ಮೊದಲ ಇಂಡಿಯಾ ಓಪನ್ ಪ್ರಶಸ್ತಿ ಗೆದ್ದ ಸಿಂಧು, ಒಲಿಂಪಿಕ್ಸ್ ಬಳಿಕ ಈಕೆಯ ಆಟದಲ್ಲಾಗಿರುವ ಬದಲಾವಣೆ ಏನು?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಭಾರತೀಯ ಕ್ರೀಡಾ ರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸುತ್ತಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ತಮ್ಮ ಮೊದಲ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಗೆದ್ದುಕೊಂಡಿದ್ದಾರೆ. ಕಳೆದ ವರ್ಷ ರಿಯೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡುವ ಮೂಲಕ ಭಾರತದ ಕೋಟ್ಯಾಂತರ ಕ್ರೀಡಾಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದ ಪಿ.ವಿ ಸಿಂಧು, ಈಗ ಮತ್ತೆ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಸದ್ದು ಮಾಡಲಾರಂಭಿಸಿದ್ದಾರೆ.

ಒಲಿಂಪಿಕ್ಸ್ ಮುಕ್ತಾಯದ ಬಳಿಕ ಕೆಲ ದಿನಗಳ ಕಾಲ ಬ್ರೇಕ್ ಪಡೆದಿದ್ದ ಸಿಂಧು ಈಗ ವಿಶ್ರಾಂತಿ ಮೂಡ್ ನಿಂದ ಹೊರ ಬಂದಿದ್ದಾರೆ ಎಂಬುದಕ್ಕೆ ಈ ಟೂರ್ನಿಯ ಪ್ರದರ್ಶನವೇ ಸಾಕ್ಷಿ. ಕಾರಣ, ರಿಯೋ ಒಲಿಂಪಿಕ್ಸ್ ನಲ್ಲಿ 2 ಬಾರಿ ವಿಶ್ವಚಾಂಪಿಯನ್ ಸ್ಪೇನಿನ ಕ್ಯಾರೊಲಿನ್ ಮರಿನ್ ವಿರುದ್ಧ ಸೋತಿದ್ದ ಸಿಂಧು, ಈ ಟೂರ್ನಿಯಲ್ಲಿ ಆಕೆಯ ವಿರುದ್ಧವೇ 21-19, 21-16 ನೇರ ಗೇಮ್ ಗಳಿಂದ ಗೆದ್ದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ ಎಂದು ಬಣ್ಣಿಸಲಾಗುತ್ತಿದೆ.

ಒಲಿಂಪಿಕ್ಸ್ ಕ್ರೀಡಾಕೂಟದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕ್ಯಾರೋಲಿನ್ ವಿರುದ್ಧದ ಸಿಂಧು ತೋರಿದ ಪ್ರದರ್ಶನಕ್ಕೂ ಈ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದದಲ್ಲಿ ಅದೇ ಆಟಗಾರ್ತಿ ವಿರುದ್ಧ ತೋರಿದ ಪ್ರದರ್ಶನಕ್ಕೂ ಸಾಕಷ್ಟು ಸಕಾರಾತ್ಮಕ ಬದಲಾವಣೆ ಕಾಣಬಹುದು. ಆ ಮೂಲಕ ಸಿಂಧು ಆಟದಲ್ಲಿ ಮತ್ತಷ್ಟು ಪ್ರಬುದ್ಧತೆ ಹಾಗೂ ತಾಂತ್ರಿಕ ಬದಲಾವಣೆಗಳಾಗಿರುವುದು ಸ್ಪಷ್ಟವಾಗಿದೆ.

6.1 ಅಡಿ ಎತ್ತರದ ಸಿಂಧು, ಈ ಪಂದ್ಯದಲ್ಲಿ ತೋರಿದ ಫುಟ್ ವರ್ಕ್ ಆಕರ್ಷಕವಾಗಿತ್ತು. ಇನ್ನು ಸಿಂಧುವಿನ ಸ್ಟ್ರೋಕ್ ಹೊಡೆತ ಮತ್ತಷ್ಟು ಪರಿಣಾಮಕಾರಿಯಾಗಿದೆ. ಇನ್ನು ಈ ಪಂದ್ಯದಲ್ಲಿ ನೆಟ್ ಬಳಿ ಸಿಂಧು ತೋರಿದ ವೇಗದ ಆಟದ ಶೈಲಿ ಚಾಕಚಕ್ಯತೆ, ಸಿಂಧು ಅವರ ಆಟ ಒಲಿಂಪಿಕ್ಸ್ ಕ್ರಾಡಾಕೂಟಕ್ಕಿಂತ ಸಾಕಷ್ಟು ಸುಧಾರಿಸಿರುವುದನ್ನು ತೋರುತ್ತದೆ. ನೆಟ್ ಆಸುಪಾಸಿನ ತಾಂತ್ರಿಕ ಹೊಡೆತಗಳಿಂದಲೇ ಈ ಪಂದ್ಯದಲ್ಲಿ ಸಿಂಧು ಹೆಚ್ಚಿನ ಅಂಕ ಸಂಪಾದಿಸಿರುವುದು ಸಿಂಧು ಆಟದಲ್ಲಿ ಬದಲಾವಣೆ ಕಂಡಿರುವುದಕ್ಕೆ ಸಾಕ್ಷಿ.

ಇವೆಲ್ಲಕ್ಕಿಂತ ಮುಖ್ಯವಾಗಿ ಈ ಟೂರ್ನಿಯಲ್ಲಿ ಸಿಂಧು ಎರಡು ಹೊಸ ಹೊಡೆತಗಳನ್ನು ಪ್ರಯೋಗಿಸಿರುವುದು ಗಮನ ಸೆಳೆದಿದೆ. ತಮ್ಮ ಕೋರ್ಟಿನ ಹಿಂಬದಿಯಲ್ಲಿ ಬೀಳುವ ಶಟಲ್ ಅನ್ನು ಮಂದಗತಿಯ ಹೊಡೆತದ ಮೂಲಕ ಎದುರಾಳಿ ಆಟಗಾರ್ತಿಗೆ ಸವಾಲೆಸೆದಿದ್ದು ಹಾಗೂ ತಮ್ಮ ಹಿಂಬದಿಗೆ ಬರುವ ಶಟಲ್ ಅನ್ನು ಕ್ರಾಸ್ ಕೋರ್ಟ್ ಸ್ಮ್ಯಾಶ್ ಮೂಲಕ ಎದುರಾಳಿಗೆ ಸವಾಲೆಸೆದಿದ್ದು ಸಿಂಧುವಿನ ಅಸ್ತ್ರಗಳಾಗಿದ್ದವು.

ಹೀಗೆ ತಮ್ಮ ಆಟದಲ್ಲಿ ಸಾಕಷ್ಟು ಸುಧಾರಣೆ ಕಂಡಿರುವ ಸಿಂಧು ಮುಂದಿನ ದಿನಗಳಲ್ಲಿ ಸ್ಪೇನ್ ಆಟಗಾರ್ತಿ ಮಾತ್ರವಲ್ಲದೆ ಪ್ರಸ್ತುತ ವಿಶ್ವ ಬ್ಯಾಡ್ಮಿಂಟನ್ ನಲ್ಲಿ ಪ್ರಬಲ ಸ್ಪರ್ಧಿಯಾಗಿರುವ ಚೈನೀಸ್ ತೈಪೇನ ಥೈ ಜು ಯಿಂಗ್ ವಿರುದ್ಧ ಇದೇ ರೀತಿಯ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಮೂಡಿದೆ.

ಒಲಿಂಪಿಕ್ಸ್ ಕ್ರೀಡಾಕೂಟ ಮುಗಿಯುತ್ತಿದ್ದಂತೆ ಅನೇಕ ಕ್ರೀಡಾಪಟುಗಳು ಬ್ರೇಕ್ ತೆಗೆದುಕೊಂಡಿದ್ದರೆ, ಸಿಂಧು ಅದಾಗಲೇ ತಮ್ಮ ಗುರು ಪಿ.ಗೋಪಿಚಂದ್ ಗರಡಿಯಲ್ಲಿ ತಮ್ಮ ಭವಿಷ್ಯದ ಗುರಿ ಸಾಧನೆಗೆ ತಾಲೀಮು ಆರಂಭಿಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಿಂಧು ಮತ್ತಷ್ಟು ಟೂರ್ನಿಗಳನ್ನು ಗೆಲ್ಲುವ ಮೂಲಕ ಮತ್ತೆ ಮತ್ತೆ ಸುದ್ದಿಯಾದರೆ ಅಚ್ಚರಿಪಡಬೇಕಿಲ್ಲ.

Leave a Reply