ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದೆಡೆ ದಿವ್ಯ ನಿರ್ಲಕ್ಷ್ಯ, ಪ್ರಾದೇಶಿಕ ರಾಜಕಾರಣವಿರದಿದ್ದರೆ ನಮಗೊಲಿಯದು ಪ್ರಾಬಲ್ಯ

.

ಟಿ.ಎ.ನಾರಾಯಣಗೌಡ

ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

ಆಧುನಿಕ ಜಗತ್ತಿನ ಮಾಯಾವ್ಯೂಹದಲ್ಲಿ ಸಿಲುಕಿಕೊಂಡಿರುವ ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೇನೋ ಎಂಬ ಆತಂಕ ಕಾಡುತ್ತಲೇ ಇದೆ. ಕರ್ನಾಟಕ ರಾಜ್ಯ ಉದಯವಾಗಿ ಇಷ್ಟು ವರ್ಷಗಳಾದರೂ ಕನ್ನಡಿಗರ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಆಳುವ ಸರ್ಕಾರಗಳು ಬದಲಾದರೂ ಸಮಸ್ಯೆಗಳು ಬದಲಾಗಿಲ್ಲ. ಹೊಸ ಸಮಸ್ಯೆಗಳು ದಿನಕ್ಕೊಂದರಂತೆ ಹುಟ್ಟಿಕೊಳ್ಳುತ್ತಲೇ ಇವೆ. ಹಾಗಿದ್ದರೆ ಇದೆಲ್ಲಕ್ಕೂ ಒಂದು ತಾರ್ಕಿಕ ಅಂತ್ಯ ಇಲ್ಲವೇ? ಕನ್ನಡಿಗರು ಹೀಗೆಯೇ ಸಮಸ್ಯೆಗಳನ್ನು ಹೊದ್ದುಕೊಂಡೇ ಬದುಕಬೇಕೆ?

ಒಕ್ಕೂಟದಲ್ಲಿ ಕರ್ನಾಟಕ

ಒಂದು ದೇಶವಾಗಿ ರೂಪುಗೊಳ್ಳುವ ವೇಳೆ ಇತರೆ ಸಂಸ್ಥಾನಗಳ ಹಾಗೆ ಮೈಸೂರು ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಲಾಯಿತು. ಇತರ ಸಂಸ್ಥಾನಗಳಿಗೆ ಹೋಲಿಸಿದರೆ ಮೈಸೂರು ಸಂಸ್ಥಾನ ಅತ್ಯಂತ ಶ್ರೀಮಂತವಾಗಿತ್ತು. ಜನರು ನೆಮ್ಮದಿಯಾಗಿದ್ದರು. ನಂತರ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ವಿವಿಧ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಕರ್ನಾಟಕ ಒಂದಾಯಿತು. ಏಕೀಕೃತ ಕರ್ನಾಟಕ ರಚನೆಯಾಯಿತು.

ಆದರೆ ಭಾರತ ಒಕ್ಕೂಟದಲ್ಲಿ ನಮಗೆ ಗೌರವಯುತ ಸ್ಥಾನಮಾನ, ಪಾಲು, ಅಧಿಕಾರ, ಸೌಲಭ್ಯಗಳು ದೊರೆತಿದೆಯೇ? ಖಂಡಿತಾ ಇಲ್ಲ. ದೇಶದ ಅಭಿವೃದ್ಧಿಯಲ್ಲಿ ಸಿಂಹಪಾಲು ನೀಡುತ್ತ ಬಂದಿರುವ ಕರ್ನಾಟಕವನ್ನು ದೇಶವನ್ನು ಆಳಿಕೊಂಡು ಬಂದ ಸರ್ಕಾರಗಳು ಮಲತಾಯಿ ಧೋರಣೆಯಿಂದಲೇ ನೋಡುತ್ತ ಬಂದಿವೆ. ತೀರಾ ಬರ ಪರಿಹಾರ, ನೆರೆ ಪರಿಹಾರದಂಥ ವಿಷಯದಲ್ಲಿ ತಾರತಮ್ಯ ಮಾಡಿಕೊಂಡೇ ಬರಲಾಗುತ್ತಿದೆ. ಕೇಂದ್ರೀಯ ನ್ಯಾಯಸಂಸ್ಥೆಗಳೂ ಸಹ ಕರ್ನಾಟಕಕ್ಕೆ ಪದೇಪದೇ ಅನ್ಯಾಯವೆಸಗುತ್ತಲೇ ಬಂದಿವೆ. ಒಕ್ಕೂಟದ ಎಲ್ಲ ರಾಜ್ಯಗಳನ್ನೂ ಒಂದೇ ದೃಷ್ಟಿಯಿಂದ, ಸಮಾನತೆಯಿಂದ ನೋಡಬೇಕಾದ ಸರ್ಕಾರಗಳು ಆ ಕೆಲಸವನ್ನು ಮಾಡಲೇ ಇಲ್ಲ.

ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡವೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಪ್ರಾಂತೀಯ ಭಾಷೆಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂವಿಧಾನವೇ ಹೇಳುತ್ತದೆ. ಆದರೆ ನ್ಯಾಯಾಲಯಗಳು ಪ್ರತಿಯೊಂದರಲ್ಲೂ ಮೂಗು ತೂರಿಸುತ್ತಿರುವ ಪರಿಣಾಮವಾಗಿ ಕನ್ನಡ ಭಾಷೆಯೇ ಸೊರಗಿಹೋಗುತ್ತಿದೆ. ಮಾತೃಭಾಷಾ ಶಿಕ್ಷಣ ನೀತಿಯನ್ನು ಅನುಸರಿಸುವಂತೆಯೂ ಇಲ್ಲ. ಸುಪ್ರೀಂ ಕೋರ್ಟ್ ಈಗಾಗಲೇ ಮಾತೃಭಾಷಾ ಶಿಕ್ಷಣಕ್ಕೆ ತಿಲಾಂಜಲಿ ಇಡುವಂಥ ತೀರ್ಪನ್ನು ನೀಡಿಯಾಗಿದೆ. ಶಿಕ್ಷಣ ಮಾಧ್ಯಮವೇ ಕನ್ನಡವಾಗದೇ ಹೋದರೆ ಮುಂದಿನ ಪೀಳಿಗೆಗೆ ಕನ್ನಡ ಉಳಿಯುವುದಾದರೂ ಹೇಗೆ? ಇಂಗ್ಲಿಷ್ ಶಿಕ್ಷಣವಿದ್ದರಷ್ಟೇ ಉದ್ಯೋಗ, ಅಭಿವೃದ್ಧಿ ಎಂಬ ಭ್ರಮೆಯನ್ನು ತುಂಬಿದ ಪರಿಣಾಮವಾಗಿ ಕನ್ನಡದಲ್ಲಿ ಶಿಕ್ಷಣ ಕೊಡುವುದೇ ಕಷ್ಟಕರವಾಗಿಹೋಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆಂಬ ಮಾತ್ರಕ್ಕೆ ಕನ್ನಡ ಭಾಷೆ, ಸಂಸ್ಕೃತಿ, ಸಮಾಜದ ಅವನತಿಗೆ ತಲೆಕೊಡುವಂಥ ಹೀನಾಯ ಸ್ಥಿತಿ ಎದುರಾಗಿಹೋಗಿದೆ.

ಹಿಂದಿ ಭಾಷಿಕ ರಾಜ್ಯಗಳ ಅಟ್ಟಹಾಸ

ಭಾರತ ಒಕ್ಕೂಟದ ಮೂಲ ಸಮಸ್ಯೆಯಿರುವುದೇ ಅದು ಹೇರುತ್ತಿರುವ ಹಿಂದಿ ಸಾಮ್ರಾಜ್ಯಶಾಹಿಯಲ್ಲಿ. ಹಿಂದಿ ಭಾಷಿಕ ರಾಜ್ಯಗಳೇ ಕೇಂದ್ರ ಸರ್ಕಾರದಲ್ಲಿ ಈವರೆಗೆ ತಮ್ಮ ಯಜಮಾನ್ಯವನ್ನು ಸ್ಥಾಪಿಸುತ್ತ ಬಂದಿವೆ. ಹಿಂದಿಯೇತರ ರಾಜ್ಯದ ಪ್ರಧಾನಿಯನ್ನು ಹೊಂದಲು ಈ ದೇಶ ಎಷ್ಟು ವರ್ಷ ಕಾಯಬೇಕಾಯಿತು? ಸಚಿವಸಂಪುಟದಲ್ಲಿ ಸ್ಥಾನವನ್ನು ಸೇರಿದಂತೆ ಎಲ್ಲ ವಿಷಯದಲ್ಲಿ ಹಿಂದಿ ರಾಜ್ಯಗಳಿಗೇ ಸಿಂಹಪಾಲು. ಅದನ್ನು ಹೊರತುಪಡಿಸಿದರೆ ಪ್ರಾದೇಶಿಕ ಪಕ್ಷಗಳನ್ನು ಸ್ಥಾಪಿಸಿಕೊಂಡು ಕೇಂದ್ರ ಸರ್ಕಾರಗಳಲ್ಲಿ ಚೌಕಾಶಿ ವ್ಯವಹಾರ ಮಾಡಿದ ರಾಜ್ಯಗಳು ಒಂದಷ್ಟು ಪಾಲನ್ನು ಕಿತ್ತುಕೊಳ್ಳಲು ಸಾಧ್ಯವಾಯಿತು.

ದುರಂತವೆಂದರೆ ಕರ್ನಾಟಕ ರಾಜ್ಯ ಇದುವರೆಗೆ ಒಂದು ಪ್ರಬಲ ಪ್ರಾದೇಶಿಕ ಪಕ್ಷವನ್ನು ಹೊಂದಲು ಸಾಧ್ಯವಾಗಿಲ್ಲ. ಹೈಕಮಾಂಡ್ ಗುಲಾಮಗಿರಿಯನ್ನೇ ಮಾಡಿಕೊಂಡು ಬಂದಿರುವ ಪಕ್ಷಗಳೇ ಇಲ್ಲಿ ಗೆದ್ದು ಅಧಿಕಾರ ಪಡೆದಿವೆ. ದಿಲ್ಲಿಯಲ್ಲಿ ಕುಳಿತ ಯಜಮಾನರು ಹೇಳಿದಂತೆಯೇ ಕೇಳುವ ಇಂಥ ಜನರಿಂದ ಯಾವ ರೀತಿಯ ಅಭಿವೃದ್ಧಿ ಸಾಧ್ಯ? ಪಕ್ಷ ಯಾವುದೇ ಗೆದ್ದರೂ ನಮ್ಮನ್ನು ಆಳುವವರು ಹಿಂದಿವಾಲಾಗಳೇ ಆಗಿರುತ್ತಾರೆ. ದೇಶದ ಆರ್ಥಿಕ ನೀತಿಯನ್ನು ರೂಪಿಸುವ ಶಕ್ತಿಗಳೂ ಸಹ ಹಿಂದೀವಾಲಗಳ ಹಿಡಿತದಲ್ಲೇ ಇವೆ. ಇನ್ನು ಸಾಮಾಜಿಕ, ಸಾಂಸ್ಕೃತಿಕ ವಲಯಗಳಲ್ಲೂ ಹಿಂದೀವಾಲಗಳು ಬಲವಾಗಿ ಬಂದು ಕುಳಿತಿದ್ದಾರೆ. ಹೀಗಾಗಿ ಹಿಂದಿಯೇತರ ಭಾಷೆಗಳನ್ನಾಡುವ ರಾಜ್ಯಗಳು ಒಕ್ಕೂಟದ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗುತ್ತಿವೆ.

ಹಿಂದಿಹೇರಿಕೆಯ ದೌರ್ಜನ್ಯ

ಕೇಂದ್ರ ಸರ್ಕಾರ ಮತ್ತು ಮತ್ತು ಅದರ ಎಲ್ಲ ಅಧೀನ ಸಂಸ್ಥೆಗಳು ದೇಶದ ಎಲ್ಲ ಪ್ರಾದೇಶಿಕ ಭಾಷೆಗಳನ್ನು ನಾಶ ಮಾಡಿ, ಹಿಂದಿಯೊಂದನ್ನೇ ದೇಶದ ಭಾಷೆಯನ್ನಾಗಿ ಮಾಡಲು ಹೊರಟಿವೆಯೇನೋ ಎಂದು ನನಗೆ ಅನಿಸುವುದುಂಟು. ಬಲವಂತದ ಹಿಂದಿ ಹೇರಿಕೆ ನಡೆಯುತ್ತಿರುವ ಸ್ವರೂಪವನ್ನು ಗಮನಿಸಿದರೆ ಮುಂದಿನ ನೂರು ವರ್ಷಗಳಲ್ಲಿ ಇಡೀ ದೇಶದಲ್ಲಿ ಒಂದೇ ಭಾಷೆಯನ್ನು ಉಳಿಸಿಕೊಳ್ಳಬೇಕು ಎಂಬ ಹುನ್ನಾರ ನಡೆಯುತ್ತಿರುವುದು ಸ್ಪಷ್ಟ.

ಸ್ವತಃ ಕೇಂದ್ರ ಸರ್ಕಾರವೇ ಹಿಂದಿಯನ್ನು ಬಲವಂತವಾಗಿ ತುರುಕಲು ಹಿಂದಿ ಸಪ್ತಾಹ, ಹಿಂದಿ ದಿವಸ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುತ್ತ ನೂರಾರು ಕೋಟಿ ರುಪಾಯಿಗಳನ್ನು ಖರ್ಚು ಮಾಡುತ್ತಿದೆ. ಹಿಂದಿಯನ್ನು ಬೆಳೆಸಲೆಂದೇ ಕೇಂದ್ರ ಸರ್ಕಾರ ಕೆಲವು ಸಂಸ್ಥೆಗಳನ್ನು ರೂಪಿಸಿ ಕೋಟ್ಯಂತರ ರುಪಾಯಿ ನಮ್ಮ ತೆರಿಗೆ ಹಣವನ್ನೇ ಸುರಿಯುತ್ತಿದೆ.

ದೇಶದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ನಮೂದಾಗಿರುವ ಎಲ್ಲ ಭಾಷೆಗಳೂ ರಾಷ್ಟ್ರಭಾಷೆಗಳೇ ಆಗಿದ್ದರೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಪದೇ ಪದೇ ಸುಳ್ಳು ಹೇಳಿಕೊಂಡು ಬರಲಾಗುತ್ತಿದೆ. ಭಾರತ ಸಂವಿಧಾನದಲ್ಲಿ ಎಲ್ಲ ಭಾಷೆಗಳಿಗೂ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕಾಗಿದ್ದರೂ ಸಂವಿಧಾನ ತಿದ್ದುಪಡಿ ಮಾಡಿ ಅದನ್ನು ಜಾರಿಗೊಳಿಸಿ ಭಾಷಾ ಸಮಾನತೆಯನ್ನು ಮೆರೆಯುವ ಉದ್ದೇಶ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲ. ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು, ರೈಲ್ವೆ, ಬ್ಯಾಂಕ್ ಇತ್ಯಾದಿ ವಲಯಗಳಲ್ಲಿ ಹಿಂದಿ ಕಲಿತವರಿಗೆ ಮಾತ್ರ ನೇಮಕಾತಿ, ಬಡ್ತಿ ಸಲೀಸಾಗಿ ದೊರೆಯುತ್ತದೆ. ಯುಪಿಎಸ್‍ಸಿ ಪರೀಕ್ಷೆಗಳೂ ಸಹ ಹಿಂದಿವಾಲಾಗಳಿಗೆ ಮಾತ್ರ ಅನುಕೂಲಕರ. ಇಂಥ ವ್ಯವಸ್ಥೆಯಲ್ಲಿ ಹಿಂದಿಯನ್ನು ಭಾರತದ ಎಲ್ಲ ಭಾಷಿಕ ಜನಾಂಗಗಳ ತಲೆ ಮೇಲೆ ಕೂರಿಸುವಂಥ ಕಾರ್ಯದಲ್ಲಿ ಕೇಂದ್ರ ಸರ್ಕಾರ ಮಗ್ನವಾಗಿದೆ.

ಜಲವಿವಾದಗಳಲ್ಲಿ ಅನ್ಯಾಯ

ಕರ್ನಾಟಕ ಪದೇ ಪದೇ ಜಲವಿವಾದಗಳಲ್ಲಿ ಅನ್ಯಾಯಕ್ಕೆ ಒಳಗಾಗುತ್ತಲೇ ಬಂದಿದೆ. ಒಂದು ರೀತಿಯಲ್ಲಿ ಕರ್ನಾಟಕ ಹೇಳುವವರು ಕೇಳುವವರು ಇಲ್ಲದ ಬಡಪಾಯಿ ರಾಜ್ಯವಾಗಿಹೋಗಿದೆ. ಕಾವೇರಿ ನದಿನೀರಿನ ವ್ಯಾಜ್ಯದಲ್ಲಿ ಏನಾಯಿತು ಎಂಬುದನ್ನು ನಾವು ನೋಡಿದ್ದೇವೆ. ಬ್ರಿಟಿಷರ ಕಾಲದ ಒಪ್ಪಂದವನ್ನೇ ಇಟ್ಟುಕೊಂಡು ತಮಿಳುನಾಡು ತನ್ನ ಹಕ್ಕು ಸಾಧಿಸಲು ಹೊರಟಿತು. ಇದನ್ನು ಬಗೆಹರಿಸಲು ಕರ್ನಾಟಕದ ವಿರೋಧದ ನಡುವೆಯೂ ಕಾವೇರಿ ನ್ಯಾಯ ಮಂಡಳಿ ರಚನೆಯಾಯಿತು. ಕಾವೇರಿ ನ್ಯಾಯಮಂಡಳಿ ತನ್ನ ಮಧ್ಯಂತರ ಮತ್ತು ಅಂತಿಮ ವರದಿಗಳೆರಡರಲ್ಲೂ ಕಣ್ಣಿಗೆ ಕಾಣುವಂಥ ಅನ್ಯಾಯವೆಸಗಿತು. ತಮಿಳುನಾಡಿಗೆ ಸಿಂಹಪಾಲು ನೀಡಿತು. ಕೃಷ್ಣಾ ನ್ಯಾಯಮಂಡಳಿಯ ತೀರ್ಪಿನಲ್ಲೂ ಕರ್ನಾಟಕಕ್ಕೆ ನಿರಾಸೆಯೇ ಆಯಿತು. ನ್ಯಾಯಮಂಡಳಿಗಳ ಪಕ್ಷಪಾತ ಧೋರಣೆಗೆ ಕರ್ನಾಟಕ ತಲೆಕೊಡುತ್ತಲೇ ಬಂದಿದೆ. ಇದೀಗ ಮಹದಾಯಿ ನದಿ ನೀರಿನ ವಿವಾದ. ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಿಗೆ ಕುಡಿಯುವ ನೀರನ್ನಾದರೂ ತೆಗೆದುಕೊಳ್ಳಲು ಅವಕಾಶ ಕೊಡಿ ಎಂದರೆ ಗೋವಾ ತಕರಾರು ತೆಗೆಯುತ್ತ ಬಂದಿದೆ.

ನಮ್ಮ ಪಾಲು ನಮಗೆ ಬೇಕು ಎಂದು ಕೇಳಿದ ತಪ್ಪಿಗೆ ಕರ್ನಾಟಕ ಜಗಳಗಂಟ ರಾಜ್ಯ ಎಂಬ ಹಣೆಪಟ್ಟಿಗೆ ಗುರಿಯಾಗಿದೆ. ನಮ್ಮ ರಾಜ್ಯದಲ್ಲಿ ಹರಿಯುವ ನದಿಯ ನೀರು ನಾವು ಬಳಸಿಕೊಳ್ಳುಂತಿಲ್ಲ ಎಂದರೆ ಹೇಗೆ ಎಂದು ಯಾರನ್ನು ಪ್ರಶ್ನಿಸುವುದು? ಕೆ.ಆರ್.ಎಸ್ ಅಣೆಕಟ್ಟೆಯಲ್ಲಿ ನೀರೇ ಇಲ್ಲದ ಸಂದರ್ಭದಲ್ಲೂ ನೀರು ಬಿಡಿ ಎಂದು ಆದೇಶಿಸುವ ಕಾವೇರಿ ಪ್ರಾಧಿಕಾರ, ಸುಪ್ರೀಂ ಕೋರ್ಟುಗಳು, ಇದರ ಪರಿಣಾಮವಾಗಿ ನಮ್ಮ ರೈತರು ಪಡುತ್ತಿರುವ ಪಾಡು, ಪ್ರತಿಭಟನೆಗಳು ಇವೆಲ್ಲವೂ ಮಾಮೂಲಿ ವಿದ್ಯಮಾನಗಳು ಎಂಬಂತಾಗಿ ಹೋಗಿದೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾದರೂ ಯಾರು?

ಗಡಿ ವಿವಾದಗಳು

ಇನ್ನು ಗಡಿ ವಿವಾದಗಳು ಸಾಯುತ್ತಲೇ ಇಲ್ಲ, ಸಾಯಲು ಕೆಲವು ಕುತಂತ್ರಿ ರಾಜಕಾರಣಿಗಳು ಬಿಡುತ್ತಲೇ ಇಲ್ಲ. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಮಹಾಜನ್ ವರದಿ ಘೋಷಿಸಿ ದಶಕಗಳು ಕಳೆದವು. ಮಹಾಜನ್ ಆಯೋಗ ರಚನೆಗೆ ಪಟ್ಟುಹಿಡಿದು ಕುಳಿತಿದ್ದವರು ಮಹಾರಾಷ್ಟ್ರದವರು. ಕರ್ನಾಟಕ ಸರ್ಕಾರ ಬಲವಂತಕ್ಕೆ ಕಟ್ಟುಬಿದ್ದು ಆಯೋಗ ಸ್ಥಾಪನೆಗೆ ಒಪ್ಪಿಗೆ ನೀಡಿತ್ತು. ಆದರೆ ಮಹಾಜನ್ ವರದಿ ಬಹಿರಂಗಗೊಳ್ಳುತ್ತಿದ್ದಂತೆ ಮಹಾರಾಷ್ಟ್ರದವರು ವರದಿಯನ್ನು ಒಪ್ಪುವುದಿಲ್ಲವೆಂದು ತಗಾದೆ ತೆಗೆದರು. ಇದೆಂಥ ಆಷಾಢಭೂತಿತನ?

ಮಹಾರಾಷ್ಟ್ರದ ಕೆಲವು ಕಿಡಿಗೇಡಿ ನಾಯಕರು ಬೆಳಗಾವಿಯಲ್ಲಿ ನಿರಂತರ ಕಿತಾಪತಿ ಎಬ್ಬಿಸುತ್ತಲೇ ಬಂದರು. ಎಂಇಎಸ್ ಎಂಬ ಪುಂಡರ ಗುಂಪೊಂದಕ್ಕೆ ಬೆಂಬಲ ನೀಡುತ್ತ ಬಂದರು. ಹೀಗಾಗಿ ಬೆಳಗಾವಿಯ ಕನ್ನಡಿಗರು-ಮರಾಠಿಗರ ನಡುವೆ ಕಂದರವನ್ನೇ ತೋಡಿದಂತಾಯಿತು. ಸಾಮಾನ್ಯ ಜನರು ನೆಮ್ಮದಿಯಾಗಿ ಬದುಕದಂತೆ ಎಂಇಎಸ್ ಪುಂಡರು ಸದಾ ಒಂದಿಲ್ಲೊಂದು ವಿಷಯಕ್ಕೆ ಗೊಂದಲ, ಗಲಭೆ ಎಬ್ಬಿಸುತ್ತಲೇ ಬಂದಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಪಾದಾರ್ಪಣೆಯ ನಂತರ ಎಂಇಎಸ್ ಸೊಕ್ಕು ಒಂದಿಷ್ಟು ಅಡಗಿದೆಯಾದರೂ ಈ ಸಂಘಟನೆಯ ಕರ್ನಾಟಕದ ಪಾಲಿಗೆ ಮಾಯದ ಗಾಯವಾಗಿ ಪದೇ ಪದೇ ಮರುಕಳಿಸುತ್ತಲೇ ಇದೆ.

ಮಹಾಜನ್ ಆಯೋಗದ ವರದಿಯ ಪ್ರಕಾರವೇ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕಿತ್ತು. ಆದರೆ ಮಹಾಜನ್ ವರದಿ ಜಾರಿಯಾಗದ ಹಿನ್ನೆಲೆಯಲ್ಲಿ ಕಾಸರಗೋಡು ಕೇರಳದಲ್ಲೇ ಉಳಿದುಕೊಂಡಿದೆ. ಇದಿಷ್ಟೇ ಅಲ್ಲ, ಕರ್ನಾಟಕಕ್ಕೆ ಸೇರಬೇಕಾದ ಹಲವಾರು ಪ್ರದೇಶಗಳು ಇತರ ರಾಜ್ಯಗಳಲ್ಲೇ ಉಳಿದುಹೋಗಿವೆ. ಆ ಪ್ರದೇಶಗಳ ಜನರು ನಮ್ಮನ್ನೂ ಕರ್ನಾಟಕಕ್ಕೆ ಸೇರಿಸಿ ಎಂದು ಬೇಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನು ಕರ್ನಾಟಕದ ನೆಲ ಹೊಗೇನಕಲ್‍ನಲ್ಲಿ ಅಕ್ರಮವಾಗಿ ಪ್ರವೇಶಿಸಿದ ತಮಿಳುನಾಡು ಅಲ್ಲಿ ವಿದ್ಯುತ್ ಯೋಜನೆ ಜಾರಿಗೊಳಿಸುತ್ತಿದೆ. ಇದರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಕರ್ನಾಟಕದ ರಾಜಕಾರಣಿಗಳು ಪ್ರತಿಭಟಿಸಲೇ ಇಲ್ಲ. ಜಂಟಿ ಸಮೀಕ್ಷೆ ನಡೆಸಿದ ನಂತರವೇ ಯೋಜನೆ ಮಾಡಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿ ನೂರಾರು ಪ್ರತಿಭಟನೆಗಳನ್ನು ನಡೆಸಿತು. ಆದರೆ ತಮಿಳುನಾಡಿನ ರಾಜಕಾರಣಿಗಳ ದುರಹಂಕಾರದಿಂದ ವಿವಾದ ಬಗೆಹರಿಯದೆ ಹಾಗೇ ಉಳಿದಿದೆ.

ವಿಭಜನೆಯ ಕೂಗುಮಾರಿ

ಅಧಿಕಾರದಲ್ಲಿದ್ದಾಗ ಏನನ್ನೂ ಮಾಡದೇ, ಅಧಿಕಾರ ಇಲ್ಲದಾಗ ಕರ್ನಾಟಕ ವಿಭಜನೆಯಾಗಬೇಕು ಎಂದು ಹಲುಬುವುದು ಕೆಲವು ರಾಜಕಾರಣಿಗಳ ಹಳೇ ಗೋಳು. ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಉಮೇಶ್ ಕತ್ತಿ ಎಂಬ ರಾಜಕಾರಣಿ ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕು ಎಂದು ಪದೇಪದೇ ಹೇಳಿಕೆ ನೀಡಿ ಸುದ್ದಿವಾಹಿನಿಗಳಲ್ಲಿ ಅಬ್ಬರದ ಪ್ರಚಾರ ಗಿಟ್ಟಿಸಿಕೊಂಡರು. ಈತ ಹಿಂದೆ ತಾನೇ ಹೇಳಿಕೊಂಡಂತೆ ಕರ್ನಾಟಕ ವಿಭಜನೆಯಾದರೆ ಒಂದು ಭಾಗಕ್ಕೆ ತಾನು, ಮತ್ತೊಂದು ಭಾಗಕ್ಕೆ ತನ್ನ ಮಗ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಕಂಡವರು. ಇದು ತಿರುಕನ ಕನಸಲ್ಲದೆ ಬೇರೇನೂ ಅಲ್ಲ.

ಕರ್ನಾಟಕ ಏಕೀಕರಣದ ಕನಸು ಕಂಡವರಲ್ಲಿ ಉತ್ತರ ಕರ್ನಾಟಕದವರೇ ಹೆಚ್ಚು. ರಂಜಾನ್ ಸಾಬ್ ಎಂಬ ಏಕೀಕರಣ ಹೋರಾಟಗಾರ ಮೇಲೆ ಆಸಿಡ್ ಬಾಂಬ್ ಹಾಕಿ ಸಾಯಿಸಲಾಯಿತು. ಹೈದ್ರಾಬಾದ್, ಮದ್ರಾಸ್ ಮತ್ತು ಮುಂಬೈ ಪ್ರಾಂತ್ಯದಲ್ಲಿ ಸೇರಿಹೋಗಿ ತಬ್ಬಲಿತನ ಅನುಭವಿಸುತ್ತಿದ್ದ ಪ್ರದೇಶಗಳ ಜನರ ಹೋರಾಟವಾಗಿಯೇ ಏಕೀಕರಣ ಸಾಧ್ಯವಾಯಿತು. ಹಳೇ ಮೈಸೂರು ಪ್ರಾಂತ್ಯದ ಕೆಲವು ರಾಜಕಾರಣಿಗಳು ಮೊದಲು ಏಕೀಕರಣಕ್ಕೆ ವಿರೋಧವಾಗಿದ್ದರೂ ಕನ್ನಡಿಗರೆಲ್ಲರೂ ಒಂದಾಗಬೇಕು ಎಂಬ ಆಸೆಯಲ್ಲಿ ಏಕೀಕರಣಕ್ಕೆ ಒಪ್ಪಿಗೆ ನೀಡಿದರು. ಈಗ ಉತ್ತರ ಕರ್ನಾಟಕವನ್ನೇ ಪ್ರತ್ಯೇಕ ಮಾಡಿ ಎಂದು ಕೇಳುವುದರಲ್ಲಿ ಯಾವ ಅರ್ಥವಿದೆ ಎಂದು ನಾವು ಪ್ರಶ್ನಿಸಲೇಬೇಕಾಗಿದೆ.

ನಿಜ, ಉತ್ತರ ಕರ್ನಾಟಕ ಭಾಗ ಹಿಂದುಳಿದಿದೆ. ಅದಕ್ಕೆ ಕಾರಣಗಳನ್ನು ಹುಡುಕಿಕೊಳ್ಳಬೇಕಾದವರೂ ನಮ್ಮನ್ನಾಳುವ ರಾಜಕಾರಣಿಗಳು. ನಿಜಲಿಂಗಪ್ಪನವರಿಂದ ಹಿಡಿದು ಜಗದೀಶ್ ಶೆಟ್ಟರ್‍ವರೆಗೆ ಸಾಕಷ್ಟು ಮಂದಿ ಈ ಭಾಗವನ್ನು ಪ್ರತಿನಿಧಿಸುವ ಜನನಾಯಕರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಾಕಷ್ಟು ಹಣವೂ ಖರ್ಚಾಗಿದೆ. ದೊಡ್ಡ ದೊಡ್ಡ ನೀರಾವರಿ ಯೋಜನೆಗಳು ಅನುಷ್ಠಾನವಾಗಿರುವುದೂ ಇದೇ ಭಾಗಗಳಲ್ಲಿ. ಈಗ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಸಂವಿಧಾನ ತಿದ್ದುಪಡಿಯಿಂದಾಗಿ ವಿಶೇಷ ಸ್ಥಾನಮಾನವೂ ದೊರೆತಿದೆ. ಈ ಭಾಗದ ಜನಪ್ರತಿನಿಧಿಗಳು ಸಮರ್ಥವಾಗಿ ಕಾರ್ಯನಿರ್ವಹಿಸಿದರೆ, ಅನುದಾನಗಳನ್ನು ಸರಿಯಾಗಿ ಬಳಸಿಕೊಂಡರೆ ಸಮಸ್ಯೆ ಪ್ರಮಾಣ ಕಡಿಮೆಯಾಗಬಹುದು. ಆದರೆ ಉಮೇಶ್ ಕತ್ತಿಯಂಥವರು ತಮ್ಮ ರಾಜಕೀಯದ ತೆವಲುಗಳಿಗಾಗಿ, ಜನರನ್ನು ಪ್ರಚೋದಿಸಲು ರಾಜ್ಯ ವಿಭಜನೆಯ ಮಾತುಗಳನ್ನು ಆಡುತ್ತಲಿದ್ದಾರೆ.

ಇದೇ ವಿಭಜನೆಯ ಕೂಗುಮಾರಿ ಈಗ ಎಷ್ಟು ಸಾಂಕ್ರಾಮಿಕವಾಗಿ ಹೋಗಿದೆಯೆಂದರೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯನ್ನು ಮೂರು ಭಾಗಗಳನ್ನಾಗಿ ವಿಭಜಿಸುವ ಚಟುವಟಿಕೆಗಳು ಆರಂಭಗೊಂಡಿವೆ. ಒಂದು ವೇಳೆ ಬಿಬಿಎಂಪಿ ವಿಭಜನೆಗೊಂಡರೆ ಎಲ್ಲವೂ ಕನ್ನಡಿಗರ ಕೈ ತಪ್ಪಿ ಹೋಗಲಿವೆ. ಬೆಳಗಾವಿಯ ನಗರಪಾಲಿಕೆಯಲ್ಲಿ ಕರ್ನಾಟಕದ ವಿರುದ್ಧ ನಿರ್ಣಯಗಳನ್ನು ಮಂಡಿಸಿದ ಹಾಗೆ ಈ ಒಡೆದು ಹೋದ ಬಿಬಿಎಂಪಿಗಳಲ್ಲೂ ಆದರೆ ಆಶ್ಚರ್ಯವಿಲ್ಲ.

ಮಿತಿಮೀರಿದ ವಲಸಿಗರ ಹಾವಳಿ

ಒಕ್ಕೂಟ ವ್ಯವಸ್ಥೆಯಲ್ಲಿ ಯಾವ ರಾಜ್ಯದ ಜನರು ಇನ್ಯಾವುದೇ ರಾಜ್ಯಕ್ಕೆ ಹೋಗಿ ನೆಲೆಸಬಹುದು, ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ. ಸಂವಿಧಾನವೇ ಈ ಅವಕಾಶವನ್ನು ನೀಡಿದೆ. ಆದರೆ ಈ ಅವಕಾಶದ ದುರ್ಬಳಕೆಯಿಂದಾಗಿ ಕರ್ನಾಟಕ ನಲುಗಿ ಹೋಗಿದೆ. ಪ್ರತಿದಿನ ಸಾವಿರಾರು ಮಂದಿ ಹೊರರಾಜ್ಯಗಳಿಂದ ವಲಸಿಗರು ಬಂದು ಬೆಂಗಳೂರು, ಮೈಸೂರು ಮತ್ತಿತರ ನಗರಗಳಲ್ಲಿ ನೆಲೆ ನಿಲ್ಲುತ್ತಿದ್ದಾರೆ. ಕನ್ನಡಿಗರ ಬಾಳು ಮೂರಾಬಟ್ಟೆಯಾಗಿ ಹೋಗಿದೆ. ವಿಶೇಷವಾಗಿ ಬೆಂಗಳೂರು ವಲಸಿಗರ ಸ್ವರ್ಗವಾಗಿ ಹೋಗಿದೆ.

ಕಳೆದ ಹತ್ತು ವರ್ಷಗಳಲ್ಲಿ ಉತ್ತರ ಭಾರತದಿಂದ ಆಗುತ್ತಿರುವ ವಲಸೆ ಎಷ್ಟು ಪ್ರಮಾಣದಲ್ಲಿದೆಯೆಂದರೆ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೆ ಅಲ್ಲಿ ಹಿಂದೀವಾಲಾಗಳದ್ದೇ ಅಬ್ಬರವಾಗಿಹೋಗಿದೆ. ವಲಸಿಗರು ಕನ್ನಡ ಕಲಿತು, ಇಲ್ಲಿನ ಜನರೊಂದಿಗೆ ಬೆರೆಯುವ ಬದಲು, ತಮ್ಮ ಭಾಷೆಯನ್ನೇ ಅದರಲ್ಲೂ ವಿಶೇಷವಾಗಿ ಹಿಂದಿಯನ್ನು ಕಲಿಯುವಂತೆ ಕನ್ನಡಿಗರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಕನ್ನಡಿಗರ ಆಸ್ತಿ ಈಗ ಕೈ ತಪ್ಪಿ ಹೋಗುತ್ತಿದೆ. ಎಲ್ಲೆಡೆ ಪರಭಾಷಿಗರದೇ ಆರ್ಭಟ. ಕನ್ನಡಿಗರೇ ಇಲ್ಲಿ ಅಲ್ಪಸಂಖ್ಯಾತರು ಎಂಬ ಭ್ರಮೆಯನ್ನು ಜನಸಾಮಾನ್ಯರಲ್ಲಿ ಬಿತ್ತಲಾಗುತ್ತಿದೆ. ತನ್ಮೂಲಕ ಕನ್ನಡಿಗರಲ್ಲಿ ಕೀಳರಿಮೆಯನ್ನು ತುಂಬಲಾಗುತ್ತಿದೆ. ಕನ್ನಡ ನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕು ಎಂಬ ರಾಷ್ಟ್ರಕವಿ ಕುವೆಂಪು ಅವರ ಆಶಯ ಜಾರಿಯಾಗುತ್ತಲೇ ಇಲ್ಲ. ಪ್ರತ್ಯೇಕ ಪಾಕೆಟ್‍ಗಳಲ್ಲಿ ನೆಲೆ ನಿಲ್ಲುತ್ತಿರುವ ಪರಭಾಷಿಗರು ನಿಧಾನವಾಗಿ ಕರ್ನಾಟಕದ ರಾಜಕಾರಣದ ಮೇಲೂ ಹಿಡಿತ ಸಾಧಿಸುತ್ತಿದ್ದಾರೆ. ನಮ್ಮ ರಾಜಕಾರಣಿಗಳೂ, ರಾಜಕೀಯ ಪಕ್ಷಗಳೂ ಸಹ ಮತಬ್ಯಾಂಕ್ ರಾಜಕಾರಣಕ್ಕಾಗಿ ಭಾಷಾ ಅಲ್ಪಸಂಖ್ಯಾತರ ಬೆನ್ನುಬಿದ್ದಿದ್ದಾರೆ. ಇದರ ಪರಿಣಾಮ ನೇರವಾಗಿ ಕನ್ನಡಿಗರ ಮೇಲೆ, ಕನ್ನಡ ಸಂಸ್ಕೃತಿಯ ಮೇಲೆ ಆಗುತ್ತಿದೆ.

ಸಾಂಸ್ಕೃತಿಕ ದಾಳಿ

ಇದೆಲ್ಲಕ್ಕಿಂತ ಹೆಚ್ಚಿನದಾಗಿ ಕನ್ನಡಿಗರ ಮೇಲೆ ಆಗುತ್ತಿರುವ ಸಾಂಸ್ಕೃತಿಕ ದಾಳಿಯ ಪರಿಣಾಮ ಊಹೆಗೆ ನಿಲುಕದ್ದು. ನಮ್ಮ ನಾಡಹಬ್ಬ ದಸರಾವನ್ನು ಪರಭಾಷಿಗರು ದುಶೇರಾ ಎನ್ನುತ್ತಾರೆ. ದೀಪಾವಳಿ ಇವರ ಭಾಷೆಯಲ್ಲಿ ದಿವಾಳಿ ಆಗಿದೆ. ಪರಭಾಷಿಗರ ಹಬ್ಬ ಹರಿದಿನಗಳು ಕನ್ನಡಿಗರ ಮೇಲೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹೇರಲಾಗುತ್ತಿದೆ.

ದೊಡ್ಡ ದೊಡ್ಡ ಮಾಲ್‍ಗಳಲ್ಲಿ, ದೊಡ್ಡ ದೊಡ್ಡ ಮಾರ್ಟ್‍ಗಳಲ್ಲಿ ಕನ್ನಡ ಕಣ್ಮರೆಯಾಗಿಹೋಗಿದೆ. ಹಿಟ್ಟು ಹೋಗಿ ಆಟಾ ಆಗಿದೆ, ಬೇಳೆ ಹೋಗಿ ದಾಲ್ ಆಗಿದೆ. ಹಿಂದಿಯ ಹೆಸರುಗಳನ್ನೇ ಕನ್ನಡದಲ್ಲೂ ಬರೆದು ಈ ಮಾರ್ಟ್ ನಡೆಸುವವರು ದುರಹಂಕಾರ ತೋರುತ್ತಿದ್ದಾರೆ. ದೊಡ್ಡ ದೊಡ್ಡ ಅಂಗಡಿಗಳಲ್ಲಿ, ಮಾಲ್ ಗಳಲ್ಲಿ ಕನ್ನಡದಲ್ಲಿ ಮಾತನಾಡುವಂತೆಯೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮೊಬೈಲ್ ಸಂಸ್ಥೆಗಳು, ಬ್ಯಾಂಕುಗಳು, ಇತರ ಕಾರ್ಪರೇಟ್ ವ್ಯವಹಾರಗಳಲ್ಲಿ ಕನ್ನಡವನ್ನು ಕೈ ಬಿಡಲಾಗಿದೆ.

ಬೆಂಗಳೂರು ಮೆಟ್ರೋದಲ್ಲೇ ಹಿಂದಿ ಭಾಷೆಯನ್ನು ತುರುಕುವ ಪ್ರಯತ್ನ ನಡೆಸಲಾಗುತ್ತಿದೆ. ಕನ್ನಡಿಗರಿಗೆ ಉದ್ಯೋಗ ನಿರಾಕರಿಸಲಾಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಪ್ರತಿಭಟನೆಯ ನಂತರ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ಮೆಟ್ರೋಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ. ಹೋರಾಟ ಮಾಡಿಯೇ ಪ್ರತಿಯೊಂದು ಹಕ್ಕನ್ನು ಪಡೆಯಬೇಕು ಎಂಬಂಥ ಸ್ಥಿತಿ ನಿರ್ಮಾಣವಾಗಿ ಹೋಗಿದೆ.

ಕನ್ನಡಿಗರ ಮೇಲೆ ಪರಭಾಷಿಗರ ಹಲ್ಲೆ, ದೌರ್ಜನ್ಯಗಳು ಮಿತಿಮೀರಿ ಹೋಗಿವೆ. ಕನ್ನಡಿಗರನ್ನು `ಬ್ಲಡಿ ಲೋಕಲ್ಸ್’ ಎಂದು ಜರಿಯುವ ಮಟ್ಟಿಗೆ ವಲಸಿಗರು ಕೊಬ್ಬಿ ಹೋಗಿದ್ದಾರೆ. ವಲಸೆ ಒಂದು ಮಿತಿಯಲ್ಲಿದ್ದರೆ ಚಂದ, ಅದು ಓತಪ್ರೋತವಾಗಿ ನಡೆದರೆ ಸಾಮಾಜಿಕ ಹಂದರವೇ ಕುಸಿದುಹೋಗುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ ನಡೆಯುತ್ತಿರುವುದು ಇದೇ ಬೆಳವಣಿಗೆ.

ಬೇಕಿದೆ ಒಂದು ಪ್ರಾದೇಶಿಕ ಶಕ್ತಿ

ಕನ್ನಡಿಗರ ಇಂಥ ಇನ್ನೂ ನೂರು ಸಮಸ್ಯೆಗಳನ್ನು ಪಟ್ಟಿ ಮಾಡುತ್ತ ಹೋಗಬಹುದು. ಅದಕ್ಕೆ ಅಂತ್ಯವೇ ಇಲ್ಲದಂತಾಗಿದೆ. ಭಾರತ ಒಕ್ಕೂಟದ ಭಾಗವಾಗಿರುವ ಕರ್ನಾಟಕ ಒಂದು ಶಕ್ತಿಯಾಗಿ ಬೆಳೆಯಬೇಕೆಂದರೆ ರಾಷ್ಟ್ರೀಯ ಪಕ್ಷಗಳನ್ನು ನೆಚ್ಚಿಕೊಳ್ಳುವಂತಿಲ್ಲ. ಮೊದಲೇ ಹೇಳಿದಂತೆ ಅವು ಹೈಕಮಾಂಡ್ ಗುಲಾಮಗಿರಿಯನ್ನು ನೆಚ್ಚಿಕೊಂಡ ಪಕ್ಷಗಳು. ನಮ್ಮ ಪಾಲು ನಮಗೆ ಕೊಡಿ ಎಂದು ಎದೆಯುಬ್ಬಿಸಿ ಹೇಳಬಲ್ಲ ಪ್ರಬಲ ಪ್ರಾದೇಶಿಕ ಪಕ್ಷವೊಂದು ಈ ರಾಜ್ಯಕ್ಕೆ ಅನಿವಾರ್ಯವಾಗಿದೆ.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳನ್ನು ರಚಿಸುವ ಹಲವು ಪ್ರಯತ್ನಗಳು ವಿಫಲವಾಗಿವೆ, ನಿಜ. ಆದರೆ ಈ ಪ್ರಾದೇಶಿಕ ಪಕ್ಷಗಳು ರಚನೆಯಾದ ಸಂದರ್ಭಗಳನ್ನು ಗಮನಿಸಿದರೆ ಅವು ಯಾವುವೂ ನಿಜವಾದ ಅರ್ಥದ ಪ್ರಾದೇಶಿಕ ಪಕ್ಷಗಳಲ್ಲ ಎಂಬುದು ಅರಿವಿಗೆ ಬರುತ್ತದೆ. ತಾವು ಪ್ರತಿನಿಧಿಸುವ ರಾಷ್ಟ್ರೀಯ ಪಕ್ಷಗಳಲ್ಲಿ ಅನ್ಯಾಯವಾದಾಗಲೋ, ಅಧಿಕಾರ ದೊರೆಯದಾಗಲೋ ಕೆಲವು ರಾಜಕಾರಣಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಸ್ಥಾಪಿಸಿದ ಪಕ್ಷಗಳಿಗೇ ಪ್ರಾದೇಶಿಕ ಪಕ್ಷವೆಂಬ ಹೆಸರು ನೀಡಿದರು. ಮಿಕ್ಕಂತೆ ಕೆಲವು ಚಳವಳಿಗಾರರು, ಸಾಹಿತಿಗಳು ಪ್ರಾದೇಶಿಕ ಪಕ್ಷಗಳನ್ನು ಸ್ಥಾಪಿಸಿದರಾದರೂ ಅವು ವಾಸ್ತವದ ನೆಲೆಗಟ್ಟಲ್ಲಿ ರಾಜಕಾರಣವನ್ನು ಮಾಡದ ಹಿನ್ನೆಲೆಯಲ್ಲಿ ವಿಫಲವಾದವು.

ಇವತ್ತಿನ ರಾಜಕಾರಣದ ವಾಸ್ತವವನ್ನು ಅರ್ಥ ಮಾಡಿಕೊಂಡು, ನಾಡು ನುಡಿ ಅಭಿವೃದ್ಧಿಯ ಏಕೈಕ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುವ ಪ್ರಾದೇಶಿಕ ಪಕ್ಷ  ರಚನೆಯಾಗಬೇಕಿರುವುದು ಇವತ್ತಿನ ತುರ್ತು. ಕನ್ನಡ ನಾಡಿನ ಜನತೆಯೂ ಇಂಥದ್ದೊಂದು ಪ್ರಬಲ ಶಕ್ತಿಯ ನಿರೀಕ್ಷೆಯಲ್ಲಿದ್ದಾರೆ. ಪರ್ಯಾಯ ರಾಜಕೀಯ ಶಕ್ತಿಯೊಂದು ಉದಯವಾಗಲೇಬೇಕಿದೆ. ಅದು ಕಾಲದ ಕರೆ.

Leave a Reply