ರವಾಸಿಗಳು ಹೋಗಿಬಂದರೆ `ದಿ ಗ್ರೇಟ್ ಬ್ಯಾರಿಯರ್ ರೀಫ್’ ನೋಡಿಬಂದಿರಿ ತಾನೆ? ಎಂಬುದು ಮಧ್ಯಮ ವರ್ಗದ ಪ್ರಶ್ನೆಯೂ ಹೌದು.

ಇದು ಒಂದೆಡೆಯಾದರೆ, ಇನ್ನೊಂದೆಡೆ ಜಗತ್ತೇ ಒಂದು ಬಗೆಯ ವಿಪ್ಲವ ಅನುಭವಿಸುತ್ತಿವೆ. ಅವೆಷ್ಟೋ ನೈಸರ್ಗಿಕ ಪ್ರಕ್ರಿಯೆಗಳು ಬಹು ಮಿತಕಾಲದಲ್ಲಿ ಪುನರಾವರ್ತಿಸುತ್ತಿವೆ. ಇದ್ದಕ್ಕಿದ್ದಂತೆ ಮಳೆ, ದೀರ್ಘಕಾಲದ ಬರ, ಇದ್ದಕ್ಕಿದ್ದಂತೆ ನೆರೆ, ಸಾವಧಾನ ಗತಿಯ ಹಿಮನದಿಗಳ ಹಿನ್ಸರಿತ, ಎಲ್ಲೋ ಬಿರುಗಾಳಿ, ಎಲ್ಲೋ ಚಂಡಮಾರುತ-ಪ್ರಕೃತಿ ತನ್ನ ಲಯ ತಪ್ಪುತ್ತಿದೆ ಎನ್ನುವುದಕ್ಕೆ ನಮ್ಮ ಕಣ್ಣಮುಂದೆ ಆಗುತ್ತಿರುವ ದಿಢೀರ್ ಬದಲಾವಣೆಯೇ ಸಾಕು. ಭೂಮಿಗೆ ಸದ್ಯಕೆ ಅತೀವ ದುರ್ಗತಿ ಬಂದಿರುವುದು ಭೂಉಷ್ಣತೆಯ ಏರಿಕೆಯಿಂದಾಗಿ. ಆ ಬಿಸಿ ಈಗ ಸಾಗರಕ್ಕೂ ತಟ್ಟಿದೆ. `ದಿ ಗ್ರೇಟ್ ಬ್ಯಾರಿಯರ್ ರೀಫ್’ ಭೂಉಷ್ಣತೆಯ ಹೆಚ್ಚಳಕ್ಕೆ ಬೇರೆಯದೇ ಆದ ರೀತಿಯಲ್ಲಿ ಪ್ರಕ್ರಿಯಿಸುತ್ತಿದೆ. ಕಳೆದ ದಶಕಗಳಿಂದ ಹಬಳ ದಿಬ್ಬಗಳು ಏಕಾಏಕಿ ಬಿಳುಚಿಕೊಳ್ಳುತ್ತಿವೆ. ಹಿಂದೆಲ್ಲ ಅಪರೂಪಕ್ಕೊಮ್ಮೆ ಇದು ಸಂಭವಿಸುತ್ತಿತ್ತು. 2016ರಲ್ಲಿ ನಾಲ್ಕು ಬಾರಿ ಈ ಅಹಿತಕರ ಪ್ರಕ್ರಿಯೆ ಘಟಿಸಿ, ಹಬಳ ದಿಬ್ಬಗಳನ್ನು ಸಂರಕ್ಷಿಸಲು ಹೊರಟವನ್ನು ದಿಕ್ಕುಗೆಡಿಸಿದೆ. ಹವಳದ ದಿಬ್ಬಗಳು ಅನೇಕ ಬಗೆಯು ಆತಂಕಕ್ಕೆ ತುತ್ತಾಗಿವೆ. ಕಬ್ಬಿನ ಗದ್ದೆಗಳಿಂದ ಹರಿದುಬರುತ್ತಿದ್ದ ಕೀಟನಾಶಕ ನೇರವಾಗಿ ನದಿ, ತೊರೆಗಳ ಮೂಲಕ ಈ ಭಾಗದಲ್ಲಿ ಹವಳ ದಿಬ್ಬಗಳು ಆಶ್ರಯ ನೀಡಿದ ಜೀವಿಗಳಿಗೆ ಕುತ್ತು ತಂದಮೇಲೆ ಕಾನೂನು ಬಿಗಿಗೊಳಿಸಿ ಅದನ್ನು ತಹಬಂದಿಗೆ ತಂದಿದೆ. ಆದರೆ ಇನ್ನೊಂದು ಬಗೆಯ ಕಂಟಕಕ್ಕೆ ಕೇವಲ ಆಸ್ಟ್ರೇಲಿಯ ಖಂಡವನ್ನಷ್ಟೇ ದೂರಿದರೆ ಸಾಲದು. ಆಧುನಿಕ ಕೈಗಾರಿಕೆಗಳಿಂದ ತಟ್ಟಿದ ಶಾಪ ಅದು. ಆಕಾಶಕ್ಕೆ ಹೇಗೆ ಸರಹದ್ದುಗಳಿಲ್ಲವೋ ಸಮುದ್ರಗಳಿಗೂ ಅಷ್ಟೇ. ಎಲ್ಲೋ ಸತ್ತ ತಿಮಿಂಗಿಲ ನಮ್ಮ ಕರಾವಳಿಗೆ ತೇಲಿ ಬರುತ್ತವಲ್ಲ ಹಾಗೆ.

ಭೂಮಿಯ ಶಾಖ ಹೆಚ್ಚಿಸುವ ಉಷ್ಣವರ್ಧಕ ಅನಿಲಗಳಲ್ಲಿ ಕಾರ್ಬನ್ ಡೈ ಆಕ್ಸೈಡ್ ಪಾತ್ರ ದೊಡ್ಡದು. ವಿಶೇಷವೆಂದರೆ ಸಾಗರದ ನೀರಿನಲ್ಲಿ ಅದು ಸುಲಭವಾಗಿ ವಿಲೀನಗೊಂಡು ಕಾರ್ಬನಿಕ ಆಮ್ಲವಾಗುತ್ತದೆ. ಇದು ಹೆಚ್ಚಾದಷ್ಟೂ ಕ್ಯಾಲ್ಸಿಯಂ ಸಂಯೋಜನೆಯಿಂದಾದ ಹವಳಗಳ ಗೂಡಿನ ಹೊರಕವಚ ಪ್ರತಿಕ್ರಿಯಿಸುತ್ತದೆ, ಕೊನೆಗೆ ಬಿಳುಚಿಕೊಂಡು ನಾಶವಾಗುತ್ತವೆ. ಇದರ ಜೊತೆಗೆ ಹವಳದ ಗೂಡುಗಳಲ್ಲಿ ಆಶ್ರಯ ಪಡೆದಿರುವ ಪಾಚಿ ಕೂಡ ನೀರಿನ ಶಾಖ ಹೆಚ್ಚಿದಂತೆ ಕಳಚಿಕೊಳ್ಳುತ್ತವೆ. ಈ ಅಧ್ವಾನಗಳನ್ನು ಆಸ್ಟ್ರೇಲಿಯ ಖಂಡ ತಡೆಯಲು ಆಗುತ್ತಿಲ್ಲ, ಏಕೆಂದರೆ ಇದು ಜಾಗತಿಕ ಸಮಸ್ಯೆ. ಅಭಿವೃದ್ಧಿಯಾಗಿರುವ, ಆ ಹಾದಿಯಲ್ಲಿರುವ ಎಲ್ಲ ದೇಶಗಳೂ ಕಾರ್ಬನ್ ಡೈ ಆಕ್ಸೈಡಿನ ಉತ್ಪಾದಕ ದೇಶಗಳೇ. ಹಲವು ಶೃಂಗ ಸಭೆಗಳಾದರೂ ಇನ್ನೂ ಕಾರ್ಬನ್ ಕಡಿತ ಚೌಕಾಸಿಯಲ್ಲೇ ಎಳೆದಾಡುತ್ತಿದೆ. ಅಮೆರಿಕ, ತನ್ನ ದೇಶದ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಕಡಿತಗೊಳಿಸಲು ಬಿಲ್‍ಕುಲ್ ಒಪ್ಪುತ್ತಿಲ್ಲ. ಇದರ ಕರಾಮತ್ತು ಇತರ ದೇಶಗಳಿಗೂ ತಿಳಿದಿದೆ. ಒಂದಂಥೂ ಸ್ಪಷ್ಟ, ನಮ್ಮ ವಾದ-ವಿವಾದಗಳೇನೇ ಇರಲಿ, ನಿಸರ್ಗ ನಮ್ಮ ಅಂತಿಮ ತೀರ್ಪಿಗಾಗಿ ಕಾಯುವುದಿಲ್ಲ. ಇತ್ತೀಚೆಗೆ ಇನ್ನೊಂದು ಬಗೆಯ ಅಪಸ್ವರಗಳು ಕೇಳಿಬರುತ್ತಿವೆ. ಇದು ಇಡೀ ಭೂಮಿಯ ಭವಿಷ್ಯವನ್ನೇ ಹಾಳು ಮಾಡುವಂತಹ ಯೋಚನೆಗಳು. ಹವಳಗಳಿಗೆ ಹೇಗೆ ರಿಪೇರಿ ಮಾಡಿಕೊಳ್ಳಬೇಕೆಂಬುದು ಗೊತ್ತು. ನೀವು ಏಕೆ ತಲೆ ಕೆಡಿಸಿಕೊಳ್ಳಬೇಕು? ಎಂಬ ಉದಾರವಾದಿಗಳು ಈಗ ಅಡ್ಡದಾರಿಗೆ ತಿರುಗಿಸುತ್ತಿದ್ದಾರೆ. ಮನುಷ್ಯ ಈ ಗ್ರಹದಲ್ಲಿ ಬದುಕುವುದೇ ದುಸ್ತರ ಎನ್ನುವ ಹಂತ ತಲುಪಿದಾಗ ಮಾತ್ರ ಬಹುಶಃ ನಾವು ಪಾಠ ಕಲಿಯುತ್ತೀವೋ ಏನೋ. ನಮ್ಮ ಪ್ರತಿ ಕ್ರಿಯೆಗೂ ನಿಸರ್ಗ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಲಘುವಾಗಿ ಪರಿಗಣಿಸಬಾರದು ಎನ್ನುವುದಕ್ಕೆ ಹವಳ ದಿಬ್ಬಗಳ ಅವನತಿಯೇ ಸಾಕ್ಷಿ.

Leave a Reply