ಹ್ಯಾಕಥಾನ್ 2017: ಇದುವೇ ನವ ಯುವ ಭಾರತದ ಭರವಸೆಯ ಹೆಜ್ಜೆ!

ಪ್ರವೀಣ್ ಕುಮಾರ್ ಶೆಟ್ಟಿ, ಕುವೈತ್

ಅದೊಂದು ಕಾಲವಿತ್ತು, ಕೈದಿಗಳನ್ನು ಹಿಡಿತಂದು ಕೋಟೆಕೊತ್ತಲಗಳನ್ನು ಕಟ್ಟಿ ಸಾಮ್ರಾಜ್ಯವನ್ನು ಸುರಕ್ಷಿತಗೊಳಿಸಿಕೊಂಡು, ತನ್ನ ಪ್ರಜೆಗಳಿಗೆ ಗರಿಷ್ಠ ಭದ್ರತೆ ಒದಗಿಸಿಕೊಡುತ್ತಿದ್ದರು. ನಮಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶಕಟ್ಟಬೇಕು ಎಂದು ರಾಜಕಾರಣಿಗಳು ಬೊಬ್ಬಿರಿದು ಭಾಷಣ ಬಿಗಿದಿದ್ದನ್ನು ಕೇಳಿಸಿಕೊಂಡೆ ಬಂದ ನಮಗೆ ಕೊನೆಗೂ ದೇಶ ಕಟ್ಟುವುದೆಂದರೆ ಏನು ಎಂಬುದು ತಿಳಿಯಲೇ ಇಲ್ಲ. ರಸ್ತೆ, ಕಟ್ಟಡ, ಆಸ್ಪತ್ರೆ, ಶಾಲೆ, ಬ್ಯಾಂಕು, ಕಾಲುವೆ ನಿರ್ಮಾಣದಂತಹ ಪ್ರಮುಖ ಕೆಲಸವನ್ನು ಗುತ್ತಿಗೆದಾರರೇ ದುಡ್ಡಿಗಾಗಿ ನಿರ್ಮಿಸುತ್ತಿರುವಾಗ ಸರಕಾರಿ ಉದ್ಯೋಗಿಯಲ್ಲದ ಜನಸಾಮಾನ್ಯನಿಗೆ ಮಾತ್ರ ದೇಶಕಟ್ಟಲು ಅವಕಾಶ ಮತ್ತು ವೇದಿಕೆ ಸಿಗುವುದು ಬಹಳ ಕಡಿಮೆಯೇ. ಯೂರಿಯಾಗೆ ಕಹಿ ಬೇವು ಸೇರಿಸಿದರೆ ಯೂರಿಯಾ ಕಳ್ಳತನ ತಪ್ಪಿಸಿ ದೇಶದ ಖಜಾನೆಯಲ್ಲಿ ಹಣ ಉಳಿಸಬಹುದು ಎಂದು ಜನಸಾಮಾನ್ಯನೊಬ್ಬ 2007 ರಲ್ಲಿ ಕೊಟ್ಟ ಪುಕ್ಕಟೆ ಸಲಹೆಯನ್ನೇ ಜಾರಿಗೆ ತರಲು ಈ ದೇಶಕ್ಕೆ ಇಸವಿ 2015 ಬರಬೇಕಾಯಿತು.

ಸರ್ಕಾರಗಳು ಜನಸಾಮಾನ್ಯನ ಪ್ರತಿಭೆ ಮತ್ತು ಆಕಾಂಕ್ಷೆಗಳಿಗೆ ನೀರೆರೆಯದಿದ್ದಾಗ ಎರಡು ಎಡವಟ್ಟುಗಳು ಸಂಭವಿಸಿದವು. ವೇದಿಕೆ ದೊರೆಯದ ಪ್ರತಿಭಾನ್ವಿತರೆಲ್ಲ ಬೇರೆ ದೇಶಗಳಲ್ಲಿ ಭವಿಷ್ಯ ಹುಡುಕಿಕೊಂಡರೆ, ಅರ್ಹತೆಯಿಲ್ಲದವರೆಲ್ಲ ಸರ್ಕಾರಿ ಕೆಲಸಗಳ ಗುತ್ತಿಗೆ ಹಿಡಿದುಕೊಂಡರು. ಪರಿಣಾಮವಾಗಿ ವೈಜ್ಞಾನಿಕವಾಗಿ ನಿರ್ಮಿಸಬೇಕಾದ ಕಾಮಗಾರಿಗಳು ಕಂಟ್ರಾಕ್ಟುದಾರರಿಗೆ ಹಣಮಾಡಿಕೊಳ್ಳುವ ದಂಧೆಯಾಗಿಬಿಟ್ಟಿತು.

ಇಂಜಿನಿಯರಿಂಗ್ ಕ್ಷೇತ್ರದವರಿಗೆ ಸರಕಾರಿ ಉದ್ಯೋಗವೊಂದನ್ನು ಬಿಟ್ಟರೇ ನೇರವಾಗಿ ದೇಶಕ್ಕಾಗಿ ಕೆಲಸ ಮಾಡುವಂತೆ ಯಾವ ಸರಕಾರವೂ ಕರೆಕೊಡಲು ಇಲ್ಲ ಮತ್ತು ಕರೆಕೊಡುವ ಬಗ್ಗೆ ತಲೆಕೆಡಿಸಿಕೊಳ್ಳಲೂ ಇಲ್ಲ. ವೈದ್ಯಕೀಯ ಶಾಸ್ತ್ರದವರನ್ನು, ಸರ್ಕಾರಿ ಆಸ್ಪತ್ರೆಗಳಿಗೆ ಸೇರಿಸಿ, ಕುತ್ತಿಗೆಗೊಂದು ಸ್ಟೇತಾಸ್ಕೋಪ್ ನೇತಾಹಾಕಿಸಿದ್ದನ್ನು ಬಿಟ್ಟರೇ, ಅಮೇರಿಕಾದಿಂದಲೇ ನಾವ್ಯಾಕೇ ಹೃದಯಸಂಬಂಧಿ ಕಾಯಿಲೆಗಳಿಗೆ ಅಧಿಕ ಬೆಲೆತೆತ್ತು ಉಪಕರಣ ತರಿಸಿಕೊಳ್ಳಬೇಕು, ನೀವೆಲ್ಲಾ ಸೇರಿ ಯಾಕೇ ಸಂಶೋಧನೆ ಮಾಡಬಾರದು ಎಂದು ಸವಾಲು ಹಾಕಲೇ ಇಲ್ಲ. ಸಂಶೋಧನೆ ಮಾಡುವವರಿಗೆ ಈ ದೇಶದಲ್ಲಿ ವ್ಯವಸ್ಥೆ ಇದೆ, ಹಣ ಇದೆ. ಆದರೆ ಪ್ರತಿಭಾವಂತರು ಮಾತ್ರ ಅದರಿಂದ ದೂರ ಉಳಿದರು. ಸತ್ಯ ನಾದೆಲ್ಲಾದಂತವರೆಲ್ಲಾ ದೂರದ ಅಮೇರಿಕಾ ಸೇರಿಕೊಂಡುಬಿಟ್ಟರೇ, ನಮ್ಮಲ್ಲಿ ಯಾವುದಕ್ಕೂ ಬೇಡದವರು JNU ಅಂತಹ ವಿಶ್ವವಿದ್ಯಾಲಯದ ಸರ್ಕಾರಿ ವೆಚ್ಚದಲ್ಲಿ ಪುಕ್ಕಟೆಯಾಗಿ ಐದಾರು ವರ್ಷ ಕಳೆದು, ಕಡೆಗೊಂದು ದಿನ ಕೆಲಸಕ್ಕೆ ಬಾರದ ಪಿಎಚ್ಡಿ ಬರೆದು, ಘೋಷಣೆ ಕೂಗಿಕೊಂಡು ಜೀವನ ಮಾಡುತ್ತಿದ್ದಾರೆ.

ಇವೆಲ್ಲಾ ನಿರಾಶೆ ಹತಾಶೆ ಮತ್ತು ಕಳೆದ ಆರವತ್ತು ವರ್ಷಗಳ ಅವ್ಯವಸ್ಥೆಯ ಆಗರಗಳ ನಡುವೆ ಕೇಂದ್ರ ಸರ್ಕಾರದ ಹ್ಯಾಕಥಾನ್ ವೇದಿಕೆ ನಿಜಕ್ಕೂ ಗಮನ ಸೆಳೆಯುತ್ತದೆ. ದೆಹಲಿಯಲ್ಲಿ ಶನಿವಾರ (ಏಪ್ರಿಲ್1)ರಿಂದ ಎರಡು ದಿನಗಳವರೆಗೆ ನಡೆದ Smart India Hackathon 2017. ಈ ಕಾರ್ಯಕ್ರಮದಲ್ಲಿ ಒಟ್ಟು 10,000 ದಷ್ಟು ವಿದ್ಯಾರ್ಥಿ ಪರಿಣಿತರು ದೇಶದ ವಿವಿಧ ಭಾಗಗಳಿಂದ ಬಂದು ಭಾಗಿಯಾಗಿದ್ದಾರೆ. ಸಾಮಾಜಿಕವಾಗಿ ಪ್ರಾಮುಖ್ಯತೆಯ ಒಟ್ಟು 598 ಸಮಸ್ಯೆಗಳನ್ನು ಕೇಂದ್ರದ ಮೋದಿ ಸರಕಾರವು ಪಟ್ಟಿ ಮಾಡಿಕೊಂಡಿದ್ದು, ಇದೆಲ್ಲವುದಕ್ಕೂ ಈ ವಿದ್ಯಾರ್ಥಿ ಪರಿಣಿತರ ತಂಡವು ಒಟ್ಟು 1,266 ವಿವಿಧ ತಂಡಗಳಾಗಿ ವಿಚಾರ ವಿಮರ್ಶೆ ನಡೆಸಿ ಮುಂದಿನ 36 ಗಂಟೆಗಳಲ್ಲಿ ತಂತ್ರಜ್ಞಾನ ಸಂಬಂಧಿ ಪರಿಹಾರವನ್ನು ಸೂಚಿಸಲಿದ್ದಾರೆ. ರೈಲ್ವೇ ಹಳಿಗಳನ್ನು ಬಿರುಕು ಬಿಡುವುದನ್ನು ಪೂರ್ವಭಾವಿಯಾಗಿ ತಿಳಿಸಿಕೊಡುವ ತಂತ್ರಜ್ಞಾನ, ಹಗಲಿನ ಸಮಯದಲ್ಲಿ ರಸ್ತೆದೀಪವನ್ನು ತನ್ನಿಂದ ತಾನೆ ನಂದಿಸುವುದು, ಅಂತರ್ಜಾಲ ಮುಖೇನ ಹೆದ್ದಾರಿ ಕರಪಾವತಿ, ಭಾರತದಲ್ಲಿ ಹೆದ್ದಾರಿಗಳಲ್ಲಿ ಮೊಬೈಲ್ ಮೆಕ್ಯಾನಿಕ್ ವ್ಯವಸ್ಥೆ, ಭಾರತೀಯ ರೈಲ್ವೇಯಲ್ಲಿ ಸ್ವಯಂಚಾಲಿತ ಟಿಕೆಟ್ ಪರಿಶೀಲಿಸುವ ತಂತ್ರಜ್ಞಾನ, ಚಿಲ್ಲರೆ ವ್ಯಾಪಾರಿಗಳು ಮತ್ತು ಕೃಷಿಕರ ನಡುವೆ ಸಂಪರ್ಕ ಕಲ್ಪಿಸುವ ತಂತ್ರಜ್ಞಾನ, ಸರ್ಕಾರಿ ಕಂಪ್ಯೂಟರ್ಗಳ ಮುಖೇನ ವೈಯಕ್ತಿಕ ವಿಂಚಂಚೆಗಳಿಗೆ ಪ್ರವೇಶಿಸದಂತೆ ತಡೆಯುವ ತಂತ್ರಜ್ಞಾನ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಳಿಗೆ ಪರಿಹಾರ ಸೂಚಿಸಲಿದ್ದಾರೆ. ವಿದ್ಯಾರ್ಥಿಗಳು ಸೂಚಿಸಿದ ಈ ಎಲ್ಲಾ ಪರಿಹಾರಗಳನ್ನು ಸರಕಾರವು ಸೂಕ್ತ ತಜ್ಞರ ಮಾರ್ಗದರ್ಶನದಲ್ಲಿ ಅವಲೋಕಿಸಿ ದೇಶದ ಒಟ್ಟು 26 ಸಚಿವಾಲಯಗಳು ತಮ್ಮ ಆಡಳಿತ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಲಿವೆ.

ಸರ್ಕಾರದೊಂದಿಗೆ ನೇರವಾಗಿ ಕೆಲಸ ಮಾಡುವುದಕ್ಕೆ ವೇದಿಕೆ ದೊರಕಿಸಿಕೊಡುವ ಇಂಥ ಅವಕಾಶಗಳು ನವೀನ, ಉದಾತ್ತ ಪ್ರಯತ್ನಗಳಲ್ಲದೇ ಇನ್ನೇನು? ಇದು ಹೊಸ ತಲೆಮಾರಿನ ಹುಡುಗರಲ್ಲಿ ತುಂಬುವಂಥ ವಿಶ್ವಾಸ, ತಮ್ಮ ಪ್ರತಿಭೆಗೆ ವೇದಿಕೆ ಒದಗಿಸುತ್ತಿರುವ ದೇಶದ ಬಗ್ಗೆ ಅರಳುವ ಅಭಿಮಾನ ಇವೆಲ್ಲ ಹೊಸ ಭಾರತ ನಿರ್ಮಾಣಕ್ಕೆ ಅಗತ್ಯವಾಗಿ ಸಹಕರಿಸಲಿವೆ. ನಮ್ಮದು ಯುವ ಭಾರತ ಎಂಬ ಮಾತನ್ನು ಭಾಷಣಕ್ಕಷ್ಟೇ ಸೀಮಿತವಾಗಿಸದೇ ಯುವಶಕ್ತಿಯ ಸಮರ್ಪಕ ವಿನಿಯೋಗಕ್ಕೆ ಮೋದಿ ಸರ್ಕಾರ ಇಟ್ಟಿರುವ ಹೆಜ್ಜೆ ಅಭಿನಂದನಾರ್ಹ.

Leave a Reply