ಸಾಲಗಾರರನ್ನು ಖುಷಿಪಡಿಸಿ ಸಾಮಾನ್ಯ ಖಾತೆದಾರರಿಗೆ ಬರೆ, ಎಸ್ಬಿಐ ‘ದೊಡ್ಡತನ’ ಇಷ್ಟೇ ನೋಡಿ

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರಿನಲ್ಲಿ ಮಾಸಿಕ ₹25000 ಹಾಗೂ ಅದಕ್ಕಿಂತ ಕಡಿಮೆ ಸಂಬಳ ಪಡೆಯುವವರು ಎಷ್ಟಿಲ್ಲ ಹೇಳಿ? ಸರ್ಕಾರಿ ಸ್ವಾಮ್ಯದ ಎಸ್ಬಿಐ ಲೆಕ್ಕದಲ್ಲಿ ಇವರೆಲ್ಲ ಸ್ಥಿತಿವಂತರಾಗಿಬಿಟ್ಟಿದ್ದಾರೇನೋ? ₹5000ಕ್ಕಿಂತ ಕಡಿಮೆ ಬ್ಯಾಲೆನ್ಸ್ ನಿಮ್ಮ ಉಳಿತಾಯ ಖಾತೆಯಲ್ಲಿದ್ದರೆ ನಾವು ದಂಡ ವಸೂಲಿ ಮಾಡುತ್ತೇವೆ ಎಂದಿದೆ ಎಸ್ಬಿಐ. ಮನೆ ಬಾಡಿಗೆಗೆಂದೇ 5-8 ಸಾವಿರದವರೆಗೆ ಕೈಬಿಡುವ ಮೊತ್ತ. ನಂತರ ಬದುಕಿನ ಖರ್ಚುಗಳು ಇವನ್ನೆಲ್ಲ ನಿಭಾಯಿಸುತ್ತ, ವರ್ಷದಲ್ಲಿ ಕೆಲ ಬಾರಿ ಉಳಿತಾಯ ಖಾತೆಯ ಮೊತ್ತ ₹5000ಕ್ಕಿಂತ ಕಡಿಮೆಯಾದರೂ ದಂಡ ಕಟ್ಟಿಕೊಂಡಿರಬೇಕು. ಇಷ್ಟೇ ಅಲ್ಲ, ವಹಿವಾಟು ಮಿತಿ, ಚೆಕ್ ನೀಡಿಕೆಗೆ ಹಣ ಅಂತೆಲ್ಲ ಹೊಸ ಹೊಸ ದರಗಳ ಪಟ್ಟಿ ಮುಂದಿಟ್ಟಿದೆ ಎಸ್ಬಿಐ.

ಇಷ್ಟೆಲ್ಲ ಮಾಡಿ ಇವರು ಉದ್ಧಾರ ಮಾಡಲಿಕ್ಕೆ ಹೊರಟಿರೋದು ಯಾರನ್ನು ಅಂತಂದ್ರೆ ಸಾಲಗಾರರನ್ನು. ನಿಜ, ಸಾಲದ ಮೇಲಿನ ಬಡ್ಡಿಯೇ ಬ್ಯಾಂಕುಗಳಿಗೆ ಆಹಾರ ಅನ್ನೋದನ್ನು ಒಪ್ಪೋಣ. ಆದರೆ ಎಲ್ಲರೂ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಬೇಕು ಎಂದೆಲ್ಲ ಸರ್ಕಾರ ಮಾತಾಡುತ್ತಿರುವಾಗ ಇತ್ತ ಆಗುತ್ತಿರುವುದೇನು? ಇವರ ಕೃತಿಗಳು ಖಾಸಗಿ ಬ್ಯಾಂಕುಗಳನ್ನೂ ಪ್ರಚೋದಿಸುತ್ತವಷ್ಟೆ. ಒಂದೆಡೆ ಎಸ್ಬಿಎಂನಂಥ ಅಧೀನ ಬ್ಯಾಂಕುಗಳನ್ನು ವಿಲೀನಗೊಳಿಸಿಕೊಂಡಿರುವ ಎಸ್ಬಿಐ ಅಷ್ಟರಮಟ್ಟಿಗೆ ಗ್ರಾಹಕನಿಂದ ದೂರ ಸರಿಯುವ ಸೂಚನೆ ನೀಡಿದೆ. ಏಕೆಂದರೆ ಹಿಂದಿ-ಇಂಗ್ಲಿಷು ಗೊತ್ತಿದ್ದವರನ್ನಷ್ಟೇ ಬ್ಯಾಂಕುಗಳಲ್ಲಿ ಮಾತಾಡಿಸುತ್ತೇವೆ ಎಂಬ ಸ್ಥಿತಿ ಈ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಸಧ್ಯದಲ್ಲೇ ಶುರುವಾಗುತ್ತದೆ.

ಹೀಗಿರುವಾಗ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಎಸ್ಬಿಐ ಕೈಗೊಂಡಿರುವ ಕ್ರಮಗಳೇನು ಗಮನಿಸಿ.

ಎಸ್ ಬಿಐ 15 ಬೇಸಿಸ್ ಪಾಯಿಂಟ್ ಗಳನ್ನು ಕಡಿತ ಮಾಡುವ ಮೂಲಕ ಶೇ. 9.25ರಷ್ಟಿದ್ದ ಸಾಲದ ಬಡ್ಡಿ ದರವನ್ನು ಶೇ. 9.10ಕ್ಕೆ ಇಳಿಸಿದೆ. ಇನ್ನು ಎಂಸಿಎಲ್ಆರ್ (ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್) ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೀಗಾಗಿ ಎಂಸಿಎಲ್ಆರ್ ಆರು ತಿಂಗಳ ದರ ಶೇ.7.95 ಹಾಗೂ ಮೂರು ವರ್ಷಗಳ ದರ ಶೇ.8.15 ರಷ್ಟು ಮುಂದುವರಿಯಲಿದೆ.

ಎಸ್ ಬಿಐ ಮಾಸಿಕ ಸರಾಸರಿ ಬಾಕಿ ಹಣ (ಎಂಎಬಿ) ದ ಮಿತಿ, ಅಂದರೆ ಪ್ರತಿ ತಿಂಗಳು ಗ್ರಾಹಕರು ತಮ್ಮ ಖಾತೆಯಲ್ಲಿ ಇಂತಿಷ್ಟು ಹಣವನ್ನು ಹೊಂದಿರಲೇಬೇಕೆಂಬ ಮಿತಿಯನ್ನು ಹೆಚ್ಚಿಸಿದೆ. ಈ ಹಿಂದೆ ಉಳಿತಾಯ ಖಾತೆಯಲ್ಲಿ ಇದರ ಪ್ರಮಾಣ ₹ 500 ರಷ್ಟಿತ್ತು. ಇನ್ನು ಚೆಕ್ ಬುಕ್ ಪಡೆಯುವವರು ಕನಿಷ್ಟ ₹ 1000 ಹಣವನ್ನು ತಮ್ಮ ಖಾತೆಯಲ್ಲಿ ಹೊಂದಿರಬೇಕಿತ್ತು. ಆದರೆ ಈಗ ಈ ಮಿತಿಯನ್ನು ₹ 5000 ವರೆಗೂ ಹೆಚ್ಚಿಸಿದೆ. ಮೆಟ್ರೋ, ನಗರ, ಉಪ ನಗರ ಮತ್ತು ಗ್ರಾಮೀಣ ಎಂದು ವಿವಿಧ ವರ್ಗೀಕರಣ ಮಾಡಲಾಗಿದ್ದು, ಈ ಪ್ರದೇಶದ ಗ್ರಾಹಕರಿಗೆ ಪ್ರತ್ಯೇಕ ಮಿತಿಯನ್ನು ನಿಗದಿಪಡಿಸಿದೆ.

ಮೆಟ್ರೋ ಪ್ರದೇಶಗಳ ಗ್ರಾಹಕರು ಪ್ರತಿ ತಿಂಗಳು ತಮ್ಮ ಖಾತೆಯಲ್ಲಿ ಕನಿಷ್ಠ ₹ 5000 ಹೊಂದಿರಬೇಕು. ನಗರ ಪ್ರದೇಶದ ಗ್ರಾಹಕರು ₹ 3000, ಉಪನಗರ ಪ್ರದೇಶ ಗ್ರಾಹಕರು ₹ 2000 ಹಾಗೂ ಗ್ರಾಮೀಣ ಪ್ರದೇಶ ಜನರು ₹ 1000 ತಮ್ಮ ಖಾತೆಯಲ್ಲಿ ಹೊಂದಿರಬೇಕು. ಇದನ್ನು ಪಾಲಿಸದಿದ್ದರೆ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ₹ 20, ಇತರೆ ಪ್ರದೇಶದ ಗ್ರಾಹಕರಿಗೆ ₹ 50- 100 ವರೆಗು ದಂಡ ವಿಧಿಸಲಾಗುವುದು ಎಂದು ಎಸ್ಬಿಐ ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿದೆ.

ಈ ನಿರ್ಧಾರಗಳು ಏಪ್ರಿಲ್ 1ರಿಂದಲೇ ಅನ್ವಯವಾಗಲಿದ್ದು, ಸುರಭಿ, ಬೇಸಿಕ್ ಸೇವಿಂಗ್ ಬ್ಯಾಂಕ್ ಮತ್ತು ಪ್ರಧಾನಮಂತ್ರಿ ಜನ್ ಧನ್ ಯೋಜನೆಯ ಖಾತೆದಾರರಿಗೆ ಅನ್ವಯವಾಗುವುದಿಲ್ಲ. ಹಾಗೆಯೇ ಉಳಿತಾಯ ಖಾತೆಯಲ್ಲಿ ₹25000 ಮೊತ್ತ ಹೊಂದಿದ್ದರೆ ಎಟಿಎಂ ಅನ್ನು ಎಷ್ಟು ಬಾರಿ ಬೇಕಾದರೂ ಉಪಯೋಗಿಸಬಹುದು. ಇವರಿಗೆ ಎಸ್ಸೆಂಎಸ್ ಸೇವಾದರವೂ ಅನ್ವಯವಾಗುವುದಿಲ್ಲ.

ಎಸ್ ಬಿಐ ತನ್ನ ಗ್ರಾಹಕರಿಗೆ ನೀಡುವ ಇತರೆ ಸೇವೆಗಳಿಗೂ ಶುಲ್ಕ ವಿಧಿಸಲು ಮುಂದಾಗಿದೆ. ಅವುಗಳೆಂದರೆ… ಗ್ರಾಹಕರಿಗೆ ನೀಡಲಾಗುವ ಲಾಕರ್ ಸೌಲಭ್ಯಕ್ಕೆ ಶುಲ್ಕ ನಿಗದಿ. ಒಂದು ವರ್ಷದಲ್ಲಿ ಆರಂಭದಲ್ಲಿ ಇಂತಿಷ್ಟು ಬಾರಿಗೆ ಬಳಸುವ ಲಾಕರ್ ಸೇವೆ ಉಚಿತವಾಗಲಿದ್ದು, ಅದಾದ ನಂತರ ಲಾಕರ್ ಬಳಸಿದರೆ ಅದಕ್ಕೆ ಶುಲ್ಕ ವಿಧಿಸಲಾಗುವುದು. ಇನ್ನು ಒಬ್ಬ ವ್ಯಕ್ತಿ ವರ್ಷಕ್ಕೆ 50 ಚೆಕ್ ಗಳನ್ನು ಉಚಿತವಾಗಿ ಬಳಸಬಹುದು. ನಂತರ ಪ್ರತಿ ಚೆಕ್ ಗೆ ₹ 3 ಶುಲ್ಕ ವಿಧಿಸಿದೆ. ಇದರೊಂದಿಗೆ 25 ಚೆಕ್ ಗಳಿರುವ ಚೆಕ್ ಬುಕ್, ಸೇವಾ ತೆರಿಗೆ ಸೇರಿಸಿ ₹ 75  ಆಗುತ್ತದೆ. 50 ಚೆಕ್ ಗಳಿರುವ ಚೆಕ್ ಬುಕ್ ಸೇವಾ ತೆರಿಗೆ ಸೇರಿ ₹ 150 ಪಾವತಿಸಬೇಕು.

ಎಸ್ ಬಿಐ ಹೀಗೆ ಗ್ರಾಹಕರಿಗೆ ನೀಡುವ ವಿವಿಧ ಸೇವೆಗಳಿಗೆ ಶುಲ್ಕ ನಿಗದಿಪಡಿಸುವ ನಿರ್ಧಾರವನ್ನು ಇತರೆ ಬ್ಯಾಂಕುಗಳು ಅಳವಡಿಸಿಕೊಳ್ಳುವ ನಿರೀಕ್ಷೆ ಇದೆ. ಈ ಎಲ್ಲ ಕ್ರಮಗಳು ಸಹಜವಾಗಿ ಗ್ರಾಹಕರಿಗೆ ದುಬಾರಿಯಾಗಿ ಪರಿಣಮಿಸಲಿವೆ.

Leave a Reply