ಹೈವೇಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಸರ್ಕಾರದಿಂದ ಹೊಸ ಕಾನೂನು ಜಾರಿ?

ಡಿಜಿಟಲ್ ಕನ್ನಡ ಟೀಮ್:

ರಾಷ್ಟ್ರ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಜಾರಿಯಾಗಿರುವ ಹಿನ್ನೆಲೆಯಲ್ಲಿ ಇದರ ಪರಿಣಾಮವನ್ನು ತಪ್ಪಿಸಲು ರಾಜ್ಯ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತರುವ ಮೂಲಕ ಈ ಹೆದ್ದಾರಿಗಳಲ್ಲಿ ಮತ್ತೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಈ ವಿಚಾರವಾಗಿ ಇಂದು ಸಂಪುಟ ಉಪಸಮಿತಿ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಈ ಸಭೆಯಲ್ಲಿ ಭಾಗವಹಿಸಿದ್ದ ಕಾನೂನು ಮತ್ತುಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಈ ಬಗ್ಗೆ ಹೇಳಿದಿಷ್ಟು…

‘ಹೆದ್ದಾರಿ ಬದಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಿರುವುದು ಆಯಾ ರಾಜ್ಯಗಳ ಬೊಕ್ಕಸಕ್ಕೆ ಭಾರೀ ಹೊಡೆತ ಬೀಳುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮನವಿ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ, ಹೆದ್ದಾರಿಯಿಂದ 550 ಮೀಟರ್ ದೂರದವರೆಗೂ ನಿಗದಿ ಪಡಿಸಿದ್ದ ನಿಷೇಧದ ವ್ಯಾಪ್ತಿಯನ್ನು 220 ಮೀಟರ್ ವರೆಗೂ ಕಡಿಮೆ ಮಾಡಿದೆ. ಇದರ ಹೊರತಾಗಿಯೂ ಸರ್ಕಾರಕ್ಕೆ ನಷ್ಟವಾಗಲಿದೆ. ಈ ಕಾರಣಕ್ಕೆ ಅನೇಕ ರಾಜ್ಯಗಳಲ್ಲಿ ಹೊಸ ನಿಯಮ ಜಾರಿಗೆ ತಂದು ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಕಾನೂನು ಜಾರಿಗೆ ತಂದು ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲು ಕಾನೂನು ಸಲಹೆ ಪಡೆಯಲಾಗುತ್ತಿದೆ.’

ಇದೇ ವೇಳೆ ತೊಗರಿ ಬೆಳೆ ಖರೀದಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಸಚಿವರು, ‘ಈ ಬಾರಿ ಬಂಪರ್ ತೊಗರಿ ಬೆಳೆ ಬೆಳೆದಿದ್ದರೂ ರೈತರು ಉತ್ತಮ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಇದಕ್ಕಾಗಿ ತೊಗರಿ ದರ ಪರಿಷ್ಕರಿಸುವಂತೆ ಮನವಿ ಮಾಡಿ, ಖರೀದಿಗೆ ನಿಗದಿ ಮಾಡಿರುವ ಏ.15ರ ಅಂತಿಮ ದಿನಾಂಕವನ್ನು ಮೇ.15ರ ವರೆಗೂ ವಿಸ್ತರಿಸಬೇಕು ಎಂದು ಕೋರಿ ರಾಜ್ಯ ಸರ್ಕಾರ ಪ್ರಧಾನಿ ಅವರಿಗೆ ಪತ್ರ ಬರೆದಿದೆ. ಜತೆಗೆ 2.46 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲು ಅವಕಾಶ ಮಾಡಿಕೊಡುವಂತೆಯೂ ಕೋರಲಾಗಿದೆ’ ಎಂದರು.

Leave a Reply