ಮೋದಿಗೆ ಜಾಫರ್-ರಾಜಶೇಖರನ್ ಪತ್ರ, ಏನಿದರ ಗೂಢಾರ್ಥ?

ರಾಷ್ಟ್ರದ್ದೋ, ರಾಜ್ಯದ್ದೋ ಅಂತೂ ಕಾಂಗ್ರೆಸ್ ನಾಯಕರ ಹಣೆಬರಹ ಸರಿಯಾಗಿಲ್ಲ!

ಒಬ್ಬೊಬ್ಬರಾಗಿ ಹಿರಿಯ ಮುಖಂಡರೆಲ್ಲ ಪಕ್ಷದ ನಾಯಕತ್ವದ ವಿರುದ್ಧ ಸಿಡಿದೇಳುತ್ತಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ನಾಯಕರು ಎಂಬ ಬೇಧವಿಲ್ಲದೆ ಎಲ್ಲರನ್ನೂ ಬಾಯಿಗೆ ಬಂದಂತೆ ನಿಂದಿಸುತ್ತಿದ್ದಾರೆ. ಈಗಿರೋ ನಾಯಕರನ್ನೇ ಮುಂದಿಟ್ಟುಕೊಂಡು ಹೋದರೆ ಅದರಲ್ಲೂ ವಿಶೇಷವಾಗಿ ರಾಹುಲ್‌ಗಾಂಧಿ ನಾಯಕತ್ವ ಇನ್ನಷ್ಟು ದಿನ ಮುಂದುವರಿದರೆ ಗುಂಡಿ ತೋಡಿ ಹೂತಾಕಲು ಸಹ ಪಕ್ಷದ ಹೆಣ ಸಿಗುವುದಿಲ್ಲ ಎಂಬಷ್ಟರ ಮಟ್ಟಿಗೆ ಅವರೆಲ್ಲ ಹತಾಶರಾಗಿ ಹೋಗಿದ್ದಾರೆ. ಇನ್ನೂ ಕೆಲವರು ಅನ್ಯರ ಆರಾಧಿಸಿ ಸ್ವಪಕ್ಷೀಯರ ಗುಂಡಿಗೆ ಹಿಂಡುತ್ತಿದ್ದಾರೆ. ‘ಪಕ್ಷ ಮರಳೋ, ಪಕ್ಷದ ನಾಯಕರೇ ಮರಳು’ ಎಂಬ ಗೊಂದಲದಲ್ಲಿ ಕಾರ್ಯಕರ್ತರು ಕೈಕೈ ಹಿಸುಕಿಕೊಳ್ಳುತ್ತಿರುವಾಗ ರಾಷ್ಟ್ರ ಮಟ್ಟದ ರಾಜ್ಯ ಮುಖಂಡರಿಬ್ಬರು ‘ಪಕ್ಷದ ಮೋಕ್ಷಾರ್ಚನೆ’ ಮಾಡುತ್ತಿರುವವರ ಪಟ್ಟಿಗೆ ಹೊಸ ಸೇರ್ಪಡೆ ಆಗಿದ್ದಾರೆ.

ಹಿರಿಯ ಮುಖಂಡರಾದ ಎಂ.ವಿ. ರಾಜಶೇಖರನ್, ಸಿ.ಕೆ. ಜಾಫರ್ ಷರೀಫ್ ನಾಯಕತ್ವದ ವಿರುದ್ಧ ತಿರುಗಿ ಬಿದ್ದವರು. ಅವರು ತಿರುಗಿ ಬಿದ್ದಿರೋ ಶೈಲಿ ಹೇಗಿದೆ ಎಂದರೆ ಹೈಕಮಾಂಡೇ ತಲೆ ತಿರುಗಿ ಕೆಳಗೆ ಬೀಳುವಂತಿದೆ. ‘ತಮ್ಮ ದೇಹದ ಪ್ರತಿ ಜೀವಕಣದಲ್ಲೂ ಕಾಂಗ್ರೆಸ್ ಸೇವಾ ಕಣ ತುಂಬಿ ತುಳುಕುತ್ತಿದೆ’ ಎಂದು ತಮ್ಮನ್ನು ತಾವೇ ಬಣ್ಣಿಸಿಕೊಳ್ಳುವ ಎಂ.ವಿ.ರಾಜಶೇಖರನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಉತ್ತರ ಪ್ರದೇಶ ಚುನಾವಣೆಯಲ್ಲಿ ಸಾಧಿಸಿದ ಅದ್ಭುತ ಗೆಲವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಸ್ವಚ್ಛ ಭಾರತ ಆಂದೋಲನ ಕ್ಷಿಪ್ರಗೊಳಿಸುವಂತೆ ಮನವಿ ಮಾಡಿದ್ದಾರೆ. ಹಿರಿಯ ಕಾಂಗ್ರೆಸ್ಸಿಗರ ಪತ್ರದಿಂದ ಪುಳಕಿತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರೂ ರಾಜಶೇಖರನ್ ಅವರಿಗೆ ಮಾರುತ್ತರ ಬರೆದು ಧನ್ಯವಾದ ಅರ್ಪಿಸಿದ್ದಾರೆ. ತಮ್ಮ ಸಲಹೆ ಪರಿಗಣಿಸುವುದಾಗಿಯೂ ಹೇಳಿದ್ದಾರೆ. ಪ್ರಧಾನಿಗೆ ಪತ್ರ ಬರೆದಾಕ್ಷಣ ತಾವೇನೂ ಬಿಜೆಪಿ ಸೇರುತ್ತೇನೆ ಎಂದು ಅರ್ಥವಲ್ಲ ಎಂದು ರಾಜಶೇಖರನ್ ಸ್ಪಷ್ಟಪಡಿಸಿದ್ದರೂ ಅವರ ಪತ್ರ ಸಾರಬೇಕಾದ ಸಂದೇಶ ಬಿಕರಿ ಆಗಿಹೋಗಿದೆ. ಪಕ್ಷಕ್ಕೆ ಆಗಬಹುದಾದ ಮುಜುಗರ ಆಗಿಯಾಗಿದೆ. ಕಾಂಗ್ರೆಸ್ ಮುಖಂಡರೊಬ್ಬರು ನರೇಂದ್ರ ಮೋದಿ ಅವರನ್ನು ಪ್ರಶಂಸೆ ಮಾಡಿದರೆ ಅದರಿಂದ ಹೈಕಮಾಂಡ್ ಹೊಟ್ಟೆ ತಣ್ಣಗಾಗುತ್ತದೆಯೇ? ಹಾಲು-ಜೇನು ಕಲಸಿ ಕುಡಿದಂತಾಗುತ್ತದೆಯೇ? ಖಂಡಿತಾ ಇಲ್ಲ, ಅದೇನು ಅನಾಹುತ ಆಗಬೇಕು ಅದಾಗಿದೆ. ರಾಜಶೇಖರನ್ ಬಾಯಿಮಾತಿನ ಉದ್ದೇಶವನ್ನೂ ಮೀರಿ ಹೋಗಿದೆ.

ಇದು ಇಷ್ಟಕ್ಕೆ ನಿಂತಿದ್ದರೆ ಪರವಾಗಿರಲಿಲ್ಲ. ರಾಜಶೇಖರನ್ ಬೆನ್ನಿಗೆ ಮತ್ತೊಬ್ಬ ಹಿರಿಯ ಮುಖಂಡ, ದಿವಂಗತ ಪ್ರಧಾನಿ ಇಂದಿರಾಗಾಂಧಿಯವರ ಪರಮಾಪ್ತ, ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಕೂಡ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪೈಪೋಟಿ ಮೇಲೆ ಎಂಬಂತೆ. ಆದರೆ ಅವರ ಪತ್ರದ ಸಾರಾಂಶ ಮಾತ್ರ ಬೇರೆ. ರಾಷ್ಟ್ರಪತಿ ಹುದ್ದೆಗೆ ಪರಮ ದೇಶಭಕ್ತ, ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರು ಶ್ರೇಷ್ಠ ಆಯ್ಕೆ ಎಂದು ಅವರು ಮೋದಿ ಅವರಿಗೆ ಶಿಫಾರಸ್ಸು ಮಾಡಿದ್ದಾರೆ. ಜತೆಗೆ ಇದರಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಯಾವುದೇ ಭೀತಿ ಇಲ್ಲ. ಇದನ್ನು ತಾವೊಬ್ಬ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಯಾಗಿ ಸಮರ್ಥಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಯಾವುದೇ ಕಾರಣಕ್ಕೂ ಮೋಹನ್ ಭಾಗವತ್ ರಾಷ್ಟ್ರಪತಿ ಆಗಲು ತಾನು ಬಿಡುವುದಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿಕೊಂಡಿತ್ತು. ಅದರ ಬೆನ್ನಲ್ಲೇ ಹೊರಬಿದ್ದಿರುವ ಜಾಫರ್ ಷರೀಫ್ ಹೇಳಿಕೆ ಮೊದಲೇ ಭಗಭಗನೆ ಉರಿಯುತ್ತಿರುವ ಕಾಂಗ್ರೆಸ್ ನಾಯಕರ ಒಡಲಿಗೆ ಆ್ಯಸಿಡ್ ಸುರುವಿದಂತೆ ಆಗಿದೆ.

ಇಲ್ಲಿ ರಾಜಶೇಖರನ್ ಮತ್ತು ಜಾಫರ್ ಷರೀಫ್ ನಡವಳಿಕೆ ಯಾರನ್ನು ಗುರಿಯಾಗಿಟ್ಟುಕೊಂಡಿದೆ, ಅದರಿಂದ ಅವರೇನು ಸಾಧಿಸಲು ಹೊರಟಿದ್ದಾರೆ ಎಂಬುದು ಮುಖ್ಯವಲ್ಲ. ಅವರು ರಾಜ್ಯ ನಾಯಕರ ಮೇಲೆ ಮುನಿದಿದ್ದಾರೋ, ರಾಷ್ಟ್ರ ನಾಯಕತ್ವದ ಬಗ್ಗೆ ನಿರಾಶರಾಗಿದ್ದಾರೋ ಅಥವಾ ಪಕ್ಷದೊಳಗೆ ತಮ್ಮಂಥ ಹಿರಿತಲೆಗಳಿಗೆ ಕಿಮ್ಮತ್ತು ಸಿಗದಿರುವ ಬಗ್ಗೆ ಹತಾಶರಾಗಿದ್ದಾರೋ ಎಂಬುದು ಕೂಡ ಬೇರೆ ಪ್ರಶ್ನೆ. ಎಳೆಎಳೆಯಾಗಿ ಬಿಡಿಸುತ್ತಾ ಹೋದರೆ ಅಂತರಂಗದ ನೋವಿನ ಪದರ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅದೇ ರೀತಿ ಅವರಿಂದ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಲಾಭ ಆಗುತ್ತಿದೆಯೋ ಇಲ್ಲವೋ ಅದು ಕೂಡ ಬೇರೆ ವಿಚಾರ. ಆದರೆ ಅವರ ವಿಮುಖತೆ, ವರ್ತನೆ ಕಾಂಗ್ರೆಸ್‌ನ ಅಳಿದುಳಿದ ಹಿತಾಸಕ್ತಿಗೆ ಪ್ರತಿಕೂಲವಾಗಿ ಪರಿಣಮಿಸುತ್ತದೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರ ಪ್ರಮಾಣ ರಾಜ್ಯಕ್ಕೆಷ್ಟು , ರಾಷ್ಟ್ರಕ್ಕೆಷ್ಟು ಎಂದು ವಿಂಗಡಿಸಲು ಆಗದಿದ್ದರೂ ಅನಾಹುತ ಅನಾಹುತವೇ. ಪಂಚರಾಜ್ಯ ಚುನಾವಣೆ ನಂತರ ಕಾಂಗ್ರೆಸ್ ರಾಷ್ಟ್ರ ನಾಯಕತ್ವದ ವಿರುದ್ಧ ದೇಶಾದ್ಯಂತ ಬಹಿರಂಗ ಅಸಮಾಧಾನ ಭುಗಿಲೆದ್ದಿದೆ. ಒಬ್ಬೊಬ್ಬರಾಗಿ ರಾಹುಲ್ ಗಾಂಧಿ ಅವರ ಅಪ್ರಬುದ್ಧ, ಎಳಸು ನಾಯಕತ್ವದ ವಿರುದ್ಧ ಧ್ವನಿಯೆತ್ತಲು ಶುರುಮಾಡಿದ್ದಾರೆ. ಕಳೆದ ವರ್ಷ ಮೇ ತಿಂಗಳ ನಾನಾ ವಿಧಾನಸಭೆ ಚುನಾವಣೆಗಳ ಫಲಿತಾಂಶದ ನಂತರ ಶುರುವಾದ ಈ ಧ್ವನಿಕಹಳೆ ಇತ್ತೀಚಿನ ಪಂಚರಾಜ್ಯ ಚುನಾವಣೆಗಳ ನಂತರ ಉತ್ತುಂಗದತ್ತ ಸಾಗಿದೆ.

ಕೇರಳದ ಹಿರಿಯ ಮುಖಂಡ ಮುಸ್ತಾಫಾ, ರಾಹುಲ್ ಗಾಂಧಿ ಅವರನ್ನು ಜೋಕರ್ ಎಂದು ಜರಿದರು. ಅವರು ನಾಯಕರಾಗಿ ಇರುವವರಿಗೂ ಪಕ್ಷ ಉದ್ಧಾರ ಆಗಲ್ಲ ಎಂದರು. ಇತ್ತೀಚೆಗೆ ಕೇರಳ ಯುವ ಕಾಂಗ್ರೆಸ್ ತೊರೆದ ಸಿ.ಆರ್.ರಮೇಶ್ ಕೂಡ ಮುಸ್ತಾಫಾ ಮಾತನ್ನೇ ಪುನರುಚ್ಛರಿಸಿದರು. ಇಂದಿರಾಗಾಂಧಿ ಅವರಂಥವರು ಕಟ್ಟಿದ ಕಾಂಗ್ರೆಸ್ ಮುನ್ನಡೆಸಲು ರಾಹುಲ್ ಅಸಮರ್ಥ ಎಂದು ಟೀಕಿಸಿದರು. ಹೈಕಮಾಂಡ್ ತಮ್ಮ ಸಲಹೆಗೆ ಕಿವಿಗೊಡುತ್ತಿಲ್ಲ ಎಂದು ಏಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮುನಿಸಿಕೊಂಡಿದ್ದಾರೆ. ಗೋವಾ ಮತ್ತು ಮಣಿಪುರದಲ್ಲಿ ಅಧಿಕಾರ ಕೈತಪ್ಪಲು ನಾಯಕತ್ವದ ತಂತ್ರಗಾರಿಕೆ ಕೊರತೆ ಕಾರಣ ಎಂದು ಆಯಾ ರಾಜ್ಯಗಳ ಕಾಂಗ್ರೆಸ್ ಮುಖಂಡರು ಆಪಾದಿಸಿದ್ದಾರೆ. ಪ್ರಿಯಾಂಕ ಗಾಂಧಿಗೆ ಸಕಾಲದಲ್ಲಿ ನಾಯಕತ್ವ ವಹಿಸದೇ ಹೋದದ್ದೆ ಇಂದಿನ ದುಸ್ಥಿತಿಗೆ ಕಾರಣ ಎಂಬುದು ಅನೇಕ ಹಿರಿಯ ನಾಯಕರ ಅಭಿಮತ. ರಾಹುಲ್ ಗಾಂಧಿಗೆ ನಾಯಕತ್ವದ ಗುಣಗಳೇ ಇಲ್ಲ ಅನ್ನೋದು ಕರ್ನಾಟಕದ ಮತ್ತೊಬ್ಬ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಅವರ ಸ್ಪಷ್ಟ ಅನಿಸಿಕೆ. ಇಂಥ ಹತ್ತು-ಹಲವು ಟೀಕೆ-ಟಿಪ್ಪಣಿಗಳು ದೇಶದ ಮೂಲೆಮೂಲೆಗಳಿಂದ ಕಾಂಗ್ರೆಸ್ ಹೈಕಮಾಂಡ್ ಕಿವಿಗೆ ಬಂದಪ್ಪಳಿಸುತ್ತಿವೆ. ಅನೇಕ ರಾಜ್ಯಗಳಲ್ಲಿ ಹಿರಿಯ ಕಾಂಗ್ರೆಸ್ಸಿಗರು ಪಕ್ಷಕ್ಕೆ ಅಂತಿಮ ನಮನ ಸಲ್ಲಿಸಿ ಬಿಜೆಪಿ ಕಡೆ ನಡೆದಿದ್ದಾರೆ. ಇಂಥ ಸಂದರ್ಭದಲ್ಲೇ ಎಂ.ವಿ. ರಾಜಶೇಖರನ್, ಸಿ.ಕೆ. ಜಾಫರ್ ಷರೀಫ್ ಅವರಂಥ ಹಿರಿಯ ನಾಯಕರ ನಡೆನುಡಿ ಸಂದೇಶ ರವಾನೆ ಚೌಕಟ್ಟಿನಿಂದ ಮಹತ್ವದ್ದೇ.

ನಿಜ, ತಮಗೆ ಪಕ್ಷದಲ್ಲಿ ಸಿಗಬೇಕಾದ ಗೌರವ ಸಿಗುತ್ತಿಲ್ಲ, ತಮ್ಮನ್ನು ಯಾರೂ ಕೇಳುತ್ತಿಲ್ಲ ಎಂಬ ಅನಾಥಪ್ರಜ್ಞೆ ಅನೇಕ ಹಿರಿಯ ಕಾಂಗ್ರೆಸ್ ಮುಖಂಡರನ್ನು ಕಾಡುತ್ತಿದೆ. ಅಸಮಾಧಾನ, ಹತಾಶೆ ಅವರಲ್ಲಿ ತುಂಬಿ ತುಳುಕುತ್ತಿದೆ. ತಮ್ಮ ಮಾತು ಕೇಳದ ಕುಟುಂಬ ಸದಸ್ಯರ ವರ್ತನೆಯಿಂದ ಮನೆಯ ಯಜಮಾನ ಮುನಿಯುವಂತೆ ಅವರೆಲ್ಲ ಕೋಪಗೊಂಡಿದ್ದಾರೆ. ಮಕ್ಕಳು ತಮ್ಮ ಮಾತಿಗೆ ಎಷ್ಟು ಬೆಲೆ ಕೊಡುತ್ತಾರೋ ಬಿಡುತ್ತಾರೋ, ಅದನ್ನು ಅನುಷ್ಠಾನಕ್ಕೆ ತರುತ್ತಾರೋ ಬಿಡುತ್ತಾರೋ, ಆದರೆ ಅವರು ತಮ್ಮ ಮಾತು ಆಲಿಸಬೇಕು ಎಂಬ ವಾಂಛೆ ಕುಟುಂಬದ ಹಿರಿಯರಿಗೆ ಇರುತ್ತದೆ. ಅದು ಈಡೇರದೆ ಹೋದಾಗ ತಮ್ಮ ಗುಣಗಳಿಗೆ ಅನುಗುಣವಾಗಿ ಗೊಣಗುತ್ತಾ ಹೋಗುತ್ತಾರೆ. ಜನಾರ್ಧನ ಪೂಜಾರಿ, ಎಚ್. ವಿಶ್ವನಾಥ್ ಪ್ರತಿಪಕ್ಷ ಮುಖಂಡರಿಗಿಂತಲೂ ಹೆಚ್ಚಾಗಿ ರಾಜ್ಯ ನಾಯಕತ್ವವನ್ನು ಟೀಕಿಸುತ್ತಿರುವುದು ಇದೇ ಕಾರಣಕ್ಕೆ. ನೋಟಿಸ್ ಪಡೆದರೂ ಟೀಕೆ ನಿಲ್ಲಿಸದಿರುವುದು ಅವರ ಭ್ರಮನಿರಸನಕ್ಕೊಂದು ಕನ್ನಡಿ. ಈಗ ರಾಜಶೇಖರನ್, ಜಾಫರ್ ಷರೀಫ್ ಬೇರೆಯದೇ ಶೈಲಿಯಲ್ಲಿ ನಾಯಕತ್ವ ಕೆಣಕಿದ್ದಾರೆ, ಕೆರಳಿಸಿದ್ದಾರೆ. ಕಾಂಗ್ರೆಸ್ಸನ್ನು ಅಡ್ಡಡ್ಡ-ಉದ್ದುದ್ದ ಮಲಗಿಸಿರುವ ವಿರೋಧಿ ಪಾಳೆಯದ ಮೋದಿ ಅವರನ್ನು ಹೊಗಳಿ ಸ್ವಪಕ್ಷೀಯರ ಆತ್ಮಕ್ಕೆ ಸೂಜಿ ಚುಚ್ಚಿದ್ದಾರೆ.

ಹಾಗೇ ನೋಡಿದರೆ ಜಾಫರ್ ಷರೀಫ್ ಅವರಿಗೆ ಮೊದಲಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವ ಕಂಡರಾಗುತ್ತಿಲ್ಲ. ಒಂದು ಅವರು ತಮ್ಮೊಡನೆ ವಲಸೆ ಬಂದವರಿಗೆ ಮಣೆಹಾಕಿ, ಕಾಂಗ್ರೆಸ್ ಮೂಲ ನಿವಾಸಿಗಳನ್ನು ಕಡೆಗಣಿಸಿದರು ಎಂಬುದಾದರೆ, ಮತ್ತೊಂದು ಹೆಬ್ಬಾಳ ಮರುಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಆಗಿದ್ದ ತಮ್ಮ ಮೊಮ್ಮಗ ಅಬ್ದುಲ್ ರೆಹಮಾನ್ ಷರೀಫ್ ಅವರನ್ನು ಕುತಂತ್ರ ಮಾಡಿ ಸೋಲಿಸಿದರು ಎಂಬುದು. ವಾಸ್ತವವಾಗಿ ಈ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ತಮ್ಮ ಪರಮಾಪ್ತ ಭೈರತಿ ಸುರೇಶ್ ಅವರಿಗೆ ಹೆಬ್ಬಾಳ ಟಿಕೆಟ್ ಕೊಡಿಸಬೇಕೆಂಬುದು ಸಿದ್ದರಾಮಯ್ಯ ಆಕಾಂಕ್ಷೆಯಾಗಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಪಟ್ಟುಹಿಡಿದು ಕೊನೇಕ್ಷಣದಲ್ಲಿ ತಮ್ಮ ಮೊಮ್ಮಗನಿಗೆ ಟಿಕೆಟ್ ಗಿಟ್ಟಿಸುವಲ್ಲಿ ಷರೀಫ್ ಯಶಸ್ವಿಯಾಗಿದ್ದರು. ಆದರೆ ಇವರ ಸೋಲಿನಲ್ಲಿ ಸಿದ್ದರಾಮಯ್ಯ ಬೇರೆ ರೀತಿಯ ಯಶಸ್ಸು ಕಂಡಿದ್ದರು. ಇವರಿಬ್ಬರ ಕಿತ್ತಾಟದಲ್ಲಿ ಕ್ಷೇತ್ರ ಬಿಜೆಪಿ ಪಾಲಾಗಿತ್ತು. ಅವತ್ತಿಂದಲೂ ಮತ್ತಷ್ಟು ಕೊತಕೊತ ಕುದಿಯುತ್ತಿದ್ದ ಷರೀಫ್ ಇದೀಗ ನಂಜನಗೂಡು ಮತ್ತು ಗುಂಡ್ಲುಪೇಟೆ ಚುನಾವಣೆ ಸಂದರ್ಭವನ್ನು ಸೇಡು ತೀರಿಸಿಕೊಳ್ಳಲು ಬಳಸಿಕೊಂಡಿದ್ದಾರೆ. ರಾಷ್ಟ್ರಪತಿ ಸ್ಥಾನಕ್ಕೆ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಉಮೇದುವಾರಿಕೆ ಸರಿ ಎನ್ನುವ ಮೂಲಕ ಅಲ್ಪಸಂಖ್ಯಾತ ಸಮುದಾಯಕ್ಕೆ ತಮ್ಮದೇ ಆದ ಶೈಲಿಯಲ್ಲಿ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ನಿಜ, ಬಿಜೆಪಿಗೆ ಮತಹಾಕಿ ಎಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಷರೀಫರು ನೇರವಾಗಿ ಕರೆ ಕೊಡಲು ಸಾಧ್ಯವಿಲ್ಲ. ಏಕೆಂದರೆ ಅವರಿನ್ನೂ ಕಾಂಗ್ರೆಸ್ನಲ್ಲೇ ಇದ್ದಾರೆ. ಆದರೂ ಪರೋಕ್ಷ ಕರೆ ಕೊಡಬೇಕೆಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಆರೆಸ್ಸಸ್ ನಾಯಕರ ಬೆಂಬಲದಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಯಾವುದೇ ಭಯವಿಲ್ಲ ಎನ್ನುವ ಮಾತಾಡಿದ್ದಾರೆ. ಅಂದರೆ ಏನರ್ಥ? ಅಲ್ಪಸಂಖ್ಯಾತರು ಸಂಘಪರಿವಾರದ ತೆಕ್ಕೆಯಲ್ಲಿರುವ ಬಿಜೆಪಿ ಬೆಂಬಲಿಸಬಹುದು ಎನ್ನುವ ಪರೋಕ್ಷ ಸಂದೇಶ. ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಮುನ್ನುಡಿ ಎಂದೇ ಬಿಂಬಿತ ಆಗಿರುವ ಈ ಮರುಚುನಾವಣೆಗಳಲ್ಲಿ ಸಿದ್ದರಾಮಯ್ಯ ಅವರಿಗೆ ಮುಖಭಂಗ ಆಗಬೇಕು, ಅದರಲ್ಲಿ ಹೆಬ್ಬಾಳದ ಸೇಡಿನ ಪ್ರತಿಬಿಂಬ ಕಾಣಬೇಕು ಅನ್ನುವುದು ಷರೀಫ್ ಅವರ ತವಕ. ಹೀಗಾಗಿ ಅವರು ಚುನಾವಣೆ ಸಮಯ ನೋಡಿಯೇ ಪ್ರಧಾನಿ ಅವರಿಗೆ ಪತ್ರ ಬರೆದಿದ್ದಾರೆ. ಅವರ ಅಭೀಪ್ಸೆ ನೆರವೇರುವಲ್ಲಿ ಈ ಪತ್ರ ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೋ ಬಿಡುತ್ತದೋ ಗೊತ್ತಿಲ್ಲ. ಆದರೆ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಕರುಳು ಹಿಚುಕಿರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅಷ್ಟು ವರ್ಷ ರಾಜಕೀಯ ಮಾಡಿರುವವರಿಗೆ ಎಲ್ಲಿಗೆ ಗೂಟ ಬಡಿದರೆ ಬಾಯಪಸೆ ಯಾವ ರೀತಿ ಆರುತ್ತದೆ ಎಂಬುದು ಗೊತ್ತಿರುವುದಿಲ್ಲವೇ?!

ಕಾಂಗ್ರೆಸ್ ಒಳಗಿನ ಜಾತಿ ರಾಜಕಾರಣದ ದೃಷ್ಟಿಯಿಂದ ಇತ್ತೀಚಿನ ಬೆಳವಣಿಗೆಗಳನ್ನು ನೋಡುವುದಾದರೆ ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್ ತೊರೆದು ನಂಜನಗೂಡು ಬಿಜೆಪಿ ಅಭ್ಯರ್ಥಿ ಆಗಿರುವುದರಿಂದ ದಲಿತ ಸಮುದಾಯ ಬಹುಮಟ್ಟಿಗೆ ಅವರ ಹಿಂದೆ ನಿಲ್ಲುವುದರಲ್ಲಿ ಅನುಮಾನವಿಲ್ಲ. ಎಸ್.ಎಂ. ಕೃಷ್ಣ ಬಿಜೆಪಿ ಸೇರಿರುವುದರಿಂದ, ದೇವೇಗೌಡರು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರುವುದರಿಂದ ಕಾಂಗ್ರೆಸ್‌ನ ಒಕ್ಕಲಿಗ ವೋಟುಗಳು ಅತ್ತಲೇ ವಾಲಬಹುದು. ಅದೇ ರೀತಿ ಲಿಂಗಾಯತ ಸಮುದಾಯದ ಎಂ.ವಿ. ರಾಜಶೇಖರನ್ ಅವರ ಪ್ರಧಾನಿ ಪ್ರಶಂಸೆ, ಷರೀಫರಿಂದ ಮೋಹನ್ ಭಾಗವತ್ ಬೆಂಬಲದ ಹಿಂದೆ ಇಂಥದೇ ಮತರಾಜಕೀಯ ತಂತ್ರಗಳನ್ನು ನಿಲುಕಿಸಿಕೊಳ್ಳಬಹುದು. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿ ಮತ್ತೊಂದು ಮುಖ್ಯಾಂಶವಿದೆ. ಯಾರು ಏನೇ ಹೇಳಲಿ ಪಂಚರಾಜ್ಯ ಚುನಾವಣೆ ಫಲಿತಾಂಶ ಮೋದಿ ಅಲೆ ಮುಂದುವರೆದಿರುವುದನ್ನು ಸಾಬೀತುಪಡಿಸಿದೆ. ಉತ್ತರ ಪ್ರದೇಶದಲ್ಲಿ ಮುಸ್ಲಿಮರೂ ಬಿಜೆಪಿಯನ್ನೇ ಬೆಂಬಲಿಸಿದ್ದಾರೆ. ಹಿಂದೂವಾದಕ್ಕೆ ಪರೋಕ್ಷ ಬೆಂಬಲ ಕೊಟ್ಟಿದ್ದಾರೆ. ಆ ಮೂಲಕ ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಬೆರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದೇ ಕಾಲಕ್ಕೆ ಕಾಂಗ್ರೆಸ್‌ನಿಂದ ವಿಮುಖರಾಗಿರುವ ಮುಸ್ಲಿಂ ಮುಖಂಡರು ಮೋದಿ ನಾಯಕತ್ವಕ್ಕೆ ಮಾರು ಹೋಗುತ್ತಿದ್ದಾರೆ. ಅಂದರೆ ಕಾಂಗ್ರೆಸ್ ಮುಷ್ಠಿಯಿಂದ ಹಿಂದೂವಾದ ಲೇಪಿತ ಬಿಜೆಪಿ ತೆಕ್ಕೆಗೆ ಹೊರಳುತ್ತಿರುವ ಈ ದೇಶದ ನಾಡಿಮಿಡಿತದಲ್ಲಿ ನಿಧಾನವಾಗಿ ಮಿಳಿತವಾಗಲು ಅಲ್ಪಸಂಖ್ಯಾತರು ತುಡಿಯುತ್ತಿರಬಹುದು. ಜಾಫರ್ ಷರೀಫರ ಪತ್ರ ಇದೆಲ್ಲದರ ಸಂಕೇತವೂ ಆಗಿರಬಹುದು.

ಲಗೋರಿ: ಆಳಕ್ಕಿಳಿಯುವ ಸೂಜಿಗೆ ನೋವಿನ ಆಳ ತಿಳಿಯುವುದಿಲ್ಲ!

(ವಿಶ್ವವಾಣಿಯಲ್ಲಿ ಪ್ರಕಟಿತ)

2 COMMENTS

 1. ಅಧಿಕಾರ ಇಲ್ಲವಾಗಿದ್ದಾಗ ಇಂತಹ ಹತಾಶೆ ಸಹಜ ಅದನ್ನು ಮಾಧ್ಯಮಗಳು ಅತ್ಯಂತ ವೈಭವಿಕರಿಸಿ ಬರೆಯುವುದು ಇನ್ನೂ ಸಹಜ.
  ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ
  ಗಾಳಿ ನಿನ್ನಾದೀನ ವಲ್ಲವಯ್ಯ
  ಗಾಳಿ ಬಿಟ್ಟಾಗ ತೂರಿ ಕೊಳ್ಳಿರಯ್ಯ
  ಈಗ ನಡೆಯುತ್ತಿರುವುದು ಅಷ್ಟೇ.
  ಪಕ್ಷದ ಮುಖಂಡರು ಮದ್ಯಮದ ವರು ಸೇರಿ.

Leave a Reply