ಕುಡಿಯುವ ನೀರು- ರೈತರ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕ್ರಮಗಳೇನು?

ಡಿಜಿಟಲ್ ಕನ್ನಡ ಟೀಮ್:

ಬರಗಾಲದಿಂದಾಗಿ ರಾಜ್ಯದಲ್ಲಿ ಹೆಚ್ಚಾಗಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ರೈತರ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೆಲವು ಕ್ರಮಗಳಿಗೆ ಮುಂದಾಗಿದೆ. ಆ ಪೈಕಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಾಚೀನ ಜಲ ಮೂಲಕ್ಕೆ ಕೈ ಹಾಕಿ ಕೆಳಸ್ಥಳದಲ್ಲಿರುವ ನೀರನ್ನು ಮೇಲಕ್ಕೆ ಎತ್ತುವುದು ಹಾಗೂ ಬೆಳೆ ನಷ್ಟ ಎದುರಿಸಿರುವ 10 ಲಕ್ಷ ರೈತರಿಗೆ ಎರಡನೇ ಹಂತದಲ್ಲಿ ಪರಿಹಾರ ನೀಡಲಾಗುವುದು.

ಈ ನಿರ್ಧಾರಗಳ ಕುರಿತಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಸೋಮವಾರ ಸುದ್ದಿಗಾರರಿಗೆ ನೀಡಿದ ಮಾಹಿತಿ ಹೀಗಿವೆ…

‘ರಾಜ್ಯದಲ್ಲಿ ಜಲಮೂಲ ಎಲ್ಲೆಲ್ಲಿ ಇದೆ ಎಂಬುದನ್ನು ಪತ್ತೆ ಹಚ್ಚಿ, ಅತ್ಯಂತ ಕೆಳಮಟ್ಟದಲ್ಲಿರುವ ನೀರನ್ನು ಮೇಲಕ್ಕೆತ್ತುವ ಯಂತ್ರಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡುತ್ತಿದೆ. ಇದಕ್ಕಾಗಿ ಸದ್ಯಕ್ಕೆ ₹ 200 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಯಂತ್ರಗಳು 2 ಸಾವಿರ ಅಡಿ ಆಳ ಕೊರೆಯುವ ಸಾಮರ್ಥ್ಯ ಹೊಂದಿವೆ. ಜತೆಗೆ ಇಂತಹ ಕಡೆ ಇಂತಿಷ್ಟು ನೀರು ಲಭ್ಯವಾಗಲಿದೆ ಎಂಬುದನ್ನು ಪತ್ತೆಹಚ್ಚುವ ಯಂತ್ರಗಳು ಇವೆ. ಇನ್ನು ರಾಜ್ಯದಲ್ಲಿ ಪದೇ ಪದೇ ಇಂತಹ ಪರಿಸ್ಥಿತಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಕೆರೆಗಳ ಹೂಳೆತ್ತಿ ದುರಸ್ಥಿಗೊಳಿಸಿ ಅವುಗಳಲ್ಲಿ ನೀರು ಸಂಗ್ರಹಿಸುವ ಕಾರ್ಯಕ್ಕೆ ಹೆಚ್ಚು ಒತ್ತು ಕೊಡುತ್ತೇವೆ. ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಮೂರು ಹಂತಗಳಲ್ಲಿ ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಇದರ ಜತೆಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಿಗೆ ತಲಾ ₹ 50 ಲಕ್ಷ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ₹ 10 ಲಕ್ಷ ಬಿಡುಗಡೆ ಮಾಡಿ ಕುಡಿಯುವ ನೀರು ಒದಗಿಸಲು ಬಳಸುವಂತೆ ಸೂಚಿಸಲಾಗಿದೆ. ಈ ಹಣವನ್ನು ಕೇವಲ 160 ಬರ ಪೀಡಿತ ತಾಲೂಕುಗಳಿಗೆ ಮಾತ್ರ ನೀಡಲಾಗಿದೆ.’

‘ಮುಂಗಾರು ಮಳೆಯಿಂದ ಉಂಟಾದ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರ ಎರಡು ಹಂತಗಳಲ್ಲಿ ₹ 1685 ಕೋಟಿ ಬಿಡುಗಡೆ ಮಾಡಿದೆ. ಈಗಾಗಲೇ ಮೊದಲನೇ ಹಂತದಲ್ಲಿ ಬಿಡುಗಡೆ ಮಾಡಿದ್ದ ₹ 450 ಕೋಟಿ ಹಣವನ್ನು 1 ಲಕ್ಷ 21 ಸಾವಿರ ರೈತರಿಗೆ ವಿತರಿಸಲಾಗಿದೆ. ಈಗ ಎರಡನೇ ಹಂತದಲ್ಲಿ ಬಂದಿರುವ ₹ 1235 ಕೋಟಿ ಹಣವನ್ನು 10 ಲಕ್ಷ ರೈತರಿಗೆ ಮುಂದಿನ ಹತ್ತು ದಿನಗಳಲ್ಲಿ ಅವರ ಖಾತೆಗೆ ಜಮೆ ಮಾಡಲಾಗುವುದು. ಒಣ ಭೂಮಿ ಬೇಸಾಯ ಮಾಡುವ ರೈತರಿಗೆ ಹೆಕ್ಟೇರ್ ಗೆ ₹6800, ಮಳೆ ಆಶ್ರಿತ ಪ್ರದೇಶ ರೈತರಿಗೆ ₹ 13500, ನೀರಾವರಿ ಪ್ರದೇಶಗಳಲ್ಲಿ ಉಂಟಾದ ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್ ಗೆ ₹ 18 ಸಾವಿರ ನೀಡಲಾಗುವುದು. ಇನ್ನು ರೈತರ ಬಂಪರ್ ತೊಗರಿ ಬೆಳೆ ಬೆಳದಿದ್ದರೂ ಬೆಂಬಲ ಬೆಲೆ ಸಿಕ್ಕಿಲ್ಲ. ಹೀಗಾಗಿ ಕೇಂದ್ರದ ಜತೆ ಕೈಜೋಡಿಸಿ ಪ್ರತಿ ಕ್ವಿಂಟಾಲ್ ಗೆ ₹ 6 ಸಾವಿರ ಎಂಬಂತೆ ಖರೀದಿ ಮಾಡಲಾಗುತ್ತಿದೆ.’

Leave a Reply