ಜೆಡಿಎಸ್ ತೆನೆ ಕಿತ್ತ ಮನೆ ಅಂದಿರಾ? ದೇವೇಗೌಡ್ರ ಪ್ರಕಾರ ಉಪಚುನಾವಣೆ ನಂತರ ಪಕ್ಷಕ್ಕೆ ಮುಖಂಡರ ವಲಸೆಯಾಗುತ್ತಂತೆ!

ಡಿಜಿಟಲ್ ಕನ್ನಡ ಟೀಮ್:

‘ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆ ಮುಕ್ತಾಯವಾದ ನಂತರ ಪಕ್ಷದಿಂದ ಪಕ್ಷಕ್ಕೆ ವಲಸೆ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಸಂಚಲನಗಳು ನಡೆಯಲಿವೆ…’ ಇದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಅವರು ನುಡಿದಿರುವ ಭವಿಷ್ಯ.

ಇಂದು ಪಕ್ಷದ ಕಚೇರಿಯಲ್ಲಿ ಮಾಜಿ ಉಪಪ್ರಧಾನಮಂತ್ರಿ ಬಾಬು ಜಗಜೀವನರಾಂ ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹೇಳಿದಿಷ್ಟು…

‘ಬೇರೆ ಪಕ್ಷಗಳಲ್ಲಿ ಅವಮಾನ ಅನುಭವಿಸಿದ ಮುಖಂಡರುಗಳು ನಮ್ಮ ಪಕ್ಷಕ್ಕೆ ಸೇರುವ ಕಾಲ ಸನಿಹವಾಗಿದೆ. ವಿಧಾನಸಭೆ ಚುನಾವಣೆಗೂ ಮುನ್ನ ತಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುವ ನಾಯಕರು ಹಾಗೂ ಕಾರ್ಯಕರ್ತರಿಗೆ ಪಕ್ಷದ ಬಾಗಿಲು ತೆರೆದಿದೆ. ಈಗಾಗಲೇ ಬೇರೆ ಪಕ್ಷಗಳ ಹಲವು ಮುಖಂಡರು ನನ್ನ ಮತ್ತು ಕುಮಾರಸ್ವಾಮಿ ಅವರ ಸಂಪರ್ಕದಲ್ಲಿದ್ದಾರೆ. ಯಾವುದೇ ಸಂದರ್ಭದಲ್ಲಿ ಇವರು ಪಕ್ಷದ ಜತೆ ಕೈ ಜೋಡಿಸಬಹುದು. ದೇಶದಲ್ಲಿ ದಲಿತ ಸಮುದಾಯ ಕಾಂಗ್ರೆಸ್ ಬೆಂಬಲಕ್ಕೆ ನಿಂತಿಲ್ಲ ಎನ್ನುವುದು ಇತ್ತೀಚೆಗೆ ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶ ಸಾಕ್ಷಿಯಾಗಿದೆ. ದೇಶದಲ್ಲಿ ಬಹಳ ಹಿಂದಿನಿಂದಲೂ ಶೂದ್ರ ಸಮುದಾಯವನ್ನು ಕಡೆಗಣಿಸಿಕೊಂಡು ಬರಲಾಗಿದೆ. ಅವರಿಗೆ ಪ್ರಮುಖ ಸ್ಥಾನ ಕಲ್ಪಿಸಿಲ್ಲ. ದಲಿತರನ್ನು ಕೇವಲ ಮತ ಬ್ಯಾಂಕ್ ಆಗಿ ಕಾಂಗ್ರೆಸ್ ಪರಿಗಣಿಸಿತ್ತು. ಆದರೆ ಈಗ ರಾಜಕೀಯ ಧ್ರುವೀಕರಣ ಆರಂಭವಾಗಿದೆ. ದಲಿತರು ಈ ಅಂಶವನ್ನು ಗಮನಿಸಬೇಕು. ರಾಜ್ಯದ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು. ನನ್ನ ಈ ಮಾತುಗಳನ್ನು ಮಾಧ್ಯಮಗಳು ಹೇಗೆ ವಿಶ್ಲೇಷಣೆ ಮಾಡುತ್ತಾರೆ ಎಂಬುದೇ ನನ್ನ ಭಯ. ಹೀಗಾಗಿ ಮಾಧ್ಯಮಗಳನ್ನು ಕಂಡರೆ ಹೆದರಿಕೆಯಾಗುತ್ತದೆ’ ಎಂದು ನಕ್ಕರು.

ರಾಜ್ಯದ ಹಿತಕ್ಕಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವಂತೆ ನೋಡಿಕೊಳ್ಳಬೇಕಿದೆ ಎಂದು ಹೇಳುವುದನ್ನು ಮರೆಯಲಿಲ್ಲ.

Leave a Reply