ಮತಯಂತ್ರ ದೋಷ: ಆಮ್ ಆದ್ಮಿ ಪಕ್ಷಕ್ಕೆ ಚುನಾವಣಾ ಆಯೋಗ ಕೊಟ್ಟ ಸಲಹೆ ಏನು?

ಡಿಜಿಟಲ್ ಕನ್ನಡ ಟೀಮ್:

‘ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಮುಖಭಂಗ ಅನುಭವಿಸಿರುವ ಆಮ್ ಆದ್ಮಿ ಪಕ್ಷ ಮತಯಂತ್ರಗಳ ಮೇಲೆ ಆರೋಪ ಹೋರಿಸುವ ಬದಲಿಗೆ ತನ್ನ ಸೋಲಿನ ಕುರಿತಾಗಿ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ…’ ಇದು ಚುನಾವಣಾ ಆಯೋಗ ಆಮ್ ಆದ್ಮಿ ಪಕ್ಷಕ್ಕೆ ನೀಡಿರುವ ಸಲಹೆ.

ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮತಯಂತ್ರಗಳಲ್ಲಿ ಲೋಪ ದೋಷವಾಗಿದೆ, ಅದರಲ್ಲಿ ಗೋಲ್ ಮಾಲ್ ನಡೆಸಲಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬಂದಿದ್ದವು. ಈ ಬಗ್ಗೆ ತನಿಖೆಗೆ ಮುಂದಾಗಿರುವ ಚುನಾವಣಾ ಆಯೋಗ, ಮತಯಂತ್ರಗಳ ಸುರಕ್ಷತೆ ಹಾಗೂ ಪಾರದರ್ಶಕತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪುನರುಚ್ಛರಿಸಿದೆ.

ಪಂಜಾಬ್ ಚುನಾವಣೆಯಲ್ಲಿ 117 ಕ್ಷೇತ್ರಗಳ ಪೈಕಿ ಆಮ್ ಆದ್ಮಿ ಪಕ್ಷ ಕೇವಲ 20 ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಿತ್ತು. ಹೀಗಾಗಿ ಮತಯಂತ್ರಗಳ ದೋಷದಿಂದಲೇ ತಮ್ಮ ಪಕ್ಷ ಸೋಲನುಭವಿಸಿದೆ ಎಂದು ಎಎಪಿ ಗಂಭೀರ ಆರೋಪ ಮಾಡಿತ್ತು. ಇದಕ್ಕೆ ಚುನಾವಣಾ ಆಯೋಗ ಭಾನುವಾರ ಪ್ರತಿಕ್ರಿಯೆ ನೀಡಿದ್ದು. ಅದು ಹೀಗಿದೆ…

‘ನಿಯಮಗಳ ಪ್ರಕಾರ ಈಗಾಗಲೇ ನಡೆದಿರುವ ಮತದಾನದ ಕುರಿತಾದ ಪರಿಶೀಲನೆಗೆ ಸಂಬಂಧಿಸಿದ ಮನವಿಯನ್ನು ಪರಿಗಣಿಸುವ ಅಧಿಕಾರ ಕೇವಲ ಹೈ ಕೋರ್ಟ್ ವ್ಯಾಪ್ತಿಗೆ ಸೇರುತ್ತದೆ. ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ತನ್ನ ಸೋಲಿಗೆ ಕಾರಣ ಏನು ಎಂದು ಸರಿಯಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಅದನ್ನು ಬಿಟ್ಟು ಸುಖಾಸುಮ್ಮನೆ ಮತಯಂತ್ರಗಳನ್ನು ತಿರುಚಲಾಗಿದೆ ಎಂದು ಆರೋಪ ಮಾಡುವುದು ಸರಿಯಲ್ಲ. ಮತಯಂತ್ರಗಳಲ್ಲಿ ಯಾವುದೇ ದೋಷ ಬಾರದಂತೆ ನೋಡಿಕೊಳ್ಳಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಆಯೋಗಕ್ಕೆ ಸಂಪೂರ್ಣ ತೃಪ್ತಿ ಇದೆ. ಚುನಾವಣೆ ಸಂದರ್ಭದಲ್ಲಿ ಮತಯಂತ್ರಗಳು ದೋಷಮುಕ್ತವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ತಾಂತ್ರಿಕ ಹಾಗೂ ಆಡಳಿತಾತ್ಮಕ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ.’

ಈ ವಿಚಾರವಾಗಿ ಚುನಾವಣಾ ಆಯೋಗವು ಸುಪ್ರೀಂ ಕೋರ್ಟಿಗೆ ಪತ್ರದ ಮೂಲಕ ಪ್ರತಿಕ್ರಿಯೆ ನೀಡಿದ್ದು, ‘ಮತಯಂತ್ರಗಳ ಮೇಲೆ ಯಾವುದೇ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ. ಊಹಾಪೋಹ ಹಾಗೂ ಕಲ್ಪನೆಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ತೀರ್ಪು ನೀಡಬಾರದು’ ಎಂದು ಮನವಿ ಮಾಡಿದೆ.

ಇದೇ ಸಂದರ್ಭದಲ್ಲಿ ಚುನಾವಣಾ ಆಯೋಗವು ಸದ್ಯದಲ್ಲೇ ಉತ್ಕೃಷ್ಟ ಮಟ್ಟದ ಮತಯಂತ್ರಗಳ ಖರೀದಿಗೆ ಮುಂದಾಗಿದ್ದು, ಈ ಮತ ಯಂತ್ರಗಳನ್ನು ತಿರುಚಲು ಮುಂದಾದರೆ ಅದು ಕಾರ್ಯವಹಿಸದೇ ಸ್ಥಗಿತವಾಗುತ್ತದೆ. ಈ ಮತಯಂತ್ರಗಳನ್ನು 2018ರ ಚುನಾವಣೆಗಳಲ್ಲಿ ಬಳಸುವ ನಿರೀಕ್ಷೆ ಇದೆ ಎಂಬ ವರದಿಗಳು ಬಂದಿವೆ.

Leave a Reply