ಆತ್ಮಹತ್ಯೆಗೆ ಯತ್ನಿಸುತ್ತಾ ಫೇಸ್ ಬುಕ್ನಲ್ಲಿ ಲೈವಾಗಿ ಮಾತನಾಡಿದ ಬಿಗ್ ಬಾಸ್ ಪ್ರಥಮ್: ಕೇವಲ ಸ್ನೇಹಿತನ ಜತೆಗಿನ ಜಗಳಕ್ಕೆ ಈ ನಿರ್ಧಾರನಾ?

ಡಿಜಿಟಲ್ ಕನ್ನಡ ಟೀಮ್:

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ವಿಜಯಿಯಾಗಿ ಹೊರ ಹೊಮ್ಮಿದ ಒಳ್ಳೆ ಹುಡುಗ ಖ್ಯಾತಿಯ ಪ್ರಥಮ್ ಆತ್ಮಹತ್ಯೆ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಒಂದೆರಡು ದಿನಗಳ ಹಿಂದೆಯಷ್ಟೇ ರಿಯಾಲಿಟಿ ಶೋನಲ್ಲಿ ಗೆದ್ದ ಹಣವನ್ನು ಸೈನಿಕರಿಗೆ ಹಾಗೂ ರೈತರಿಗೆ ದಾನ ಮಾಡುತ್ತಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದ ಪ್ರಥಮ್, ಈಗ ಈ ನಿರ್ಧಾರ ತೆಗೆದುಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ನಿದ್ದೆ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ವಿಡಿಯೋ ಅನ್ನು ಪ್ರಥಮ್ ತಮ್ಮ ಫೇಸ್ ಬುಕ್ ನಲ್ಲಿ ಲೈವ್ ಆಗಿ ಪ್ರಸಾರ ಮಾಡಿದ್ದಾರೆ. ಈ ವೇಳೆ ‘ಇತ್ತೀಚೆಗೆ ನಾನು ಬಹಳ ಡಿಸ್ಟರ್ಬ್ ಆಗುತ್ತಿದ್ದೇನೆ. ಸ್ನೇಹಿತ ಹಾಗೂ ಸಹ ನಿರ್ದೇಶಕ ಲೋಕಿ ಅವರ ಜತೆಗಿನ ಜಗಳದಿಂದ ಬೇಸತ್ತಿದ್ದು, ಲೋಕಿ ಅವರು ನನ್ನ ಮನಸಿಗೆ ತುಂಬಾ ನೋವುಂಟು ಮಾಡಿದ್ದಾರೆ. ಕೆಲವು ಕ್ಷುಲ್ಲಕ ಕಾರಣಗಳಿಗೆ ಬೇಸರವಾಗಿದೆ. ಮನಸ್ಸಿಗೆ ತುಂಬಾ ನೋವಾಗಿದ್ದು ಜೀವನವೇ ಬೇಡ ಎನಿಸಿದೆ’ ಎಂದು ಹೇಳಿಕೊಂಡಿದ್ದಾರೆ. ತೀವ್ರ ಅಸ್ವಸ್ಥರಾಗಿರುವ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಥಮ್ ಈ ನಿರ್ಧಾರ ತೆಗೆದುಕೊಂಡಿದ್ದೇಕೆ? ಅವರಿಗೆ ಸಾಯುವಂತಹ ಸಮಸ್ಯೆ ಬಂದಿದ್ದಾದರೂ ಏನು? ಎಂಬೆಲ್ಲಾ ಪ್ರಶ್ನೆಗಳು ಸಹಜವಾಗಿಯೇ ಎಲ್ಲರನ್ನು ಕಾಡಲಾರಂಭಿಸಿದೆ. ಒಬ್ಬ ವ್ಯಕ್ತಿಗೆ ಧಿಡೀರನೆ ಸಿಕ್ಕ ಯಶಸ್ಸು, ಕೀರ್ತಿ, ಜನಪ್ರಿಯತೆಯನ್ನು ನಿಭಾಯಿಸಲು ಮಾನಸಿಕವಾಗಿ ಸಮರ್ಥರಿಲ್ಲದಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬುದು ಈ ಪ್ರಕರಣ ಸಾಕ್ಷಿಯಾಗಿದೆ. ಕೇವಲ ಈ ಪ್ರಕರಣ ಮಾತ್ರವಲ್ಲ ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋನಲ್ಲಿ ಗೆದ್ದು ಸಿನಿಮಾ ಹೀರೋ ಆಗಿದ್ದ ರಾಜೇಶ ಎಂಬ ಯುವಕ ತನಗೆ ಸಿಕ್ಕ ಖ್ಯಾತಿಯನ್ನು ನಿಭಾಯಿಸಲು ಸಾಧ್ಯವಾಗದೇ ಮಾನಸಿಕ ಅಸ್ವಸ್ಥನಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಈಗ ಮತ್ತೆ ನಮ್ಮ ಕಣ್ಮುಂದೆ ಬರುವಂತೆ ಮಾಡಿದೆ.

ಕಳೆದ ಹಲವು ದಿನಗಳಿಂದ ಪ್ರಥಮ್ ಹಾಗೂ ಸ್ನೇಹಿತ ಲೋಕಿ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಚಕಮಕಿ ನಡೆಯುತ್ತಲೇ ಇದೆ ಎಂಬ ಅಂಶ ಈಗ ಬೆಳಕಿಗೆ ಬಂದಿದ್ದು, ಹಾಗಾದರೆ ಪ್ರಥಮ್ ಹಾಗೂ ಸ್ನೇಹಿತ ಲೋಕಿ ನಡುವೆ ಇರುವ ಜಗಳವಾದರು ಏನು? ಅವರಿಬ್ಬರ ನಡುವಣ ಜಗಳಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಇದೇ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಥಮ್ ಗೆ ಯಾವುದೇ ಅಪಾಯವಿಲ್ಲವೆಂದು ಸ್ನೇಹಿತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ತಮ್ಮ ಜಾಣ್ಮೆಯಿಂದಲೇ ಮಣಿಸುತ್ತಿದ್ದ ಪ್ರಥಮ್, ಸ್ನೇಹಿತನ ಜತೆಗಿನ ಜಗಳ ಬಗೆಹರಿಸಿಕೊಳ್ಳಲು ಸಾಧ್ಯವಾಗದಷ್ಟು ದುರ್ಬಲ ಮನಸ್ಥಿತಿಯ ವ್ಯಕ್ತಿಯೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ ತಮ್ಮ ಆತ್ಮಹತ್ಯೆಯ ವಿಡಿಯೋ ಅನ್ನು ಫೇಸ್ ಬುಕ್ ನಲ್ಲಿ ಲೈವ್ ಮಾಡುವ ಅಗತ್ಯವೇನಿತ್ತು? ಇದು ಕೇವಲ ನಾಟಕದ ಪ್ರಯತ್ನವೇ? ಈ ಎಲ್ಲ ಪ್ರಶ್ನೆಗಳಿಗೂ ಪ್ರಥಮನೇ ಉತ್ತರಿಸಬೇಕು.

Leave a Reply