9 ಗುಂಡು ತಿಂದು ಕೋಮಾಕ್ಕೆ ಜಾರಿದ್ದ ಯೋಧ ಚೇತನ್ ಚೀತಾಗೆ ರಾಮನ ಜನ್ಮದಿನದಂದು ಪುನರ್ಜನ್ಮ

ಡಿಜಿಟಲ್ ಕನ್ನಡ ಟೀಮ್:

ನಮ್ಮ ಯೋಧರೇ ಹಾಗೆ ಕೆಚ್ಚೆದೆಯ ಹೋರಾಟಗಾರರು. ಉಗ್ರರೇ ಆಗಲಿ ಅಥವಾ ಸಾವೇ ಎದುರಾಗಲಿ ಅಷ್ಟು ಸುಲಭವಾಗಿ ಶರಣಾಗುವವರಲ್ಲ… ಹೋರಾಟ ನಡೆಸಿಯೇ ತೀರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ ಸಿಆರ್ ಪಿಎಫ್ ಯೋಧ ಚೇತನ್ ಕುಮಾರ್ ಚೀತಾ! ಕಳೆದ ವರ್ಷ ಸಿಯಾಚಿನ್ ನಲ್ಲಿ ಹಿಮಪಾತದೊಳಗೆ ಸುದೀರ್ಘ 6 ದಿನಗಳ ಕಾಲ ಜೀವಂತ ಸಮಾಧಿಯಾಗಿದ್ದರು ಕೆಚ್ಚೆದೆಯ ಹೋರಾಟ ನಡೆಸಿ ಜೀವಂತವಾಗಿ ಹೊರಬಂದಿದ್ದ ಕರ್ನಾಟಕದ ವೀರ ಯೋಧ ಹನುಮಂತಪ್ಪ ನಮ್ಮೆಲ್ಲರ ಮೈ ಜುಮ್ ಎನ್ನುವಂತೆ ಮಾಡಿದ್ದರು. ಈಗ ಅದೇ ಅನುಭವವನ್ನು ನೀಡಿದ್ದಾರೆ ಚೇತನ್ ಕುಮಾರ್. ಇವರು ಸುದೀರ್ಘ 50 ದಿನಗಳ ಕಾಲ ಸಾವಿನ ಜತೆ ಸೆಣಸಿದ್ದು ಹೇಗೆ? ನೋಡೋಣ ಬನ್ನಿ…

ಅದು ಫೆ.14 2017 ಭಾರತೀಯ ಯೋಧರು  ಜಮ್ಮು ಕಾಶ್ಮೀರದಲ್ಲಿ ಉಗ್ರರ ನಡುವಣ ಕಾಳಗದಲ್ಲಿ ನಿರತರಾಗಿದ್ದರು. ಈ ಕಾರ್ಯಾಚರಣೆಯಲ್ಲಿ ಭಾರತದ 3 ಯೋಧರು ಹುತಾತ್ಮರಾಗಿದ್ದರೆ ಓರ್ವ ಉಗ್ರ ಹತ್ಯೆಯಾಗಿದ್ದ. ಇದೇ ಕಾರ್ಯಾಚರಣೆಯಲ್ಲಿ ಉಗ್ರರ ಬಂದೂಕಿನಿಂದ ಹಾರಿಬಂದ 9 ಗುಂಡುಗಳು ಯೋಧ ಚೇತನ್ ಕುಮಾರ್ ಚೀತಾ ದೇಹವನ್ನು ಸೀಳಿದ್ದವು. ಈ ಘಟನೆ ನಡೆದು ಸರಿ ಸುಮಾರು 50 ದಿನಗಳು ಕಳೆದ ನಂತರ ಈ ಯೋಧ ಸಾವನ್ನು ಗೆದ್ದು ಬಂದಿದ್ದಾರೆ. ಸದ್ಯ ಮಾತನಾಡುವ ಸ್ಥಿತಿಗೆ ತಲುಪಿರುವ ಚೇತನ್ ಕುಮಾರ್ ಅವರನ್ನು ವೈದ್ಯರು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಿದ್ದಾರೆ.

ಗುಣಮುಖರಾದ ಚೇತನ್… (ಟ್ವಿಟರ್ ಚಿತ್ರ)

ಉಗ್ರರು ಸಿಡಿಸಿದ್ದ ಗುಂಡುಗಳು ಚೇತನ್ ಕುಮಾರ್ ಅವರ ತೋಳುಗಳನ್ನು ಗಂಭೀರವಾಗಿ ಸೀಳಿದ್ದವು, ಅವರ ಬಲಗಡೆ ಇರುವ ಕಣ್ಣಿನ ಗುಡ್ಡೆಯನ್ನು ಛಿದ್ರ ಮಾಡಿತ್ತು. ಜತೆಗೆ ಒಂದು ಗುಂಡು ಇವರ ತಲೆ ಸೇರಿತ್ತು. ಹೀಗೆ ಗಂಭೀರವಾಗಿ ಗಾಯಗೊಂಡಿದ್ದ ಚೇತನ್ ಈಗ ಬದುಕಿರುವುದನ್ನು ವೈದ್ಯರೇ ಒಂದು ಪವಾಡ ಎಂದು ಬಣ್ಣಿಸುತ್ತಿದ್ದಾರೆ. ಫೆ.14 ರಂದು ಚೇತನ್ ಕುಮಾರ್ ಉಗ್ರರ ಗುಂಡೇಟಿಗೆ ಸಿಲುಕಿದ ನಂತರ ಅವರನ್ನು ಶ್ರೀನಗರದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಲಿಕಾಪ್ಟರ್ ಮೂಲಕ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಚೇತನ್ ಕುಮಾರ್ ಕೋಮಾ ಸ್ಥಿತಿಗೆ ಜಾರಿದ್ದರು.

ಇವರ ತಲೆಗೆ ಸೇರಿದ್ದ ಗುಂಡು ಕೆಲವು ಭಾಗಗಳಾಗಿ ಒಡೆದಿದ್ದವು. ಈ ಗುಂಡಿನ ಚೂರುಗಳನ್ನು ಹೊರತೆಗೆಯುವುದು ವೈದ್ಯರ ತಂಡಕ್ಕೆ ಸವಾಲಾಗಿತ್ತು. ಇದಕ್ಕಾಗಿ ಅತ್ಯಂತ ಸೂಕ್ಷ್ಮವಾದ ಶಸ್ತ್ರಚಿಕಿತ್ಸೆಗೆ ವೈದ್ಯರು ಮುಂದಾಗಬೇಕಾಯಿತು. ಚೇತನ್ ಕುಮಾರ್ ಅವರು ಕೋಮಾಗೆ ಜಾರಿದ್ದರು ಅವರ ದೇಹ ಮಾತ್ರ ವೈದ್ಯರ ಚಿಕಿತ್ಸೆಗೆ ಅತ್ಯುತ್ತಮ ರೀತಿಯಲ್ಲಿ ಸ್ಪಂದಿಸುತ್ತಿತ್ತು. ಹೀಗಾಗಿ ವೈದ್ಯರು ಧೃತಿಗೆಡದೇ ಈ ಶಸ್ತ್ರ ಚಿಕಿತ್ಸೆ ನೀಡಲು ಮುಂದಾದರು.

ಕೋಮಾದಿಂದ ಸಹಜ ಸ್ಥಿತಿಗೆ ಮರಳಿರುವ ಚೇತನ್ ಕುಮಾರ್ ಇಂದು ಗಾಲಿಕುರ್ಚಿಯ ಮೇಲೆ ಕೂತು ಮಾಧ್ಯಮಗಳ ಮುಂದೆ ಮಾತನಾಡಿದ್ದು ನಿಜಕ್ಕೂ ಅವರ ಹೋರಾಟ ನೋಡಿ ಎಲ್ಲರ ಮನ ಕರಗುವಂತಾಯಿತು. ಚೇತನ್ ಕುಮಾರ್ ಸಾವನ್ನು ಗೆದ್ದು ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರ ಪತ್ನಿ ಉಮಾ ಸಿಂಗ್, ‘ಇಂದು ನನ್ನ ಪತಿ ಸಾವನ್ನು ಗೆದ್ದು ಬಂದಿದ್ದಾರೆ ಎಂದರೆ ಅದಕ್ಕೆ ಕೇವಲ ವೈದ್ಯರು ಹಾಗೂ ಶಸ್ತ್ರ ಚಿಕಿತ್ಸೆ ಮಾತ್ರ ಕಾರಣವಲ್ಲ. ಅವರ ಆತ್ಮಸ್ಥೈರ್ಯ ಹಾಗೂ ದೈಹಿಕ ಕ್ಷಮತೆ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply