ಮೂರು ದಿನಗಳಲ್ಲಿ ಬೇಡಿಕೆ ಈಡೇರದಿದ್ರೆ ಹೆದ್ದಾರಿ ಬಂದ್ ಮಾಡ್ತೇವೆ- ಕೇಂದ್ರಕ್ಕೆ ಲಾರಿ ಮಾಲೀಕರ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್:

‘ತಮ್ಮ ಬೇಡಿಕೆಗಳನ್ನು ಮುಂದಿನ ಮೂರು ದಿನಗಳಲ್ಲಿ ಈಡೇರಿಸದಿದ್ದರೆ, ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ತೀವ್ರಗೊಳಿಸಲಾಗುವುದು…’ ಇದು ಕೇಂದ್ರ ಸರ್ಕಾರಕ್ಕೆ ಲಾರಿ ಮಾಲೀಕರ ಸಂಘ ನೀಡಿರುವ ಎಚ್ಚರಿಕೆ.

ವಿಮಾ ಪ್ರೀಮಿಯಮ್ ದರ ಕಡಿತ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಲಾರಿ ಮಾಲೀಕರ ಸಂಘ ಕಳೆದ ಐದು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ತಮ್ಮ ಪ್ರತಿಭಟನೆಗೆ ಸರ್ಕಾರ ತಲೆ ಬಾಗದ ಹಿನ್ನೆಲೆಯಲ್ಲಿ ಲಾರಿ ಮಾಲೀಕರು ಈಗ ಹೊಸ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ಹೀಗೆ…

‘ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಕ್ಷಿಣ ಭಾರತದ ರಾಜ್ಯಗಳ ಲಾರಿ ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಪ್ರತಿಭಟನೆ ತೀವ್ರಗೊಳ್ಳಲಿದ್ದು, ಏ.8ರಿಂದ ರಾಷ್ಟ್ರವ್ಯಾಪಿ ಲಾರಿ ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ. ನಾಳೆಯಿಂದ ಪೆಟ್ರೋಲ್, ಡೀಸೆಲ್ ಟ್ಯಾಂಕರ್ ಗಳ ಮಾಲೀಕರು ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಕಳೆದ ಐದು ದಿನಗಳಿಂದ ನಡೆಯುತ್ತಿರುವ ಮುಷ್ಕರದ ಪರಿಣಾಮವಾಗಿ ಸರ್ಕಾರಕ್ಕೆ ಈಗಾಗಲೇ ಏಳೂವರೆ ಸಾವಿರ ಕೋಟಿ ನಷ್ಟವಾಗಿದೆ. ಹೆದ್ದಾರಿ ಟೋಲ್ ಸಂಗ್ರಹದಲ್ಲಿ ಶೇ.20 ರಷ್ಟು ಕಡಿಮೆಯಾಗಿದೆ. ಸರಕು ಸಾಗಾಣಿಕೆಗಳ ವ್ಯತ್ಯಯದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಸರ್ಕಾರ ನಮ್ಮ ಕನಿಷ್ಠ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನಾವು ಮನವಿ ಮಾಡುತ್ತಿದ್ದೇವೆ. ಹೈದರಾಬಾದಿನಲ್ಲಿ ನಡೆದ ಸಭೆಯಲ್ಲಿ ನಮ್ಮ ಸಮಸ್ಯೆಗೆ ಸರ್ಕಾರ ಸ್ಪಂದಿಸದ ಕಾರಣ ನಾವು ಪ್ರತಿಭಟನೆ ಮುಂದುವರಿಸಿದ್ದೇವೆ. ಸರ್ಕಾರ ಮುಂದಿನ ದಿನಗಳಲ್ಲಿಯೂ ಸ್ಪಂದಿಸದಿದ್ದರೆ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ.’

Leave a Reply