ಮತಯಂತ್ರ ದೋಷ ಶಂಕೆ: ಬಹಿರಂಗ ಪರೀಕ್ಷೆಗೆ ಆಹ್ವಾನ ನೀಡಲಿರುವ ಚುನಾವಣ ಆಯೋಗ

ಡಿಜಿಟಲ್ ಕನ್ನಡ ಟೀಮ್:

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ನಂತರ ಮತಯಂತ್ರಗಳ ದೋಷದ ಆರೋಪವಾಗಿ ಆಮ್ ಆದ್ಮಿ ಪಕ್ಷ ಹಾಗೂ ಚುನಾವಣ ಆಯೋಗದ ನಡುವಣ ವಾಕ್ಸಮರ ಮುಂದುವರಿದಿದೆ. ನಿನ್ನೆಯಷ್ಟೇ ಚುನಾವಣ ಆಯೋಗವು ‘ಆಮ್ ಆದ್ಮಿ ಪಕ್ಷ ಮತಯಂತ್ರಗಳ ಮೇಲೆ ಆರೋಪ ಹೊರಿಸುವ ಬದಲು ತನ್ನ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿತ್ತು. ಆದರೆ ಈಗ ಮತಯಂತ್ರದ ದೋಷವನ್ನು ಸಾಬೀತುಪಡಿಸಲು ಚುನಾವಣ ಆಯೋಗ ಮುಕ್ತ ಸವಾಲೆಸೆ ಎಸೆದಿದ್ದು, ಆ ಮೂಲಕ ಅರವಿಂದ್ ಕೇಜ್ರಿವಾಲ್ ಅವರ ಆರೋಪಕ್ಕೆ ತಿರುಗೇಟು ನೀಡಿದೆ.

‘ಚುನಾವಣಾ ಆಯೋಗದಲ್ಲಿರುವ ಯಾವುದಾದರು ಒಂದು ಮತಯಂತ್ರದಲ್ಲಿ ದೋಷವಿದ್ದರೆ ಅಥವಾ ಅದನ್ನು ತಿರುಚಿರುವ ಬಗೆಗಿನ ಆರೋಪ ಸಾಬೀತು ಪಡಿಸುವಂತೆ ನಾವು ಮುಕ್ತ ಸವಾಲು ಹಾಕುತ್ತೇವೆ. ಇದಕ್ಕಾಗಿ ನಾವು ಒಂದು ದಿನಾಂಕ ನಿಗದಿಪಡಿಸುತ್ತೇವೆ. ನಮ್ಮ ಮತಯಂತ್ರಗಳನ್ನು ಪರೀಕ್ಷಿಸಿ ಅದರಲ್ಲಿ ದೋಷವಿದೆ ಎಂದು ಸಾಬೀತುಪಡಿಸು ಯಾರಿಗಾದರು ಸಾಧ್ಯವಾದರೆ ಈ ಸವಾಲನ್ನು ಸ್ವೀಕರಿಸಲಿ…’

‘2009ರಲ್ಲೂ ಭಾರತೀಯ ಚುನಾವಣಾ ಆಯೋಗ ಮತಯಂತ್ರದ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಇಂತಹುದೇ ಮುಕ್ತ ಸವಾಲನ್ನು ಎಸೆದಿತ್ತು. ಆಗ ಯಾರಿಂದಲೂ ನಮ್ಮ ಮತಯಂತ್ರಗಳಲ್ಲಿ ದೋಷವಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಅಂತಹುದೇ ಪರಿಸ್ಥಿತಿ ಎದುರಾಗಿದೆ. ಈಗ ಎದ್ದಿರುವ ಗೊಂದಲಗಳನ್ನು ಬಗೆಹರಿಸಲು ಮತ್ತೆ ಅದೇ ರೀತಿಯ ಸವಾಲು ನೀಡಲು ನಿರ್ಧರಿಸಿದ್ದೇವೆ’ ಎಂದಿದೆ ಚುನಾವಣಾ ಆಯೋಗ.

Leave a Reply