ಆರ್ ಸಿಬಿಗೆ ಬಿತ್ತು ಮತ್ತೊಂದು ಗಾಯದ ಬರೆ; ರಾಹುಲ್, ಕೊಹ್ಲಿ, ಎಬಿಡಿ ನಂತರ ಅಲಭ್ಯರಾಗುತ್ತಿರುವ ಆ ಸ್ಫೋಟಕ ಬ್ಯಾಟ್ಸ್ ಮನ್ ಯಾರು?

ಡಿಜಿಟಲ್ ಕನ್ನಡ ಟೀಮ್:

ಕಳೆದ ಬಾರಿಯ ಐಪಿಎಲ್ ರನ್ನರ್ ಅಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯಾದ್ರು ಕಪ್ ಗೆಲ್ಲುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ 10ನೇ ಆವೃತ್ತಿ ಆರಂಭವಾಗುವ ಮುನ್ನವೇ ಆರ್ ಸಿಬಿ ತಂಡಕ್ಕೆ ಗಾಯದ ಸಮಸ್ಯೆ ಬೆನ್ನಿಗೆ ಬಿದ್ದ ಬೇತಾಳನಂತೆ ಕಾಡುತ್ತಿದೆ. ಆರಂಭಿಕ ಕೆ.ಎಲ್.ರಾಹುಲ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಂಯಿಂದ ಹೊರಗುಳಿದಿದ್ದಾರೆ. ಇನ್ನು ತಂಡದ ಆಧಾರಸ್ತಂಭ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಆರಂಭಿಕ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಮತ್ತೊಬ್ಬ ಆಟಗಾರ ಗಾಯಗೊಂಡು ತಂಡಕ್ಕೆ ಅಲಭ್ಯರಾಗುತ್ತಿದ್ದಾರೆ. ಆ ಆಟಗಾರ ಬೇರಾರು ಅಲ್ಲ. ಕಳೆದ ಆವೃತ್ತಿಯಲ್ಲಿ ತಮ್ಮ ಚುರುಕು ಬ್ಯಾಟಿಂಗ್ ನಿಂದ ಎಲ್ಲರ ಗಮನ ಸೆಳೆದಿದ್ದ 19 ವರ್ಷದ ಯುವ ಸ್ಫೋಟಕ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್.

ಹೌದು, ತಂಡದ ಕೋಟ್ ಡೇನಿಯಲ್ ವೆಟ್ಟೋರಿ ಈ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿದ್ದು, ಕಾಲಿಗೆ ಗಾಯ ಮಾಡಿಕೊಂಡಿರುವ ಸರ್ಫರಾಜ್ ಖಾನ್ ಈ ಬಾರಿಯ ಟೂರ್ನಿಯ ಆರಂಭಿಕ ಹಂತದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಅವರು ಹೇಳಿದ್ದಿಷ್ಟು…

‘ಬೆಂಗಳೂರಿನಲ್ಲಿ ಅಭ್ಯಾಸ ಪಂದ್ಯವಾಡುತ್ತಿರುವಾಗ ಕಾಲಿಗೆ ಪೆಟ್ಟಾಗಿರುವ ಹಿನ್ನೆಲೆಯಲ್ಲಿ ಸರ್ಫರಾಜ್ ಖಾನ್ ಅಲಭ್ಯರಾಗಿದ್ದಾರೆ. ಅವರು ಈ ಆವೃತ್ತಿಯ ಬಹುತೇಕ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಬಿಸಿಸಿಐ ಜತೆ ಮಾತುಕತೆ ನಡೆಸುತ್ತಿದ್ದೇವೆ. ಇನ್ನು ವಿರಾಟ್ ಕೊಹ್ಲಿ ಹಾಗೂ ಡಿವಿಲಿಯರ್ಸ್ ಗಾಯದಿಂದ ಗುಣಮುಖರಾಗಲಿದ್ದು, ಆದಷ್ಟು ಬೇಗ ಕಣಕ್ಕಿಳಿಯಲಿದ್ದಾರೆ.’

ಸರ್ಫರಾಜ್ ಖಾನ್ ತಂಡಕ್ಕೆ ಅಲಭ್ಯರಾಗಲಿದ್ದಾರೆ ಎಂಬುದು ಅಧಿಕೃತವಾಗುತ್ತಿದ್ದಂತೆ, ನಾಳೆ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ರಾಹುಲ್, ಕೊಹ್ಲಿ, ಡಿವಿಲಿಯರ್ಸ್ ಜತೆಗೆ ಸರ್ಫರಾಜ್ ಖಾನ್ ಅನುಪಸ್ಥಿತಿಯನ್ನು ಎದುರಿಸಬೇಕಿದೆ.

Leave a Reply