ಜೇಟ್ಲಿ ವಿರುದ್ಧದ ವೈಯಕ್ತಿಕ ಕಾನೂನು ಸಮರಕ್ಕೆ ದೆಹಲಿಯ ಖಜಾನೆಗೆ ಕೋಟಿಗಳ ಲೆಕ್ಕದಲ್ಲಿ ಬರೆ ಹಾಕುತ್ತಿರುವ ಕೇಜ್ರಿವಾಲ್!

ಡಿಜಿಟಲ್ ಕನ್ನಡ ಟೀಮ್:

ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್. ಅದಕ್ಕೆ ಪ್ರತಿಯಾಗಿ ಅರುಣ್ ಜೇಟ್ಲಿ ಮಾನನಷ್ಟ ಮೊಕದ್ದಮೆ ಹಾಕಿದ್ದೂ ಹಳೆಯ ವಿಷಯ.

ಆದರೆ ಕೇಜ್ರಿವಾಲರ ವಕೀಲರ ಬಿಲ್ಲನ್ನು ಭರಿಸಬೇಕಿರುವುದು ದೆಹಲಿ ಸರ್ಕಾರ! ಮೊದಲ ಹಂತದಲ್ಲಿ ಕೇಜ್ರಿವಾಲರ ನ್ಯಾಯವಾದಿ ರಾಮ್ ಜೇಠ್ಮಲಾನಿ ಕಳುಹಿಸಿರುವ ಬಿಲ್ ₹3.42 ಕೋಟಿ. ಇದನ್ನು ಸರ್ಕಾರದ ಖಜಾನೆಯಿಂದ ಭರಿಸುವುದಕ್ಕೆ ಮುಂದಾಗಿ ಆ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆಗಳನ್ನೆಲ್ಲ ಮುಗಿಸಿರುವುದನ್ನು ‘ಟೈಮ್ಸ್ ನೌ’ವರದಿ ಬೆಳಕಿಗೆ ತಂದಿದೆ.

ಮಾನನಷ್ಟ ಎಂಬುದು ಸಾಂಸ್ಥಿಕ ಸ್ವರೂಪದ್ದಲ್ಲ. ಇದು ವ್ಯಕ್ತಿಗತವಾದದ್ದು. ತಮ್ಮ ವ್ಯಕ್ತಿಗತ ಪ್ರಕರಣದ ಬಿಲ್ಲನ್ನು ದೆಹಲಿ ಜನರ ಜೇಬಿನಿಂದ ಎತ್ತಿ ಕೊಡಲು ಹೋಗಿದೆ ‘ಜನಸಾಮಾನ್ಯರ’ ಪಕ್ಷ ಆಮ್ ಆದ್ಮಿ. ಇದಕ್ಕೆ ಅದು ನೀಡುತ್ತಿರುವ ಉತ್ತರವಾದರೂ ಏನು? ಈ ಬಗ್ಗೆ ವರದಿ ಪ್ರಸಾರ ಮಾಡಿದ ವಾಹಿನಿಯನ್ನು ತನ್ನೆಲ್ಲ ಸುದ್ದಿಗೋಷ್ಟಿಗಳಿಂದ ಹೊರಗಿಟ್ಟಿರುವುದು!

‘ಇದು ಬಿಜೆಪಿ ಸೃಷ್ಟಿಸಿರುವ ಕತೆ. ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ಕೇಜ್ರಿವಾಲರ ವಿಷಯಸ್ಫೋಟಕ್ಕೆ ಬಿಜೆಪಿ ನಿರುತ್ತರವಾಗಿದೆ. ಹೀಗಾಗಿ ಚರ್ಚೆಯ ಗಮನ ಬೇರೆಡೆ ತಿರುಗಿಸಲು ಹೀಗೆಲ್ಲ ಮಾಡುತ್ತಿದೆ.’ ಎಂಬುದು ಆಪ್ ಪ್ರತಿಕ್ರಿಯೆಯೇ ಹೊರತು, ಎದುರಿಗಿರುವ ತನ್ನ ವಿರುದ್ಧದ ದಾಖಲೆಗಳನ್ನು ಅಲ್ಲಗಳೆಯುವಲ್ಲಿ ಏನನ್ನೂ ಮಾಡಿಲ್ಲ.

ಇಲ್ಲಿರುವ ಇನ್ನೊಂದು ಕೌತುಕ ಎಂದರೆ ನ್ಯಾಯವಾದಿ ರಾಂ ಜೇಠ್ಮಲಾನಿಯವರದ್ದು. ಈ ಹಿಂದೆ ಪ್ರಕರಣ ದಾಖಲಾದಾಗ ತಾವು ಇದನ್ನು ಪುಕ್ಕಟೆ ಸೇವೆಯಾಗಿ ಮಾಡಿಕೊಡುತ್ತಿರುವುದಾಗಿ ಪ್ರಚಾರ ಗಿಟ್ಟಿಸಿದ್ದರು ಜೇಠ್ಮಲಾನಿ. ನ್ಯಾಯಾಲಯದಲ್ಲಿ ಅರುಣ್ ಜೇಟ್ಲಿ ಅವರನ್ನು ಜೇಠ್ಮಲಾನಿ ಪ್ರಶ್ನೆಗೊಳಪಡಿಸಿದ್ದೆಲ್ಲ ಬಣ್ಣ ಬಣ್ಣದಿಂದ ವರದಿಯಾದವು.

ಹಾಗಾದರೆ ಈಗ ರಾಂ ಜೇಠ್ಮಲಾನಿ ಹೇಳುತ್ತಿರುವುದೇನು?

‘ನೋಡಿ, ನಾನು ಜೇಟ್ಲಿ ವಿರುದ್ಧ ಫ್ರೀಯಾಗಿಯೇ ಪ್ರಕರಣ ನಡೆಸುವುದಾಗಿ ಹೇಳಿದ್ದೆ. ಆದರೆ ಕೇಜ್ರಿವಾಲರು ನಿಮ್ಮ ಶುಲ್ಕದ ಬಿಲ್ ಕಳುಹಿಸಿಕೊಂಡಿ ಎಂದರು. ಪ್ರತಿ ಬಾರಿ ನ್ಯಾಯಾಲಯದಲ್ಲಿ ಕಾಣಿಸಿಕೊಂಡಾಗಲೂ ನಾನು ಸುಮಾರು ₹29 ಲಕ್ಷ ಪಡೆಯುತ್ತೇನೆಂದು ದೆಹಲಿಯಲ್ಲಿ ಎಲ್ಲರಿಗೂ ಗೊತ್ತು. ಆ ಪ್ರಕಾರ ಬಿಲ್ ಕಳುಹಿಸಿದ್ದೇನೆ. ಅವರು ಸರ್ಕಾರದಿಂದ ಕೊಡುತ್ತಾರೋ, ಸ್ವಂತ ಶಕ್ತಿಯಲ್ಲೋ ನನಗೇನು ಗೊತ್ತು? ಶ್ರೀಮಂತರಿಂದ ಮಾತ್ರ ಹಣ ತೆಗೆದುಕೊಂಡು ಉಳಿದ ಬಹಳಷ್ಟು ಪ್ರಕರಣಗಳಲ್ಲಿ ನಾನು ಉಚಿತವಾಗಿ ವಾದ ಮಾಡಿದ್ದೇನೆ. ಹೀಗಾಗಿ ಈಗಲೂ ಕೇಜ್ರಿವಾಲರಿಗೆ ಪಾವತಿ ಕಷ್ಟವಾದರೆ ಖಂಡಿತ ಉಚಿತವಾಗಿಯೇ ನಡೆಸಿಕೊಡುತ್ತೇನೆ.’

ಸಾಮಾನ್ಯರ ಕಾರ್ಡ್ ಉಪಯೋಗಿಸುತ್ತ ಖಾಸಗಿ ಮಾನನಷ್ಟ ಮೊಕದ್ದಮೆಗೆ ಸರ್ಕಾರಿ ಖಜಾನೆಯನ್ನು ಕೋಟಿಗಳ ಲೆಕ್ಕದಲ್ಲಿ ಸುಲಿಯುವ ಮುಖ್ಯಮಂತ್ರಿ. ಸಿಕ್ಕಾಗ ತಗೊಳ್ತೇನೆ, ಉಳಿದಂತೆ ಫ್ರೀ ವಾದ ಅಂತ ರೋಚಕವಾಗಿ ಮಾತನಾಡುವ ನ್ಯಾಯವಾದಿ. ಜೋಡಿ ಚೆನ್ನಾಗಿದೆ!

1 COMMENT

  1. […] ವಿಷಯದ ಕುರಿತಾಗಿ ಡಿಜಿಟಲ್ ಕನ್ನಡ ಈ ಹಿಂದೆ ವರದಿ ಪ್ರಕಟಿಸಿತ್ತು. ನಂತರ ಸರ್ಕಾರದ ಬೊಕ್ಕಸದಿಂದ ತಾವು […]

Leave a Reply