ಇನ್ಮುಂದೆ ರಾಜ್ಯಕ್ಕೆ ಮಲೇಷ್ಯಾ- ಇಂಡೋನೆಷ್ಯಾದಿಂದ ಮರಳು ಆಮದು?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಮರಳು ನೀತಿಯ ಕುರಿತಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಈಗ ಮರಳು ಬೇಡಿಕೆಯನ್ನು ಪೂರ್ಣಗೊಳಿಸಲು ವಿದೇಶದಿಂದ ಆಮದು ಮಾಡಿಕೊಳ್ಳಲು ಮುಂದಾಗಿದೆ. ಅದು ಮಲೇಷ್ಯಾ ಹಾಗೂ ಇಂಡೋನೇಷ್ಯಾದಿಂದ!

ಹೌದು, ಮರಳು ನೀತಿಗೆ ಸಂಬಂಧಿಸಿದಂತೆ ಇಂದು ನಡೆದ ಸಂಪುಟದ ಉಪ ಸಮಿತಿ ಸಭೆಯಲ್ಲಿ ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಅವರು ನೀಡಿರುವ ಮಾಹಿತಿ ಹೀಗಿದೆ…

‘ಮಹಾರಾಷ್ಟ್ರ ಸರ್ಕಾರ ಈಗಾಗಲೇ ವಿದೇಶದಿಂದ ಮರಳನ್ನು ಆಮದು ಮಾಡಿಕೊಳ್ಳುತ್ತಾ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ವಿತರಿಸುತ್ತಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲಿ ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಅನುಮೋದನೆ ಪಡೆದುಕೊಳ್ಳಲಾಗುವುದು. ರಾಜ್ಯದಲ್ಲಿ ವಾರ್ಷಿಕ 23 ರಿಂದ 24 ಲಕ್ಷ ಮಿಲಿಯನ್ ಟನ್ ಮರಳುಅಗತ್ಯವಿದೆ. ಆದರೆ ನೈಸರ್ಗಿಕವಾಗಿ 4 ರಿಂದ 5 ಮಿಲಿಯನ್ ಟನ್ ಮರಳು ದೊರೆಯುತ್ತಿದೆ. ರಾಜ್ಯದಲ್ಲಿ ಜಲಮೂಲ ಬತ್ತಿ ಹೋಗಿ, ಕುಡಿಯುವ ನೀರಿಗೆ ಅಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನದಿ ಹಾಗೂ ಕೆರೆ ಪಾತ್ರಗಳಲ್ಲಿ ಮರಳು ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಮರಳು ನೀತಿ ಅನುಷ್ಠಾನವಾದ ನಂತರ ಆಯ್ದ ಭಾಗಗಳಲ್ಲಿ ಮರಳು ತೆಗೆಯಲು ಅವಕಾಶ ನೀಡಲಾಗುವುದು. ಆದರೆ ಅದರಿಂದ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಮರಳು ಆಮದು ಮಾಡಿಕೊಳ್ಳುವುದರ ಜತೆಗೆ ಎಂಸ್ಯಾಂಡ್ ಗೆ ಉತ್ತೇಜನ ನೀಡಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಎಂಸ್ಯಾಂಡ್ ಉತ್ಪಾದನೆ ಕೋರಿ ಬರುವ ಕಾರ್ಖಾನೆಗಳಿಗೆ ತಕ್ಷಣ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ.’

Leave a Reply