ಕನ್ನಡಕ್ಕೆ ಡಬ್ ಆದ ಸ್ಪೈಡರ್ ಮ್ಯಾನ್, ಸಧ್ಯಕ್ಕಿದು ಟ್ರೈಲರ್

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಬೇಕು- ಬೇಡ ಎಂಬುದರ ಬಗ್ಗೆ ಆಗಿದ್ದಾಗೆ ಚರ್ಚೆಯಾಗುತ್ತಲೇ ಇದೆ. ಹೀಗಿರುವಾಗ ಸೋನಿ ಪಿಚ್ಚರ್ಸ್ ಇಂಡಿಯಾ ಸಂಸ್ಥೆ ಹಾಲಿವುಡ್ ನ ಖ್ಯಾತ ‘ಸ್ಪೈಡರ್ ಮ್ಯಾನ್’ ಚಿತ್ರದ ಟ್ರೈಲರ್ ಅನ್ನು ಕನ್ನಡದ ಅವತರಣಿಕೆಯಲ್ಲಿ ಬಿಡುಗಡೆ ಮಾಡಿದೆ. ಕೇವಲ ಕನ್ನಡ ಮಾತ್ರವಲ್ಲದೆ ಈ ಟ್ರೈಲರ್ ಹಿಂದಿ, ತಮಿಳು, ತೆಲುಗು, ಮಲೆಯಾಳಂ ಹಾಗೂ ಮರಾಠಿ ಭಾಷೆಗಳಲ್ಲೂ ಲಭ್ಯವಿದೆ. ಬಹುಶಃ ಜುಲೈನಲ್ಲಿ ಚಿತ್ರ ಬಿಡುಗಡೆಯಾದಾಗ ಕನ್ನಡ ಅವತರಣಿಕೆಯೂ ಪ್ರದರ್ಶನವಾಗುವ ನಿರೀಕ್ಷೆ ಇದೆ.

ಈ ಚಿತ್ರದ ಟ್ರೈಲರ್ ಅನ್ನು ನೋಡಿ ಮೆಚ್ಚಿದವರದು ಒಂದು ವರ್ಗವಾದರೆ, ವಿರೋಧಿಸುತ್ತಿರುವವರದು ಮತ್ತೊಂದು ವರ್ಗ. ಬೇರೆ ಭಾಷೆಯ ಚಿತ್ರಗಳು ಕನ್ನಡದಲ್ಲಿ ಡಬ್ಬಿಂಗ್ ಆಗಬೇಕು ಎಂದು ವಾದಿಸುವವರು, ಈ ಪ್ರಯತ್ನವನ್ನು ಸ್ವಾಗತಿಸಿ ಹಾಡಿ ಹೊಗಳುತ್ತಿದ್ದಾರೆ. ಇಂತಹ ಪ್ರಯತ್ನಗಳು ಆಗಬೇಕು. ಕೇವಲ ಟ್ರೇಲರ್ ಮಾತ್ರವಲ್ಲದೆ ಇಡಿ ಚಿತ್ರವೇ ಕನ್ನಡದಲ್ಲಿ ಡಬ್ ಆಗಬೇಕು. ಇದರಿಂದ ಕನ್ನಡ ಭಾಷೆ ಉಳಿಯುತ್ತದೆ. ಇಂಗ್ಲಿಷ್ ಗೊತ್ತಿಲ್ಲದ ಗ್ರಾಮೀಣ ಭಾಗದ ಜನರು ತಮ್ಮ ಮಾತೃ ಭಾಷೆಯಲ್ಲಿ ಇಂತಹ ಉತ್ತಮ ಚಿತ್ರಗಳನ್ನು ನೋಡಿ ಆನಂದಿಸುತ್ತಾರೆ. ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ನಮ್ಮ ಮಾತೃಭಾಷೆಯಲ್ಲಿ ನೋಡುವ ಅವಕಾಶ ಸಿಗಲಿದೆ. ಬೇರೆ ಭಾಷಿಗರು ಇಂತಹ ಸಿನಿಮಾಗಳನ್ನು ತಮ್ಮ ಮಾತೃಭಾಷೆಯಲ್ಲಿ ನೋಡಿ ಆನಂದಿಸುತ್ತಿರುವಾಗ ನಾವು ಯಾಕೆ ಈ ಅವಕಾಶದಿಂದ ವಂಚಿತರಾಗಬೇಕು?… ಹೀಗೆ ಹಲವು ಕಾರಣಗಳನ್ನು ನೀಡುತ್ತಾ ಡಬ್ಬಿಂಗ್ ಪರ ಬ್ಯಾಟಿಂಗ್ ಮಾಡಲಾಗುತ್ತಿದೆ.

ಆದರೆ ಮತ್ತೊಂದು ವರ್ಗ ಇದಕ್ಕೆ ವಿರೋಧಿಸುತ್ತಾ ತಮ್ಮದೇ ಆದ ಕಾರಣಗಳನ್ನು ಮುಂದಿಡುತ್ತಿದ್ದಾರೆ. ಅವುಗಳು ಹೀಗಿವೆ… ಈ ಚಿತ್ರದಲ್ಲಿನ ಟ್ರೈಲರ್ ನೋಡುತ್ತಿದ್ದರೆ, ನಟರ ಅಭಿನಯಕ್ಕೂ ಹಾಗೂ ಸಂಭಾಷಣೆಗೂ ಹೊಂದಾಣಿಕೆ ಆಗುತ್ತಿಲ್ಲ. ಇನ್ನು ಈ ಸಂಭಾಷಣೆಗಳು ಕತೆಯನ್ನು ಓದುತ್ತಿರುವಂತೆ ಭಾಸವಾಗುತ್ತದೆ. ಇದರಿಂದ ಚಿತ್ರವನ್ನು ಪೂರ್ಣ ಪ್ರಮಾಣದಲ್ಲಿ ನೋಡಿ ಆನಂದಿಸಲು ಸಾಧ್ಯವಿಲ್ಲ. ಡಬ್ಬಿಂಗ್ ಗುಣಮಟ್ಟ ಕಳಪೆಯಾಗಿದ್ದು, ನಮ್ಮ ನೇಟಿವಿಟಿಗೆ ಹೊಂದುತ್ತಿಲ್ಲ. ಹೀಗಾಗಿ ಈ ಚಿತ್ರದ ಟ್ರೇಲರ್ ನೋಡುತ್ತಿದ್ದರೆ ಕನ್ನಡದ ಕಾರ್ಟೂನ್ ವಾಹಿನಿ ಚಿಂಟು ಟಿವಿ ನೋಡಿದಂತಾಗುತ್ತಿದೆ. ಅಷ್ಟೇ ಅಲ್ಲದೆ ಡಬ್ಬಿಂಗ್ ಗೆ ಅವಕಾಶ ನೀಡಿದರೆ, ಕನ್ನಡ ಚಿತ್ರಗಳು ಈಗಾಗಲೇ ಚಿತ್ರಮಂದಿರಗಳ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ, ಇಂತಹ ಬೇರೆ ಭಾಷೆಯ ಚಿತ್ರಗಳು ಡಬ್ಬಿಂಗ್ ಆಗಿ ಬಂದು ಮತ್ತಷ್ಟು ಚಿತ್ರ ಮಂದಿರಗಳನ್ನು ಕಸಿದುಕೊಳ್ಳುವ ಸಾಧ್ಯತೆಗಳಿವೆ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಎರಡು ಕಡೆಗಳಿಂದಲೂ ಭಿನ್ನ ದೃಷ್ಟಿಕೋನದ ಮೇಲೆ ಡಬ್ಬಿಂಗ್ ಪರ ಹಾಗೂ ವಿರೋಧದ ವಾದ ಮಂಡಿಸಲಾಗುತ್ತಿದೆ. ಈ ಎಲ್ಲ ಪ್ರತಿಕ್ರಿಯೆ ಬರುತ್ತಿರುವ ಹೊತ್ತಲ್ಲಿ ನೀವು ಈ ಟ್ರೇಲರ್ ನೋಡಿ… ನಿಮಗೆ ಇಷ್ಟವಾಗುತ್ತೊ, ಇಲ್ಲವೊ ನೀವೆ ಹೇಳಿ…

Leave a Reply