ಮಾಡರ್ನ್ ಮನಿ ಥಿಯರಿ… ಇದೊಂತರ ಅಕ್ಷಯ ಪಾತ್ರೆ ಕಣ್ರೀ! 

ನಾವು ಸಣ್ಣವರಿದ್ದಾಗ ಬೇಸಿಗೆ ರಜೆಯಲ್ಲಿ ಹಲವು ಆಟಗಳನ್ನು ಆಡುತ್ತಾ ಬೆಳೆದೆವು. ಹೈಸ್ಕೂಲ್ ಸಮಯದಲ್ಲಿ ‘ಮೊನಾಪಲಿ’ ಎನ್ನುವ ಒಂದು ವ್ಯಾಪಾರದ ಆಟ ಆಡಿದ ನೆನಪು ಇನ್ನೂ ಹಸಿರು. ಅದರಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೂ ಸಮನಾಗಿ ದುಡ್ಡು ಹಂಚಲಾಗುತಿತ್ತು. ಆಮೇಲಿನದು ಆಟಗಾರನ ವ್ಯಾಪಾರೀ ಬುದ್ದಿ, ದಕ್ಷತೆ ಮೇಲೆ ನಿರ್ಧಾರವಾಗುತ್ತಿತ್ತು. ನನಗಿಂತ ಚಿಕ್ಕ ಹುಡುಗರಿಗೆ ಕೈಗೆ ಸಿಕ್ಕ ಹಣವನ್ನು ಏನು ಕೊಳ್ಳಲು ಬಳಸಬೇಕು ಎನ್ನುವ ಅರಿವಿಲ್ಲದೆ ಸಿಕ್ಕದ್ದ ಕೊಂಡು ಕೈ ಬರಿದು ಮಾಡಿಕೊಂಡು ಆಟದಲ್ಲಿ ಮೂಲೆಗುಂಪಾಗಿ ಹೋಗುತ್ತಿದ್ದರು. ಈಗ ಇದಕ್ಕಿದ್ದಂತೆ ಈ ಆಟವನ್ನು ನೆನಪಿಸಿಕೊಳ್ಳಲು ಮುಖ್ಯ ಕಾರಣ ಇದೆ. ಈ ಆಟವನ್ನು ನೀವು ಜಗತ್ತಿಗೆ ವಿಸ್ತರಿಸಿ. ಜಗತ್ತಿನ ಎಲ್ಲಾ 197 ದೇಶಗಳು ಒಬ್ಬೊಬ್ಬ ಆಟಗಾರನಿದ್ದಂತೆ. ಇಲ್ಲಿ ಹಣವನ್ನು ಸಮನಾಗಿ ಹಂಚುವ ಬದಲು ಆಯಾ ದೇಶದ ಸರಕಾರಕ್ಕೆ ಸೆಂಟ್ರಲ್ ಬ್ಯಾಂಕ್ ಮೂಲಕ ನಿಗದಿತ ಹಣವನ್ನು ಪ್ರಿಂಟ್ ಮಾಡುವ ಅವಕಾಶವಿದೆ. ಎರಡನೇ ಮಹಾಯುದ್ದಕ್ಕೆ ಮುಂಚೆ ಆಯಾ ದೇಶದಲ್ಲಿನ ಬಂಗಾರದ ಸಂಗ್ರಹಣೆ ಎಷ್ಟಿದೆ ಎನ್ನುವುದರ ಮೇಲೆ ಅವರು ಎಷ್ಟು ಹಣ ಮುದ್ರಿಸಬಹದು ಎನ್ನುವ ನಿರ್ಧಾರ ಆಗುತಿತ್ತು. ಎರಡನೇ ಮಹಾಯುದ್ಧದ ನಂತರ ಅಮೆರಿಕ ಗೋಲ್ಡ್ ಬ್ಯಾಕ್ ಅಪ್ ಮೇಲಿನ ಮುದ್ರಣ ನೀತಿಯನ್ನು ಗಾಳಿಗೆ ತೂರಿತು. ಅಂದರೆ ಇಂದಿನ ಡಾಲರ್ ಗೆ ಯಾವುದೇ ಗೋಲ್ಡ್ ಬ್ಯಾಕ್ ಅಪ್ ಇಲ್ಲ. ವಸ್ತು ಸ್ಥಿತಿ ಹೀಗಿರುವಾಗ ಜಗತ್ತಿನ ಎಲ್ಲಾ ದೇಶಗಳು ತಮ್ಮಿಚ್ಚೆಗೆ ಬಂದಷ್ಟು ಹಣ ಮುದ್ರಿಸಿ ಅದನ್ನು ಲೀಗಲ್ ಟೆಂಡರ್ ಎಂದು ಘೋಷಿಸಿದರೆ ಮುಗಿಯಿತು. ಆದರೆ ಯಾರೂ ಹಾಗೆ ಮನಸೋ ಇಚ್ಛೆ ಮುದ್ರಿಸಿ ಹಂಚುತ್ತಿಲ್ಲ. ಏಕೆಂದರೆ ಮೌಲ್ಯವಿರುವುದು ವಸ್ತುವಿಗೆ ಹಣಕ್ಕಲ್ಲ!

ದಿನ ಒಪ್ಪೊತ್ತಿನಲ್ಲಿ ಬೇಕಾದಷ್ಟು ಹಣವನ್ನು ಮುದ್ರಿಸಿಬಿಡಬಹುದು ಆದರೆ ಆ ಹಣದಿಂದ ಕೊಳ್ಳಬಹುದಾದ ವಸ್ತುವನ್ನು ಸೃಷ್ಟಿಸಲು ಸಾಧ್ಯವೇ? ನೈಸರ್ಗಿಕ ಸಂಪನ್ಮೂಲಗಳ ಚಿಟಿಕೆ ಹೊಡೆದು ಹೆಚ್ಚಾಗಿಸಲು ಸಾಧ್ಯವಿಲ್ಲ. ಹೀಗಾಗಿ ಜಗತ್ತಿನ ಎಲ್ಲಾ ದೇಶಗಳು ತಾವೇ ಸೃಷ್ಟಿಸಿಕೊಂಡ ಹಣಕಾಸು ಆಟದಲ್ಲಿ ಟ್ರ್ಯಾಪ್ ಆಗಿವೆ. ಕಳೆದ ಎರಡು ದಶಕದಿಂದ ಹಣಕಾಸು ವ್ಯವಸ್ಥೆಯಲ್ಲಿರುವ ಈ ಸಿಕ್ಕನ್ನು ಬಿಡಿಸಲು ಒಂದು ಆರ್ಥಿಕ ತಜ್ಞರ ಗುಂಪು ಲಾಬಿ ನಡೆಸುತ್ತಾ ಬಂದಿದೆ. ತನ್ನ ವಾದಕ್ಕೆ ‘ಮಾಡರ್ನ್ ಮನಿ ಥಿಯರಿ’ ಎನ್ನುವ ಹೆಸರು ಕೊಟ್ಟಿದೆ. ಅಮೆರಿಕ ಮಹಾ ಕುಸಿತ, ಯೂರೋಪಿನ ಆರ್ಥಿಕ ಕುಸಿತದಿಂದ ಭಾಗಾಂಶ ಜಾಗತಿಕ ಮಾರುಕಟ್ಟೆ ಮುದುಡಿರುವುದು ಎಲ್ಲರಿಗೂ ತಿಳಿದ ವಿಷಯವೇ. ಹೀಗಾಗಿ ಈ ಬಿಕ್ಕಟ್ಟಿನಿಂದ ಹೊರಬರಲು ಮೆಲ್ಲಮೆಲ್ಲಗೆ ಆರ್ಥಿಕ ತಜ್ಞರು ‘ಮೊಡರ್ನ್ ಮನಿ ಥಿಯರಿ’ ಗೆ ತಲೆದೂಗಲು ಶುರು ಮಾಡಿದ್ದಾರೆ.

ಏನಿದು ಮಾಡರ್ನ್ ಮನಿ ಥಿಯರಿ?

ಜಗತ್ತಿನ ಯಾವುದೇ ದೇಶದ ಸರಕಾರಕ್ಕೆ ಬೇಕಾದಷ್ಟು ಹಣವನ್ನು ಮುದ್ರಿಸುವ ಅಧಿಕಾರ ಇದೆ. ಅಂದಮಾತ್ರಕ್ಕೆ ಬೇಕಾಬಿಟ್ಟಿ ಹಣ ಮುದ್ರಿಸಿ ಎನ್ನುವುದು ಈ ಥಿಯರಿ ವಾದವಲ್ಲ. ಬದಲಿಗೆ ಫಿಸ್ಕಲ್ ಡೆಫಿಸಿಟ್ ಎಷ್ಟಿದೆ ಅಷ್ಟನ್ನು ಮುದ್ರಿಸಿದರೆ ತಪ್ಪಿಲ್ಲ ಎನ್ನುತ್ತದೆ ಈ ವಾದ. ಸರಳವಾಗಿ ಹೇಳಬೇಕೆಂದರೆ ಯಾವುದೇ ಸರಕಾರ ದಿವಾಳಿ ಆಗಲು ಸಾಧ್ಯವೇ ಇಲ್ಲ ಎನ್ನುವುದು. ಸದಾ ಕಾಲಕ್ಕೂ ಅದು ಕೆಲಸ ಮಾಡಿಸಿಕೊಂಡವರಿಗೆ ಹಣವನ್ನು ಕೊಡುವ ಶಕ್ತಿ ಹೊಂದಿರುತ್ತದೆ ಎನ್ನುವುದು ಈ ವಾದದ ತಿರುಳು. ಬನ್ನಿ ಇದನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಉದಾಹರಣೆ ನೋಡೋಣ.

ಭಾರತ ಸರಕಾರಕ್ಕೆ ಎಲ್ಲಾ ಮೂಲಗಳಿಂದ ಬಂದ ಆದಾಯ ನೂರು ರೂಪಾಯಿ ಎಂದುಕೊಳ್ಳಿ. ಖರ್ಚು ನೂರಾಹತ್ತು ರೂಪಾಯಿ ಎಂದುಕೊಂಡರೆ, ಆದಾಯಕ್ಕಿಂತ ಹೆಚ್ಚಿದ ಹತ್ತು ರೂಪಾಯಿ ಖರ್ಚನ್ನು ಆ ವರ್ಷದ ಬಜೆಟ್ ಡೆಫಿಸಿಟ್ ಎಂದು ಕರೆಯಲಾಗುತ್ತದೆ. ಇಂತಹ ಹಲವು ವರ್ಷಗಳ ಬಜೆಟ್ ಡೆಫಿಸಿಟ್ ಗಳ ಒಟ್ಟು ಮೊತ್ತವನ್ನು ಫಿಸ್ಕಲ್ ಡೆಫಿಸಿಟ್ ಎಂದು ಕರೆಯಲಾಗುತ್ತದೆ. ಆದಾಯಕ್ಕಿಂತ ಹೆಚ್ಚಿದ ಖರ್ಚನ್ನು ಸರಿದೂಗಿಸಲು ಸರಕಾರ ಕೆಲವೊಮ್ಮೆ ಕೆಲವೊಂದು ವಿಷಯಗಳಿಗೆ ಮೀಸಲಿಟ್ಟ ಹಣವನ್ನು ಕಡಿತ ಮಾಡುತ್ತದೆ. ಉದಾಹರಣೆಗೆ ಶಿಕ್ಷಣ ಕ್ಷೇತ್ರದ ಅನುದಾನ ಅಥವಾ ವೈದ್ಯಕೀಯ ಕ್ಷೇತ್ರದ ಅನುದಾನ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಕಡಿತ ಹೀಗೆ ಯಾವುದೋ ವಿಷಯದಲ್ಲಿ ಖರ್ಚನ್ನು ಕಡಿಮೆ ಮಾಡಿ ಬಜೆಟ್ ಹೊಂದಿಸಲು ಪ್ರಯತ್ನ ಪಡುತ್ತದೆ. ಇದು ಇಂದಿನ ಯೂರೋಪ್ ದೇಶಗಳಲ್ಲಿ ಅತಿ ಹೆಚ್ಚು. MMT (ಮಾಡರ್ನ್ ಮನಿ ಥಿಯರಿ) ಹೇಳುವುದು ಇಷ್ಟೇ ಫಿಸ್ಕಲ್ ಡೆಫಿಸಿಟ್ ಎಷ್ಟಿದೆ ಅದಕ್ಕೆ ಹೊಂದುವಷ್ಟು ಹಣವನ್ನು ಆಯಾ ಸರಕಾರ ಮುದ್ರಿಸಿದರೆ ತಪ್ಪಿಲ್ಲ. ಈ ವಾದಕ್ಕೆ ಅದು ಕೊಡುವ ಕಾರಣ ಕೂಡ ಬಹಳ ಸರಳ ಈ ಹಣವನ್ನು ಸೃಷ್ಟಿಸಿದವರು ನಾವು ಅದಕ್ಕೆ ಇಂದಿಗೆ ಯಾವುದೇ ನಿರ್ಧಾರಿತ ಮಾಪನ ವ್ಯವಸ್ಥೆ ಇಲ್ಲ (ಗೋಲ್ಡ್ ಬ್ಯಾಕ್ ಅಪ್) ವಸ್ತು ಸ್ಥಿತಿ ಹೀಗಿರುವಾಗ ಸರಕಾರದ ಬಳಿ ಹಣವಿಲ್ಲ ಹೀಗಾಗಿ ಈ ವರ್ಷ ರಸ್ತೆ ದುರಸ್ತಿ ಮಾಡಲು ಸಾಧ್ಯವಿಲ್ಲ ಅಂತಲೂ ಅಥವಾ ಶಿಕ್ಷಣಕ್ಕೆ ಅನುದಾನ ಕೊಡಲು ಸಾಧ್ಯವಿಲ್ಲ ಎಂದು ಹೇಳಿ ಸಾವಿರಾರು ಯುವ ಜನರ ಭವಿಷ್ಯದ ಜೊತೆ ಆಟ ಆಡುವುದು ಎಷ್ಟು ಸರಿ? ಯಾವುದು ಪ್ರಾಮುಖ್ಯವೋ ಆ ಕೆಲಸಗಳು ಹಣವಿಲ್ಲ ಎನ್ನುವ ಕಾರಣಕ್ಕೆ ನಿಲ್ಲಬಾರದು ಎನ್ನುವುದು MMT. ಈ ಥಿಯರಿ ಪ್ರಕಾರ ಸರಕಾರ ಅಕ್ಷಯ ಪಾತ್ರೆ ಇದ್ದಹಾಗೆ. ಅದು ತನ್ನ ನಾಗರೀಕರ ಒಳಿತನ್ನು ಪೂರ್ಣಗೊಳಿಸುತ್ತಲೇ ಇರಬೇಕು. ಮುಕ್ಕಾಲು ಪಾಲು ಯೂರೋಪಿನ ದೇಶಗಳು ಫಿಸ್ಕಲ್ ಡೆಫಿಸಿಟ್ ನಿಂದ ನಲುಗಿಹೋಗಿವೆ. ಎರಡು ದಶಕ ಹಳೆಯ ಥಿಯರಿ ಈಗ ಏಕೆ ಮತ್ತೆ ಪ್ರಾಮುಖ್ಯತೆ ಪಡೆಯುತ್ತಿದೆ ಎನ್ನುವ ಅರಿವು ನಿಮಗಾಯಿತು ಎಂದುಕೊಳ್ಳುತ್ತೇನೆ.

ಸರಿ ಹಾಗಾದರೆ ತಡವೇಕೆ ಈ ಥಿಯರಿಯನ್ನು ಆದಷ್ಟೂ ಬೇಗ ಅಳವಡಿಸಿ ಕೊಳ್ಳಬಹುದಲ್ಲವೇ? ಎನ್ನುವ ಪ್ರಶ್ನೆಗೆ ಸಿಗುವ ಉತ್ತರ, ಅದು ಅಷ್ಟು ಸುಲಭವಲ್ಲ. ಏಕೆಂದರೆ ನಮ್ಮ ಇಂದಿನ ಹಣಕಾಸು ವ್ಯವಸ್ಥೆ ನಿಂತಿರುವುದು ನಂಬಿಕೆಯ ಮೇಲೆ ಈ ನಂಬಿಕೆ ಒಂದು ವರ್ಷದಲ್ಲಿ ಗಳಿಸಿದ್ದಲ್ಲ. ಅಲ್ಲದೆ ಜಗತ್ತಿನ ಪ್ರಮುಖ ಅರ್ಥ ಶಾಸ್ತ್ರಜ್ಞರು ಹಸಿರು ನಿಶಾನೆ ತೋರಿಸಬೇಕು. ಸದ್ಯದ ಮಟ್ಟಿಗೆ ಈ ವಿಷಯದಲ್ಲಿ ಆರ್ಥಿಕ ತಜ್ಞರಲ್ಲಿ ಒಮ್ಮತವಿಲ್ಲ. ಆದರೆ ನಿಧಾನವಾಗಿಯಾದರೂ ಸರಿಯೇ ಈ ಥಿಯರಿ ಹೆಚ್ಚು ಬಲ ಪಡೆದುಕೊಳ್ಳುತ್ತಿದೆ. ಹಲವು ಆರ್ಥಿಕ ತಜ್ಞರು ಈ ಥಿಯರಿ ಪೇಪರ್ ಮೇಲೆ ತುಂಬಾ ಚೆನ್ನಾಗಿದೆ. ಆದರೆ ಇದನ್ನು ಕಾರ್ಯರೂಪಕ್ಕೆ ತಂದ ಮೇಲೆ ಹಣದುಬ್ಬರ ಹೆಚ್ಚಿದರೆ ಏನು ಮಾಡುವುದು? ಅದನ್ನು ನಿಯಂತ್ರಿಸುವ ಬಗೆ ಹೇಗೆ? ಎನ್ನುವ ಮಾತುಗಳನ್ನು ಕೂಡ ಆಡುತ್ತಿದ್ದಾರೆ. MMT ಪರ ಇರುವ ಆರ್ಥಿಕ ತಜ್ಞರು ಹಣದುಬ್ಬರ ಕೂಡ ನಾವೇ ಸೃಷ್ಟಿಸಿದ ಹಣದ ಸೈಡ್ ಎಫೆಕ್ಟ್ ಅಷ್ಟೇ ಇದೊಂದು ಕಲೆಕ್ಟಿವ್ ಮಾನಸಿಕ ಸ್ಥಿತಿ. ಜನರನ್ನು ಹಣಕಾಸು ಸಾಕ್ಷರರನ್ನಾಗಿಸಿದರೆ ಹಣದುಬ್ಬರ ತಡೆಯುವುದು ದೊಡ್ಡ ಕೆಲಸವೇನಲ್ಲ ಎನ್ನುತ್ತಾರೆ. ಹಣಕಾಸಿನ ಓನಾಮ ತಿಳಿಯದ ಜನರನ್ನು ಸಾಕ್ಷರತರನ್ನಾಗಿಸುವುದು ಅಷ್ಟು ಸುಲಭವೇ? ನೀರು ಇಳಿಯದ ಗಂಟಲಿನಲ್ಲಿ ಕಡುಬು ತುರುಕಿದಂತೆ ಆಗುವುದಿಲ್ಲವೇ? ಪ್ರಶ್ನೆಗಳು ನೂರು ಉತ್ತರ ಮಾತ್ರ ಸೊನ್ನೆ.

ಮುಂಬರುವ ದಿನಗಳಲ್ಲಿ ಯಂತ್ರಗಳು ನಮ್ಮ ಬಹುಪಾಲು ಕೆಲಸ ಅರ್ಥವಿಲ್ಲದಂತೆ ಮಾಡಲಿವೆ. ರೋಬಾಟ್ ಅಥವಾ ಯಂತ್ರಗಳು ಮಾಡಲಾಗದ ಹಲವು ಹತ್ತು ಹೊಸ ಮತ್ತು ಹಳೆ ಕೆಲಸಗಳು ಮಾತ್ರ ಉಳಿಯಲಿವೆ. ಜಗತ್ತಿನ ಜನಸಂಖ್ಯೆಯ ಒಂದಷ್ಟು ಭಾಗ ಮಾತ್ರ ಕ್ಯಾಂಟ್ರಿಬ್ಯುಟರ್ಸ್ ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗುತ್ತದೆ. ಪರಿಸ್ಥಿತಿ ಹೀಗಿರುವಾಗ MMT ಲಾಗೂ ಆಗುವ ಸಾಧ್ಯತೆ ಬಹಳ ಹೆಚ್ಚು. ಹೀಗಾದರೆ ನಾವು ಚಿಕ್ಕವರಿದ್ದಾಗ ಆಡಿದ ‘ಮೊನಾಪಲಿ’ ಆಟಕ್ಕೂ ಜೀವನಕ್ಕೂ ಹೆಚ್ಚು ವ್ಯತ್ಯಾಸ ಇರುವುದಿಲ್ಲ. ಬದುಕಬೇಕು ಇರುವ ವೇಳೆ ವ್ಯಯಿಸಬೇಕು… ಅವಕಾಶ ಸಿಕ್ಕರೆ ಕೊನೆಯವರೆಗೆ ಆಟ ಆಡುತ್ತಿರಬೇಕು.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಅದೇಕೆ ಒಂದು ರುಪಾಯಿಗೆ ಒಂದು ಡಾಲರ್ ಸಮವಲ್ಲ? ಸರ್ಕಾರಗಳಿಗೆ ಹಣದ ಕೊರತೆಯಾದರೆ ಹೆಚ್ಚು ನೋಟುಗಳನ್ನು ಮುದ್ರಿಸಿದರಾಗದೇ? .. ಈ ಮಾದರಿಯ ಹತ್ತು ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು. ಕೇಳುವುದಕ್ಕೆ ಮುಜುಗರವೂ ಆಗಿದ್ದಿರಬಹುದು. ಅಂಥ ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

Leave a Reply