58 ವರ್ಷಗಳ ಹಿಂದೆ ತಮ್ಮನ್ನು ಭಾರತಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಟ್ಟ ಸೈನಿಕನನ್ನು ಭೇಟಿ ಮಾಡಿ ಭಾವುಕರಾದ್ರು ದಲೈ ಲಾಮಾ

ಡಿಜಿಟಲ್ ಕನ್ನಡ ಟೀಮ್:

ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಭಾನುವಾರ ಭಾವುಕ ಕ್ಷಣಕ್ಕೆ ಸಾಕ್ಷಿಯಾದರು. ಅದೇನೆಂದರೆ, ಸುಮಾರು 58 ವರ್ಷಗಳ ಹಿಂದೆ, ಅಂದರೆ 1959ರಲ್ಲಿ ಭಾರತಕ್ಕೆ ಪ್ರಯಾಣ ಆರಂಭಿಸಿದ್ದ ದಲೈ ಲಾಮಾ ಅವರನ್ನು ಸುರಕ್ಷಿತವಾಗಿ ಭಾರತದ ಗಡಿ ಪ್ರವೇಶಿಸುವಂತೆ ನೋಡಿಕೊಂಡಿದ್ದ ಅಸ್ಸಾಂ ರೈಫಲ್ಸ್ ನ ಸೈನಿಕ ನರೇನ್ ಚಂದ್ರ ದಾಸ್ ನನ್ನು ಭೇಟಿ ಮಾಡಿದರು.

ಅಸ್ಸಾಂ ಸರ್ಕಾರ ಆಯೋಜಿಸಿದ್ದ ‘ನಮಾಮಿ ಬ್ರಹ್ಮಪುತ್ರ ನದಿ ಉತ್ಸವ’ದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ದಲೈ ಲಾಮಾ ಅವರು ಈ ಮಾಜಿ ಸೈನಿಕನನ್ನು ಭೇಟಿ ಮಾಡಿ, ಧನ್ಯವಾದ ಅರ್ಪಿಸಿದರು. 76 ವರ್ಷದ ನರೇನ್ ಚಂದ್ರ ದಾಸ್ ಅವರನ್ನು ಭೇಟಿಯಾಗುತ್ತಿದ್ದಂತೆ ಭಾವುಕರಾದ ದಲೈ ಲಾಮಾ ಅವರು, ಆತನನ್ನು ತಬ್ಬಿ ಧನ್ಯವಾದ ತಿಳಿಸಿದರು. ‘ತುಂಬಾ ಧನ್ಯವಾದಗಳು… 58 ವರ್ಷಗಳ ಹಿಂದೆ ನನ್ನನ್ನು ಸುರಕ್ಷಿತವಾಗಿ ಭಾರತ ತಲುಪುವಂತೆ ನೋಡಿಕೊಂಡ ಅಸ್ಸಾಂ ರೈಫಲ್ಸ್ ಸೈನಿಕನನ್ನು ಮತ್ತೆ ಭೇಟಿ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ನಿಮ್ಮ ಮುಖವನ್ನು ನೋಡಿದ ನಂತರ ಈಗ ನನಗೂ ವಯಸ್ಸಾಗಿದೆ ಎಂಬುದು ಅರಿವಾಗುತ್ತಿದೆ’ ಎಂದರು.

ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ತರಬೇತಿ ಮುಗಿಸಿದ ನಂತರ ನರೇನ್ ಚಂದ್ರ ದಾಸ್ 1957 ರಲ್ಲಿ ಸೇನೆಗೆ ಸೇರ್ಪಡೆಯಾದರು. ನಂತರ ಅವರನ್ನು ಚೀನಾದ ಗಡಿ ಭಾಗದ ಲುಂಗ್ಲಾ ಪ್ರದೇಶದಲ್ಲಿ ಸೇವೆಗೆ ನೇಮಕ ಮಾಡಲಾಯಿತು. ನಂತರ 1959 ರಲ್ಲಿ ಇವರನ್ನು ದಲೈ ಲಾಮಾ ಅವರ ರಕ್ಷಣೆಗೆ ರಚಿಸಿದ ಗುಂಪಿಗೆ ನೇಮಕ ಮಾಡಲಾಯಿತು. ಈ ಭೇಟಿಯ ನಂತರ ಆ ದಿನಗಳನ್ನು ನೆನಪಿಸಿಕೊಂಡ ನರೇನ್ ಚಂದ್ರ ದಾಸ್ ಆಗಿನ ಪರಿಸ್ಥಿತಿಯನ್ನು ವಿವರಿಸಿದ್ದು ಹೀಗೆ…

‘ಅಸ್ಸಾಂ ರೈಫಲ್ಸ್ ನ ಪ್ಲಾಟೂನ್ ನಂ.9 ತಂಡ ದಲೈ ಲಾಮಾ ಅವರನ್ನು ಜುತಾಂಗ್ಬೊನಿಂದ ಕರೆ ತಂದರು. ನಂತರ ಶಕ್ತಿ ಪ್ರದೇಶದಲ್ಲಿ ನಮ್ಮ ಐದು ಸದಸ್ಯರ ತಂಡಕ್ಕೆ ಹಸ್ತಾಂತರಿಸಿದರು. ನಂತರ ನಮ್ಮ ತಂಡ ದಲೈ ಲಾಮಾ ಅವರನ್ನು ಲುಂಗ್ಲಾ ಪ್ರದೇಶಕ್ಕೆ ಕರೆದುಕೊಂಡು ಬಂದೆವು. ಅಲ್ಲಿಂದ ಬೇರೊಂದು ತಂಡ ಅವರನ್ನು ತವಾಂಗ್ ವರೆಗು ಕರೆದುಕೊಂಡು ಹೋಯಿತು. ಈ ಸಂದರ್ಭದಲ್ಲಿ ಅವರೊಂದಿಗೆ ನಾವು ಯಾವುದೇ ಮಾತುಕತೆ ನಡೆಸುವ ಅವಕಾಶ ನೀಡಿರಲಿಲ್ಲ. ಕೇವಲ ಅವರ ರಕ್ಷಣೆ ಹಾಗೂ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸುವುದು ಮಾತ್ರ ನಮ್ಮ ಕೆಲಸವಾಗಿತ್ತು. ಈಗ ಅವರನ್ನು ಭೇಟಿ ಮಾಡಿರುವುದು ಬಹಳ ಸಂತೋಷವಾಗಿದೆ. ನನ್ನನ್ನು ನೋಡಿ ತಮಗೆ ಸಂತೋಷವಾಗಿದೆ ಎಂದು ದಲೈ ಲಾಮಾ ಅವರು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು.’

Leave a Reply