ಏಷ್ಯದ ಅತಿ ಉದ್ದದ ಚೆನಾನಿ-ನಶ್ರಿ ಸುರಂಗ ಲೋಕಾರ್ಪಣೆ, ಜಮ್ಮು-ಕಾಶ್ಮೀರದ ಎಂಜಿನಿಯರಿಂಗ್ ಅದ್ಭುತಕ್ಕೆ ಪ್ರತ್ಯೇಕತಾವಾದಿಗಳದ್ದೇಕೆ ಆಕ್ಷೇಪಣೆ?

ಡಿಜಿಟಲ್ ಕನ್ನಡ ಟೀಮ್:

ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ, ಕಳೆದ ಐದು ವರ್ಷಗಳ ಶ್ರಮದಿಂದ ರೂಪುಗೊಂಡಿರುವುದು ಚೆನಾನಿ- ನಶ್ರಿ ಸುರಂಗಮಾರ್ಗ. ಇಂದು ಪ್ರಧಾನಿ ನರೇಂದ್ರ ಮೋದಿ ಇದನ್ನು ಲೋಕಾರ್ಪಣೆ ಮಾಡುವಾಗ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳ ಗುಂಪು ಈ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದೆ.

ದೇಶವೇ ಹೆಮ್ಮೆಪಡಬೇಕಾದ ಮೂಲಸೌಕರ್ಯದ ಕೆಲಸವೊಂದು ಸೇವೆಗೆ ತೆರೆದುಕೊಳ್ಳುತ್ತಿದ್ದರೆ ಪ್ರತ್ಯೇಕತಾವಾದಿಗಳಿಗೆ ಏನು ಉರಿ? ಈ ಪ್ರಶ್ನೆಗೆ ಉತ್ತರ ದೊರಕಿಸಿಕೊಳ್ಳುವುದಕ್ಕೆ ಮುಂಚೆ ಈ ಸುರಂಗಮಾರ್ಗದ ವೈಶಿಷ್ಟ್ಯಗಳತ್ತ ಗಮನಹರಿಸಬೇಕು.

  • ಇದು ಚೆನಾನಿ ಮತ್ತು ನಶ್ರಿ ನಡುವಿನ 9.2 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಜಮ್ಮು ಮತ್ತು ಶ್ರೀನಗರದ ಅಂತರವನ್ನು 30 ಕಿ.ಮೀಗಳಷ್ಟು ಕಡಿಮೆ ಮಾಡಲಿರುವ ಈ ಸುರಂಗಮಾರ್ಗ, ಪ್ರಯಾಣದ ಅವಧಿಯನ್ನು 2 ತಾಸು ಕಡಿಮೆಗೊಳಿಸುತ್ತದೆ.
  • 3720 ಕೋಟಿ ರುಪಾಯಿಗಳ ವೆಚ್ಚದಲ್ಲಿ ನಿರ್ಮಿತವಾಗಿರುವ ಈ ಸುರಂಗವು ಪ್ರತಿದಿನ ₹27 ಲಕ್ಷ ಮೌಲ್ಯದ ಇಂಧನವನ್ನು ಉಳಿಸಲಿದೆ.
  • ಕೇವಲ ಅಂತರ ಕಡಿಮೆ ಮಾಡಿರುವುದಷ್ಟೇ ಅಲ್ಲದೇ ಈ ಹಿಂದಿನ ಹಿಮಪಾತ, ಭೂಕುಸಿತಗಳ ಅಪಾಯವನ್ನು ಇದು ನಿವಾರಿಸಿದೆ. ಪಂತಿತಾಪ್ ಪ್ರಾಂತ್ಯದ ಅರಣ್ಯ ಸಂರಕ್ಷಣೆಯಲ್ಲೂ ಈ ಸುರಂಗ ಕೊಡುಗೆ ನೀಡುತ್ತದೆ. ದೊಡಾ, ಭಂಡೆರ್ವಾ, ಕಿಶ್ತಾವರಗಳನ್ನೂ ಮಾರ್ಗಮಧ್ಯದಲ್ಲಿ ಚಿಕ್ಕ ಸುರಂಗಗಳ ಮೂಲಕ ಸಂಪರ್ಕಿಸುತ್ತದೆ.
  • ಸುರಂಗಮಾರ್ಗಕ್ಕೆ ಅಗತ್ಯವಾದ ಎಲ್ಲ ಭದ್ರತೆಗಳನ್ನು ಕೈಗೊಳ್ಳಲಾಗಿದೆ. 5 ಮೀ. ಗಿಂತ ಎತ್ತರದ ವಾಹನಗಳು, ತೈಲ ಟ್ಯಾಂಕರುಗಳಿಗೆ ಪ್ರವೇಶವಿಲ್ಲ. ಪ್ರತಿ 300 ಮೀಟರಿಗಳಿಗೆ ಅಘ್ನಿ ಆಕಸ್ಮಿಕ ತಪ್ಪಿಸುವ ಪಂಖಗಳು, ತುರ್ತು ನಿರ್ಗಮನಕ್ಕೆ ಬೇಕಾದ ದ್ವಾರಗಳಿವೆ. ಪ್ರತಿ ನೂರು ಮೀಟರಿಗೆ ಇರುವ ಕೆಮರಾಗಳು ಎಲ್ಲ ಚಲನವಲನಗಳನ್ನು ದಾಖಲಿಸುತ್ತ, ಯಾವುದೇ ವ್ಯತ್ಯಯವಾದರೂ ನಿರ್ವಹಣಾ ಪಡೆಗೆ ಸಂದೇಶ ಕಳುಹಿಸುತ್ತವೆ. ಪ್ರತಿ 150 ಮೀಟರಿಗೆ ಪ್ರಯಾಣಿಕರು ತುರ್ತು ಸಂದೇಶ ಕಳುಹಿಸಬಲ್ಲ ಪೆಟ್ಟಿಗೆಗಳಿವೆ. ಇಲ್ಲಿಯೇ ಪ್ರಥಮ ಚಿಕಿತ್ಸೆ ಪರಿಕರಗಳೂ ಇರುತ್ತವೆ.
  • ಸುರಂಗಪ್ರವೇಶಿಸಿದಾಗ ಮೊಬೈಲ್ ಫೋನ್ ಸಂಕೇತಗಳು ಸಹ ತಪ್ಪುವುದಿಲ್ಲ.

ಸರಿ. ಇಷ್ಟೆಲ್ಲ ವೈಶಿಷ್ಟ್ಯಗಳಿರುವ ಸುರಂಗವನ್ನು ಪ್ರತ್ಯೇಕತಾವಾದಿಗಳೇಕೆ ವಿರೋಧಿಸುತ್ತಾರೆ? ಏಕೆಂದರೆ ಸ್ಥಳೀಯರ ಹತಾಶೆಯೇ ಇವರಿಗೆ ಬಂಡವಾಳ. ಅಭಿವೃದ್ಧಿ ಮತ್ತು ಆಕಾಂಕ್ಷೆಗಳನ್ನು ಬೆಳೆಸಿಕೊಂಡು ಆ ರಾಜ್ಯದ ಯುವಕರು ಬೆಳೆಯಹೊರಟರೆ ಇವರ ಕಲ್ಲು ತೂರುವವರ ಪಡೆಯನ್ನು ಸೇರುವವರ್ಯಾರಿರುವುದಿಲ್ಲ. ಭಾರತದ ಬಗ್ಗೆ ಪ್ರೀತಿ ಮೂಡಿಸುವ ಯಾವುದೇ ಕಾರ್ಯಗಳು ಅಲ್ಲಿ ನಡೆಯುವುದನ್ನು ಈ ಪ್ರತ್ಯೇಕತಾವಾದಿಗಳು ಸಹಿಸರು. ಅಲ್ಲದೇ ಇವತ್ತು ಜಮ್ಮು-ಕಾಶ್ಮೀರ ಹಿಂಸಾಗ್ರಸ್ತ ಎಂಬ ಸುದ್ದಿ ಓದಿದಾಗಲೆಲ್ಲ ನಾವು ಗಮನಿಸಬೇಕಿರುವುದು ಹೀಗೆ ಹಿಂಸೆ- ಕೋಲಾಹಲಗಳಿರುವುದು ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ. ಶಾಂತ ಜಮ್ಮುವಿನೊಂದಿಗೆ ಕಾಶ್ಮೀರದ ಸಂವಾದ- ಕೂಡುವಿಕೆ ಹೆಚ್ಚಾದಷ್ಟೂ ಪ್ರತ್ಯೇಕತಾವಾದಿಗಳಿಗೆ ತಮ್ಮ ಒಡೆಯುವ ಕಾರ್ಯಸೂಚಿ ವಿಸ್ತರಿಸುವುದು ಕಷ್ಟ.

Leave a Reply